ಮೀನುಗಾರನ ಹತ್ಯೆ ಮಾಡಿದ ಪಾಕ್​ ನೌಕಾಪಡೆ ವಿರುದ್ಧ ಭಾರತ ಸರ್ಕಾರ ಕೆಂಡಾಮಂಡಲ; ಹಿರಿಯ ರಾಜತಾಂತ್ರಿಕನಿಗೆ ಖಡಕ್​ ಎಚ್ಚರಿಕೆ​ | India summoned a senior diplomat of the Pakistan High Commission over the killing of Indian fisherman


ಮೀನುಗಾರನ ಹತ್ಯೆ ಮಾಡಿದ ಪಾಕ್​ ನೌಕಾಪಡೆ ವಿರುದ್ಧ ಭಾರತ ಸರ್ಕಾರ ಕೆಂಡಾಮಂಡಲ; ಹಿರಿಯ ರಾಜತಾಂತ್ರಿಕನಿಗೆ ಖಡಕ್​ ಎಚ್ಚರಿಕೆ​

ಸಾಂಕೇತಿಕ ಚಿತ್ರ

ಗುಜರಾತ್​​ನ ಕರಾವಳಿ ತೀರದಲ್ಲಿ ಭಾರತೀಯ ಮೀನುಗಾರನೊಬ್ಬನನ್ನು ನಿನ್ನೆ ಪಾಕಿಸ್ತಾನ ನೌಕಾಪಡೆ ಹತ್ಯೆ ಮಾಡಿದೆ. ಗುಜರಾತ್​​ನ ದ್ವಾರಕಾದ ಓಖಾ ಪಟ್ಟಣದ ಬಳಿ ಘಟನೆ ನಡೆದಿತ್ತು. ಜಲ್​ಪರಿ ಎಂಬ ಹೆಸರಿನ ಬೋಟ್​ ಮೇಲೆ ಪಾಕಿಸ್ತಾನ ನೇವಿ ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತೀಯ ಮೀನುಗಾರನೊಬ್ಬ ಹತನಾಗಿದ್ದ. ಈ ಹತ್ಯೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಇಂದು ಭಾರತದಲ್ಲಿರುವ ಪಾಕಿಸ್ತಾನದ ಹೈ ಕಮೀಷನ್​​ನ ಹಿರಿಯ ರಾಯಭಾರಿಯನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕರೆಸಿತ್ತು. ಅಲ್ಲದೆ ಘಟನೆಯ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮುಗ್ಧ ಮೀನುಗಾರರ ಮೇಲೆ ದಾಳಿ ನಡೆಸಿದ್ಯಾಕೆಂದು ಕಟುವಾಗಿ ಪ್ರಶ್ನಿಸಿದೆ ಎಂದು ಸರ್ಕಾರದ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಪಾಕಿಸ್ತಾನ ಭಾರತದ ಮೀನುಗಾರಿಕಾ ಬೋಟ್​ ಮೇಲೆ ಗುಂಡಿನ ದಾಳಿ ನಡೆಸಿದ್ದು ನಿಜಕ್ಕೂ ಶೋಚನೀಯ. ಇದರಿಂದಾಗಿ ಒಬ್ಬ ಮೀನುಗಾರನ ಪ್ರಾಣವೇ ಹೋಗಿದೆ. ಹೀಗೆ ಅನಗತ್ಯವಾಗಿ ಗುಂಡಿನ ದಾಳಿ ಮಾಡುವ ಮೂಲಕ ಪಾಕಿಸ್ತಾನ ಎಲ್ಲ ಅಂತಾರಾಷ್ಟ್ರೀಯ ನಿಯಮಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳನ್ನೂ ಮೀರಿದೆ ಎಂದು ಕೇಂದ್ರ ಸರ್ಕಾರ ಕಿಡಿ ಕಾರಿದೆ ಎನ್ನಲಾಗಿದೆ.  ಹಾಗೇ, ಇಂಥ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸದಂತೆ ಪಾಕಿಸ್ತಾನ ಸರ್ಕಾರ ತನ್ನ ಸೇನಾ ಪಡೆಗಳಿಗೆ ಸೂಚನೆ ನೀಡಬೇಕು ಎಂದು ಕೂಡ ಆಗ್ರಹಿಸಿದೆ.

ದ್ವಾರಕಾದ ಬಳಿ ಮೀನುಗಾರಿಕೆಗೆ ಜಲ್​ಪರಿ ಎಂಬ ದೋಣಿಯಲ್ಲಿ ತೆರಳಿದ್ದ ಭಾರತೀಯ ಮೀನುಗಾರರ ಮೇಲೆ ಪಾಕಿಸ್ತಾನ ನೌಕಾಪಡೆ ದಾಳಿ ನಡೆಸಿತ್ತು. ಈ ದೋಣಿಯಲ್ಲಿ ಏಳು ಮೀನುಗಾರರು ಇದ್ದು, ಅದರಲ್ಲೊಬ್ಬ ಮೃತಪಟ್ಟಿದ್ದ. ಇನ್ನುಳಿದ ಆರೂ ಮಂದಿಯನ್ನು ಪಾಕಿಸ್ತಾನಿ ಪಡೆಗಳು ಬಂಧಿಸಿದ್ದು ಎಂದೂ ಕೂಡ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.  ಇನ್ನು ಘಟನೆಗೆ ಸಂಬಂಧಪಟ್ಟಂತೆ ಪಾಕಿಸ್ತಾನದ ನೌಕಾಪಡೆಯ 10 ಸಿಬ್ಬಂದಿ ವಿರುದ್ಧ ಪೋರ್​ಬಂದರ್​ ನೇವಿ ಪೊಲೀಸರು ಎಫ್​​ಐಆರ್​ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: Virat Kohli: ನಿರಾಸೆಯೊಂದಿಗೆ ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿ

TV9 Kannada


Leave a Reply

Your email address will not be published. Required fields are marked *