ಮುಂದಿನ ಸಿಎಂ ಬಗೆಗಿನ ಚರ್ಚೆ ಕಾಂಗ್ರೆಸ್ಸಿಗೆ ಅಧಿಕಾರದ ದಾಹ ಎಷ್ಟಿದೆ ಎಂಬುದನ್ನು ತೋರಿಸುತ್ತಿದೆ: ಶೆಟ್ಟರ್

ಧಾರವಾಡ: ನಮ್ಮ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ಟೀಕೆ ಮಾಡತ್ತಾ ಇರ್ತಾರೆ. ಆದರೆ ಅವರೇ ಈಗ ಮುಂದಿನ ಸಿಎಂ ಯಾರು ಅಂತಾ ಕಿತ್ತಾಡುತ್ತಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್ ಶಟ್ಟರ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಪಕ್ಷಕ್ಕೆ ಈಗ ಬಹುಮತ ಇಲ್ಲ, ಡಿಕೆಶಿ, ಸಿದ್ದರಾಮಯ್ಯ ನಾವೆಲ್ಲ ಒಂದೇ ಎಂದು ಹೇಳಿದ್ದರು. ಆದರೆ ಇದೀಗ ಮುಂದಿನ ಸಿಎಂಗಾಗಿ ಗುದ್ದಾಟ ನಡೆಯುತ್ತಿದೆ. ಇದರಿಂದ ಕಾಂಗ್ರೆಸ್ಸಿನ ಅಧಿಕಾರ ದಾಹ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ. ಬಹುಶಃ ಈ ಕಾಂಗ್ರೆಸ್‍ನ ಹಣೆಬರಹವೇ ಇಷ್ಟು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸಿಎಂ ಖುರ್ಚಿಗಾಗಿ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಈಗಲೇ ಕುಸ್ತಿ ಶುರುವಾಗಿದೆ: ಕಾರಜೋಳ

ಕೊರೋನಾ ಕಷ್ಟ ಕಾಲದಲ್ಲಿ ಕಾಂಗ್ರೆಸ್ ನಾಯಕರು ಜನಪರ ಕಾಳಜಿ ಮಾಡಬೇಕಿತ್ತು, ಸರ್ಕಾರಕ್ಕೆ ರಚನಾತ್ಮಕ ಸಲಹೆ ಕೊಡಬೇಕಿತ್ತು, ಆದರೆ ಅದನ್ನು ಬಿಟ್ಟು ರಾಜಕೀಯವನ್ನಷ್ಟೇ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಬಳಿಕ ರಮೇಶ್ ಜಾರಕಿಹೊಳಿ ಬಿಜೆಪಿಗೆ ರಾಜೀನಾಮೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ, ಈ ವಿಚಾರ ನನಗೆ ಗೊತ್ತಿಲ್ಲ ಎಂದರು. ಇದೇ ವೇಳೆ ಶಾಸಕ ಅರವಿಂದ್ ಬೆಲ್ಲದ್ ಬಗ್ಗೆ ಮಾತನಾಡದೇ ಹೊರಟ ಶೆಟ್ಟರ್, ಯೋಗ ದಿನಾಚರಣೆಗೆ ಬ್ಯಾನರ್‍ನಲ್ಲಿ ಭಾವಚಿತ್ರ ಕೈ ಬಿಟ್ಟ ವಿಚಾರ ಕೇಳಿದ್ದಕ್ಕೆ, ಸಣ್ಣ ಸಣ್ಣ ವಿಚಾರ ಇದೆಲ್ಲಾ ಕೇಳುತ್ತಿರಲ್ಲ ಎಂದರು.

The post ಮುಂದಿನ ಸಿಎಂ ಬಗೆಗಿನ ಚರ್ಚೆ ಕಾಂಗ್ರೆಸ್ಸಿಗೆ ಅಧಿಕಾರದ ದಾಹ ಎಷ್ಟಿದೆ ಎಂಬುದನ್ನು ತೋರಿಸುತ್ತಿದೆ: ಶೆಟ್ಟರ್ appeared first on Public TV.

Source: publictv.in

Source link