ಬೆಳಗಾವಿ: ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ಅಚ್ಚು ಕಟ್ಟು ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಪರಿಣಾಮ ಕೃಷ್ಣಾ ನದಿ ನೀರಿನ ಪ್ರಮಾಣ ಏರಿಕೆಯಾಗಿದೆ. ಇದರಿಂದಾಗಿ ಜಿಲ್ಲೆಯ 7 ಸೇತುವೆಗಳು ಜಲಾವೃತಗೊಂಡಿವೆ.

ಕೃಷ್ಣಾ, ದೂದಗಂಗಾ, ವೇದಗಂಗಾ, ಹಿರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲೂ ಏರಿಕೆಯಾಗಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಡೂರು- ಕಲ್ಲೋಳ ಸೇತುವೆ ಸೇರಿದಂತೆ ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲೂಕುಗಳ 7 ಸೇತುವೆಗಳು ಮುಳುಗಡೆಯಾಗಿವೆ.

ಜತ್ರಾಟ- ಭೀವಶಿ, ಭೋಜ- ಕಾರದಗಾ, ಅಕ್ಕೋಳ- ಸಿದ್ನಾಳ, ನಾಗನೂರು- ಗೋಟೂರ, ಹುನ್ನರಗಿ-ಮಮದಾಪೂರ, ಭೋಜವಾಡಿ- ಕುನ್ನೂರ, ಯಡೂರು- ಕಲ್ಲೋಳ ಸೇತುವೆಗಳು‌ ಮುಳುಗಡೆಯಾಗಿದ್ದು, ಈ ಸೇತುವೆಗಳು 14 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಸದ್ಯ ಜನರು ಪರ್ಯಾಯ ಮಾರ್ಗಗಳ‌ ಮೂಲಕ ಸಂಚಾರ ನಡೆಸುತ್ತಿದ್ದಾರೆ.

ಹಿಪ್ಪರಗಿ ಬ್ಯಾರೇಜ್​​ನಿಂದ 50ಸಾವಿರ ಕ್ಯೂಸೆಕ್ ನೀರು ಹೊರಕ್ಕೆ
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅರ್ಭಟ ಮುಂದುವರಿದಿರುವುದರಿಂದ ಕೃಷ್ಣಾ ನದಿ ನೀರಿನ ಮಟ್ಟ ಗಣನೀಯ ಏರಿಕೆಯಾಗಿದೆ. ಹಿಪ್ಪರಗಿ ಬ್ಯಾರೇಜ್ ನಿಂದ 50 ಸಾವಿರ ಕ್ಯೂಸೆಕ್ ನದಿಗೆ ಹರಿಸಲಾಗುತ್ತಿದೆ. ನಿನ್ನೆ ಸಂಜೆಯಿಂದ ಅಧಿಕಾರಿಗಳು ನೀರು ಹೊರಬಿಡುತ್ತಿದ್ದಾರೆ. ಪರಿಣಾಮ ನದಿ ತೀರದ ಬರುವ ಗ್ರಾಮಗಳ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿದ್ದಾರೆ.

ಹಣಬರಹಟ್ಟಿಯ ಅಂಜನೇಯ ದೇವಸ್ಥಾನ ಮುಳುಗಡೆ
ಖಾನಾಪೂರ ತಾಲೂಕಿನಲ್ಲಿ ಮಲಪ್ರಭಾ ನದಿ ತುಂಬಿ ಹರಿಯುತ್ತಿರುವ ಕಾರಣ ಹಣಬರಹಟ್ಟಿಯ ಅಂಜನೇಯ ದೇವಸ್ಥಾನ ಮುಳುಗಡೆಯಾಗಿದೆ. ನದಿ ತೀರದಲ್ಲಿರುವ ಅಂಜನೇಯ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿದೆ. ಇನ್ನು ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಮುಧೋಳ ತಾಲೂಕಿನ ಜಾಲಿಬೇರ ಬ್ಯಾರೇಜ್ ಸಂಪೂರ್ಣವಾಗಿ ಮುಳುಗಡೆಯಾಗಿದೆ.
ಧಾರಾಕಾರ ಮಳೆಗೆ ಬೆಳಗಾವಿ ನಗರದ ಕೆಎಲ್​​​ಇ ಆಸ್ಪತ್ರೆ ಮುಂಭಾಗದಲ್ಲಿ ಮರಗಳು ನೆಲಕ್ಕುರುಳಿದ್ದು, ಪರಿಣಾಮ ಕಾರು, ದ್ವಿಚಕ್ರ ವಾಹನ ಜಖಂ ಆಗಿದೆ. ಸದ್ಯ ಮಹಾನಗರ ಪಾಲಿಕೆ ಸಿಬ್ಬಂದಿಗಳು ಮರಗಳನ್ನು ತೆರವು ಮಾಡಿ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ.

 

The post ಮಹಾರಾಷ್ಟ್ರ, ಪಶ್ಚಿಮಘಟ್ಟ ಪ್ರದೇಶದಲ್ಲಿ ಭರ್ಜರಿ ಮಳೆ- 7 ಸೇತುವೆಗಳು ಮುಳುಗಡೆ appeared first on News First Kannada.

Source: newsfirstlive.com

Source link