ದೇಶದಲ್ಲಿ ಕೊರೊನಾ ವಿರುದ್ಧ ಹೋರಾಡಲು ಜಾಗೃತಿ ಅಭಿಯಾನ ನಡೆಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ, ಮಹಿಳಾ ತಂಡದ ಮಾಜಿ ಆಲ್​​ರೌಂಡರ್​​​ ಕೆಎಸ್​​​ ಶ್ರಾವಂತಿ ನಾಯ್ಡು ಅವರ ತಾಯಿಯ ಚಿಕಿತ್ಸೆಗೆ 6.77 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.

ಬ್ಯಾಡ್ಮಿಂಟನ್​ ಆಟಗಾರ್ತಿ ಜ್ವಾಲಾ ಗುಟ್ಟಾ ಅವರು ಟ್ವೀಟ್​ ಮಾಡಿ, ಶ್ರಾವಂತಿ ನಾಯ್ಡು ಅವರ ತಾಯಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅವರ ಚಿಕಿತ್ಸೆಗೆ ನೆರವಿನ ಅಗತ್ಯವಿದೆ. ಈಗಾಗಲೇ ನಾಯ್ದು 16 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಬರೆದುಕೊಂಡಿದ್ದರು.

ಈ ಟ್ವೀಟ್​​ಅನ್ನು ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಆರ್​.ಶ್ರೀಧರ್.. ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ ಹಾಗೂ ಹನುಮ ವಿಹಾರಿ ಅವರಿಗೆ ಟ್ಯಾಗ್ ಮಾಡಿ ಸಹಾಯ ಕೋರಿದ್ದರು. ಇದರ ಬೆನ್ನಲ್ಲೇ ನೆರವಿಗೆ ಧಾವಿಸಿದ ಕೊಹ್ಲಿ ಅಗತ್ಯ ನೆರವು ನೀಡಿದ್ದಾರೆ. ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ, ಬಿಸಿಸಿಐ ಸೌಥ್ ಝೋನ್​​ ಮಾಜಿ ಸದಸ್ಯರಾದ ಎನ್​​.ವಿದ್ಯಾ ಯಾದವ್​ ಕೊಹ್ಲಿ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಭಾರತದಲ್ಲಿ ಕೊರೊನಾ ಎರಡನೇ ಅಲೆ ತೀವ್ರವಾಗುತ್ತಿದಂತೆ ಅಗತ್ಯವಿರುವವರ ನೆರವಿಗೆ ಧಾವಿಸಲು ಅಭಿಯಾನ ಆರಂಭ ಮಾಡಿದ್ದ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ, ಸುಮಾರು 11 ಕೋಟಿ ರೂಪಾಯಿಗೂ ಹೆಚ್ಚು ಆರ್ಥಿಕ ನೆರವು ಸಂಗ್ರಹಿಸಿದ್ದರು. ಅಲ್ಲದೇ ನೆರವು ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿ ವಿಡಿಯೋ ಪೋಸ್ಟ್​ ಮಾಡಿದ್ದರು.

ಉಳಿದಂತೆ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​​ನಲ್ಲಿ ಭಾಗಿಯಾಗಲು ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ ಶೀಘ್ರವೇ ಇಂಗ್ಲೆಂಡ್​​ಗೆ ಪ್ರಯಾಣ ಬೆಳೆಸಲಿದ್ದಾರೆ.

The post ಮಾಜಿ ಮಹಿಳಾ ಆಟಗಾರ್ತಿಯ ತಾಯಿಯ ಚಿಕಿತ್ಸೆಗೆ ಕೊಹ್ಲಿ ₹6.77 ಲಕ್ಷ ನೆರವು appeared first on News First Kannada.

Source: newsfirstlive.com

Source link