ಮಹಿಳಾ ಉದ್ಯಮಿಯ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ ‘Squid ಗೇಮ್ಸ್’.. ಅಷ್ಟಕ್ಕೂ ಆಗಿದ್ದೇನು?

ಸಿನಿಮಾ ಅನ್ನೋದು ಅತ್ಯುತ್ತಮ ಮನರಂಜನೆ. ಅದನ್ನು ಕೇವಲ ಮನರಂಜನೆಗೋಸ್ಕರ ನೋಡೋದು ಉತ್ತಮ. ಅದನ್ನೇನ್ನಾದ್ರೂ ನಮ್ಮ ಜೀವನಕ್ಕೆ ಅಳವಡಿಸಲು ಹೋದರೆ ಏನ್ ಏನೆಲ್ಲ ಅನಾಹುತ ಆಗುತ್ತೆ ಗೊತ್ತಾ ? ಇವಾಗ ನಾವ್​ ಹೇಳ್ತಾ ಇರೋ ಸ್ಟೋರಿನೂ ಸಹ, ಇದೇ ರೀತಿ ಆಗಿರೋದು. ನೆಟ್​ಫ್ಲಿಕ್ಸ್​ನಲ್ಲಿ ಇತ್ತೀಚೆಗೆ ಹಲ್​ಚಲ್ ಎಬ್ಬಿಸಿರೋ ಕೊರಿಯನ್​ ವೆಬ್​ಸಿರೀಸ್ ಸ್ಕ್ವಿಡ್ ಗೇಮ್ಸ್​. ಅಷ್ಟೇ ಅವಾಂತರಗಳನ್ನ ಮಾಡಿದೆ..ಈ ವೆಬ್​​​ ಸೀರೀಸ್​ನಿಂದ ಒಬ್ಬ ಮಹಿಳೆಯ ನಿದ್ದೆಯೇ ಹೋಗಿದೆ.. ಸ್ಕ್ವಿಡ್ ಗೇಮ್ಸ್​ನಿಂದ ಆಗ್ತಿರೋ ಸಮಸ್ಯೆಗಳೇನು?

ಸ್ಕ್ವಿಡ್​ ಗೇಮ್ಸ್​.. ಕೊರಿಯಾದ ನಿರ್ದೇಶಕನ ಕನಸಿನ ಕಥೆ. ಬಡತನವನ್ನು ಬಡಿದೋಡಿಸಿ, ಇದ್ದಕ್ಕಿದ್ದಂತೆ ಶ್ರೀಮಂತರಾಗೋದು.. ಈ ವೆಬ್​ ಸೀರೀಸ್​ನ ಮೂಲ ಕಥೆ. ಆದರೆ ಆ ಶ್ರೀಮಂತಿಕೆ ಪಡೆಯಲು ಅಲ್ಲಿರುವ ಜನರು ಆಟವಾಡಬೇಕು. ಆಟ ಅಂದ್ರೆ ಬಹಳ ಕಷ್ಟಕರವಾದ ಆಟವಲ್ಲ.. ಕೇವಲ ಮಕ್ಕಳ ಆಟ.. ಬಟ್ ಹೆಚ್ಚು ಕಡಿಮೆ ಆದ್ರೆ, ಎಲಿಮಿನೇಷನ್ ಹೆಸ್ರಲ್ಲಿ ಪ್ರಾಣವೇ ಹೋಗ್ಬಿಡುತ್ತೆ.. ಆಟವಾಡಲು ಒಂದು ಬೇರೆಯ ಜಗತ್ತನ್ನೆ ಸೃಷ್ಟಿ ಮಾಡಿರ್ತಾರೆ. ಅದರಲ್ಲಿ ವಿವಿಧ ಆಟಿಕೆಗಳು, ಆಟವಾಡುವ ಮೈದಾನ ಎಲ್ಲವೂ ವಿಭಿನ್ನ. ಇನ್ನು ಆಟವಾಡಿಸುವ ಜನರ ವಿಷಯಕ್ಕೆ ಬಂದರೇ.. ಯಾರ ಮುಖ ಪರಿಚಯವಾಗೊದೇ ಇಲ್ಲ.. ಕೈಯಲ್ಲಿ ಢಮ್ ಢಮ್ ಢಮಾರ್ ಎನಿಸೋ ಶಸ್ತ್ರಾಸ್ತ್ರವಷ್ಟೇ

ನಿರ್ದೇಶಕ ಒಂಥರಾ ವಿಚಿತ್ರ ಜಗತ್ತನ್ನೇ ನಿರ್ಮಿಸಿದ್ದಾನೆ ಅಂದ್ರೆ ತಪ್ಪಾಗಲ್ಲ.. ಅಲ್ಲಿ ಒಟ್ಟು 456 ಜನರಿರ್ತಾರೆ. ಅಲ್ಲಿರೋ ಪ್ರತಿಯೊಬ್ಬರಿಗೂ ದುಡ್ಡಿನ ಅನಿವಾರ್ಯ ಹೆಚ್ಚಿರುತ್ತೆ. ಹೊರ ಜಗತ್ತಿನಲ್ಲಿ ಅವರೆಲ್ಲರೂ ಕಷ್ಟದಲ್ಲಿದ್ದಾಗ ಒಬ್ಬ ಬಂದು ಸಣ್ಣ ಮಕ್ಕಳ ಆಟವಾಡಿಸಿ ಅವರಿಗೆ ಹಣ ಕೊಟ್ಟು ಆಮಿಷ ಒಡ್ಡಿರುತ್ತಾನೆ. ಇನ್ನು ಹೆಚ್ಚಿನ ಹಣ ಬೇಕಿದ್ದಲ್ಲಿ ಆ ಆಟದ ಬಗ್ಗೆ ಮಾಹಿತಿ ಜೊತೆಗೆ, ಆಸಕ್ತರಿದ್ದರೆ ಈ ನಂಬರ್​ಗೆ ಕರೆ ಮಾಡಿ ಎನ್ನುವ ಆಹ್ವಾನ ಕೊಟ್ಟು ಹೋಗುತ್ತಾನೆ. ಆ ಜಾಗದಲ್ಲಿ ಆಟವಾಡಿ ಗೆದ್ದವರಿಗೆ ಬರೋಬರಿ 38 ಮಿಲಿಯನ್​ ಡಾಲರ್​ ಬಹುಮಾನ. ಇದಕ್ಕಾಗಿ 456ಜನ ಸ್ಪರ್ಧಿಗಳು.

 

ಅಲ್ಲಿರುವ ಎಲ್ಲರೂ ಕೋಟಿ ಕೋಟಿ ಹಣ ಮಾಡುವ ಆಸೆಗೆ ಬಿದ್ದು ಅಲ್ಲಿ ಬಂದು ಸಿಲುಕಿದವರೇ. ಇಲ್ಲಿ ಆಟ ಹೇಗೆಲ್ಲಾ ನಡೆಯುತ್ತೆ. ಎಷ್ಟೆಲ್ಲಾ, ಹಿಂಸಾತ್ಮಕವಾಗಿ ಕೊಲೆ ಮಾಡ್ತಾರೆ ಅನ್ನೋದೆ ಈ ವೆಬ್​ ಸೀರೀಸ್​ನ ಮೂಲ ಕಥೆ. ಇದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದೆ. ಬಿಡುಗಡೆಯಾದ ಕೆಲವೇ ಕೆಲವು ದಿನದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು ಸಕತ್​ ಫೇಮಸ್​ ಆಗಿದೆ. ಕೊರಿಯನ್​ ಭಾಷೆಯಲ್ಲಿರುವ ಈ ಸೀರೀಸ್​, ಕೊರಿಯಾದಲ್ಲಿ ಮಾತ್ರವಲ್ಲದೆ.. ಚೀನಾ, ಇಂಡಿಯಾ ಸೇರಿ ಹಲವು ರಾಷ್ಟ್ರಗಳಲ್ಲಿ ಸದ್ದು ಮಾಡ್ತಾ ಇದೆ. ಇನ್ನು ಜಪಾನ್​ ದೇಶದಲ್ಲಿ ನೆಟ್​ಫ್ಲಿಕ್ಸ್​ ಬ್ಯಾನ್​ ಆಗಿದ್ದರೂ ಸಹ, ಅನ್ಯ ಮಾರ್ಗದಿಂದ ನೋಡಿದ HIGHEST VIEWED ವೆಬ್​ ಸೀರೀಸ್​ ಇದಾಗಿದೆ.

ಈ ವೆಬ್​ ಸೀರೀಸ್​ ಎಷ್ಟು ಸದ್ದು ಮಾಡ್ತಾ ಇದ್ಯೋ ಅಷ್ಷೆ ಸದ್ದು.. ಈ ವೆಬ್​ ಸೀರೀಸ್​ನಿಂದ ಆದ ಎಡವಟ್ಟು ಸುದ್ದಿ ಮಾಡ್ತಾ ಇದೆ. ಅದೇನಪ್ಪ ಅಂತ ಸುದ್ದಿ? ತಮ್ಮ ಜೊತೆ ಆಟವಾಡಲು ಬಯಸೋ ಆಟಗಾರರಿಗೆ, ಒಬ್ಬ ಒಂದು ಕಾರ್ಡ್​ ನೀಡಿ ಹೋಗ್ತಾನೆ.. ಆ ಕಾರ್ಡ್​ನಲ್ಲಿ ಒಂದು ಫೋನ್​ ನಂಬರ್​ ಇದೆ. ಹಣ ಮಾಡಲು ಇಚ್ಛೆ ಇದ್ದರೆ ವೆಬ್​​ಸಿರೀಸ್​​ನಲ್ಲಿರುವ ಪಾತ್ರಧಾರಿಗಳು ಆ ನಂಬರ್​ಗೆ ಕರೆ ಮಾಡಬೇಕು. ಮಾಡಿದವರು ಸ್ಕ್ವಿಡ್​ ಗೇಮ್ಸ್​ನ ಆಟಕ್ಕೆ ಆಯ್ಕೆಯಾಗುತ್ತಾರೆ. ಇಲ್ಲಿ ಕಾರ್ಡ್​ ಮೇಲೆ ತೋರಿಸಲಾದ ನಂಬರ್ ಬೇಜಾನ್ ಅವಾಂತರ ಸೃಷ್ಟಿಸಿಬಿಟ್ಟಿದೆ.

ನಿಮಗೆ ನೆನಪಿರಬಹುದು 2006ರಲ್ಲಿ ಕನ್ನಡದಲ್ಲಿ ಒಂದು ಸಿನಿಮಾ ಬಂದಿತ್ತು. ಅದರ ಹೆಸರು ಮೋಹಿನಿ.. ಆ ಸಿನಿಮಾದಲ್ಲಿ 9886788888 ಎನ್ನುವ ಫೋನ್​​ ನಂಬರ್​ ಬಳಸಲಾಗಿತ್ತು, ತೋರಿಸಲಾಗಿತ್ತು. ಅದನ್ನ ನೋಡಿದ ಕರ್ನಾಟಕದ ಅದೆಷ್ಟೋ ಜನರು ಕರೆ ಮೇಲೆ ಕರೆ ಮಾಡಿ ರೆಕಾರ್ಡ್​ ಆಗಿರುವ ಮೋಹಿನಿಯ ಧ್ವನಿಯನ್ನು ಕೇಳಿದ್ದರು. ಅಂದಿಗೆ ಅದು ಒಳ್ಳೆ ಪ್ರಚಾರವನ್ನೆ ಪಡೆದಿತ್ತು. ಇದೇ ರೀತಿ ಬೆಟರ್​ ಕಾಲ್​ ಸಾಲ್​ ಎನ್ನುವ ಅಮೆರಿಕನ್​ ಸಿನಿಮಮಾದಲ್ಲಿ ಒಂದು ನಂಬರ್​ ಅನ್ನು ವೀಕ್ಷಕರಿಗೆ ಬಿಟ್ಟು ಕರೆ ಮಾಡುವಂತೆ ಹೇಳಿದ್ದರು. ಇದು ಕೇವಲ ಅವರ ಮಾರ್ಕೆಟಿಂಗ್​ ಪ್ಲಾನ್​ ಆಗಿತ್ತು. ಆದೇ ರೀತಿ ವಿಶ್ವಾದ್ಯಂತ ಕೊರಿಯಾ ಭಾಷೆಯಲ್ಲಿ ರೀಲೀಸ್​ ಆದ ಈ ಸೀರೀಸ್​ನವರು ಕೂಡ ಮಾಡಿದ್ದಾರೆ ಎಂದು ತಿಳಿದ ಅದೆಷ್ಟೋ ವೀಕ್ಷಕರು, ಆ ಕಾರ್ಡ್​ನಲ್ಲಿದ್ದ ನಂಬರ್​ ತೆಗೆದುಕೊಂಡು ಕರೆ ಮಾಡಲು ಶುರು ಮಾಡಿದ್ದಾರೆ.

ಕರೆ ಮೇಲೆ ಕರೆಯನ್ನು ಸ್ವೀಕರಿಸಿ ಸೋತ ಹೋದ ಮಹಿಳೆ
ರಾತ್ರಿ ಅನ್ನೋದನ್ನು ನೋಡದೆ ವೀಕ್ಷಕರಿಂದ ತರಲೆ!

ಹೌದು, ಇದೇ ಆಗಿರೋದು ನೋಡಿ.. ಸ್ಕ್ವಿಡ್​ ಗೇಮ್ಸ್​ನಲ್ಲಿ ಪಾಲ್ಗೊಳ್ಳಲು ಒಂದು ನಂಬರ್​ಗೆ ಕರೆ ಮಾಡ್ಬೇಕು ಅಂತಾ ವೆಬ್​ಸೀರೀಸ್​ನಲ್ಲಿನ ನಟರಿಗೆ ಹೇಳಲಾಗಿತ್ತು. ಆ ನಂಬರ್​​ನ ಸ್ಕ್ರೀನ್​ ಮೇಲೆ ಕೂಡ ತೋರಿಸಿದ್ದಾರೆ. ಸಿನಿಮಾ ಹೊರತು ಪಡಿಸಿದರೆ ಆ ಫೋನ್​ ನಂಬರ್​ ಒಬ್ಬ ಮಹಿಳಾ ಉದ್ಯಮಿಯದು. ಆಕೆಗೂ ಈ ಸಿನಿಮಾಗೂ ಕಿಂಚಿತ್ತು ಸಂಬಂಧವಿಲ್ಲ. ಆದರೆ ಅಚಾನಕ್ಕಾಗಿ ಅವಳ ಫೋನ್​ ನಂಬರ್​ ಆ ಕಾರ್ಡ್​ನಲ್ಲಿ ಪ್ರಿಂಟ್​ ಆಗಿ ಬಿಟ್ಟಿದೆ. ಅದನ್ನು ಗಮನಿಸಿದ ವೆಬ್​ ಸೀರೀಸ್​ ವೀಕ್ಷಕರು, ತಾವು ಗೇಮ್ಸ್​ನಲ್ಲಿ ಪಾಲ್ಗೊಳ್ಳುವ ಆಸೆಗೋ ಏನೋ.. ಬಿಡದೆ ಆ ನಂಬರ್​ಗೆ ಕರೆ ಮಾಡಿದ್ದಾರೆ. ಕರೆ ಮೇಲೆ ಕರೆ ಸ್ವೀಕರಿಸಿ ಮಹಿಳೆ ಸೋತು ಹೋಗಿದ್ದಾಳೆ. ಹಗಲು ರಾತ್ರಿ ಎನ್ನದೇ, ರಾತ್ರಿ ಎರಡು ಮೂರು ಗಂಟೆಗೆಲ್ಲಾ ಕಾಲ್​ ಮಾಡಿ ಅವಳಿಗೆ ನಿದ್ದೆ ಮಾಡಲು ಸಹ ಬಿಟ್ಟಿಲ್ಲ.. ಸ್ಕ್ವಿಡ್​ ಗೇಮ್ಸ್​ ಅಭಿಮಾನಿಗಳು. ಅವರ ಅಭಿಮಾನ ಆ ಯುವತಿಗೆ ಪರದಾಟವಾಗಿದೆ

ಸೆಪ್ಟೆಂಬರ್ 17 ರಂದು ಬಿಡುಗಡೆಯಾದ ಸ್ಕ್ವಿಡ್​ ಗೇಮ್​​​
ದಿನದಿಂದ ದಿನಕ್ಕೆ ಮಹಿಳೆಗೆ ಹೆಚ್ಚುತ್ತಿರುವ ಕರೆಗಳು

ಸ್ಕ್ವಿಡ್​ ಗೇಮ್ಸ್​ ವೆಬ್​ ಸೀರೀಸ್​, ಸೆಪ್ಟೆಂಬರ್​ 17ರಂದು ಬಿಡುಗಡೆ ಆಗಿದ್ದು. ಅಂದಿನಿಂದ ಇಂದಿನವರೆಗೂ ಈಕೆಗೆ ಸತತ ಕರೆಗಳೂ ಬರುತ್ತಲೇ ಇದೆ.. ದಿನೇ ದಿನೇ ಆ ಕರೆಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ದಿನ ಒಂದಕ್ಕೆ 4 ಸಾವಿರದಿಂದ 5 ಸಾವಿರ ಪ್ರಾಂಕ್ ಕಾಲ್ಸ್​ನ ಆಕೆ ಅಟೆಂಡ್​ ಮಾಡುವ ಪರಿಸ್ಥಿತಿ ಎದುರಾಗಿದೆ. ಕಾಲ್​ ಕಟ್​ ಮಾಡಿದರೆ ಟೆಕ್ಸ್ಟ್​ ಮೆಸೇಜ್​ ಕಳುಹಿಸುವ 10 ಸಾವಿರಕ್ಕೂ ಅಧಿಕ ಮಂದಿ. ತಮಗೆ ಹಣದ ಅನಿವಾರ್ಯ ಇರುವುದಾಗಿ ಬೇಡಿಕೊಳ್ತಿದ್ದಾರೆ. ಜೊತೆಗೆ ತಮ್ಮನ್ನು ಸ್ಕ್ವಿಡ್​ ಗೇಮ್ಸ್​ ಸೇರಿಸಿಕೊಳ್ಳಿ ಎಂದು ಕೋರಿಕೊಳ್ತಿದ್ದಾರೆ. ಆಶ್ಚರ್ಯ ಅಂದ್ರೆ ಆ ಕರೆ ಮಾಡಿದವರಲ್ಲಿ ಬಹುಪಾಲು ಮಕ್ಕಳೇ ಇದ್ದಾರೆ. ​

ಮೊದಮೊದಲು, ಆಕೆಗೆ ಈ ಕರೆಗಳು ಯಾಕೆ ಬರುತ್ತಿದೆ ಅನ್ನೋದು ಗೊತ್ತಿರಲಿಲ್ಲ. ತನ್ನ ಸ್ನೆಹಿತೆ ಹೀಗೆ ಅವಳ ನಂಬರ್​ ಸ್ಕ್ವಿಡ್​ ಗೇಮ್ಸ್​ನಲ್ಲಿ ಪ್ರಚಾರವಾಗಿರುವ ಬಗ್ಗೆ ತಿಳಿಸಿದ್ದಾಳೆ. ಅಂದಿನಿಂದ ಈಕೆಗೆ ಅದು ಪ್ರಾಣ ಹಿಂಡುತ್ತಿದೆ

ನನಗೆ ಈ ಕರೆಗಳ ಬಗ್ಗೆ ಅರಿವಿರಲಿಲ್ಲ, ಪ್ರಾಂಕ್​ ಕಾಲ್ಸ್​​​ ಎಂದು ತಿರಸ್ಕರಿಸುತ್ತಿದ್ದೆ. ಫೋನ್​ಗಳು ಹೆಚ್ಚಾದಾಗ, ನನ್ನ ಸ್ನೇಹಿತೆ ಸ್ಕ್ವಿಡ್​ ಗೇಮ್ಸ್​ ಬಗ್ಗೆ ತಿಳಿಸಿದಳು.. ಈ ನಂಬರ್​​ನ ನಾನು 10 ವರ್ಷದಿಂದ ಬಳಸುತ್ತಿದ್ದೇನೆ, ಈಗ ದಿನಕ್ಕೆ 4 ಸಾವಿರ ಕರೆಗಳು ಬರುತ್ತಿದೆ. ಈ ಕರೆಗಳನ್ನು ರಿಸೀವ್​ ಮಾಡಿ ಮಾಡಿ ನನಗೆ ಹುಚ್ಚು ಹಿಡಿದಂತಾಗಿದೆ.
ನೊಂದ ಯುವತಿ

ಅಷ್ಟು ಕಾಟಕೊಡುತ್ತಿರೋ ಆ ಫೋನ್​ ನಂಬರ್​ ಆಕೆಗೆ ಏಕೆ ಬೇಕು ? ಸಿಮ್​ ತೆಗೆದು ಬೇರೆ ಸಿಮ್​ ತೆಗೆದುಕೊಳ್ಳಬಹುದಲ್ಲಾ ಎನ್ನುವ ಅನುಮಾನ ನಿಮಗೂ ಬಂದಿರ ಬಹುದು. ಆ ಫೋನ್​ ನಂಬರ್ ಆಕೆ ಬದಲಿಸಲು ಸಿದ್ಧವಿಲ್ಲ. ಅದೇ ಫೋನ್​ ನಂಬರ್​ ಅನ್ನು ಸತತ 10 ವರ್ಷಗಳಿಂದ ಆಕೆ ಬಳಸುತ್ತಿದ್ದಾಳೆ. ಆ ನಂಬರ್ ಅವಳು ತ್ಯಜಿಸಿದರೇ ಅವಳ ಬಳಿ ಇರುವ ಸಾಕಷ್ಟು ಕಾಂಟ್ಯಾಕ್ಟ್ಸ್​ ಹೋಗಿ ಬಿಡುತ್ತದೆ ಎನ್ನುವ ಆತಂಕದಿಂದ, ಆ ಯುವತಿ ನಂಬರ್​ ಬದಲಿಸಲು ತಯಾರಿಲ್ಲ.. ಇದಕ್ಕೆ ಸ್ವತಃ ದಕ್ಷಿಣ ಕೊರಿಯಾದ ಬಾವಿ ಅಧ್ಯಕ್ಷ ಸ್ಪರ್ಧಿ ಹೂ- ಕ್ಯೂಂಗ್​- ಯಾಂಗ್​ ಪರಿಹಾರ ಘೋಷಿಸಿದ್ದಾರೆ.

ಯುವತಿಗೆ ಅಧ್ಯಕ್ಷನಿಂದ 100 ಮಿಲಿಯನ್​ ವನ್​ ಪರಿಹಾರ
ನೆಟ್​ಫ್ಲಿಕ್ಸ್​ನಿಂದ 5 ಮಿಲಿಯನ್​ ವನ್​ ಪರಿಹಾರ ತಿರಸ್ಕಾರ

ಹೌದು., ಸ್ಕ್ವಿಡ್​ ಗೇಮ್ಸ್​ನಿಂದ ಶುರುವಾದ ಈ ಯುವತಿಯ ವೇದನೆ, ಇಂದು ಸೌತ್​ ಕೊರಿಯನ್​ ಬಾವಿ ಅಧ್ಯಕ್ಷನ ಬಳಿ ತಲುಪಿದೆ. ಎಲೆಕ್ಷನ್​ ಗೆದ್ದು ಅಧ್ಯಕ್ಷನ ಗಾದಿಗೆ ಏರಬೇಕಿರುವ ಹೂ- ಕ್ಯೂಂಗ್​- ಯಾಂಗ್​ ಆ ಯುವತಿಗೆ ತನ್ನ ಫೋನ್​ ನಂಬರ್​ ಕೊಟ್ಟುಬಿಡು.. ನಿನಗೆ 100 ಮಿಲಿಯನ್​ ವನ್​ ಪರಿಹಾರ ಅಂದ್ರೆ ಅಂದಾಜು 86ಸಾವಿರ ಡಾಲರ್​ಗಳನ್ನು ಪರಿಹಾರವಾಗಿ ಕೊಡ್ತೀವಿ ಅಂದ್ರೂ ಆಕೆ ಅದನ್ನು ಒಪ್ಪುತ್ತಿಲ್ಲ, ನೆಟ್​ಫ್ಲಿಕ್ಸ್​ ಕೂಡ, ಈ ವಿವಾದ ಶುರುವಾಗುತ್ತಿದ್ದಂತೆ ಆಕೆಯ ಫೋನ್​ ನಂಬರ್​ ಅನ್ನು ಸೀರೀಸ್​ನಲ್ಲಿ ಎಡಿಟ್​ ಮಾಡಿದೆ. ಈ ತಪ್ಪಿಗಾಗಿ 5 ಮಿಲಿಯನ್​ ವನ್​ ಪರಿಹಾರ ಆಕೆಗೆ ನೀಡಿದೆ.. ಆದರೆ ಆಕೆ ಅದನ್ನು ತಿರಸ್ಕರಿಸುತ್ತಿದ್ದಾಳೆ.

ಒಟ್ನಲ್ಲಿ, ಒಂದು ವರ್ಲ್ಡ್​ ಫೇಮಸ್​ ವೆಬ್​ ಸೀರೀಸ್​ ಯುವತಿಯ ಜೀವನವನ್ನೆ ಅಲ್ಲೋಲ ಕಲ್ಲೋಲ ಮಾಡ್ತಿದೆ. ಮಾನಸಿಕ ಹಿಂಸೆ ನೀಡ್ತಿದೆ. ಆ ವೆಬ್​ ಸೀರೀಸ್​ ಅವಳೊಬ್ಬಳಿಗೆ ಇಷ್ಟೆಲ್ಲಾ ಕಷ್ಟ ತಂದುಕೊಡ ಬಹುದು ಎನ್ನುವ ಅರಿವೂ ಯಾರಿಗೂ ಇರಲಿಲ್ಲ. ಸದ್ಯಕ್ಕೆ, ಆಕೆಯ ನಂಬರ್​ ಎಡಿಟ್​ ಆಗಿದೆ, ಇನ್ನಾದರೂ ಕರೆಗಳು ಕಡಿಮೆ ಆಗುತ್ತಾ ನೋಡ್ಬೆಕು.

ಒಂದು ವೆಬ್​ ಸೀರೀಸ್​ ಅನ್ನು ಮೆಚ್ಚಿದ ಅಭಿಮಾನಿ ಹೀಗೂ ಮಾಡಬಹುದಾ.? ದಿನಕ್ಕೆ 4 ಸಾವಿರ ಕಾಲ್​ ರಿಸೀವ್​ ಮಾಡುವ ಆಕೆಯ ಪರಿಸ್ಥಿತಿ ಏನಾಗಿರಬಹುದು ? ಈ ರೀತಿಯ ಎಲ್ಲಾ ಪ್ರಶ್ನೆಗಳೂ ಈ ಕಥೆ ಕೇಳಿದ ನಿಮ್ಮಲ್ಲಿ ಓಡಾಡ್ತಿರಬೇಕು.. ಏನೂ ಮಾಡೋಕ್ಕಾಗಲ್ಲ… ಆಕೆಗಿರೋದೀಗ ಎರಡೇ ಆಪ್ಷನ್ ಒಂದು ಫೋನ್ ನಂಬರ್ ವಾಪಸ್​ ಕೊಟ್ಟುಬಿಡೋದು.. ಇಲ್ಲ ಅಂದ್ರೆ, ಬಂದ ಕರೆಗಳನ್ನ ಸಾರಾಸಗಟಾಗಿ ತಿರಸ್ಕರಿಸೋದು

The post ಮಹಿಳಾ ಉದ್ಯಮಿಯ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ ‘Squid ಗೇಮ್ಸ್’.. ಅಷ್ಟಕ್ಕೂ ಆಗಿದ್ದೇನು? appeared first on News First Kannada.

News First Live Kannada

Leave a comment

Your email address will not be published. Required fields are marked *