ಮಾಜಿ ಗೃಹಸಚಿವ ಎಂ.ಬಿ.ಪಾಟೀಲ್ ಮನೆಯಲ್ಲಿ ನಡೆದಿದ್ದ ಕಳವು ಪ್ರಕರಣ: ಕೆಲಸಗಾರ ಅರೆಸ್ಟ್ | Karnataka Bangalore Crime News Accused arrested for theft from former Home Minister MB Patil’s house


ಮಾಜಿ ಗೃಹಸಚಿವ ಎಂ.ಬಿ.ಪಾಟೀಲ್ ನಿವಾಸದಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ಮನೆಯಲ್ಲಿ ಲಾಂಡ್ರಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಒಡಿಶಾದಲ್ಲಿ ಪೊಲೀಸರು ಬಂಧಿಸಿದ್ದಾರೆ

ಮಾಜಿ ಗೃಹಸಚಿವ ಎಂ.ಬಿ.ಪಾಟೀಲ್ ಮನೆಯಲ್ಲಿ ನಡೆದಿದ್ದ ಕಳವು ಪ್ರಕರಣ: ಕೆಲಸಗಾರ ಅರೆಸ್ಟ್

ಸಾಂಧರ್ಬಿಕ ಚಿತ್ರ

ಬೆಂಗಳೂರು: ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ (M.B.Patil) ಅವರ​ ನಿವಾಸದಲ್ಲಿ ನಡೆದ ಕೋಟ್ಯಾಂತರ ರೂಪಾಯಿ ವಸ್ತುಗಳ ಕಳ್ಳತನ ಪ್ರಕರಣ ಸಂಬಂಧ ಮನೆಯ ಕೆಲಸಗಾರನನ್ನು ಒಡಿಶಾದಲ್ಲಿ ಬಂಧಿಸಲಾಗಿದೆ. ಎಂ.ಬಿ.ಪಾಟೀಲ್ ಅವರ​ ನಿವಾಸದಲ್ಲಿ ಲಾಂಡ್ರಿ ಕೆಲಸ ಮಾಡುತ್ತಿದ್ದ ಜಯಂತ್ ದಾಸ್ ಬಂಧಿತ ಆರೋಪಿಯಾಗಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಐದು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡು ಹೆಚ್ಚಿನ ವಿಚಾರಣೆಯನ್ನು ಕೈಗೊಂಡಿದ್ದಾರೆ.

ಕಳೆದ ಐದು ವರ್ಷಗಳಿಂದ ಎಂ.ಬಿ.ಪಾಟೀಲ್ ಅವರ ಮನೆಯಲ್ಲಿ ಜಯಂತ್ ದಾಸ್ ಲಾಂಡ್ರಿ ಕೆಲಸ ಮಾಡುತ್ತಿದ್ದನು. ಆದರೆ ಕಳೆದ ತಿಂಗಳು ಕೋಟ್ಯಾಂತರ ರೂಪಾಯಿ ಮೌಲ್ಯದ ಕರೆನ್ಸಿ, ಬ್ರಾಂಡೆಡ್ ವಾಚ್​ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಜಯಂತ್ ದಾಸ್ ಕಳವು ಮಾಡಿ ಪರಾರಿಯಾಗಿದ್ದನು. ಈ ವಿಚಾರ ತಿಳಿಯುತ್ತಿದ್ದಂತೆ ಎಂ.ಬಿ.ಪಾಟೀಲ್ ಅವರು ಅಡುಗೆ ಕೆಲಸಕ್ಕೆ ಇದ್ದ ವ್ಯಕ್ತಿ ಮೂಲಕ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ತನಿಖೆ ಆರಂಭಿಸಿದ ಪೊಲೀಸರು, ಜಯಂತ್​ನನ್ನು ಒಡಿಶಾದಲ್ಲಿ ಬಂಧಿಸಿದ್ದಾರೆ.

ಆತ್ಮಹತ್ಯೆಯಲ್ಲಿ ಅಂತ್ಯವಾದ ಕಬಾಬ್ ಜಗಳ

ಬೆಂಗಳೂರು: ಕಬಾಬ್​ ವಿಚಾರಕ್ಕೆ ಆರಂಭವಾದ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ನಗರದ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೈಲಸಂದ್ರ ದಿನ್ನೆ ನಿವಾಸಿ ಎಂ.ಸುರೇಶ್ (48) ಎಂಬವರ ಪತ್ನಿ ಶಾಲಿನಿ (42) ಚಿಕನ್ ಕಬಾಬ್ ಮಾಡಿದ್ದರು. ಆದರೆ ಮಾಡಿದ ಕಬಾಬ್​ ರುಚಿ ಚೆನ್ನಾಗಿಲ್ಲ ಎಂದು ಉಗುಳಿದ್ದಾನೆ. ಇಲ್ಲಿಂದ ಆರಂಭವಾದ ಜಗಳ ಸುರೇಶ್​ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಅಂತ್ಯಗೊಂಡಿದೆ.

ಶಾಲಿನಿ ತನ್ನ ಪತಿಗಾಗಿ ಚಿಕನ್ ಕಬಾಬ್ ಮಾಡಿದ್ದರು. ಆದರೆ ಪತಿ ಸುರೇಶ್ ಇದು ಚೆನ್ನಾಗಿಲ್ಲ ಎಂದು ಉಗುಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ಆರಂಭಗೊಂಡಿದ್ದು, ಕೋಪದಿಂದ ಸುರೇಶ್ ಶಾಲಿನಿಗೆ ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಹೊಡೆತ ತಿಂದು ಅಸ್ವಸ್ಥರಾದ ಶಾಲಿನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಕೊಂಚ ಚೇತರಿಸಿಕೊಂಡ ನಂತರ ಶಾಲಿನಿ ಗಂಡನ ವಿರುದ್ಧ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಶಾಲಿನಿ ನೀಡಿದ ದೂರಿನಂತೆ ಪೊಲೀಸರು ಸುರೇಶ್ ಬಂಧನಕ್ಕೆ ತನಿಖೆ ಆರಂಭಿಸಿದ್ದಾರೆ. ಈ ನಡುವೆ ಸುರೇಶ್ ದಾರಿ ಬದಿಯ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈಜಲು ತೆರಳಿದ್ದ ವ್ಯಕ್ತಿ ನೀರುಪಾಲು

ಮೈಸೂರು: ಈಜಲು ತೆರಳಿದ್ದ ವ್ಯಕ್ತಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಚಿಕ್ಕೆರೆಯೂರು ಬಳಿ ನಡೆದಿದೆ. ಹರೀಶ್(27) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಯುವಕ. ಚಿಕ್ಕೆರೆಯೂರು ಗ್ರಾಮದ ಹೊರವಲಯದಲ್ಲಿ ಇರುವ ಕೆರೆಗೆ ಈಜಲೆಂದು ಹರೀಶ ತೆರಳಿದ್ದಾನೆ. ಹೀಗೆ ಹೋಗಿದ್ದ ಹರೀಶ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದು, ಈಜುಗಾರರ ಸಹಾಯದಿಂದ ಮೃತದೇಹವನ್ನು ಕೆರೆಯಿಂದ ಹೊರತೆಗೆಯಲಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *