ಮಹಾರಾಷ್ಟ್ರ: ಕೋಮುಗಲಭೆಯ ನಂತರ ಅಮರಾವತಿಯಲ್ಲಿ ಕರ್ಫ್ಯೂ; 23 ಮಂದಿ ಬಂಧನ | Curfew imposed in the twin cities of Achalpur and Paratwada in Maharashtras Amravati


ಮಹಾರಾಷ್ಟ್ರ: ಕೋಮುಗಲಭೆಯ ನಂತರ ಅಮರಾವತಿಯಲ್ಲಿ ಕರ್ಫ್ಯೂ; 23 ಮಂದಿ ಬಂಧನ

ಅಮರಾವತಿಯಲ್ಲಿ ಕರ್ಫ್ಯೂ

ಅಮರಾವತಿ: ಮಹಾರಾಷ್ಟ್ರದ ಅಮರಾವತಿ (Amravati) ಗ್ರಾಮಾಂತರದಲ್ಲಿರುವ ಅವಳಿ ನಗರಗಳಾದ ಅಚಲಪುರ ಮತ್ತು ಪರತ್ವಾಡದಲ್ಲಿ ಭಾನುವಾರ ಸಂಜೆ ಎರಡು ಸಮುದಾಯಗಳ ನಡುವೆ ಗಲಾಟೆ (communal disturbance) ನಡೆದ ಹಿನ್ನೆಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸಿಬ್ಬಂದಿ ಧ್ವಜ ಮೆರವಣಿಗೆ ನಡೆಸಿದರು. ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಕರ್ಫ್ಯೂ (Curfew) ಹಿಂತೆಗೆದುಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾನುವಾರ ಸಂಜೆ 6 ಗಂಟೆ ಸುಮಾರಿಗೆ, ಅಲ್ಪಸಂಖ್ಯಾತ ಸಮುದಾಯದ ನಿವಾಸಿಗಳು ವಾಸಿಸುವ ದುಲ್ಹಾ ಗೇಟ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಕೇಸರಿ ಧ್ವಜವನ್ನು ಹಾರಿಸಿದರು. ಇದರಿಂದ ಎರಡೂ ಸಮುದಾಯದವರಿಂದ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಇಬ್ಬರು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಂಜೆ 7.30ರ ವೇಳೆಗೆ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮುಂಜಾಗ್ರತಾ ಕ್ರಮವಾಗಿ ಕರ್ಫ್ಯೂ ವಿಧಿಸಲಾಗಿದೆ.  ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ರಾಜ್ಯ ಮೀಸಲು ಪೊಲೀಸ್ ಪಡೆಯ (ಎಸ್‌ಆರ್‌ಪಿಎಫ್) ಮೂರು ತಂಡ, ಸಮೀಪದ ಅಕೋಲಾ ಜಿಲ್ಲೆಯ 100 ಪೊಲೀಸ್ ಸಿಬ್ಬಂದಿ ಮತ್ತು ಅಮರಾವತಿ ಪೊಲೀಸ್ ಪಡೆಯ 300 ಪೊಲೀಸರು ಬೀದಿಗಿಳಿದಿದ್ದಾರೆ ಎಂದು ಅಮರಾವತಿ ಗ್ರಾಮಾಂತರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಘಟನೆಯ ನಂತರ ಅಮರಾವತಿ ಐಜಿ ಚಂದ್ರ ಕಿಶೋರ್ ಮೀನಾ ನಗರದಲ್ಲಿ ಕಣ್ಗಾವಲು ನಡೆಸಿದರು. ಹೆಚ್ಚಿನ ಘಟನೆಗಳು ನಡೆಯದಂತೆ ನಗರಕ್ಕೆ ಹೆಚ್ಚುವರಿ ಪಡೆಗಳನ್ನು ಕರೆಸಲಾಗಿದೆ. ಶನಿವಾರದಂದು ಜಹಾಂಗೀರ್​​ಪುರಿ ಕೋಮು ಘರ್ಷಣೆಯ ಬೆನ್ನಲ್ಲೇ ಅಮರಾವತಿ ಹಿಂಸಾಚಾರ ಭುಗಿಲೆದ್ದಿತು.

ಏತನ್ಮಧ್ಯೆ, ರಾಮನವಮಿ ಆಚರಣೆಯ ಸಂದರ್ಭದಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ ಆರು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮಖುರ್ದ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಇದುವರೆಗೆ ಕನಿಷ್ಠ 30 ಜನರನ್ನು ಬಂಧಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಒಟ್ಟು 61 ಜನರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಅಮರಾವತಿಯಲ್ಲಿ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕೋಮುಗಲಭೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ದಿಲಿ ವಾಲ್ಸೆ-ಪಾಟೀಲ್ ಹೇಳಿದ್ದಾರೆ. ಜಾತಿ ಮತ್ತು ಸಮುದಾಯದ ವಿಚಾರಗಳಲ್ಲಿ ಬಿರುಕು ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಆರೋಪದ ವಿಷಯಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ. ಇಂತಹ ಪೋಸ್ಟ್ ಗಳ ಮೇಲೆ ಸೈಬರ್ ಪೊಲೀಸರು ನಿಗಾ ಇಟ್ಟಿದ್ದಾರೆ ಎಂದಿದ್ದಾರೆ ಸಚಿವರು.

ಪೊಲೀಸರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಗಲಭೆ ವೇಳೆ ಕರ್ತವ್ಯ ನಿರತ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ 23 ಜನರನ್ನು ಬಂಧಿಸಿದ್ದಾರೆ. “ಅಮರಾವತಿ ನಗರದಲ್ಲಿ ಯಾವುದೇ ಸಮಸ್ಯೆ ಇಲ್ಲ, ಆದರೆ ತಡೆಗಟ್ಟುವ ಕ್ರಮವಾಗಿ ನಾವು ರಸ್ತೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದೇವೆ” ಎಂದು ನಗರ ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ನವೆಂಬರ್‌ನಲ್ಲಿ ಅಮರಾವತಿ ನಗರದಲ್ಲಿ ಕೋಮುಗಲಭೆ ಭುಗಿಲೆದ್ದಿದ್ದು, ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗಿತ್ತು.

TV9 Kannada


Leave a Reply

Your email address will not be published.