ಅತಿ ಕಿರಿಯ ವಯಸ್ಸಿನಲ್ಲೇ ಕ್ರಿಕೆಟ್​ ವೃತ್ತಿ ಜೀವನ ಆರಂಭಿಸಿದ್ದ ಟೀಮ್​ ಇಂಡಿಯಾ ನಾಯಕಿ ಮಿಥಾಲಿ ರಾಜ್​ ಸದ್ಯ ವಿಶ್ವ ಮಹಿಳಾ ಕ್ರಿಕೆಟ್ ರಾಣಿ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಲವು ಮೊದಲುಗಳ ಒಡತಿಯಾಗಿರುವ ಮಿಥಾಲಿ, ಇದೀಗ ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ. ಆಂಗ್ಲರ ವಿರುದ್ಧದ ಸರಣಿಯಲ್ಲಿ ಮಿಥಾಲಿ ಮಾಡಿದ ಸಾಧನೆ ಏನು?

ಟೀಮ್ ಇಂಡಿಯಾ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್, ಸದ್ಯ ವಿಶ್ವ ಕ್ರಿಕೆಟ್​ನ ಮಹಾನ್ ಸಾಧಕಿ. ಕ್ರಿಕೆಟ್ ಅಂದ್ರೆ​ ಬರೀ ಹುಡುಗರಾಟ, ಇಲ್ಲಿ ಸಾಧನೆ ಮಡೋಕೆ ಪುರುಷರಿಂದಲೇ ಮಾತ್ರ ಸಾಧ್ಯ ಅನ್ನೋ ಕಲ್ಪನೆಗೆ ವಿರುದ್ಧಾರ್ಥ ಮಿಥಾಲಿ ರಾಜ್. ವಿಶ್ವ ಮಹಿಳಾ ಕ್ರಿಕೆಟ್​ನಲ್ಲಿ ಮಿಥಾಲಿ ಮೂಡಿಸಿರುವ ಛಾಪು ಹಾಗಿದೆ.

ಇದನ್ನೂ ಓದಿ: ಮಹಿಳಾ ಕ್ರಿಕೆಟ್​​ನಲ್ಲಿ ಅತೀ ಹೆಚ್ಚು ರನ್; ಹೊಸ ದಾಖಲೆ ಬರೆದ ಮಿಥಾಲಿ ರಾಜ್

ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತೀಯ ಪುರುಷರ ತಂಡವಷ್ಟೇ ಅಲ್ಲ, ಮಹಿಳಾ ತಂಡವೂ ಅಭಿಮಾನಿಗಳನ್ನ ಭಾರತೀಯ ಕ್ರಿಕೆಟ್‌ನತ್ತ ಹಿಂತಿರುಗಿ ನೋಡುವಂತೆ ಸಾಧನೆ ಮಾಡಿದೆ. ಇದರಲ್ಲಿ ಟೀಮ್ ಇಂಡಿಯಾ ನಾಯಕಿ ಮಿಥಾಲಿ ರಾಜ್ ಪಾತ್ರ ಮಹತ್ವದ್ದು. ವಿಶ್ವ ಮಹಿಳಾ ಕ್ರಿಕೆಟ್​ನಲ್ಲಿ ಭಾರತೀಯರು ಹೆಮ್ಮೆ ಪಡುವಂಥ ಸಾಧನೆಗಳನ್ನ ಮಾಡಿರುವ ಮಿಥಾಲಿ, ಇದೀಗ ಮತ್ತೊಂದು ಸಾಧನೆಯ ಮೆಟ್ಟಿಲೇರಿದ್ದಾರೆ. ಇದೇನು ಸಾಮಾನ್ಯವಾದ ಸಾಧನೆಯಲ್ಲ. ವಿಶ್ವ ಮಹಿಳಾ ಕ್ರಿಕೆಟ್ ನಲ್ಲಿ ದಾಖಲಾದ ಐತಿಹಾಸಿಕ ಮೈಲುಗಲ್ಲಿದು.

ಇದನ್ನೂ ಓದಿ: ಮಿಥಾಲಿ ರಾಜ್ ಪುರುಷ ಕ್ರಿಕೆಟಿಗರಿಗೂ ಸ್ಫೂರ್ತಿಯಾಗಿದ್ದಾರೆ- ಮೋದಿ

ಗರಿಷ್ಠ ರನ್ ಗಳಿಕೆಯ ಒಡತಿ ಮಿಥಾಲಿ ರಾಜ್!
ಈಗಾಗಲೇ ವಿಶ್ವ ಕ್ರಿಕೆಟ್​ನಲ್ಲಿ ಹಲವು ಸಾಧನೆಯ ಶಿಖರಗಳನ್ನ ಏರಿರುವ ಮಿಥಾಲಿ ರಾಜ್ ಇದೀಗ ಮಹಿಳಾ ಕ್ರಿಕೆಟ್​​ನಲ್ಲಿ ಹೊಸ ಮೈಲುಗಲ್ಲು ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ 3ನೇ ಪಂದ್ಯದಲ್ಲಿ ಅಜೇಯ 75 ರನ್ ಸಿಡಿಸಿದ ಮಿಥಾಲಿ ರಾಜ್, ಭಾರತ ತಂಡದ ಗೆಲುವಿಗೆ ಕಾರಣರಾದ್ರು. ಇದರೊಂದಿಗೆ ತಂಡವನ್ನ ಕ್ಲೀನ್​ಸ್ವೀಪ್ ಮುಖಭಂಗದಿಂದ ಪಾರು ಮಾಡಿದ್ರು.  ಅಷ್ಟೇ ಅಲ್ಲ.. ಇದೇ ಪಂದ್ಯದಲ್ಲಿ ಇಂಗ್ಲೆಂಡ್​​ನ ಮಾಜಿ ನಾಯಕಿ ಚಾರ್ಲೊಟ್ ಎಡ್ವರ್ಡ್ಸ್​ ದಾಖಲೆ ಬ್ರೇಕ್​ ಮಾಡಿ, ವಿಶ್ವ ಕ್ರಿಕೆಟ್​​ನ ರಾಣಿ ಪಟ್ಟಕ್ಕೇರಿದ್ರು.

ಹೌದು.. ಮೂರನೇ ಏಕದಿನ ಪಂದ್ಯದಲ್ಲಿ ಮಿಥಾಲಿ, 11 ರನ್​ಗಳ ಗಡಿ ದಾಟುತ್ತಿದ್ದಂತೆ, ಮೂರು ಮಾದರಿ ಕ್ರಿಕೆಟ್​ನಲ್ಲಿ 10,273 ರನ್ ದಾಖಲಿಸಿದ್ದ ಇಂಗ್ಲೆಂಡ್​​ನ ಮಾಜಿ ನಾಯಕಿ ಚಾರ್ಲೊಟ್ ಎಡ್ವರ್ಡ್ಸ್​ ದಾಖಲೆಯನ್ನ ಬ್ರೇಕ್ ಮಾಡಿದರು. ಆ ಮೂಲಕ ವಿಶ್ವ ಮಹಿಳಾ ಕ್ರಿಕೆಟ್​ನ ಮೂರು ಮಾದರಿಯಲ್ಲಿ ಗರಿಷ್ಠ ರನ್ ದಾಖಲಿಸಿದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು.

ವಿಶ್ವ ಕ್ರಿಕೆಟ್​ನಲ್ಲಿ ಮಿಥಾಲಿ ಸಾಧನೆ
ಪಂದ್ಯ           ರನ್
ಟೆಸ್ಟ್                11              669
ಏಕದಿನ            217            7,304
ಟಿ20                 89              2,364

ಇದುವರೆಗೆ 11 ಟೆಸ್ಟ್ ಪಂದ್ಯಗಳನ್ನಾಡಿ 669 ರನ್ ಕಲೆ ಹಾಕಿರೋ ಮಿಥಾಲಿ, 217 ಏಕದಿನ ಪಂದ್ಯಗಳಿಂದ 7304 ರನ್, 89 ಟಿ20 ಪಂದ್ಯಗಳಿಂದ 2364 ರನ್ ಗಳಿಸಿದ್ದಾರೆ.

ಆಟಗಾರ್ತಿಯಾಗಿ ವಿಶ್ವ ಮಹಿಳಾ ಕ್ರಿಕೆಟ್​ನಲ್ಲಿ ಗರಿಷ್ಠ ರನ್​ ಸಿಡಿಸಿದ ಮೊದಲ ಸಾಧಕಿ ಎನಿಸಿಕೊಂಡ ಮಿಥಾಲಿ, ನಾಯಕಿಯಾಗಿಯೂ ಹೊಸ ದಾಖಲೆ ಬರೆದರು. ಇಂಗ್ಲೆಂಡ್​ ವಿರುದ್ಧದ 3ನೇ ಪಂದ್ಯದ ಗೆಲುವು ಮಿಥಾಲಿ ರಾಜ್ ನಾಯಕತ್ವದಲ್ಲಿ ಟೀಮ್ ಇಂಡಿಯಾಕ್ಕೆ ಒಲಿದ 84ನೇ ಗೆಲುವು.

ದಾಖಲೆಯೊಂದಿಗೆ ಶುರುವಾಯ್ತು ಮಿಥಾಲಿ ಪದಾರ್ಪಣೆ.!
16ರ ವಯಸ್ಸಿನಲ್ಲಿ ಡೆಬ್ಯೂ ಮಾಡಿದ್ದ ಮಿಥಾಲಿ, ಚೊಚ್ಚಲ ಪಂದ್ಯದಲ್ಲೇ ರನ್​ ಹೊಳೆ ಹರಿಸಿ ಇತಿಹಾಸ ಸೃಷ್ಟಿಸಿದ್ದರು. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಜೇಯ 114 ರನ್​ ಸಿಡಿಸಿದ ಮಿಥಾಲಿ, ಅತಿ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ ಏಕೈಕ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ರು. ಇಂಟರೆಸ್ಟಿಂಗ್ ವಿಚಾರ ಅಂದ್ರೆ, ಇದುವರೆಗೆ ಪುರುಷ ಹಾಗೂ ಮಹಿಳಾ ಕ್ರಿಕೆಟರ್​ಗಳಿಂದ ಈ ಸಾಧನೆ ಬ್ರೇಕ್​ ಮಾಡೋಕೆ ಆಗಿಲ್ಲ.

22 ವರ್ಷಗಳ ವೃತ್ತಿ ಜೀವನದ ಏಕದಿನ ಕ್ರಿಕೆಟ್​ನಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿರುವ ಮಿಥಾಲಿ, 200 ಹಾಗೂ 200ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ ವಿಶ್ವದ ಮೊದಲ ಆಟಗಾರ್ತಿಯೂ ಹೌದು. ಏಕದಿನ ಕ್ರಿಕೆಟ್​ನಲ್ಲಿ 7 ಸಾವಿರ ರನ್​ ಗಡಿದಾಟಿರುವ ಮೊದಲ ಮಹಿಳಾ ಕ್ರಿಕೆಟರ್ ಆಗಿರುವ ಮಿಥಾಲಿ, 58 ಅರ್ಧಶತಕ ದಾಖಲಿಸಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಏಕೈಕ ಆಟಗಾರ್ತಿ ಎಂಬ ದಾಖಲೆಯನ್ನೂ ಬತ್ತಳಿಕೆಯಲ್ಲಿ ಹೊಂದಿದ್ದಾರೆ.

ಮಹಿಳಾ ಕ್ರಿಕೆಟ್​​ನಲ್ಲಿ ಹಲವು ಮೊದಲುಗಳಿಗೆ ನಾಂದಿ ಹಾಡಿರುವ ಮಿಥಾಲಿ ದಾಖಲೆಗಳ ಒಡತಿಯಾಗಿ ಮಾರ್ಪಟ್ಟಿದ್ದಾರೆ. ಇದೀಗ ಹೊಸ ದಾಖಲೆಯೊಂದಿಗೆ ಮಹಿಳಾ ಕ್ರಿಕೆಟ್​​ನ ರಾಣಿ ಪಟ್ಟವನ್ನ ಅಲಂಕರಿಸಿರುವ ಮಿಥಾಲಿ, ಮತ್ತಷ್ಟು ದಾಖಲೆಗಳ ಜೊತೆಗೆ ಭಾರತೀಯ ಕ್ರಿಕೆಟ್​ನ ಖ್ಯಾತಿಯನ್ನ ಮತ್ತಷ್ಟು ಹೆಚ್ಚಿಸಲಿ ಅನ್ನೋದೆ ಕ್ರಿಕೆಟ್ ಪ್ರೇಮಿಗಳ ಆಶಯ.

The post ಮಿಥಾಲಿ ರಾಜ್ ಮತ್ತೊಂದು ದಾಖಲೆ! ‘ವಿಶ್ವ ಮಹಿಳಾ ಕ್ರಿಕೆಟ್ ರಾಣಿ’ಯ ಸಾಧನೆಗಳ ರೋಚಕ ಜರ್ನಿ appeared first on News First Kannada.

Source: newsfirstlive.com

Source link