ಸಾಂಕೇತಿಕ ಚಿತ್ರ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ (Taliban) ಆಡಳಿತಕ್ಕೆ ಬಂದ ನಂತರ ಅಲ್ಲಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಜನರ ಜೀವನ, ಕೆಲಸದ ಶೈಲಿಗಳನ್ನೂ ತಾಲಿಬಾನ್ ಬದಲಿಸಿದೆ. ಈ ಮಧ್ಯೆ ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವ ಅಲ್ಲಿನ ಜನರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ನೇರಾನೇರ ಹೋದರೆ ತಾಲಿಬಾನಿಗಳು ತಮಗೆ ತೊಂದರೆ ಉಂಟು ಮಾಡಬಹುದು ಎಂಬ ಕಾರಣಕ್ಕೆ ಕೆಲವು ಅಫ್ಘಾನರು ಮಾನವ ಕಳ್ಳಸಾಗಣೆದಾರರ ಸಹಾಯದಿಂದ ದೇಶಬಿಡುತ್ತಿದ್ದಾರೆ. ಕಾರು, ಟ್ರಕ್ಗಳಲ್ಲಿ ತಮ್ಮ ಲಗೇಜ್ಗಳನ್ನು ಸಾಗಿಸುತ್ತಿದ್ದಾರೆ.
ಅಫ್ಘಾನಿಸ್ತಾನದ ಝರಂಜ್ ಎಂಬ ದುರ್ಗಮ ಪ್ರದೇಶದ ಜನರು ಈ ಮಾರ್ಗದಲ್ಲಿಯೇ ಹೋಗುತ್ತಿದ್ದಾರೆ. ಈ ಪ್ರದೇಶ ಅಫ್ಘಾನಿಸ್ತಾನವನ್ನು ಪಾಕಿಸ್ತಾನ ಮತ್ತು ಇರಾನ್ನೊಟ್ಟಿಗೆ ಸೇರಿಸುವ ಗಡಿ ಪ್ರದೇಶದಲ್ಲಿದ್ದು, ಮಾನವ ಕಳ್ಳಸಾಗಣೆದಾರರು ಇವರಿಗೆ ಸಹಾಯ ಮಾಡುತ್ತಿದ್ದಾರೆ. ಅಫ್ಘಾನ್ನಲ್ಲಿ ಆರ್ಥಿಕ ಸಮಸ್ಯೆ ಹೆಚ್ಚಾಗಿದೆ. ಹೆಜ್ಜೆಹೆಜ್ಜೆಗೂ ಹಿಂಸೆಯನ್ನು ಎದುರಿಸುವ ಸನ್ನಿವೇಶ ಇದೆ. ಈ ಹೊತ್ತಲ್ಲಿ ಅಫ್ಘಾನ್ನ ಮಂದಿ ಹೇಗೆ ಪಲಾಯನ ಮಾಡುತ್ತಿದ್ದಾರೆ ಎಂಬುದನ್ನು ಬಿಬಿಸಿ ಚಿತ್ರಗಳ ಮೂಲಕ ವರದಿ ಮಾಡಿದೆ.
ತಾಲಿಬಾನ್ ಉಗ್ರರಿಗಿಂತಲೂ ಮನುಷ್ಯರನ್ನು ಕಳ್ಳತನ ಮಾಡುವವರೇ ಎಷ್ಟೋ ಪಾಲು ವಾಸಿ ಎಂದು ಭಾವಿಸಿರುವ ಝರಂಜಿಯ ಜನರು, ತಮ್ಮ ಲಗೇಜ್ಗಳನ್ನೆಲ್ಲ ಕಾರಿನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಸುಮಾರು 18-20 ಜನರ ಈಗಾಗಲೇ ಅಲ್ಲಿಂದ ತೆರಳಿದ್ದಾರೆ. ಅದರಲ್ಲೂ ಒಂದಷ್ಟು ಜನ ಪಾಕಿಸ್ತಾನ ಮರಭೂಮಿಯತ್ತ ಪ್ರಯಾಣ ಬೆಳೆಸಿದ್ದರೆ, ಇನ್ನೊಂದಷ್ಟು ಮಂದಿ ಇರಾನ್ಗೆ ಕಾಲಿಟ್ಟಿದ್ದಾರೆ.
ಹೀಗೆ ಗಡಿಭಾಗಗಳಿಂದ ಮಾನವ ಕಳ್ಳಸಾಗಣೆದಾರರ ಜತೆ ಬೇರೆ ದೇಶಗಳಿಗೆ ಹೋಗಲು ವೀಸಾ, ಪಾಸ್ಪೋರ್ಟ್ ಅಗತ್ಯವಿರುವಿದಲ್ಲ. ತಾಲಿಬಾನಿಗಳು ತಡೆಒಡ್ಡುವುದಿಲ್ಲ. ಆದರೆ ಈ ಕಳ್ಳಸಾಗಣೆದಾರರು ಪೂರ್ವ ಒಪ್ಪಂದದಂತೆ ತಾಲಿಬಾನಿಗಳಿಗೆ ಸಣ್ಣಮಟ್ಟದ ಶುಲ್ಕ ನೀಡಬೇಕಾಗಿದೆ. ಅಫ್ಘಾನಿಸ್ತಾನದಿಂದ ಪಲಾಯನ ಮಾಡುತ್ತಿರುವವರಲ್ಲಿ ಪುರುಷರೇ ಹೆಚ್ಚಾಗಿದ್ದಾರೆ. ಅವರು ಹೊಸ ಉದ್ಯೋಗ ಹುಡುಕಿ ಹಿಡಿಯಲು ಹೀಗೊಂದು ಮಾರ್ಗ ಕಂಡುಹಿಡಿದುಕೊಂಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಝರಂಜ್ನಿಂದ ಜನ ಹೋಗುತ್ತಿರುವುದು ತಾಲಿಬಾನಿಗಳಿಗೆ ಗೊತ್ತಿಲ್ಲ ಎಂದಲ್ಲ. ಅಲ್ಲಿ ಸ್ಥಳೀಯವಾಗಿ ಕಾವಲಿರುವ ತಾಲಿಬಾನ್ ಉಗ್ರರರ ಗಮನಕ್ಕೆ ಇದು ಹೋಗಿದೆ. ಆದರೆ ಮಾನವ ಕಳ್ಳಸಾಗಣೆದಾರರು ಅವರಿಗೆ ಸ್ವಲ್ಪ ಹಣ ನೀಡಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಒಂದು ಟ್ರಕ್ ಅಥವಾ ಕಾರು ಗಡಿಯಿಂದ ಹೊರಹೋಗುವಾಗ 10-11 ಯುಎಸ್ ಡಾಲರ್ ಗಳನ್ನು ಅಲ್ಲಿರುವ ತಾಲಿಬಾನ್ ಸೈನಿಕರಿಗೆ ನೀಡಿದರೆ ಅವರು ಬಿಟ್ಟುಬಿಡುತ್ತಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಒಬ್ಬ ತಾಲಿಬಾನಿ, ಅಫ್ಘಾನಿಸ್ತಾನದ ಆರ್ಥಿಕತೆ ತಳಕಂಡಿದೆ. ನಮ್ಮ ಸರ್ಕಾರವನ್ನು ಅಂತಾರಾಷ್ಟ್ರೀಯ ಸಮುದಾಯ ಮಾನ್ಯತೆ ಮಾಡುತ್ತಿಲ್ಲ. ಹಾಗಾಗಿ ಜನರು ವಲಸೆ ಹೋಗುವುದನ್ನು ತಪ್ಪಿಸುವುದು ಸಾಧ್ಯವೂ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ಭೂಮಿಯೊಳಗಿನ ಕೆಲ ರಾಸಾಯನಿಕ ಪ್ರಕ್ರಿಯೆಗಳಿಂದ ಲಘು ಭೂಕಂಪನ ಸಂಭವಿಸುತ್ತಿದೆ -ತಜ್ಞರ ಅಧ್ಯಯನ