ಬೆಂಗಳೂರು: ನಗರದಲ್ಲಿ ದಿನೇದಿನೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನಗರದಲ್ಲಿ ಮತ್ತಷ್ಟು ಕಠಿಣವಾದ ನಿಯಮಗಳನ್ನ ಜಾರಿ ಮಾಡುವುದಾಗಿ ಬಿಬಿಎಂಪಿ ಆಯುಕ್ತ ಗೌರವ್​ ಗುಪ್ತ ತಿಳಿಸಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಗೌರವ್​ ಗುಪ್ತಾ ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಜನರಿಗೆ ಬೆಡ್​ಗಳ ಅವಶ್ಯಕತೆ ಹೆಚ್ಚಾಗಿದೆ. ಜನ ಕೊರೊನಾ ಪಾಸಿಟಿವ್​ ಆದ ಕೂಡಲೇ ನಮಗೆ ಬೆಡ್​ಗಳು ಬೇಕು ಅಂತ ಆಸ್ಪತ್ರೆಗಳತ್ತ ಅಲೆದಾಡುತ್ತಿದ್ದಾರೆ. ಯಾರೂ ಆ ರೀತಿ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಶೇಕಡಾ 80ರಷ್ಟು ಪಾಸಿಟಿವ್​ ಬಂದಿರುವ ಮಂದಿ‌ ಮನೆಯಲ್ಲೇ ಇದ್ದು ಗುಣಮುಖರಾಗಬಹುದು, ಇದನ್ನ ನಾನು ಹೇಳುತ್ತಿಲ್ಲ, ಇದು ತಜ್ಞರಿಂದ ಬಂದ ಮಾಹಿತಿ. ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಹೋದ್ರೆ ವೈರಸ್​ ಬರುವ ಸಾಧ್ಯತೆ ಇನ್ನೂ ಜಾಸ್ತಿ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಬೆಡ್​ಗಳಿಗೆ ಬೇಡಿಕೆ ತುಂಬಾ ಹೆಚ್ಚಾಗಿದೆ, ಸಾಮಾನ್ಯ ಸಮಯಕ್ಕಿಂತ ಮೂರು ಪಟ್ಟು ಹೆಚ್ಚು ಬೇಡಿಕೆ ಇದೆ. ಹೀಗಾಗಿ ನಾವು ಬೆಡ್​ಗಳ ಸಂಖ್ಯೆಯನ್ನು ಹೆಚ್ಚಳ ಮಾಡ್ತಿದ್ದೇವೆ, ನಿಜವಾಗಿ ಯಾರಿಗೆ ಬೆಡ್​ ಅಗತ್ಯತೆ ಇದೆ ಅವರಿಗೆ ನೀಡುತ್ತೇವೆ.

ನಗರದಲ್ಲಿ ಸದ್ತ ಐಸಿಯು ಬೆಡ್​ಗಳ ಕೊರತೆ ಇದೆ, ಆದ ಕಾರಣ ಐಸಿಯು ವೆಂಟಿಲೇಟರ್​ ಹೆಚ್ಚಳ ಮಾಡಲು ಸರ್ಕಾರ ಹೇಳಿದೆ. ಹಾಗಾಗಿ  ಒಂದರಿಂದ ಎರಡು ಸಾವಿರ ಐಸಿಯು ಬೆಡ್​ಗಳ ಸ್ಥಾಪನೆಗೆ ನಾವು ಈಗಾಗಲೇ ಸ್ಥಳ ಗುರುತಿಸಿದ್ದೇವೆ, ನಗರದ ಮೂರ್ಲಾಲ್ಕು ಕಡೆಗಳಲ್ಲಿ ಐಸಿಯು ವೆಂಟಿಲೇಟರ್​ ಆಸ್ಪತ್ರೆಗಳು ತಲೆ ಎತ್ತಲಿವೆ. ಐಸಿಯು ಬೆಡ್​ಎಲ್ಲೆಲ್ಲಿ ಪಡೆಯಲು ಸಾಧ್ಯವಿದೆ ಅಲ್ಲೆಲ್ಲಾ ಒದಗಿಸ್ತೇವೆ.  ಐಸಿಯು ಬೆಡ್​ಗಳ ಒದಗಿಸೊ ನಿಟ್ಟಿನಲ್ಲಿ ಇಂದು ಸಂಸದ ತೇಜಸ್ವಿ ಸೂರ್ಯ ಸ್ಥಳ‌ ವೀಕ್ಷಣೆ ಮಾಡಲು ಹೋಗ್ತಿದ್ದಾರೆ. ಐಸಿಯು ಬೆಡ್​ಗಳ ಆಸ್ಪತ್ರೆಯನ್ನ ಕ್ಷಿಪ್ರಗತಿಯಲ್ಲಿ ಅನುಷ್ಠಾನಗೊಳಿಸುತ್ತೇವೆ. ಶೇಕಾಡ 75 ರಷ್ಟು ಬೆಡ್​ಗಳನ್ನ ಒದಗಿಸಿ ಎಂದು ಸರ್ಕಾರದ ಆದೇಶಿಸಿದೆ.

ಮೊದಲು ಮೆಡಿಕಲ್​ ಕಾಲೇಜುಗಳಿಂದ ಶೇಕಡಾ 75ರಷ್ಟು ಬೆಡ್​ಗಳನ್ನ ಪಡೆದುಕೊಳುತ್ತೇವೆ. ಖಾಸಗೀ ಆಸ್ಪತ್ರೆಗಳಲ್ಲಿ ಈಗಾಗಲೇ ಕೊರೊನೇತರ ರೋಗಿಗಳು ದಾಖಲಾಗಿದ್ದಾರೆ, ಅವರು ಡಿಸ್ಚಾರ್ಜ್​ ಆದ ನಂತರವಷ್ಟೇ ಶೇಕಡಾ 75 ರಷ್ಟು ಬೆಡ್​ಗಳು ಸಿಗಲು ಸಾಧ್ಯ. ಈ‌ ಸಮಸ್ಯೆಯನ್ನ ಗಮನಿಸಿಯೇ ನಾವು ಕೊರೊನಾ ಕೇರ್​ಸೆಂಟರ್​ ಆರಂಭಿಸಿದ್ದೇವೆ, ಅಲ್ಲಿ 1500 ಬೆಡ್​ಗಳ ವ್ಯವಸ್ಥೆ ಮಾಡಿದ್ದೇವೆ. ನಗರದ 12 ಕಡೆ ಕೊರೊನಾ ಕೇರ್​ ಸೆಂಟರ್​ಗಳು ಕಾರ್ಯನಿರ್ವಹಿಸುತ್ತಿವೆ. ಹಜ್​ ಭವನ & ವೆಟರ್ನರಿ ಕಾಲೇಜು, ಹೆಬ್ಬಾಳದ‌ ಎರಡು ಕಡೆಗಳಲ್ಲಿ ಆಕ್ಸಿಜನ್​ ವ್ಯವಸ್ಥೆ ಮಾಡಿದ್ದೇವೆ. ಅದೇ ರೀತಿ ಬೇರೆ ಕೊರೊನಾ ಕೇರ್​ ಸೆಂಟರ್​ಗಳಲ್ಲೂ ಆಕ್ಸಿಜನ್​ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ.

ರೆಮ್​ಡೆಸಿವಿರ್ ಕೊರತೆ 1ವಾರದಲ್ಲಿ ಸರಿಯಾಗುತ್ತೆ

ರೆಮ್​ಡಿಸಿವಿರ್​ ಕೊರತೆ ವಿಚಾರವಾಗಿ ಮಾತನಾಡಿ ರೆಮ್​ ಡಿಸಿವಿರ್​ ಎಲ್ಲರಿಗೂ ಬೇಕಾಗಿಲ್ಲ. ಡೆಲ್ಲಿಯ ಏಮ್ಸ್​ ಹೇಳಿದೆ ರೆಮ್​ಡೆಸಿವಿರ್​ ಕೆಲವು ಸಂದರ್ಭದಲ್ಲಿ ಕೆಲವರಿಗೆ ಮಾತ್ರ ಬೇಕಾಗಬಹುದು. ಅದಕ್ಕಾಗಿ ಎಲ್ಲರೂ ಓಡಾಡುವ ಅವಶ್ಯಕತೆ ಇಲ್ಲ, ಅದನ್ನ ಆಸ್ಪತ್ರೆಗಳಲ್ಲಿ ತೆಗೆದುಕೊಳ್ಳಬೇಕು. ಅದಕ್ಕಾಗಿ ಪ್ರತ್ಯೇಕವಾದಂತಹ ಕಂಟ್ರೋಲ್​ ರೂಮ್​ ಮಾಡಲಾಗಿದೆ, ರೆಮ್​ ಡೆಸಿವಿರ್​ ಉತ್ಪಾದನೆ 5 ಪಟ್ಟು ಹೆಚ್ಚಳ‌ ಮಾಡಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. ಒಂದು ವಾರದ ನಂತರ ರೆಮ್​ ಡೆಸಿವಿರ್ ಸಮಸ್ಯೆಗೆ ಪರಿಹಾರ ಸಿಗಲಿದೆ,  ಕೇಂದ್ರದಿಂದ ರೆಮ್​ ಡಿಸಿವಿರ್​ ಪೂರೈಕೆಯಾಗುವ ಮಾಹಿತಿ ಬಂದಿದೆ ಎಂದಿದ್ದಾರೆ.

ಹೆಚ್ಚಾಗ್ತಿರೊ ಕೊರೊನಾ ಸಂಖ್ಯೆಯನ್ನ ಗಮನಿಸಿ ಜನತೆ ಸಾಕಷ್ಟು ಜಾಗೃತೆ ವಹಿಸಬೇಕು. ಮಾಸ್ಕ್​, ಶೀಲ್ಡ್​, ಸ್ಯಾನಿಟೈಸರ್​, ಸಾಮಾಜಿಕ ಅಂತರ ಅಗತ್ಯವಾಗಿ ಕಾಪಾಡಿಕೊಳ್ಳಬೇಕು. ಊಟ, ತಿಂಡಿ, ಕಾಫಿ ವೇಳೆ ಯಾರ ಜೊತೆಯೂ ಸೇರಬಾರದು, ಹೀಗೆ ಮಾಡಿದ್ರೆ ಸೋಂಕಿನ ಚೈನ್​ ಲಿಂಕ್​ ಬ್ರೇಕ್​ ಮಾಡಲು ಸಾಧ್ಯ. ಈಗಾಗಲೇ ನೈಟ್​ ಕರ್ಫ್ಯೂ, ವೀಕೆಂಡ್​ ಕರ್ಫ್ಯೂ ಸರ್ಕಾರದ ಮಟ್ಟದಲ್ಲಿ ಜಾರಿಯಲ್ಲಿದೆ. ಈ ಬಗ್ಗೆ ಸಮಗ್ರ ಚರ್ಚೆ ಮಾಡಲು ಸರ್ಕಾರ ಸಿದ್ಧವಾಗಿದೆ, ಪ್ರತ್ಯೇಕ ಸಭೆ ಕರದಿದ್ದಾರೆ ಅಲ್ಲಿ ಸಲಹೆ ಕೊಡ್ತೇನೆ. ಮಾರ್ಕೆಟ್​ಗಳನ್ನ ಸಂಪೂರ್ಣವಾಗಿ ಬ್ಯಾನ್​ ಮಾಡ್ತೇವೆ. ಈ ಬಗ್ಗೆ ನಮ್ಮ ವಲಯವಾರು ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇನೆ, ಅವರು ಮಾರುಕಟ್ಟೆಗಳನ್ನ ಸ್ಥಳಾಂತರ ಮಾಡ್ತಾರೆ ಎಂದಿದ್ದಾರೆ.

The post ಮುಂದಿನ ದಿನಗಳಲ್ಲಿ ನಗರದಲ್ಲಿ ಮತ್ತಷ್ಟು ಕಠಿಣ ನಿಯಮ ಜಾರಿ ಮಾಡ್ತೇವೆ- ಗೌರವ್​ ಗುಪ್ತಾ appeared first on News First Kannada.

Source: News First Kannada
Read More