ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಸೋಲಿನ ಬಳಿಕ ಟೀಮ್​ ಇಂಡಿಯಾದ ಮಿಡಲ್ ಆರ್ಡರ್​​​ ವೈಫಲ್ಯ ಹೆಚ್ಚು ಚರ್ಚೆಯಲ್ಲಿದೆ. ಮಧ್ಯಮ ಕ್ರಮಾಂಕಕ್ಕೆ ಬಲ ತುಂಬೋದ್ಯಾರು ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಮಾತನಾಡಿರುವ ಮಾಜಿ ಕೋಚ್​ ಸಂಜಯ್​ ಬಂಗಾರ್​ ಈ ಕನ್ನಡಿಗ ಸಮಸ್ಯೆಗೆ ಪರಿಹಾರ ನೀಡಬಲ್ಲ ಎಂದಿದ್ದಾರೆ.

ಭಾರತ-ಇಂಗ್ಲೆಂಡ್​​ ನಡುವಿನ ಟೆಸ್ಟ್​ ಸರಣಿ ಆರಂಭಕ್ಕೆ ತಿಂಗಳುಗಳ ಸಮಯವಿದೆ. ಅದಾಗಲೇ ಟೀಮ್​ ಇಂಡಿಯಾದಲ್ಲಿ ಸ್ಥಾನಕ್ಕಾಗಿ ಹಗ್ಗ-ಜಗ್ಗಾಟ ನಡೀತಿದೆ. ತಂಡದಲ್ಲಿ ಉಂಟಾಗಿರುವ ಸ್ಲಾಟ್​​​ ಪೈಪೋಟಿಗೆ ಪರಿಹಾರ ಕಂಡುಕೊಳ್ಳೋ ವಿಚಾರದಲ್ಲಿ ಟೀಮ್​ ಮ್ಯಾನೇಜ್​ಮೆಂಟ್​ ಗೊಂದಲಕ್ಕೆ ಸಿಲುಕಿದೆ. ಅದಕ್ಕೆ ಕಾರಣ ವಿಶ್ವ ಟೆಸ್ಟ್​ ಚಾಂಪಿಯನ್​​​ಶಿಪ್​​​​​ ಫೈನಲ್​​​ನಲ್ಲಿ ಚೇತೇಶ್ವರ್​ ಪೂಜಾರ ಫ್ಲಾಪ್​​ ಶೋ. ಪೂಜಾರ ಜಾಗಕ್ಕೆ ಯಾರನ್ನ ತಂದು ಕೂರಿಸೋದು ಅನ್ನೋ ಪ್ರಶ್ನೆ ಮ್ಯಾನೇಜ್​ಮೆಂಟ್​​​​ಗೆ ಬಹುವಾಗಿ ಕಾಡ್ತಿದೆ.

ಚಾಂಪಿಯನ್​​​ಶಿಪ್​​​ ಫೈನಲ್​​​ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಪೂಜಾರರೇ ಆಧಾರ ಸ್ಥಂಭ ಎಂದುಕೊಳ್ಳಲಾಗಿತ್ತು. ಆದರೆ ಆಗಿದ್ದೇ ಬೇರೆ. ಕೇವಲ ಇಂದೊಂದು ಪಂದ್ಯವಲ್ಲ, ಈ ಹಿಂದಿನ ಸರಣಿಗಳಲ್ಲೂ ಪೂಜಾರರದ್ದು ಇದೇ ಫ್ಲಾಪ್​ ಶೋ.! ಹಾಗಾಗಿ ಇಂಗ್ಲೆಂಡ್​ ಸರಣಿಯಲ್ಲಿ ಪೂಜಾರಾಗೆ ರೆಸ್ಟ್​​ ನೀಡೋದಕ್ಕೆ ಟೀಮ್​ ಮ್ಯಾನೇಜ್​ಮೆಂಟ್​​ ನಿರ್ಧರಿಸಿದೆ. ಆ ಮೂಲಕ ಕೆ.ಎಲ್.ರಾಹುಲ್​​ರನ್ನ ಪೂಜಾರ ಬದಲಿಗೆ ಆಡಿಸೋಕೆ ಯೋಜನೆ ರೂಪಿಸಿಕೊಂಡಿದೆ.

ಶುಭ್​ಮನ್​ ಗಿಲ್​ ಇಂಜುರಿಗೆ ಒಳಗಾಗ್ತಿದ್ದಂತೆ, ರೋಹಿತ್​​ ಜೊತೆಗೆ ರಾಹುಲ್​​ ಅಥವಾ ಮಯಾಂಕ್ ಅಗರ್ವಾಲ್​ ಕಣಕ್ಕಿಳಿಯುವ ಸಾಧ್ಯತೆ ಇತ್ತು. ಆದರೆ ರಾಹುಲ್​​ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸೋದು ಫಿಕ್ಸ್​ ಆಗ್ತಿದ್ದಂತೆ, ಮಯಾಂಕ್​ ಓಪನಿಂಗ್​​ ಬರೋದು ಬಹುತೇಕ ಕನ್ಫರ್ಮ್​ ಆಗಿದೆ. ಆದರೆ ಇಲ್ಲಿ ಚರ್ಚೆ ಮತ್ತು ಗೊಂದಲ ಹುಟ್ಟಿರೋದು, ಟೀಮ್​ ಇಂಡಿಯಾ ಮಧ್ಯಮ ಕ್ರಮಾಂಕದ ಫೈನೆಸ್ಟ್​​ ಬ್ಯಾಟ್ಸ್​​​ಮನ್​​​ಗಳ ವೈಫಲ್ಯದ ಬಗ್ಗೆ.

ಮಿಡಲ್​ ಆರ್ಡರ್ ವೈಫಲ್ಯ- ಕ್ಯೂನಲ್ಲಿದ್ದಾರೆ ಕರುಣ್​​ ನಾಯರ್!
ಕಳೆದೆರಡು ವರ್ಷಗಳಿಂದ ಟೀಮ್​​​ ಇಂಡಿಯಾದ ಮಿಡಲ್​ ಆರ್ಡರ್​​ ಬಲ ಕುಸಿದಿದೆ. ಆಲ್​​ಟೈಮ್​ ಗ್ರೇಟ್​ ಕ್ರಿಕೆಟರ್ಸ್​​ ತಂಡದಲ್ಲಿದ್ದರೂ, ಅವರಿಂದ ತಂಡಕ್ಕಾದ ಕೊಡುಗೆ ಅಷ್ಟಕಷ್ಟೆ…! ಅದರಲ್ಲೂ ಪ್ರಮುಖವಾಗಿ ನ್ಯೂವಾಲ್​ ಎಂದೇ ಖ್ಯಾತಿ ಪಡೆದಿದ್ದ ಚೇತೇಶ್ವರ್​ ಪೂಜಾರ ಪಂದ್ಯದಿಂದ ಪಂದ್ಯಕ್ಕೆ ಪೂಜಾರ ಮಂಕಾಗ್ತಿದ್ದು, ರನ್​​​ ಗಳಿಸೋಕೆ ಪರದಾಡ್ತಿದ್ದಾರೆ. ಹಾಗೇ ವಿರಾಟ್​ ಕೊಹ್ಲಿ, ಅಜಿಂಕ್ಯ ರಹಾನೆ ಪರ್ಫಾಮೆನ್ಸ್​​​ ಕೂಡ ಹೇಳಿಕೊಳ್ಳುವಂತಿಲ್ಲ. ಹಾಗಾಗಿ ಕ್ಯೂನಲ್ಲಿರುವ ಕನ್ನಡಿಗ ಕರುಣ್​​ ನಾಯರ್​​​ಗೂ ಚಾನ್ಸ್​ ನೀಡಿದರೆ ಉತ್ತಮ ಅನ್ನೋದು ಮಾಜಿ ಬ್ಯಾಟಿಂಗ್​ ಕೋಚ್​ ಅಭಿಪ್ರಾಯವಾಗಿದೆ.

ತಂಡಕ್ಕಾಗಿ ಉತ್ತಮ ಎಫರ್ಟ್​ ಹಾಕಿದ್ರೂ ಕರುಣ್​​ ಸೈಡ್​ಲೈನ್​!
ಕನ್ನಡಿಗ ಕರುಣ್​ ನಾಯರ್​ ಪಕ್ಕಾ ಕ್ಲಾಸ್ ​ಬ್ಯಾಟ್ಸ್​​ಮನ್​​. ಅದಕ್ಕೆ ಸಾಕ್ಷಿ ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ ನೀಡಿರುವ ಪ್ರದರ್ಶನ. ಜೊತೆಗೆ ಮಿಡಲ್​ ಆರ್ಡರ್​​ಗೆ ಹೇಳಿ ಮಾಡಿಸಿದ ಆಟಗಾರ ಕೂಡ ಹೌದು. ಔಟ್​​ಸ್ಟಾಂಡಿಂಗ್​ ಪರ್ಫಾಮೆನ್ಸ್​ ನೀಡಿದ್ರೂ ಸಹ ಕರುಣ್​ರನ್ನ ಸೈಡ್​​ಲೈನ್​ ಮಾಡಲಾಗಿದೆ. ಸದ್ಯ ಟೀಮ್​ ಇಂಡಿಯಾ ಮಿಡಲ್​ ಆರ್ಡರ್​​ ವೈಫಲ್ಯ ಕಂಡಿರೋದ್ರಿಂದ ಇದನ್ನ ಕರುಣ್​, ಕಮ್​​​ಬ್ಯಾಕ್​​​ ಮಾಡೋದಕ್ಕೆ ಸುಗಮ ಅವಕಾಶ ಎಂದು​​​ ಸಂಜಯ್​ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.

‘ಸಮರ್ಥ ಆಟಗಾರ ಕರುಣ್​​’
‘ಮಧ್ಯಮ ಕ್ರಮಾಂಕದಲ್ಲಿ ಹನುಮ ವಿಹಾರಿ ಕೂಡ ಕೊಡುಗೆ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್​​ ಪಂದ್ಯವೇ ಅದಕ್ಕೆ ಸಾಕ್ಷಿ. ವಿಹಾರಿ ಮಾತ್ರವಲ್ಲ.. ಕರುಣ್​ ನಾಯರ್​​ ಕೂಡ ಮಿಡಲ್​ ಆರ್ಡರ್​​​ಗೆ ಸಮರ್ಥ ಬ್ಯಾಟ್ಸ್​​ಮನ್​​. ಅವರ ಟೆಸ್ಟ್​ ದಾಖಲೆಗಳು ಇದನ್ನೇ ಹೇಳುತ್ತಿವೆ. ಪ್ರಥಮ ದರ್ಜೆ ಕ್ರಿಕೆಟ್​​ ಮತ್ತು ಅಂತಾರಾಷ್ಟ್ರೀಯ ಟೆಸ್ಟ್​​ಗಳಲ್ಲಿ ಉತ್ತಮ ಸರಾಸರಿಯನ್ನೇ ಹೊಂದಿದ್ದಾರೆ. ಆದರೂ ಕರುಣ್​​ರನ್ನ ಬದಿಗೆ ಸರಿಸಲಾಗಿದೆ. ಇದು ಕರುಣ್​​ ತಂಡಕ್ಕೆ ಮರಳಲು ಉತ್ತಮ ಸಮಯ’
-ಸಂಜಯ್​ ಬಂಗಾರ್, ಮಾಜಿ ಬ್ಯಾಟಿಂಗ್​ ಕೋಚ್

ಸೆಹ್ವಾಗ್​ ನಂತರ ತ್ರಿಶತಕ ಬಾರಿಸಿದ 2ನೇ ಆಟಗಾರ​
ಹೌದು, ಕರುಣ್​ ನೀಡಿದ ಪ್ರದರ್ಶನವೂ ಹಾಗಿದೆ. ಮಾಜಿ ಬ್ಯಾಟ್ಸ್​ಮನ್​ ವಿರೇಂದ್ರ ಸೆಹ್ವಾಗ್​ ಹೊರತುಪಡಿಸಿದ್ರೆ, ತ್ರಿಶತಕದ ಸಾಧನೆ ಮಾಡಿದ ಏಕೈಕ ಭಾರತೀಯ ಬ್ಯಾಟ್ಸ್​ಮನ್​ ಕರುಣ್​. ಆಡಿದ 4ನೇ ಟೆಸ್ಟ್​​ನಲ್ಲಿ ತ್ರಿಶತಕ ಸಿಡಿಸಿ ಅಬ್ಬರಿಸಿದ ಕರುಣ್​ ನಂತರ ಸಿಕ್ಕ 4 ಅವಕಾಶಗಳಲ್ಲಿ ಅಲ್ಪ ಮೊತ್ತಕ್ಕೆ ಔಟ್​ ಆದ್ರು. ಈ ಒಂದೇ ಕಾರಣಕ್ಕೆ ಮರು ಆಯ್ಕೆಯ ಅವಕಾಶವೇ ಸಿಗಲಿಲ್ಲ.
ಟೀಮ್​ ಇಂಡಿಯಾ ಪರ ಆಡಿದ 7 ಇನ್ನಿಂಗ್ಸ್​​ಗಳಲ್ಲಿ 62.33ರ ಸರಾಸರಿಯಲ್ಲಿ ರನ್​ ಕಲೆ ಹಾಕಿರೋ ಕರುಣ್​, ದೇಶಿ ಕ್ರಿಕೆಟ್​ನಲ್ಲೂ ಅದ್ಭುತ ಪ್ರದರ್ಶನ ತೋರಿದ್ದಾರೆ.

ಕರುಣ್​ ಬ್ಯಾಟಿಂಗ್​ ಪ್ರದರ್ಶನ
ಪ್ರಥಮ ದರ್ಜೆ                                        ಟೀಮ್​ ಇಂಡಿಯಾ
82                               ಪಂದ್ಯ                       06
5,631                          ರನ್​​ ​                        374
48.12                          ಸರಾಸರಿ                  62.33
328                             ಬೆಸ್ಟ್​​​                        303

82 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಕರುಣ್​, 48.12ರ ಸರಾಸರಿಯಲ್ಲಿ 5631 ರನ್​ ಗಳಿಸಿದ್ದಾರೆ. 328 ಅವರ ಫಸ್ಟ್​ ಕ್ಲಾಸ್ ಕ್ರಿಕೆಟ್​ನ​​ ಬೆಸ್ಟ್​ ಸ್ಕೋರ್​ ಆಗಿದೆ. ಇನ್ನು ಟೀಮ್​ ಇಂಡಿಯಾ ಪರ ಆಡಿದ 6 ಪಂದ್ಯಗಳಲ್ಲಿ 62.33ರ ಸರಾಸರಿಯಲ್ಲಿ 374 ರನ್​ ಕಲೆ ಹಾಕಿದ್ದಾರೆ. 303 ರನ್​​​ ಬೆಸ್ಟ್​ ಸ್ಟೋರ್​​​​ ಆಗಿದೆ.

ಸಧ್ಯ ಟೀಮ್​ಇಂಡಿಯಾದ ಮಿಡಲ್​ ಆರ್ಡರ್​ ಬ್ಯಾಟಿಂಗ್​ ಕ್ರಮಾಂಕವೇ ಕುಸಿದು ಬಿದ್ದಿದೆ. ರಹಾನೆ, ಪೂಜಾರರಂತಹ ದಿಗ್ಗಜರು ಫುಲ್​ ಫೇಲ್​ ಆಗಿದ್ದಾರೆ. ಹೀಗಾಗಿ ಅವರಿಗೆ ರೆಸ್ಟ್​ ನೀಡಿ ಪ್ರತಿಭಾವಂತರಿಗೆ ಮಣೆ ಹಾಕಲಿ ಅನ್ನೋದು ಹಲವರ ಅಭಿಪ್ರಾಯವಾಗಿದೆ. ಒಂದು ವೇಳೆ ಹಾಗೆ ಮಾಡಿದ್ದೇ ಆದ್ರೆ, ಕನ್ನಡಿಗ ಕರುಣ್​ಗೂ ಅವಕಾಶ ಸಿಗುತ್ತಾ..? ಕಾದು ನೋಡಬೇಕಿದೆ.

The post ಮಿಡಲ್​ ಆರ್ಡರ್​​ನಲ್ಲಿ ದಿಗ್ಗಜ ಆಟಗಾರರ ವೈಫಲ್ಯ- ಮದ್ದಾಗ್ತಾರಾ ಕನ್ನಡಿಗ? appeared first on News First Kannada.

Source: newsfirstlive.com

Source link