ಮುಂಬೈ: ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ ಮುಂಬೈ ನಗರದಲ್ಲಿ ಗೋಡೆ ಕುಸಿದು 11 ಮಂದಿ ಸಾವನ್ನಪ್ಪಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ ಭೂ ಕುಸಿತ ಸಂಭವಿಸಿದ್ದು, ಹಲವು ಮಣ್ಣಿನ ಅಡಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಂಬೈನ ಚೆಂಬೂರಿನ ಭಾರತ್ ನಗರ ಪ್ರದೇಶದಲ್ಲಿ ಭಾರೀ ಮಳೆಗೆ ಭೂ ಕುಸಿತ ಸಂಭವಿಸಿದ್ದು, ಪರಿಣಾಮ ಗೋಡೆ ಗುಡಿಸಲುಗಳ ಮೇಲೆ ಕುಸಿದು ಬಿದ್ದಿದೆ. ಮುಂಬೈ ಪಾಲಿಕೆ ಸಿಬ್ಬಂದಿ ಹಾಗೂ ಎನ್​​ಡಿಆರ್​ಎಫ್ ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭ ಮಾಡಿದ್ದು, ಹಲವು ಮೃತದೇಹಗಳನ್ನು ಹೊರ ತೆಗೆದಿದ್ದಾರೆ.

ಈಗಾಗಲೇ 16 ಮಂದಿಯನ್ನು ರಕ್ಷಣೆ ಮಾಡಿರುವುದಾಗಿ ರಕ್ಷಣಾ ತಂಡದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಮಣ್ಣಿನ ಅಡಿ ಇನ್ನು ಹೆಚ್ಚು ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ಅವರ ರಕ್ಷಣೆಗೆ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ಎನ್​​ಡಿಆರ್​ಎಫ್​ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈನಲ್ಲಿ ರಾತ್ರಿಯಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ವಿವಿಧ ಭಾಗಗಳಲ್ಲಿ ಸುಮಾರು 5 ಮನೆಗಳು ಕುಸಿದುಬಿದ್ದಿದೆ. ವಿಖ್ರೋಲಿ ಉಪನಗರದ ಬಳಿ ಭೂ ಕುಸಿತ ಸಂಭವಿಸಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಐದು ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಭಾರೀ ಮಳೆಯಿಂದ ಲೋಕಲ್​ ಟ್ರೈನ್​ ಸೇವೆ, ಮುಂಬೈ-ಪುಣೆ ನಡುವಿನ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

The post ‘ಮಹಾ’ ಮಳೆಗೆ ಗೋಡೆ ಕುಸಿದು 11 ಮಂದಿ ಸಾವು -NDRFನಿಂದ ರಕ್ಷಣಾ ಕಾರ್ಯಾಚರಣೆ appeared first on News First Kannada.

Source: newsfirstlive.com

Source link