ಚಿಕ್ಕೋಡಿ: ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿರುವ ಹಿನ್ನೆಲೆ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದೆ.

ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಚಿಕ್ಕೋಡಿ ಉಪವಿಭಾಗದ ಎಂಟು ಸೇತುವೆಗಳು ಜಲಾವೃತವಾಗಿವೆ. ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲೂಕುಗಳ ಎಂಟು ಸೇತುವೆಗಳು ಜಲಾವೃತಗೊಂಡಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಡೂರು-ಕಲ್ಲೋಳ ಸೇತುವೆ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಜತ್ರಾಟ-ಭೀವಶಿ, ಭೋಜ-ಕಾರದಗಾ, ಅಕ್ಕೋಳ-ಸಿದ್ನಾಳ, ನಾಗನೂರು-ಗೋಟೂರ, ಹುನ್ನರಗಿ-ಮಮದಾಪೂರ, ಭೋಜವಾಡಿ-ಕುನ್ನೂರ, ಮಲಿಕವಾಡ-ದತ್ತವಾಡ ಸೇತುವೆಗಳು ಮುಳುಗಡೆಯಾಗಿವೆ. 16 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಗಳು, ಪರ್ಯಾಯ ಮಾರ್ಗಗಳ ಮೂಲಕ ಜನರು ಸಂಚಾರ ಮಾಡುತ್ತಿದ್ದಾರೆ.

ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಮಹಾರಾಷ್ಟ್ರದ ಕೊಯ್ನಾ- 347ಮಿಮೀ ನವಜಾ- 427ಮಿಮೀ ರಾಧಾನಗರಿ 194ಮಿಮೀ ಹಾಗೂ ಮಹಾಬಳೇಶ್ವರದಲ್ಲಿ 424ಮಿಮೀ ಗಳಷ್ಟು ಮಳೆ ಪ್ರಮಾಣ ದಾಖಲಾಗಿದೆ. ಚಿಕ್ಕೋಡಿ ಭಾಗದ ವಿವಿಧೆಡೆ ಸರಾಸರಿ 50 ಮಿಲೀ ಮೀಟರ್ ಗಳಷ್ಟು ಮಳೆಯಾಗಿದೆ.

ಕೃಷ್ಣಾ ನದಿಗೆ 78 ಸಾವಿರ ಕ್ಯೂಸೆಕ್ ಗೂ ಹೆಚ್ಚು ಪ್ರಮಾಣದ ಒಳ ಹರಿವು ಇದ್ದು, ಹಿಪ್ಪರಗಿ ಬ್ಯಾರೇಜ್‍ನಿಂದ 74,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನದಿ ತೀರದಲ್ಲಿ ಬೆಳಗಾವಿ ಜಿಲ್ಲಾಡಳಿತ ಪ್ರವಾಹ ಭೀತಿಯಿಂದ ಹೈ ಅಲರ್ಟ್ ಘೋಷಿಸಿದೆ. ಇದನ್ನೂ ಓದಿ:ಜಿಟಿ ಜಿಟಿ ಮಳೆ – ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಪರದಾಟ

The post ಮಹಾರಾಷ್ಟ್ರ, ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆ – 8 ಸೇತುವೆಗಳು ಜಲಾವೃತ appeared first on Public TV.

Source: publictv.in

Source link