ಕೊರೊನಾ ಎರಡನೇ ಅಲೆ ಕಂಟ್ರೋಲ್ ಮಾಡಿ ಬೀಗಿದ ಇಸ್ರೇಲ್ ಲೆಕ್ಕಾಚಾರವನ್ನು ಡೆಲ್ಟಾ ಉಲ್ಟಾ ಮಾಡಿದೆ. ಮಾಸ್ಕ್ ಮೂಲೆಗಿಟ್ಟು ಮೈಮರೆತ್ತಿದ್ದ ಪುಟ್ಟ ರಾಷ್ಟ್ರಕ್ಕೆ ರೂಪಾಂತರಿ ಶಾಕ್ ನೀಡಿದೆ. ಇಸ್ರೇಲ್ ಜನರು ಮರಳಿ ಮಾಸ್ಕ್ ಧರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೊರೊನಾ ಇಸ್ರೇಲ್​ಗೆ ಮತ್ತೆ ಕಾಟ ಕೊಟ್ಟಿದ್ದೇಗೆ..?

ಕಳೆದೆರಡು ವರ್ಷಗಳಿಂದ ಜಗತ್ತಿಗೆ ಕಂಟಕವಾಗಿರುವ ಕೊರೊನಾವನ್ನ ಸದೆಬಡಿಯಲು ಹಗಲು ರಾತ್ರಿ ಶ್ರಮ ವಹಿಸಲಾಗ್ತದೆ. ಎಷ್ಟೇ ವ್ಯಾಕ್ಸಿನ್ ಅಥವಾ ಔಷಧವೆಂಬ ಅಸ್ತ್ರ ಪ್ರಯೋಗಿಸದ್ರೂ ಮಹಾಮಾರಿ ವೇಷ ಬದಲಿಸಿ ಊಸರವಳ್ಳಿಯ ಆಟವಾಗ್ತಿದೆ. ಅಲೆಗಳ ಮೇಲೆ ಅಲೆಗಳ ಸೃಷ್ಟಿಸಿ ಜನರ ತಲೆ ಬಿಸಿ ಮಾಡ್ತಿದೆ. ಒಂದು ರಾಜ್ಯ ಬಿಟ್ಟರೆ, ಮತ್ತೊಂದು ರಾಜ್ಯ.. ಅದೂ ಬಿಟ್ಟರೆ ಇನ್ನೊಂದು ದೇಶ.. ಹೀಗೆ ವೆರೈಟಿ ವೆರೈಟಿ ವಿಷವ್ಯೂಹ ಹಣೆಯುತ್ತಿರುವ ಮಹಾಮಾರಿಯ ಜಾಲವನ್ನ ಇಸ್ರೇಲ್​ ಬೇಧಿಸಿ ಬೀಗಿತ್ತು.. ಇನ್ನೇನು ನಾವು ಕೊರೊನಾ ವಿರುದ್ಧದ ಸಮರ ಗೆದ್ದೆ ಬಿಟ್ಟೆವು ಅನ್ನುವಂತಾಗಿತ್ತು.. ಆದ್ರೆ, ಜಸ್ಟ್​ ಕೆಲವೇ ಕೆಲವು ದಿನಗಳಲ್ಲಿ ಇಸ್ರೇಲ್​ನಲ್ಲಿ ಮತ್ತೆ ರಕ್ತಬಿಜಾಸುರನಂತೆ ಮಹಾಮಾರಿ ತಲೆ ಎತ್ತಿ ತರ್ಲೆ ಮಾಡ್ತಿದೆ.

ಕೇವಲ 90 ಲಕ್ಷ ಜನಸಂಖ್ಯೆ ಹೊಂದಿರುವ ಜಗತ್ತಿನ ಪುಟ್ಟ ರಾಷ್ಟ್ರ ಇಸ್ರೇಲ್.. ಈ ಹಿಂದೆ ಕೊರೊನಾ ಗೆದ್ದ ಮೊದಲ ರಾಷ್ಟ್ರವಾಗಿ ಬೀಗಿತ್ತು. ನಾವು ಕೊರೊನಾ ವಿರುದ್ಧ ಜಯಿಸಿದ್ದೇವೆಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಎದೆಯುಬ್ಬಿಸಿ ನಿಂತಿತ್ತು. ಭಾರತ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿ ಜನರು ಕೊರೊನಾ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಡಬಲ್ ಮಾಸ್ಕ್ ಹಾಕುತ್ತಿದ್ದ ಸಂದರ್ಭದಲ್ಲಿ ಇಸ್ರೇಲ್​ನಲ್ಲಿ ಜನರು ಮಾಸ್ಕ್ ಸೈಡಿಗಿಟ್ಟು ತಿರುಗಾಡಲು ಶುರು ಮಾಡಿದ್ರು. ಸ್ವತಃ ಇಸ್ರೇಲ್ ಸರ್ಕಾರವೇ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದಿತ್ತು. ಆದ್ರೆ, ಇದೀಗ ತನ್ನನ್ನು ನಿರ್ಲ್ಯಕ್ಷಿಸಿದ ಇಸ್ರೇಲ್​ ಜನತೆಗೆ ಕೊರೊನಾ ತನ್ನ ತಳಿಗಳ ತೆರೆದು ಮತ್ತೆ ಮನೆ ಸೇರುವ ಪರಿಸ್ಥಿತಿ ತಂದೊದಗಿದೆ.

ಜಗತ್ತಿನ ಪುಟ್ಟ ರಾಷ್ಟ್ರ ಇಸ್ರೇಲ್​​ನಲ್ಲಿ ಡೆಲ್ಟಾ ಆರ್ಭಟ
ಮಾಸ್ಕ್ ಮರೆತಿದ್ದ ಮಂದಿಗೆ ಈಗ ರೂಪಾಂತರಿಯ ಕಾಟ

ಲಸಿಕೆ ಅಭಿಯಾನ ಯಶಸ್ವಿಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದ ಇಸ್ರೇಲ್​ಗೀಗ ದೊಡ್ಡ ಹೊಡೆತ ಬಿದ್ದಿದೆ. ಎಸ್. ಮಾಸ್ಕ್ ಮೂಲೆಗಿಟ್ಟು ಕೊರೊನಾ ವಿರುದ್ಧದ ಯುದ್ದ ಗೆದ್ದಿದ್ದೇವೆಂದಿದ್ದ ಇಸ್ರೇಲ್​​ಗೆ ಇದೀಗ ರೂಪಾಂತರಿ ಶಾಕ್ ಕೊಟ್ಟಿದೆ. ಕಳೆದ 10 ದಿನಗಳಿಂದ ಇಸ್ರೇಲ್​​ನಲ್ಲಿ ಕೊರೊನಾ ಉಪಟಳ ಹೆಚ್ಚಾಗಿದೆ. ಹಾಗಾಗಿ, ಇಸ್ರೇಲ್ ಜನರು ಮರಳಿ ಮಾಸ್ಕ್​ನಿಂದ ಮುಖಮುಚ್ಚಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಲ್ಲ ಎಂದಿದ್ದ ಖುದ್ದು ಇಸ್ರೇಲ್ ಆರೋಗ್ಯ ಸಚಿವಾಲಯ ಇಂದು ಕಚೇರಿ, ಮನೆಗಳ ಒಳಗೂ ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಸೂಚಿಸಿದೆ.ಇದ್ರಿಂದ ಇದೀಗ ಮಾಸ್ಕ್ ಕಳಚಿಟ್ಟು ಮುಖ ತೋರಿಸಿ ಓಡಾಡುತ್ತಿದ್ದ ಜನರಿಗೆ ಮತ್ತೆ ಮುಖ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಸ್ರೇಲ್​​ನಲ್ಲಿ ಮತ್ತೆ ಕೊರೊನಾ ಉಲ್ಪಣಿಸಲು ಕಾರಣವೇನು?
ಮಾಸ್ಕ್ ನಿರ್ಲಕ್ಷಿಸಿದ್ದರಿಂದ ಇಸ್ರೇಲ್​ಗೆ ಮತ್ತೆ ಎದುರಾಯ್ತಾ ಕಂಟಕ?

ಇಸ್ರೇಲ್ ಕೊರೊನಾ ಎರಡನೇ ಅಲೆಯನ್ನು ಒಂದು ಹಂತದಲ್ಲಿ ಯಶಸ್ವಿಯಾಗಿ ಕಂಟ್ರೋಲ್ ಮಾಡಿತ್ತು. ಆದ್ರೆ, ಇದೇ ವೇಳೆ ಎಸಗಿದ ಕೆಲ ಪ್ರಮಾದಗಳು ಇಸ್ರೇಲ್​ ಜನರನ್ನ ಮತ್ತೆ ಸಂಕಷ್ಟದ ಕೂಪಕ್ಕೆ ತಳ್ಳಿದೆ. ಮಾಸ್ಕ್​​ನಿಂದ ವಿನಾಯಿತಿ ಸಿಗ್ತಿದ್ದಂತೆ ಇಸ್ರೇಲ್ ಜನರು ಸಾರ್ವಜನಿಕ ಸ್ಥಳ ಮಾತ್ರವಲ್ಲದೇ ಕಾರ್ಯಕ್ರಮಗಳಲ್ಲೂ ಗುಂಪು ಗುಂಪಲ್ಲಿ ಗೋವಿಂದ ಎನ್ನಲು ಶುರು ಮಾಡಿದ್ರು. ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೇ ಬೇಕಾಬಿಟ್ಟಿ ಅಲೆದಾಡಿದ್ರು. ಪರಿಣಾಮ ಇಸ್ರೇಲ್​ನಲ್ಲಿ ಮತ್ತೆ ಕೊರೊನಾ ಅಬ್ಬರ ಶುರುವಾಗಿದೆ. ಇದ್ರಿಂದ ಇಸ್ರೇಲ್ ಸರ್ಕಾರ ಮತ್ತೆ ಮಾಸ್ಕ್ ವಿನಾಯಿತಿ ಆದೇಶಕ್ಕೆ ಪಶ್ಚಾತಾಪ ಪಡುವಂತಾಗಿದೆ.

ಇಸ್ರೇಲ್​​ನಲ್ಲಿ ಕಳೆದ ಹತ್ತು ದಿನಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗತೊಡಗಿವೆ. ಕಳೆದ ನಾಲ್ಕು ದಿನಗಳಲ್ಲಿ ಪ್ರತಿನಿತ್ಯ ನೂರಕ್ಕು ಅಧಿಕ ಕೇಸ್​​​ಗಳು ದಾಖಲಾಗ್ತಿದೆ. ಅದರಲ್ಲೂ ಒಂದೇ ದಿನದಲ್ಲಿ 227 ಹೊಸ ಕೇಸ್​​​ಗಳು ಪತ್ತೆಯಾಗಿವೆ. ಹೀಗೆ, ದಿನದಿಂದ ದಿನಕ್ಕೆ ಕೊರೊನಾ ಕೇಸ್​​​​ಗಳು ಹೆಚ್ಚಾಗುತ್ತಿರುವುದರಿಂದ ಮತ್ತೆ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ.
ನಾಚ್ಮನ್ ಆಶ್- ಸಾಂಕ್ರಾಮಿಕ ಕಾರ್ಯಪಡೆಯ ಮುಖ್ಯಸ್ಥ, ಇಸ್ರೇಲ್​

ಸದ್ಯ, ದಿನವೊಂದಕ್ಕೆ ನೂರಕ್ಕಿಂತ ಹೆಚ್ಚು ಹೊಸ ಹೊಸ ಕೇಸ್​​​ಗಳು ಪತ್ತೆಯಾಗ್ತಿರೋದು ಇಸ್ರೇಲ್ ಆತಂಕಕ್ಕೆ ಕಾರಣವಾಗಿದೆ. ಭಾರತಕ್ಕೆ ಹೋಲಿಸಿದ್ರೆ ಇದು ಕಡಿಮೆಯೇ ಇರಬಹುದು. ಆದ್ರೆ ಕೇವಲ 90 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಇಸ್ರೇಲ್​​ಗೆ ಇದು ಚಿಂತೆಗೀಡುಮಾಡುವ ವಿಷ್ಯ.

ಯಶಸ್ವಿ ವ್ಯಾಕ್ಸಿನೇಷನ್ ಅಭಿಯಾನ ನಡೆಸಿದ್ದ ಇಸ್ರೇಲ್
ಆದರೂ ತಗ್ಗದ ಮಹಾಮಾರಿ ಕೊರೊನಾ ಅಬ್ಬರ

ಇನ್ನೊಂದು ಗಮನಿಸಬೇಕಾದ ಮುಖ್ಯ ಅಂಶ ಅಂದರೆ ಕೇವಲ 90 ಲಕ್ಷ ಜನಸಂಖ್ಯೆ ಹೊಂದಿರುವ ಇಸ್ರೇಲ್​​ನ ಅರ್ಧಕ್ಕಿಂತ ಹೆಚ್ಚು ಜನರು ಈಗಾಗಲೇ ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. 90 ಲಕ್ಷ ಜನರ ಪೈಕಿ 50 ಲಕ್ಷದ 20 ಸಾವಿರಕ್ಕಿಂತ ಜನರು ಫೈಜರ್-ಬಯೋಟೆಕ್ ಲಸಿಕೆಯ ಎರಡೂ ಡೋಸ್ ಪಡೆದಿದ್ದಾರೆ. ಆದರೂ, ರೂಪಾಂತರಿ ತಳಿಯ ಎಂಟ್ರಿ ದೇಶದಲ್ಲಿ ಮತ್ತಷ್ಟು ಭೀತಿ ಸೃಷ್ಟಿಸಿದೆ.

ವಿಶ್ವದ ದೊಡ್ಡಣ್ಣನಿಗೂ ಎದುರಾಗುತ್ತಾ ಆಘಾತ?
ಚೀನಾದ ಲೆಕ್ಕಾಚಾರ ಉಲ್ಟಾ ಮಾಡುತ್ತಾ ಡೆಲ್ಟಾ?

ಈ ಹಿಂದೆ ಇಸ್ರೇಲ್ ಮಾಸ್ಕ್​​ಗೆ ವಿನಾಯಿತಿ ನೀಡುತ್ತಿದ್ದಂತೆ ಕೆಲ ದೇಶಗಳು ಒಂದೊಂದಾಗಿ ಮಾಸ್ಕ್ ಮೂಲೆಗಡಿಲು ಶುರುಮಾಡಿದ್ವು. ಅದ್ರಲ್ಲೂ, ವಿಶ್ವದ ದೊಡ್ಡಣ್ಣನಂತೂ ಒಂದು ಹೆಜ್ಜೆ ಮುಂದೆಯೇ ಇಟ್ಟಿದ್ದ. ದೇಶದಲ್ಲಿ 55 ಲಕ್ಷದಷ್ಟೂ ಸಕ್ರಿಯ ಪ್ರಕರಣಗಳಿದ್ದರೂ ವಿಶ್ವದ ದೊಡ್ಡಣ್ಣ ಮಾತ್ರ ಮಾಸ್ಕ್ ಕಳಚಿಟ್ಟು ಜನರ ಓಡಾಡಿಸಲು ಶುರುಮಾಡಿದ್ದ. ಸದ್ಯ, ಇಸ್ರೇಲ್​​ನಲ್ಲಿ ಕೊರೊನಾ ಹೆಚ್ಚುತ್ತಿರುವ ಬೆನ್ನಲ್ಲೇ ಅಮೆರಿಕಾ ಸೇರಿದಂತೆ ಮಾಸ್ಕ್​ ಬೇಡವೆಂದಿರುವ ದೇಶಗಳಲ್ಲೂ ಭೀತಿ ಶುರುವಾಗಿದೆ.

ಇನ್ನು, ನೆರೆ ರಾಷ್ಟ್ರ ಚೀನಾ ಕೂಡ ತನ್ನ ಜನರಿಗೆ ಮಾಸ್ಕ್​​ನಿಂದ ವಿನಾಯಿತಿ ನೀಡಿತ್ತು. ಅದ್ರಲ್ಲೂ ವಿಶ್ವಕ್ಕೆ ಕೊರೊನಾ ಸೋಂಕು ಹರಡಿತ್ತು ಎನ್ನಲಾದ ಚೀನಾದ ವುಹಾನ್​ನಲ್ಲಿ ಕಳೆದ ತಿಂಗಳು ಸಂಗೀತೋತ್ಸವದ ಹೆಸರಲ್ಲಿ ಜಾತ್ರೆಯೇ ನಡೆದಿತ್ತು.. ಸಾಮಾಜಿಕ ಅಂತರ.. ಮಾಸ್ಕ್​​ ಇರಲಿ.. ಆ ಉತ್ಸವದಲ್ಲಿದ್ದ ಜನರ ಮೈಮೇಲೆ ಸರಿಯಾಗಿ ಬಟ್ಟೆಗಳೇ ಇರಲಿಲ್ಲ.. ಸದ್ಯ, ಇಸ್ರೇಲ್​ನಲ್ಲಿ ಶುರುವಾಗಿರುವ ರೂಪಾಂತರಿಯ ಅಬ್ಬರ, ಚೀನಾಗೂ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.

ಒಟ್ಟಾರೆ, ಕೊರೊನಾವನ್ನ ನಿರ್ಲಕ್ಷಿಸಿದರೆ ಯಾವ ರೀತಿ ಬೆಲೆ ತೆರಬೇಕಾಗುತ್ತದೆ ಅನ್ನೋದಕ್ಕೆ ಇಸ್ರೇಲ್​ ಒಂದು ಸಣ್ಣ ಉದಾಹರಣೆ.. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬೀಗ ಹಾಕಿದ್ರು ಅನ್ನೋವಂತಾಗಿದೆ ಈಗ ಇಸ್ರೇಲ್​ ಪರಿಸ್ಥಿತಿ.. ಕೊರೊನಾ ಏನೂ ಕೊಳ್ಳೆ ಹೊಡೆಯದೇ ಇರಬಹುದು.. ಆದ್ರೆ, ಅದನ್ನ ಕೇರ್​​ಲೆಸ್​ ಮಾಡಿದ್ರೆ ಕುತ್ತು ತರೋದಂತೂ ಕಟ್ಟಿಟ್ಟಬುತ್ತಿ..

2ನೇ ಅಲೆ ಕಂಟ್ರೋಲ್ ಮಾಡಿದ್ದೇವೆಂದು ಬೀಗಿದ್ದ ಇಸ್ರೇಲ್​​ನಲ್ಲಿ ಮತ್ತೆ ಮಾಸ್ಕ್ ವಾಪಾಸಾಗಿದೆ.. ಆದ್ರೆ, ಕೊರೊನಾ ಮಾಸ್ಕ್​​ಗೆ ಹೆದರಿ ಓಡಿ ಹೋಗುತ್ತಾ? ಖಂಡಿತ ಇಲ್ಲ.. ಮಾಸ್ಕ್​ ಜೊತೆಗೆ ಉಳಿದಿರೋ ನಿಯಮಗಳನ್ನೂ ಪಾಲಿಸಿದ್ರೆ, ಮಹಾಮಾರಿಗೆ ಮೂಗುದಾರ ಹಾಕಬಹುದು.. ಒಂದು ಕಡೆ ಜನ ಸುಮ್ನಿದ್ರೆ ಸರ್ಕಾರಗಳು ಸುಮ್ಮನಿರಲ್ಲ.. ಸರ್ಕಾರಗಳು ಸುಮ್ನಿದ್ರೆ ಜನರು ಬೇಜವಾಬ್ದಾರಿ ತೋರೋದು ಬಿಡಲ್ಲ.. ಇದೆಲ್ಲಾ ನೋಡ್ತಿದ್ರೆ ಆ ಕೊರೊನಾ ಹೇಳೋದು ಒಂದೇ ಮಾತು.. ಇದು ಅಂತ್ಯವಲ್ಲ.

The post ಮಾಸ್ಕ್ ಮೂಲೆಗಿಟ್ಟು ಮೈಮರೆತ ಇಸ್ರೇಲ್​ಗೆ ಡೆಲ್ಟಾ ಕೊಟ್ಟ ಪೆಟ್ಟು ಎಂಥಾದ್ದು ಗೊತ್ತಾ..? appeared first on News First Kannada.

Source: newsfirstlive.com

Source link