ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಯ್ದುಕೊಳ್ಳಲು ದೇಹಕ್ಕೆ ನಿಯಮಿತ ವರ್ಕ್​ಔಟ್ ಬಹಳ ಮುಖ್ಯ: ಡಾ ಸೌಜನ್ಯ ವಶಿಷ್ಠ | Regular workout is a must for physical and mental health says Dr Soujanya Vasistha ARB


ಖ್ಯಾತ ಮನೋವೈದ್ಯೆ ಡಾ ಸೌಜನ್ಯ ವಶಿಷ್ಠ (Dr Soujanya Vasistha) ಅವರು ಈ ಸಂಚಿಕೆಯಲ್ಲಿ ನಮ್ಮ ದೇಹಕ್ಕೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ವ್ಯಾಯಾಮ ಅಥವಾ ದೇಹಕ್ಕೆ ಒಂದಷ್ಟು ಕಸರತ್ತು (exercise) ಎಷ್ಟು ಮುಖ್ಯ ಅನ್ನೋದನ್ನು ವಿಸ್ತೃತವಾಗಿ ಹೇಳಿದ್ದಾರೆ. ನಿಯಮಿತವಾಗಿ ಅಂದರೆ ಪ್ರತಿದಿನ ಕನಿಷ್ಟ ಅರ್ಧಗಂಟೆಯಿಂದ ಒಂದು ಗಂಟೆಯವರೆಗೆ ವರ್ಕ್ ಔಟ್ (workout) ಮಾಡಿದರೆ ನಮ್ಮ ದೇಹಕ್ಕೆ ನೂರೆಂಟು ಪ್ರಯೋಜನಗಳಿವೆ ಎಂದು ಡಾ ಸೌಜನ್ಯ ಹೇಳುತ್ತಾರೆ. ಮಹಿಳೆಯರು ದೇಹದ ತೂಕ ಜಾಸ್ತಿಯಾದಾಗ ಚಿಂತಿತತಾಗುತ್ತಾರೆ. ತಮ್ಮ ಮೆಚ್ಚಿನ ನಾಯಕಿಯರೊಂದಿಗೆ ಹೋಲಿಕೆ ಮಾಡಿಕೊಂಡು ಕೊರಗುತ್ತಾರೆ. ಆದರೆ ಹಾಗೆ ಮಾಡುವ ಅವಶ್ಯಕತೆಯಿಲ್ಲ ಎಂದು ಹೇಳುವ ಅವರು ಆ ಬಗೆಯ ಕೊರಗು ಹುಟ್ಟದಂತಿರಲು ನಿಮ್ಮ ಆರೋಗ್ಯ ಮತ್ತು ದೇಹವನ್ನು ಚೆನ್ನಾಗಿ ನೋಡಿಕೊಳ್ಳಿ ಅನ್ನುತ್ತಾರೆ.

A sound mind in a sound body ಅನ್ನೋದನ್ನು ನಾವೆಲ್ಲ ಕೇಳಿದ್ದೇವೆ, ನಮ್ಮ ದೈಹಿಕ ಅರೋಗ್ಯ ಚೆನ್ನಾಗಿದ್ದರೆ ಮಾನಸಿಕವಾಗಿಯೂ ಸ್ವಸ್ಥರಾಗಿರುತ್ತೇವೆ. ನಿಯಮಿತವಾಗಿ ವರ್ಕ್ ಔಟ್ ಮಾಡುತ್ತಿದ್ದರೆ ಆತಂಕ, ಖಿನ್ನತೆ ಮತ್ತು ಚಿಂತೆಯಂಥ ಮಾನಸಿಕ ವ್ಯಾಧಿಗಳನ್ನು ದೂರವಿಡಬಹುದು. ನಮ್ಮನ್ನು ಬೇರೆಯವರ ಜೊತೆ ಕಂಪೇರ್ ಮಾಡಿಕೊಳ್ಳದೆ ನಮ್ಮತನವನ್ನು ಕಾಯ್ದುಕೊಳ್ಳಬೇಕು ಎಂದು ಸೌಜನ್ಯ ಹೇಳುತ್ತಾರೆ.

ಬೇರೆಯವರನ್ನು ಮೆಚ್ಚಿಸುವುದು ನಮ್ಮ ಉದ್ದೇಶವಾಗಿರಬಾರದು, ಬೇರೆಯವರಿಗಾಗಿ ದೇಹವನ್ನು ಮಟ್ಟಸವಾಗಿ ಇಟ್ಟಕೊಳ್ಳಬೇಕು ಎಂಬ ಯೋಚನೆಯನ್ನು ತಲೆಯಿಂದ ತೆಗೆದು ಹಾಕಿ ನಿಮ್ಮ ಸಂತೋಷ, ಆತ್ಮತೃಪ್ತಿ, ನಿಮ್ಮ ಆರೋಗ್ಯಕ್ಕಾಗಿ ನಿಯಮಿತವಾಗಿ ವರ್ಕ್ ಔಟ್ ಮಾಡಿ ಎಂದು ಸೌಜನ್ಯ ಹೇಳುತ್ತಾರೆ. ನಮಗೆ ಇಷ್ಟವಾಗುವ ಕೆಲಸ ಮಾಡುವಾಗ ಆನಂದ ಸಿಗುತ್ತದೆ, ಹಾಗೆಯೇ ನಮಗೆ ಸಂತೋಷ ನೀಡುವ ವ್ಯಾಯಾಮ ಆರಿಸಿಕೊಂಡು ಅದನ್ನೇ ನಿಯಮಿತ ಮಾಡುತ್ತಾ ಹೋದರೆ ಅದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಡಾ ಸೌಜನ್ಯ ಹೇಳುತ್ತಾರೆ.

ನಿಯಮಿತ ವರ್ಕ್ ಔಟ್ ನಮ್ಮ ಆರೋಗ್ಯಕರ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ನಮ್ಮ ಆಹಾರಕ್ರಮ ಬಗ್ಗೆಯೂ ಬಹಳ ಎಚ್ಚರದಿಂದಿರಬೇಕು ಎಂದು ಅವರು ಹೇಳುತ್ತಾರೆ. ನಮ್ಮಲ್ಲಿ ಆತ್ಮವಿಶ್ವಾಸ ಇಲ್ಲದಿದ್ದರೆ ಬೇರೆಯವರ ಮೇಲೆ ಅವಲಂಬಿತರಾಗುತ್ತೇವೆ ಮತ್ತು ಬೇರೆಯವರಿಗೆ ಬರ್ಡನ್ ಆಗಿ ಬದುಕುತ್ತೇವೆ. ನಿಮ್ಮ ದೇಹವನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಅಂತಾದರೆ, ನಿಮಲ್ಲಿ ಸೆಲ್ಫ್ ರೆಸ್ಪೆಕ್ಟ್ ನ ಕೊರತೆಯಿದೆ ಎಂದೇ ಅರ್ಥ ಎನ್ನುತ್ತಾರೆ ಡಾ ಸೌಜನ್ಯ.

ನಮ್ಮ ದೇಹವನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಪ್ರತಿ 6 ತಿಂಗಳಿಗೊಮ್ಮೆ ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳುತ್ತಾ ಇರಬೇಕು ಎಂದು ಹೇಳುವ ಸೌಜನ್ಯ ಮತ್ತೇ ವರ್ಕ್ ಔಟ್ ವಿಷಯಕ್ಕೆ ಬರುತ್ತಾರೆ. ಅದನ್ನು ಖುಷಿಯಿಂದ ಮಾಡಬೇಕು, ವ್ಯಾಯಾಮ ನಮ್ಮ ದೇಹದಲ್ಲಿ ಎಂಡಾರ್ಫಿನ್ ಅಂದರೆ ಫೀಲ್ ಗುಡ್ ಹಾರ್ಮೋನನ್ನು (feel good harmone) ಬಿಡುಗಡೆ ಮಾಡುತ್ತದೆ ಅದರಿಂದ ನಮ್ಮ ಮೈಕಾಂತಿ ಹೆಚ್ಚುತ್ತದೆ ಮುಖದಲ್ಲಿ ನೈಸರ್ಗಿಕ ಹೊಳಪು ಕಾಣಿಸುತ್ತದೆ ಎಂದು ಅವರು ಹೇಳುತ್ತಾರೆ.

ವರ್ಕ್ ಔಟ್ ಮಾಡುವುದನ್ನು ಆರಂಭಿಸಿದ ಕೂಡಲೇ ಗಂಟೆಗಟ್ಟಲೆ ಮಾಡುವುದು ಬೇಡ, ಮೊದಲು 10-15 ನಿಮಿಷಗಳಿಂದ ಆರಂಭಿಸಿ ಕ್ರಮೇಣ ಹೆಚ್ಚಿಸುತ್ತಾ ಹೋಗಿ ಅನ್ನುತ್ತಾರೆ ಸೌಜನ್ಯ. ವರ್ಕ್ ಔಟ್ ಮಾಡದಿರಲು ನೆಪಗಳನ್ನು ಹುಡುಕಬೇಡಿ, ಕೆಲವು ಸಂದರ್ಭಗಳಲ್ಲಿ ನಾವು ಸ್ವಾರ್ಥಿಗಳಾಗಬೇಕಾಗುತ್ತದೆ, ನಮ್ಮ ದೇಹ ಮತ್ತ ಮಾನಸಿಕ ಅರೋಗ್ಯದ ವಿಷಯ ಬಂದಾಗ ಸ್ವಾರ್ಥ ತಪ್ಪಲ್ಲ ಅಂತ ಅವರು ಡಾ ಸೌಜನ್ಯ ವಶಿಷ್ಠ  ಹೇಳುತ್ತಾರೆ.

TV9 Kannada


Leave a Reply

Your email address will not be published.