‘ಮಾಂಕ್ ದಿ ಯಂಗ್​’ ಚಿತ್ರಕ್ಕೆ ರಿಷಬ್​ ಶೆಟ್ಟಿ, ಭಾ. ಮ. ಹರೀಶ್​ ಬೆಂಬಲ; ಪೋಸ್ಟರ್​ ರಿಲೀಸ್​ | Rishab Shetty and Ba Ma Harish released Monk The Young Kannada movie poster


Monk The Young: ಶೀಘ್ರದಲ್ಲೇ ‘ಮಾಂಕ್ ದಿ ಯಂಗ್​’ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸದ್ಯ ಪೋಸ್ಟರ್​ ಮೂಲಕ ಗಮನ ಸೆಳೆಯಲು ಪ್ರಯತ್ನಿಸಲಾಗಿದೆ.

‘ಮಾಂಕ್ ದಿ ಯಂಗ್​’ ಚಿತ್ರಕ್ಕೆ ರಿಷಬ್​ ಶೆಟ್ಟಿ, ಭಾ. ಮ. ಹರೀಶ್​ ಬೆಂಬಲ; ಪೋಸ್ಟರ್​ ರಿಲೀಸ್​

‘ಮಾಂಕ್ ದಿ ಯಂಗ್’ ಚಿತ್ರದ ಸುದ್ದಿಗೋಷ್ಠಿ

ನಟ-ನಿರ್ದೇಶಕ ರಿಷಬ್​ ಶೆಟ್ಟಿ (Rishab Shetty) ಅವರು ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಹೊಸಬರ ಅನೇಕ ಸಿನಿಮಾಗಳಿಗೆ ಅವರು ಬೆಂಬಲ ನೀಡುತ್ತಾರೆ. ಇತ್ತೀಚೆಗೆ ಅವರು ‘ಮಾಂಕ್ ದಿ ಯಂಗ್’ (Monk The Young) ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡಿದರು. ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ. ಮ. ಹರೀಶ್ (Ba Ma Harish) ಸಾಥ್​ ನೀಡಿದರು. ಇಬ್ಬರೂ ಸೇರಿ ಈ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಹೊಸಬರೇ ಸೇರಿಕೊಂಡು ‘ಮಾಂಕ್ ದಿ ಯಂಗ್’ ಸಿನಿಮಾ ತಯಾರಿಸಿದ್ದಾರೆ. ಫ್ಯಾಂಟಸಿ-ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಯಕನಾಗಿ ಸರೋವರ್ ಹಾಗೂ ನಾಯಕಿಯಾಗಿ ಸೌಂದರ್ಯಾ ಗೌಡ ಅಭಿನಯಿಸಿದ್ದಾರೆ.

‘ಮಾಂಕ್ ದಿ ಯಂಗ್’ ಚಿತ್ರಕ್ಕೆ ಮಾಸ್ಚಿತ್ ಸೂರ್ಯ ನಿರ್ದೇಶನ ಮಾಡಿದ್ದಾರೆ. ಇದು ಅವರಿಗೆ ಚೊಚ್ಚಲ ಸಿನಿಮಾ. ವಿಶೇಷ ಎಂದರೆ ಈ ಸಿನಿಮಾಗೆ ಐವರು ನಿರ್ಮಾಪಕರು. ಐವರೂ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಅಂತ್ಯವಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ಸ್‌ ಕೆಲಸಗಳು ನಡೆಯುತ್ತಿದೆ. ಸದ್ಯದಲ್ಲೇ ಈ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

‘ಎಲ್ಲರು ತಮ್ಮ ಸಿನಿಮಾ ಡಿಫರೆಂಟ್​ ಆಗಿದೆ ಎನ್ನುತ್ತಾರೆ. ಅದೇ ರೀತಿ ನಾವು ಹೇಳುತ್ತೇವೆ. ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡ್ತೀವಿ. ಅದನ್ನು ನೋಡಿ ಜನರೇ ತೀರ್ಮಾನಿಸಲಿ’ ಎಂದು ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ ಚಿತ್ರದ ನಿರ್ಮಾಪಕ ಹಾಗೂ ನಾಯಕ ಸರೋವರ. ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ರಿಷಬ್​ ಶೆಟ್ಟಿ ಹಾಗೂ ಭಾ. ಮ. ಹರೀಶ್ ಅವರಿಗೆ ‘ಮಾಂಕ್ ದಿ ಯಂಗ್’ ಸಿನಿಮಾ ತಂಡದವರು ಧನ್ಯವಾದ ಅರ್ಪಿಸಿದ್ದಾರೆ. ಹಿರಿಯ ನಟಿ ಉಷಾ ಭಂಡಾರಿ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಸೇನೆಯಲ್ಲಿ ಕೆಲಸ ಮಾಡಿ ಬಂದಿರುವ ಕರ್ನಲ್ ರಾಜೇಂದ್ರನ್ ಅವರು ಈ ಸಿನಿಮಾದ ನಿರ್ಮಾಪಕರಲ್ಲೊಬ್ಬರು. ‘ನಾನು 17ನೇ ವಯಸ್ಸಿನಲ್ಲೇ ಆರ್ಮಿ ಸೇರಿದೆ. 40 ವರ್ಷಗಳು ಅಲ್ಲಿ ಸೇವೆ ಸಲ್ಲಿಸಿದ್ದೇನೆ. ಅಲ್ಲಿಂದ ಬಂದ ಮೇಲೆ ನನಗೆ ಸಿನಿಮಾದಲ್ಲಿ ನಟಿಸುವ ಆಸೆ ಆಯಿತು. ಈ ಹಿಂದೆ ಕೂಡ ಒಂದು ಚಿತ್ರದಲ್ಲಿ ಅಭಿನಯಿಸಿದ್ದೆ. ಇದು 2ನೇ ಸಿನಿಮಾ. ಈ ಚಿತ್ರದ ಪಾತ್ರ ಕೂಡ ಚೆನ್ನಾಗಿದೆ’ ಎಂದು ಕರ್ನಲ್ ರಾಜೇಂದ್ರನ್ ಹೇಳಿದ್ದಾರೆ.

ನಿರ್ಮಾಪಕರು ಹಾಗೂ ನಟರೂ ಆಗಿರುವ ವಿನಯ್ ಬಾಬು ರೆಡ್ಡಿ, ಲಾಲ್ ಚಂದ್, ಗೋಪಿ ಚಂದ್ ಮತ್ತು ನಾಯಕಿ ಸೌಂದರ್ಯಾ ಗೌಡ ಅವರು ಪೋಸ್ಟರ್​ ಬಿಡುಗಡೆಯ ಸುದ್ದಿಗೋಷ್ಠಿಯಲ್ಲಿ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಸಿವಿಲ್ ಎಂಜಿನಿಯರಿಂಗ್ ಓದಿ, ಹೈದರಾಬಾದ್​ನಲ್ಲಿ ಕೆಲಸ ಮಾಡುತ್ತಿದ್ದ ಸೌಂದರ್ಯಾ ಗೌಡ ಅವರು ಸಿನಿಮಾ ಮೇಲಿನ ಆಸಕ್ತಿಯಿಂದ ಕೆಲಸ ಬಿಟ್ಟು ಚಿತ್ರರಂಗಕ್ಕೆ ಬಂದಿದ್ದಾರೆ. ಇದು ಅವರ ಮೊದಲ ಸಿನಿಮಾ. ಮಾಡೆಲ್​ ಆಗಿಯೂ ಅವರು ಗುರುತಿಸಿಕೊಂಡಿದ್ದಾರೆ.

TV9 Kannada


Leave a Reply

Your email address will not be published. Required fields are marked *