ಮೀನಿನ ವಾಸನೆಯೆಂದು ಮಹಿಳೆಯನ್ನು ಬಸ್​ನಿಂದ ಕೆಳಗಿಳಿಸಿದ ಕಂಡಕ್ಟರ್; ಘಟನೆ ಬಗ್ಗೆ ಸಿಎಂ ಸ್ಟಾಲಿನ್ ಕಿಡಿ | Tamil Nadu Woman Forced to Deboard Bus Over Fish Odour Stirs Row CM Stalin Tweets on Viral Video


ಮೀನಿನ ವಾಸನೆಯೆಂದು ಮಹಿಳೆಯನ್ನು ಬಸ್​ನಿಂದ ಕೆಳಗಿಳಿಸಿದ ಕಂಡಕ್ಟರ್; ಘಟನೆ ಬಗ್ಗೆ ಸಿಎಂ ಸ್ಟಾಲಿನ್ ಕಿಡಿ

ಮೀನು ವ್ಯಾಪಾರಿ ಸೆಲ್ವಮೇರಿ

ಕನ್ಯಾಕುಮಾರಿ: ಬಸ್​ ಎಂದ ಮೇಲೆ ಅದರಲ್ಲಿ ಎಲ್ಲ ವರ್ಗದ ಜನರೂ ಓಡಾಡುತ್ತಾರೆ. ಅದರಲ್ಲೂ ಸರ್ಕಾರಿ ಬಸ್​ನಲ್ಲಿ ಯಾರಿಗೂ ಹತ್ತಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಜನರ ಓಡಾಟಕ್ಕಾಗಿ ಇರುವ ಸರ್ಕಾರಿ ಬಸ್​ನಲ್ಲಿ ಮೀನಿನ ಬುಟ್ಟಿಯನ್ನು ಹೊತ್ತು ಬಂದಿದ್ದ ಮಹಿಳೆಯೊಬ್ಬರನ್ನು ಆ ಬಸ್​ನ ಕಂಡಕ್ಟರ್​ ಬಲವಂತದಿಂದ ಕೆಳಗಿಳಿಸಿರುವ ಘಟನೆ ನಡೆದಿದೆ. ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ‘ಮೀನಿನ ವಾಸನೆ’ ತಡೆಯಲು ಆಗುತ್ತಿಲ್ಲ ಎಂದು ಹೇಳಿ ಮೀನು ಮಾರುವ ಮಹಿಳೆಯನ್ನು ಕಂಡಕ್ಟರ್ ಮತ್ತು ಡ್ರೈವರ್ ಸರ್ಕಾರಿ ಬಸ್‌ನಿಂದ ಕೆಳಗಿಳಿಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ.

ಮೀನು ವ್ಯಾಪಾರಿ ಸೆಲ್ವಮೇರಿ ಅವರು ಕನ್ಯಾಕುಮಾರಿಯ ವಾಣಿಯಕುಡಿ ಗ್ರಾಮದವರು. ಆಕೆ ಕುಳಚಲ್ ಬಸ್ ನಿಲ್ದಾಣದಿಂದ ವಾಣಿಯಕುಡಿಗೆ ಹೋಗುವ ಸರ್ಕಾರಿ ಬಸ್‌ಗೆ ಹತ್ತುತ್ತಿದ್ದಾಗ ಕಂಡಕ್ಟರ್ ಆಕೆಯನ್ನು ಬಲವಂತವಾಗಿ ಬಸ್‌ನಿಂದ ಕೆಳಗಿಳಿಸಿದ್ದಾರೆ. ಇದರಿಂದ ಕೋಪಗೊಂಡ ಆಕೆ ಬಸ್ ನಿಲ್ದಾಣದಲ್ಲಿ ಜೋರಾಗಿ ಕಿರುಚಾಡಿ, ಅಳಲು ಪ್ರಾರಂಭಿಸಿದ್ದಾರೆ. ಇದನ್ನು ಅಲ್ಲಿದ್ದ ಜನರು ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋ ಸರ್ಕಾರಿ ಸಾರಿಗೆ ಅಧಿಕಾರಿಗಳ ಗಮನಕ್ಕೂ ಬಂದಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ಮೀನು ಮಾರುವ ಮಹಿಳೆಯನ್ನು ಬಸ್​ನಿಂದ ಕೆಳಗೆ ಇಳಿಸಿದ ಚಾಲಕ ಮತ್ತು ಕಂಡಕ್ಟರ್ ಇಬ್ಬರನ್ನೂ ಕೆಲಸದಿಂದ ವಜಾ ಮಾಡಲಾಗಿದೆ. ಇದೇ ವೇಳೆ ತಮಿಳುನಾಡು ಸಾರಿಗೆ ಇಲಾಖೆಯ ಕನ್ಯಾಕುಮಾರಿ ಜಿಲ್ಲಾ ಉಪನಿರ್ದೇಶಕಿ ಜೆರೋಲಿನ್ ಅವರು ಆ ಮಹಿಳೆಯನ್ನು ಭೇಟಿಯಾಗಿ ತಮ್ಮ ಸಿಬ್ಬಂದಿಯಿಂದ ಆದ ತಪ್ಪಿಗೆ ಕ್ಷಮೆ ಕೋರಿದ್ದಾರೆ.

ಇಷ್ಟೇ ಅಲ್ಲದೆ, ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ತಮ್ಮ ಟ್ವಿಟರ್​ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಕನ್ಯಾಕುಮಾರಿ ಜಿಲ್ಲೆಯಲ್ಲಿ ಮೀನು ಮಾರಾಟ ಮಾಡುತ್ತಿದ್ದ ವೃದ್ಧೆಯನ್ನು ಬಸ್ ಕಂಡಕ್ಟರ್ ಕೆಳಗಿಳಿಸಿದ್ದಾರೆ ಎಂದು ತಿಳಿದು ಆಘಾತವಾಯಿತು. ಮಹಿಳೆಯರ ಅಭ್ಯುದಯಕ್ಕಾಗಿ ರಾಜ್ಯಾದ್ಯಂತ ಕಂಡಕ್ಟರ್‌ಗಳು ಉಚಿತ ಪ್ರಯಾಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿರುವ ಈ ಸಂದರ್ಭದಲ್ಲಿ ಕಂಡಕ್ಟರ್‌ನ ಈ ಕೃತ್ಯ ಖಂಡನೀಯ. ಎಲ್ಲರೂ ಸಮಾನರು ಎಂಬ ವಿಶಾಲ ಮನೋಭಾವದಿಂದ ನಾವೆಲ್ಲರೂ ಯೋಚಿಸಿ ಕಾರ್ಯನಿರ್ವಹಿಸಬೇಕು ಎಂದಿದ್ದಾರೆ.

TV9 Kannada


Leave a Reply

Your email address will not be published. Required fields are marked *