– ಕೃಷ್ಣಾ ನದಿಯಲ್ಲಿ ನೀರಿ ಪ್ರಮಾಣ ಗಣನೀಯ ಏರಿಕೆ

ಚಿಕ್ಕೋಡಿ/ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣಾ ಸೇರಿದಂತೆ ವಿವಿಧ ನದಿಗಳಲ್ಲಿ ನೀಡಿನ ಒಳ ಹರಿವಿನ ಮಟ್ಟ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಇದರಿಂದಾಗಿ ನದಿ ಪಾತ್ರದ ಗ್ರಾಮಸ್ಥರ ಎದೆ ಬಡಿತ ಹೆಚ್ಚುತ್ತಿದೆ.

ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣಾ ಸೇರಿದಂತೆ ವಿವಿಧ ನದಿಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಹರಿಯುವ, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ವೇದಂಗಾ, ದೂದ್‍ಗಂಗಾ, ಪಂಚಗಂಗಾ ನದಿಗಳು ತುಂಬಿ ಹರಿಯುತ್ತಿವೆ. ಸದ್ಯ ಕೃಷ್ಣಾ ನದಿಗೆ 98 ಸಾವಿರ ಕ್ಯೂಸೆಕ್ಸ್ ನಷ್ಟು ನೀರು ಹರಿದು ಬರುತ್ತಿದ್ದು, ಪ್ರವಾಹದ ಮೂನ್ಸೂಚನೆ ನೀಡುತ್ತಿದೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ನರಸಿಂಹವಾಗಡಿಯ ದತ್ತ ಮಂದಿರವೂ ಕೃಷ್ಣಾ ನದಿಯ ನೀರಿಗೆ ಸಂಪೂರ್ಣ ಜಲಾವೃತವಾಗಿದ್ದು, ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ಇರುವ ದತ್ತ ಮಂದಿರ ಸಹ ಅರ್ಧದಷ್ಟು ಮುಳುಗಿದೆ.

ಚಿಕ್ಕೋಡಿ ವ್ಯಾಪ್ತಿಯಲ್ಲಿನ 7 ಸೇತುವೆಗಳು ಜಲಾವೃತವಾಗಿವೆ. ಸದ್ಯ ಕೃಷ್ಣಾ ನದಿಯ ತೀರದಲ್ಲಿ ಬರುವ ಅಥಣಿ, ಚಿಕ್ಕೋಡಿ, ನಿಪ್ಪಾಣಿ ಹಾಗೂ ರಾಯಭಾಗ ತಾಲೂಕಿನ ಗ್ರಾಮಸ್ಥರಲ್ಲಿ ಪ್ರವಾಹದ ಕರಿನೆರಳು ಮೂಡಿದ್ದು, ಹೀಗೆ ಮಳೆ ಮುಂದುವರೆದರೆ ಅನಾಹುತದ ಲಕ್ಷಣ ಗೋಚರಿಸುತ್ತಿದೆ. ಕೊರೊನಾ ಲಾಕ್‍ಡೌನ್ ಇನ್ನೇನು ಮುಗಿದು ನೆಮ್ಮದಿಯ ನಿಟ್ಟುಸಿರು ಬಿಟ್ಟೆವು ಎನ್ನುತ್ತಿರುವಾಗಲೇ ಮಹಾಮಳೆ ಮತ್ತು ಪ್ರವಾಹ ರಾಜ್ಯದ ನದಿ ತೀರದ ಜನರ ನೆಮ್ಮದಿ ಕೆಡಿಸಿದ್ದು, ಸರ್ಕಾರ ಹಾಗೂ ಅಧಿಕಾರಿಗಳು ಮುಂಜಾಗೃತಾ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

The post ಮಹಾ ಮಳೆಗೆ ಬೆಳಗಾವಿಯಲ್ಲಿ ಪ್ರವಾಹ ಭೀತಿ- 7 ಸೇತುವೆಗಳು ಜಲಾವೃತ appeared first on Public TV.

Source: publictv.in

Source link