ಮಂಗಳೂರು: ಖ್ಯಾತ ವೈದ್ಯರೊಬ್ಬರು ಅಗತ್ಯ ವಸ್ತುಗಳ ಖರೀದಿಗೆ ಬಂದಿದ್ದ ಸಂದರ್ಭದಲ್ಲಿ ಮಾಸ್ಕ್ ಧರಿಸದೇ ಇದ್ದದ್ದನ್ನು ಕಂಡು ಸಿಬ್ಬಂದಿ ತರಾಟೆಗೆ ತೆಗೆದು ಕೊಂಡ ಘಟನೆ ನಡೆದಿದೆ.

ನಗರದ ಖ್ಯಾತ ವೈದ್ಯ ಡಾ. ಬಿ.ಎಸ್. ಕಕ್ಕಿಲ್ಲಾಯ ಸೂಪರ್ ಮಾರ್ಕೆಟ್ ನಲ್ಲಿ ಮಾಸ್ಕ್ ಹಾಕುವ ವಿಚಾರದಲ್ಲಿ ಅಲ್ಲಿನ ಸಿಬ್ಬಂದಿ ಜೊತೆ ವಾಗ್ವಾದ ಮಾಡಿ ಮುಜುಗರಕ್ಕೀಡಾಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಸೂಪರ್ ಮಾರ್ಕೆಟಿಗೆ ದಿನಸಿ ವಸ್ತುಗಳ ಖರೀದಿಗಾಗಿ ಸ್ವತಃ ಡಾ. ಕಕ್ಕಿಲ್ಲಾಯ ಅವರು ತೆರಳಿದ್ದರು. ಮುಖಕ್ಕೆ ಮಾಸ್ಕ್ ಹಾಕದೇ ಬಂದಿದ್ದ ವೈದ್ಯರಲ್ಲಿ ಮಾಸ್ಕ್ ಹಾಕಿ ಬರುವಂತೆ ಅಲ್ಲಿನ ಸಿಬ್ಬಂದಿ ಸೂಚಿಸಿದ್ದರು. ಆದರೆ ಸಿಬ್ಬಂದಿಯ ಮನವಿಯನ್ನು ತಿರಸ್ಕರಿಸಿದ ವೈದ್ಯರು, ನಾನು ಮಾಸ್ಕ್ ಹಾಕಲ್ಲ. ಮಾಸ್ಕ್ ಯಾಕೆ ಹಾಕಬೇಕು. ಮಾಸ್ಕ್ ನಿಂದ ಕೊರೊನಾ ಎದುರಿಸಲು ಸಾಧ್ಯವಿಲ್ಲ ಎಂದು ಹೇಳ್ಕೊಂಡು ಬಂದವನು ನಾನು. ಈಗ ನಾನೇ ಮಾಸ್ಕ್ ಹಾಕಬೇಕಾ ಎಂದು ಕೇಳಿದ್ದಾರೆ ಎನ್ನಲಾಗಿದೆ.

‌ಆದರೆ, ಎಲ್ಲರೂ ಮಾಸ್ಕ್ ಹಾಕಲೇಬೇಕೆಂದು ನಿಯಮ ಇದೆ. ಹಾಗಾಗಿ ಹೇಳುತ್ತಿದ್ದೇವೆ ಎಂದು ಮಳಿಗೆಯ ಸಿಬ್ಬಂದಿ ವೈದ್ಯರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ಕುರಿತ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಡಾ.ಕಕ್ಕಿಲ್ಲಾಯ ಅವರು ಈ ಹಿಂದೆಯೂ ಕೊರೊನಾ ಸೋಂಕು ತಡೆಯಲು ಮಾಸ್ಕ್ ಹಾಕಬೇಕಿಲ್ಲ ಎಂದಿದ್ದರು. ಲಾಕ್ಡೌನ್ ಮಾಡುವ ಅವಶ್ಯಕತೆಯೂ ಇಲ್ಲ ಎಂದಿದ್ದರು. ಸರಕಾರದ ಲಾಕ್ಡೌನ್ ಘೋಷಣೆ ಮೂರ್ಖತನದ ನಿರ್ಧಾರ ಎಂದು ಟೀಕಿಸಿದ್ದರು.

The post ಮಾಕ್ಸ್​​ ಧರಿಸದೆ ಸೂಪರ್ ಮಾರ್ಕೆಟ್​​ ಸಿಬ್ಬಂದಿಯೊಂದಿಗೆ ಖ್ಯಾತ ವೈದ್ಯರ ಕಿರಿಕ್ appeared first on News First Kannada.

Source: newsfirstlive.com

Source link