ಮಹಾಲಯ ಅಮವಾಸ್ಯೆಯಂದು ಕೋಲಾರದಲ್ಲಿ ಸಮಾಧಿಗಳಿಗಾಗಿ ನೀರಲ್ಲಿಳಿದು ಹುಡುಕಾಟ! | Kolar Mahalaya Amavasya people Searched for burial effect of Heavy rain

ಮಹಾಲಯ ಅಮವಾಸ್ಯೆಯಂದು ಕೋಲಾರದಲ್ಲಿ ಸಮಾಧಿಗಳಿಗಾಗಿ ನೀರಲ್ಲಿಳಿದು ಹುಡುಕಾಟ!

ಜಲಾವೃತಗೊಂಡಿರುವ ಸಮಾಧಿಗಳು

ಕೋಲಾರ: ಮಹಾಲಯ ಅಮಾವಾಸ್ಯೆಯಂದು ನಮ್ಮನ್ನು ಅಗಲಿದ ಕುಟುಂಬದ ಹಿರಿಯರನ್ನು, ಪಿತೃಗಳನ್ನು ಪೂಜಿಸುವ ವಿಶೇಷ ದಿನ. ಕೋಲಾರದಲ್ಲಿ ಮಳೆ ಸೃಷ್ಟಿಸಿರುವ ಅವಾಂತರದಿಂದ ಜನರು ಮಹಾಲಯ ಅಮಾವಾಸ್ಯೆಯಂದು ಸ್ಮಶಾನದಲ್ಲಿ ಸಮಾಧಿಗಳ ಹುಟುಕಾಟ ಮಾಡುವಂತಾಗಿದೆ. ಏನಿದು ಅವಾಂತರ? ಓದಿ.

ನೀರಿನಲ್ಲಿ ಮುಳುಗಡೆಯಾಗಿರುವ ಸ್ಮಶಾನ, ಸ್ಮಶಾನದಲ್ಲಿ ತಮ್ಮವರ ಸಮಾಧಿಗಳಿಗಾಗಿ ನೀರಿನಲ್ಲಿ ಇಳಿದು ಹುಡುಕುತ್ತಿರುವ ಜನರು. ಕೈನಲ್ಲಿ ಕೋಲು ಹಿಡಿದು ಸೊಂಟದವರೆಗೆ ಮುಳುಗಿದ ನೀರಿನಲ್ಲಿ ಸಮಾಧಿ ಬಳಿಗೆ ತೆರಳಲು ಹರಸಾಹಸ. ಕಳೆದ ಕೆಲವು ದಿನಗಳಿಂದ ಕೋಲಾರದಲ್ಲಿ ಉತ್ತಮ ಮಳೆಯಾಗಿದೆ. ಪರಿಣಾಮ ನಗರದಲ್ಲಿನ ಕೋಲಾರಮ್ಮ ಕೆರೆ ತುಂಬಿ ಕೋಡಿ ಹರಿದಿದೆ. ಇದರಿಂದ ಕೋಲಾರಮ್ಮ ಕೆರೆಗೆ ಹೊಂದಿಕೊಂಡಿರುವ ಸ್ಮಶಾನವೊಂದು ನೀರಿನಲ್ಲಿ ಸಂಪೂರ್ಣ ಜಲಾವೃತವಾಗಿದೆ. ಕೋಲಾರ ನಗರದ ಮಾಸ್ತಿ ಬಡಾವಣೆಯಲ್ಲಿರುವ ಈ ಸ್ಮಶಾನದಲ್ಲಿ ಕನಕನಪಾಳ್ಯ, ಅಂಬೇಡ್ಕರ್​ನಗರ, ಕೋಟೆ ಬಡಾವಣೆ, ಕೋಲಾರಮ್ಮ ಬಡಾವಣೆ, ಕುರುಬರಪೇಟೆಯಲ್ಲಿ ಯಾರಾದರೂ ಮೃತರಾದರೆ ಅಂತ್ಯ ಸಂಸ್ಕಾರ ಮಾಡುತ್ತಾರೆ. ಸದ್ಯ ಈ ಸ್ಮಶಾನದಲ್ಲಿ ನೂರಾರು ಸಮಾಧಿಗಳಿವೆ. ಮಹಾಲಯ ಅಮಾವಾಸ್ಯೆಯ ದಿನ ಜನರು ತಮ್ಮ ಪಿತೃಗಳಿಗೆ ಪೂಜೆ ಸಲ್ಲಿಸೋಣ ಎಂದು ಬಂದರೆ ಸಮಾಧಿಗಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಲಾರಮ್ಮ ಕೆರೆ ತುಂಬಿರುವ ಪರಿಣಾಮ ಸ್ಮಶಾನ ಸಂಪೂರ್ಣ ಜಲಾವೃತವಾಗಿದೆ. ಸಮಾಧಿಗಳು ನೀರಿನಲ್ಲಿ ಮುಳುಗಡೆಯಾಗಿವೆ. ಆದರೂ ಜನರು ನೀರಿನಲ್ಲಿ ಇಳಿದು ತಮ್ಮವರ ಸಮಾಧಿಗಳನ್ನು ಹುಡುಕಿ ಪೂಜೆ ಸಲ್ಲಿಸುತ್ತಿದ್ದಾರೆ. ಸತ್ತವರ ಪೂಜೆ ಸಲ್ಲಿಸಲು ಇವರೇ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಪೂಜೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೋಲಾರಮ್ಮ ಕೆರೆ ಕೋಡಿ ಹರಿದು ಸುಮಾರು ಹದಿನೈದು ದಿನಗಳೇ ಕಳೆದಿದೆ. ಈವೇಳೆ ಸ್ಮಶಾನ ನೀರಿನಲ್ಲಿ ಮುಳುಗಡೆಯಾದಾಗ ಸ್ಥಳೀಯರು ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಸ್ಮಶಾನ ನೀರಿನಲ್ಲಿ ಮುಳುಗಿದ್ದು ಸಮಾಧಿಗಳು ಕುಸಿಯುವ ಜೊತೆಗೆ ಸಮಾಧಿಯಲ್ಲಿರುವ ಕಳೇಬರಗಳು ನೀರಿನಲ್ಲಿ ತೇಲುವ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದ್ದರು. ಈವೇಳೆ ಸ್ಥಳಕ್ಕೆ ಆಗಮಿಸಿದ್ದ ನಗರಸಭೆ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರ. ಆದರೆ ಈವರೆಗೆ ಇಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸರ ವ್ಯಕ್ತಪಡಿಸಿರುವ ಜನರು, ವರ್ಷಕ್ಕೊಮ್ಮೆ ನಮ್ಮ ಹಿರಿಯರಿಗೆ ಪೂಜೆ ಸಲ್ಲಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಇಡೀ ವರ್ಷ ನಮಗೆ ನೆಮ್ಮದಿ ಇಲ್ಲದಂತಾಗುತ್ತದೆ. ವರ್ಷಕ್ಕೊಮ್ಮೆ ಮಹಾಲಯ ಅಮಾವಾಸ್ಯೆಯಂದು ಪೂಜೆ ಸಲ್ಲಿಸಿದರೆ ಹಿರಿಯರ ಆಶೀರ್ವಾದ ನಮ್ಮ ಹಾಗೂ ನಮ್ಮ ಕುಟುಂಬದ ಮೇಲಿರುತ್ತದೆ ಎಂಬ ನಂಬಿಕೆಯಿದೆ. ಆದರೆ ಕೋಲಾರದಲ್ಲಿ ಅವರಿಗೆ ಪೂಜೆ ಸಲ್ಲಿಸಲು ಅವಕಾಶ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಮಹಾಲಯ ಅಮಾವಾಸ್ಯೆಯಂದು ಕೋಲಾರದ ಜನರಿಗೆ ತಮ್ಮ ಹಿರಿಯರ ಸಮಾಧಿಗಳಿಗೆ ಪೂಜೆ ಮಾಡಲಾಗದ ಸ್ಥಿತಿ ನಿರ್ಮಾಣವಾಗಿ ಜನರು ಪರದಾಡುವ ಸ್ಥಿತಿ ಬಂದೊದಗಿದೆ. ಒಂದೆಡೆ ಕೆರೆಗೆ ನೀರು ಬಂದಿದ್ದು ಸಂತೋಷವಾದರೆ ಇದರಿಂದ ಸೃಷ್ಟಿಯಾಗಿರುವ ಅವಾಂತರ ಬೇಸರ ಹುಟ್ಟಿಸುತ್ತಿದೆ.

ವರದಿ: ರಾಜೇಂದ್ರಸಿಂಹ
ಟಿವಿ9 ಕೋಲಾರ

ಇದನ್ನೂ ಓದಿ:

 17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ; ಧಾರವಾಡ ರೈತರಿಗೆ ಈ ಬಾರಿಯೂ ನಿರಾಸೆ

TV9 Kannada

Leave a comment

Your email address will not be published. Required fields are marked *