ಮಾಡಬಾರದ್ದನ್ನು ಮಾಡಿ ಸ್ಸಾರಿ ಅನ್ನೋದು ಸುಲಭ, ವಿಷಯದ ಸೂಕ್ಷ್ಮತೆಯನ್ನು ಪ್ರೇಮ್ ಮತ್ತು ರಕ್ಷಿತಾದರೂ ಅರ್ಥ ಮಾಡಿಕೊಳ್ಳಬೇಕಿತ್ತು! | Being seniors in the industry, director Prem and Rakshita could have understood sensitivity of the issue


ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ನಟಿ ರಚಿತಾ ರಾಮ್ ಅವರು ಶನಿವಾರ ಸುದ್ದಿಗೋಷ್ಠಿಯೊಂದನ್ನು ನಡೆಸಿ ಏಕ್ ಲವ್ ಯಾ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ, ಕೇವಲ ಎರಡು ವಾರಗಳಷ್ಟೇ ಅಗಲಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಅಗೌರವ ಸಂದ ಬಗ್ಗೆ ಕ್ಷಮೆಯಾಚಿಸುವ ಮೊದಲೇ ಕೊಂಚ ತಿಳುವಳಿಕೆಯನ್ನು ಬಳಸಿ ಆ ಘಟನೆಯೇ ನಡೆಯದಂತೆ ಎಚ್ಚರವಹಿಸಬೇಕಿತ್ತು. ಪುನೀತ್ ಎಂಥ ಸಭ್ಯ ನಟನೆನ್ನುವುದು ಬೇರೆ ಗ್ರಹದ ಜೀವಿಗಳಿಗೂ ಗೊತ್ತಿದೆ. ಕುಡಿತ ಅಥವಾ ಬೇರೆ ಯಾವುದೇ ದುಶ್ಚಟ ಅವರಿಗಿರಲಿಲ್ಲ. ಅಂಥ ಮಹಾನುಭಾವನಿಗೆ ಶಾಂಪೇನ್ ಬಾಟಲ್ ಓಪನ್ ಮಾಡುತ್ತಾ ಶ್ರದ್ಧಾಂಜಲಿ ಸಲ್ಲಿಸುವುದು ಬಾಲಿಶತನ, ಉದ್ಧಟತನ ಮತ್ತು ಮೂರ್ಖತನದ ಪರಮಾವಧಿ. ಈ ಚಿತ್ರತಂಡ ವರ್ತನೆಯಿಂದ ಪುನೀತ್ ಅಭಿಮಾನಿಗಳು ನೊಂದಿದ್ದಾರೆ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ನಿರ್ಮಾಪಕ ಮತ್ತು ರಾಜ್ ಕುಟುಂಬದ ಆಪ್ತ ಸಾ ರಾ ಗೋವಿಂದು ಅವರು ಸಹ ಈ ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕಾರ್ಯಕ್ರಮದ ಎಡಬಿಡಂಗಿ ನಿರೂಪಕ, ಶಾಂಪೇನ್ ಬಾಟಲಿ ಹಿಡಿದು ವೇದಿಕೆ ಸುತ್ತ ಓಡಾಡುತ್ತಾನೆ. ಹಾಗೇಯೇ, ಶಾಂಪೇನ್ ಬಗ್ಗೆ ಅಣಿಮುತ್ತೊಂದನ್ನು ಉದುರಿಸುತ್ತಾನೆ, ‘ಇದು ಎಣ್ಣೆಯಲ್ಲ, ಎಣ್ಣೆ ಥರ!’ ಅಂತ. ಶಾಂಪೇನಲ್ಲಿ ಶೇಕಡಾ 12 ಕ್ಕಿಂತ ಜಾಸ್ತಿ ಅಲ್ಕೋಹಾಲ್ ಅಂಶ ಇರುತ್ತದೆ ಅಂತ ತೆಲುಗು ಮೂಲದ ನಿರೂಪಕನಿಗೆ ಗೊತ್ತಿಲ್ಲದಿರುವುದು ಅವನ ಅಜ್ಞಾನಕ್ಕೆ ಸಾಕ್ಷಿ!

ನೀವು ಗಮನಿಸಿ ನೋಡಿ; ಈ ಮನುಷ್ಯನ ಕನ್ನಡ ಉಚ್ಛಾರಣೆ ಸರಿಯಿಲ್ಲ. ಅಚ್ಚ ಕನ್ನಡ ಗೊತ್ತಿರುವ ನಿರೂಪಕರು ಬೆಂಗಳೂರಿನಲ್ಲಿ ಇಲ್ಲವೇ? ನೂರಾರು ಜನ ಸಿಗುತ್ತಾರೆ. ನಿರ್ಮಾಪಕರು ಇಂಥ ವ್ಯಕ್ತಿಗೆ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ವಹಿಸುವ ಮೊದಲು ಕೊಂಚ ಯೋಚಿಸಬೇಕು.

ಅಸಲಿಗೆ, ಏಕ್ ಲವ್ ಯಾ ಚಿತ್ರತಂಡ ಶಾಂಪೇನ್ ಬಾಟಲಿ ಓಪನ್ ಮಾಡಲು ಹೇಗೆ ಅವಕಾಶ ನೀಡಿತು, ಅದನ್ನು ವೇದಿಕೆಗೆ ತರುವ ಅವಶ್ಯಕತೆಯಾದರೂ ಏನಿತ್ತು? ಓಕೆ, ಈ ಕಾರ್ಯಕ್ರಮ ಅವರ ಸಿನಿಮಾಗೆ ಮಾತ್ರ ಸಂಬಂಧಿಸಿದ್ದಾಗಿದ್ದರೆ ಯಾರೂ ಚಕಾರವೆತ್ತುತ್ತಿರಲಿಲ್ಲ.

ಆದರೆ ಹಿನ್ನೆಲೆಯ ಪರದೆ ಮೇಲೆ ಅಪ್ಪು ಅವರ ಚಿತ್ರ ತೋರಿಸಿ, ‘ನಿಮ್ಮನ್ನು ನೋಡಿದ ಕಣ್ಣುಗಳೇ ಪುನೀತ, ನಿಮ್ಮ ಜೊತೆ ಕಳೆದ ಕ್ಷಣಗಳೇ ಆಸರೆಯ ಅಪ್ಪುಗೆ,’ ಎಂಬ ಸಾಲುಗಳು ಕಾಣಿಸುತ್ತವೆ ಮತ್ತು ಹಿನ್ನೆಲೆಯಲ್ಲಿ ಹೇಳುವುದು ಸಹ ಕೇಳಿಸುತ್ತದೆ. ಈ ಸಾಲುಗಳಲ್ಲಿ ವಿಷಾದ ವ್ಯಕ್ತವಾದರೆ ವೇದಿಕೆ ಮೇಲೆ ಎಡಬಿಡಂಗಿ ನಿರೂಪಕ, ರಚಿತಾ ಮತ್ತು ರಕ್ಷಿತಾ ಪ್ರೇಮ್ ಮೊದಲಾದವೆರೆಲ್ಲ ಶಾಂಪೇನ್ ತುಂಬಿದ ಗ್ಲಾಸುಗಳನ್ನು ಎತ್ತಿ ಚೀಯರ್ಸ್ ಅನ್ನುತ್ತಾರೆ.

ಅವರೇನಾದರೂ ಪುನೀತ್ ಅವರ ಹುಟ್ಟುಹಬ್ಬ ಅಚರಿಸುತ್ತಿದ್ದರೇ?

ರಕ್ಷಿತಾ ಈಗ ಹಿರಿಯ ನಿರ್ಮಾಪಕಿ, ಅವರಿಗಾದರೂ ವಿಷಯದ ಸೂಕ್ಷ್ಮತೆ ಅರ್ಥವಾಗಬೇಕಿತ್ತು. ಇದೇ ಮಾತು ‘ಜೋಗಿ’ಯಂಥ ಸೂಪರ್ ಡ್ಯೂಪರ್ ಹಿಟ್ ಚಿತ್ರ ನೀಡಿದ ನಿರ್ದೇಶಕ ಪ್ರೇಮ್ ಗೂ ಅನ್ವಯಿಸುತ್ತದೆ.

ಈ ಕಾರ್ಯಕ್ರಮ ಏಕ್ ಲವ್ ಯಾ ಚಿತ್ರಕ್ಕೆ ಮೀಸಲಾಗಿದ್ದರೆ, ಚಿತ್ರತಂಡದವರೆಲ್ಲ ಶಾಂಪೇನ್ ಯಾಕೆ, ಕಂಟ್ರಿ ಲಿಕ್ಕರ್ ಕುಡಿದು ಕುಪ್ಪಳಿಸಿದ್ದರೂ ಆಕ್ಷೇಪಣೆಗಳು ಏಳುತ್ತಿರಲಿಲ್ಲ. ಈಗ ಈ ಚಿತ್ರದ ಟೈಟಲನ್ನು ಯೇ ಕ್ಯಾ ಕಿಯಾ ಯಾ ಅಂತ ಬದಲಿಸಿದರೂ ಆಗುತ್ತೆ.

ಇದನ್ನೂ ಓದಿ:   ಪುನೀತ್​ ಆತ್ಮದ ಜತೆ ಮಾತನಾಡಿದ್ದೇನೆ ಎಂದು ವಿಡಿಯೋ ಹಂಚಿಕೊಂಡ ವ್ಯಕ್ತಿಗೆ ಅಭಿಮಾನಿಗಳ ಛೀಮಾರಿ

TV9 Kannada


Leave a Reply

Your email address will not be published.