ಮಹೇಶ್​ ಬಾಬು ಮಾತಿಗೆ ಬೆಂಬಲ ನೀಡಿದ ಕಂಗನಾ; ಬಾಲಿವುಡ್ ವರ್ಸಸ್​​ ಸೌತ್​ ಚರ್ಚೆ ಇನ್ನಷ್ಟು ಜೋರು | Dhaakad star Kangana Ranaut reaction to Mahesh Babu statement Bollywood cant afford me


ಮಹೇಶ್​ ಬಾಬು ಮಾತಿಗೆ ಬೆಂಬಲ ನೀಡಿದ ಕಂಗನಾ; ಬಾಲಿವುಡ್ ವರ್ಸಸ್​​ ಸೌತ್​ ಚರ್ಚೆ ಇನ್ನಷ್ಟು ಜೋರು

ಕಂಗನಾ ರಣಾವತ್, ಮಹೇಶ್ ಬಾಬು

Kangana Ranaut | Mahesh Babu: ‘ನನ್ನನ್ನು ಭರಿಸಲು ಬಾಲಿವುಡ್​ಗೆ ಸಾಧ್ಯವಿಲ್ಲ’ ಎಂದು ಮಹೇಶ್​ ಬಾಬು ಹೇಳಿರುವುದು ಚರ್ಚೆಗೆ ಕಾರಣ ಆಗಿದೆ. ಆ ಕುರಿತು ಕಂಗನಾ ರಣಾವತ್​ ಪ್ರತಿಕ್ರಿಯೆ ನೀಡಿದ್ದಾರೆ.

ದಕ್ಷಿಣ ಭಾರತದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಸೌತ್​ ಚಿತ್ರಗಳು ಹಿಂದಿಗೆ ಡಬ್​ ಆಗಿ ಅಲ್ಲಿನ ಗಲ್ಲಾ ಪೆಟ್ಟಿಗೆಯಲ್ಲೂ ಕಮಾಲ್​ ಮಾಡುತ್ತಿವೆ. ‘ಆರ್​ಆರ್​ಆರ್​’, ‘ಕೆಜಿಎಫ್​: ಚಾಪ್ಟರ್​ 2’ ಮಾಡಿದ ಸಾಧನೆ ಕಂಡು ಬಾಲಿವುಡ್​ ಮಂದಿ ಬೆರಗಾಗಿದ್ದಾರೆ. ಸೌತ್​ ಸಿನಿಮಾಗಳ ಎದುರು ಹಿಂದಿ ಚಿತ್ರಗಳು ಮಂಕಾಗಿವೆ. ಇದರ ಪರಿಣಾಮವಾಗಿ ‘ಬಾಲಿವುಡ್​ ವರ್ಸಸ್​ ದಕ್ಷಿಣ ಭಾರತದ ಚಿತ್ರರಂಗ’ (Bollywood Vs South Cinema) ಎಂಬ ವಾತಾವರಣ ನಿರ್ಮಾಣ ಆಗಿದೆ. ಈ ಕುರಿತು ಅನೇಕ ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಮಹೇಶ್​ ಬಾಬು (Mahesh Babu) ನೀಡಿದ ಒಂದು ಹೇಳಿಕೆ ಹೆಚ್ಚು ವೈರಲ್​ ಆಯಿತು. ‘ಸರ್ಕಾರು ವಾರಿ ಪಾಟ’ ಸಿನಿಮಾದ ಮೂಲಕ ಸದ್ದು ಮಾಡುತ್ತಿರುವ ಮಹೇಶ್​ ಬಾಬು ಅವರಿಗೆ ಬಾಲಿವುಡ್​ ಬಗ್ಗೆ ಪ್ರಶ್ನೆ ಕೇಳಲಾಯಿತು. ಆಗ ಅವರು ನೀಡಿದ ಉತ್ತರ ಹೊಸ ಚರ್ಚೆ ಹುಟ್ಟುಹಾಕಿತು. ‘ಬಾಲಿವುಡ್​ನವರಿಗೆ ನನ್ನನ್ನು ಭರಿಸಲು ಸಾಧ್ಯವಿಲ್ಲ’ ಎಂದು ಮಹೇಶ್​ ಬಾಬು ಹೇಳಿದರು. ಈ ಮಾತಿಗೆ ಹಿಂದಿ ಚಿತ್ರರಂಗದ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಖ್ಯಾತ ನಟಿ ಕಂಗನಾ ರಣಾವತ್ (Kangana Ranaut)​ ಅವರು ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಕಂಗನಾ ನಟನೆಯ ‘ಧಾಕಡ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ಮೇ 20ರಂದು ರಿಲೀಸ್​ ಆಗಲಿದೆ. ದೇಶದ ವಿವಿಧ ನಗರಗಳಿಗೆ ತೆರಳಿ ಅವರು ಪ್ರಮೋಷನ್​ ಮಾಡುತ್ತಿದ್ದಾರೆ. ಈ ವೇಳೆ ಅವರಿಗೆ ಮಹೇಶ್​ ಬಾಬು ಹೇಳಿಕೆ ಕುರಿತು ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು, ‘ಮಹೇಶ್​ ಬಾಬು ಹೇಳಿದ್ದು ಸರಿ ಇದೆ’ ಎಂದಿದ್ದಾರೆ. ‘ಮಹೇಶ್​ ಬಾಬು ಮಾತಿಗೆ ನನ್ನ ಸಹಮತ ಇದೆ. ಅವರಿಗೆ ಅನೇಕ ನಿರ್ಮಾಪಕರಿಂದ ಆಫರ್​ ಬರುತ್ತಿದೆ. ಅವರ ತಲೆಮಾರಿನ ಹಲವು ಸ್ಟಾರ್​ ನಟರು ತೆಲುಗು ಚಿತ್ರರಂಗವನ್ನು ಭಾರತದಲ್ಲಿ ನಂ.1 ಇಂಡಸ್ಟ್ರಿಯಾಗಿ ಮಾಡಿದ್ದಾರೆ. ಖಂಡಿತವಾಗಿಯೂ ಅವರನ್ನು ಬಾಲಿವುಡ್​ನವರು ಭರಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ಕಂಗನಾ.

‘ಮಹೇಶ್​ ಬಾಬು ಅವರು ತಮ್ಮ ಇಂಡಸ್ಟ್ರಿಗೆ ಗೌರವ ನೀಡಿದ್ದಾರೆ. ಅದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ತೆಲುಗು ಫಿಲ್ಮ್​ ಇಂಡಸ್ಟ್ರಿ ಸುಮ್ಮನೆ ಇದನ್ನು ಪಡೆದಿಲ್ಲ. ಅವರು ಕಳೆದ 10-15 ವರ್ಷಗಳಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ತಮಿಳು ಚಿತ್ರರಂಗವನ್ನೂ ಅವರು ಹಿಂದಿಕ್ಕಿದ್ದಾರೆ. ಅವರಿಂದ ನಾವು ಕಲಿಯಬೇಕಷ್ಟೇ’ ಎಂದು ಕಂಗನಾ ಹೇಳಿದ್ದಾರೆ. ಬಾಲಿವುಡ್​ ಸ್ಟಾರ್​ ನಟರ ವಿರುದ್ಧ ಅವರು ಈ ಮೊದಲಿನಿಂದಲೂ ಕಿಡಿ ಕಾರುತ್ತಲೇ ಬಂದಿದ್ದಾರೆ.

ಮಹೇಶ್​ ಬಾಬು ಹೇಳಿಕೆಗೆ ಮುಕೇಶ್​ ಭಟ್​ ಪ್ರತಿಕ್ರಿಯೆ:

ಬಾಲಿವುಡ್​ ಕುರಿತು ‘ಪ್ರಿನ್ಸ್​’ ಮಹೇಶ್ ಬಾಬು ಹೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದಿ ಸಿನಿಮಾ ನಿರ್ಮಾಪಕ ಮುಕೇಶ್​ ಭಟ್ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದರು. ಅವರು ಹೇಳಿದ ಮಾತಲ್ಲಿ ಕೊಂಕಿದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ‘ಬಾಲಿವುಡ್​​ಗೆ ಅವರನ್ನು ಭರಿಸಲು ಸಾಧ್ಯವಾಗುವುದಿಲ್ಲ ಎಂದರೆ ತುಂಬಾ ಒಳ್ಳೆಯದು. ನಾನು ಅವರಿಗೆ ಶುಭ ಹಾರೈಸುತ್ತೇನೆ. ಅವರು ಸಾಕಷ್ಟು ಪ್ರತಿಭೆಯನ್ನು ಹೊಂದಿದ್ದಾರೆ. ಅವರು ಮಾಡಿದ ಹೆಸರಿಗೆ ತಮ್ಮದೇ ಆದ ಮೌಲ್ಯ ಹೊಂದಿದ್ದಾರೆ. ಅವರು ಅತ್ಯಂತ ಯಶಸ್ವಿ ನಟ. ಅವರ ನಿರೀಕ್ಷೆಗಳಿಗೆ ಬಾಲಿವುಡ್ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ನಾನು ಅವರಿಗೆ ಶುಭ ಹಾರೈಸುತ್ತೇನೆ’ ಎಂದಿದ್ದಾರೆ ಮುಕೇಶ್ ಭಟ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *