ಬೆಂಗಳೂರು: ಕಾಂಗ್ರೆಸ್​ ಪಕ್ಷದಲ್ಲಿ ಜೋರಾಗಿರುವ ಮುಂದಿನ ಮುಖ್ಯಮಂತ್ರಿ ವಿಚಾರದ ಕುರಿತು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿರುವ ಸಿ.ಎಂ.ಇಬ್ರಾಹಿಂ ಅವರು, ಸಿದ್ದರಾಮಯ್ಯ ಅವರ ಪರ ಪರೋಕ್ಷವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಇಬ್ರಾಹಿಂ ಅವರು, ಮನೆಗೆ ಬರುವ ಸೊಸೆ ಹೊಸದಾಗಿಯೇ ಬರೋದು, ಸೊಸೆಗೆ ನೀನು ವಲಸೆ ಬಂದವಳು ಅಂತ ಹೇಳೋಕಾಗುತ್ತಾ? ಸೊಸೆ ಸ್ವಲ್ಪ ದಿನ ಆದರೆ ಅವಳ ಕೈಗೆ ಕೀಲಿ ಕೈ ಹೋಗುತ್ತೆ. ಈಗ ಸಿದ್ದರಾಮಯ್ಯ ಕೈಗೆ ಕೀಲಿ ಕೈ ಸಿಕ್ಕಿದೆ ಎಂದು ಮಾರ್ಮಿಕವಾಗಿ ನುಡಿದರು.

ಮದುವೆ ಮಾಡಿಕೊಂಡು ಬಂದಿದ್ದು ನಿಜ ತಾನೆ? ವಲಸಿಗ, ಹೊಸಬ ಅನ್ನೋ‌ ಜಟಾಪಟಿ ಮುಂದೆ ನಡೆಯಲ್ಲ. ಸಿದ್ದರಾಮಯ್ಯರನ್ನ ಮುಖ್ಯಮಂತ್ರಿ ಮಾಡಿದ್ದು ಯಾರು? ಬಳ್ಳಾರಿ ಪಾದಯಾತ್ರೆಯಲ್ಲಿ ಇವರನ್ನು ಮುಂದೆ ತಂದವರು ಯಾರು? ನಾವೇ ಅವರನ್ನು ಹೇಳಿದ್ದು ಅಲ್ಲವಾ? ಇಂತವನೊಬ್ಬ ಇದ್ದಾನೆ ಅಂತ ಹೇಳಿದ್ದೇ ನಾವು. ಸಿದ್ದರಾಮಯ್ಯ ಅವರಿಗೆ ಮೇಕಪ್ ಮಾಡಿದವರೇ ನಾವು ಎಂದರು.

ಮುಂದಿನ ಮುಖ್ಯಮಂತ್ರಿ ಅಂತ ಹೇಳಿದ್ಯಾರು? ಅವರು ಹೀರೋ ಇದ್ದರೂ ಹಿನ್ನೆಲೆ ಗಾಯಕರು ಯಾರು? ಸ್ವಲ್ಪ ಕ್ಯಾಸೆಟ್ ತೆಗೆದು ನೋಡಿ, ಹಿನ್ನೆಲೆ ಗಾಯಕ ಯಾವತ್ತು ಕಾಣಲ್ಲ ಎಂದರು. ಮೊದಲು ಚುನಾವಣೆ ಗೆಲ್ಲಲು ಕಾಂಗ್ರೆಸ್ ಹೈಕಮಾಂಡ್ ಹೇಳಲಿ. ಆ ಬಳಿಕ ಸಿಎಂ ಬಗ್ಗೆ ಚರ್ಚೆ, ಏನಾಗುತ್ತೆ ಕಾದು ನೋಡೋಣ ಎಂದರು.

ಬಿಎಸ್​​ವೈ ಪರ ಸಿ.ಎಂ.‌ ಇಬ್ರಾಹಿಂ ಬ್ಯಾಟಿಂಗ್
ಒಂದು ರೂಪಾಯಿಗೆ ಅಕ್ಕಿ, ಮಧ್ಯಾಹ್ನದ ಊಟ ಯೋಜನೆಯನ್ನು ತಮಿಳುನಾಡಿನಲ್ಲಿ ಎರಡು ದಿನ ಕುಳಿತು ಅಧ್ಯಯನ ಮಾಡಿ ನಾನೇ ವರದಿ ತರಯಾರಿಸಿ ತಂದು ಕೊಟ್ಟಿದೆ. ಈ ಯೋಜನೆಗಳು ಯಶಸ್ವಿಯಾದವು. ಅದೇ ರೀತಿ ಸಿದ್ದರಾಮಯ್ಯಗೆ ಒಳ್ಳೆ ಟೀಂ ಸಿಕ್ಕಿತ್ತು. ಆದರೆ ಬಿಎಸ್​​​ವೈಗೆ ಟೀಂ ಸಿಗಲಿಲ್ಲ, ಯಡಿಯೂರಪ್ಪ ವಿಜಯೇಂದ್ರ ಇಬ್ಬರೇ ಟೀಂ ಆಗಿದ್ದಾರೆ. ಅಲ್ಲದೇ ಅವರಿಗೆ ಜಾತಿ ಬೆಂಬಲ ಇದೆ. ಯಡಿಯೂರಪ್ಪ ಇವತ್ತೂ ಪಕ್ಷ ಬಿಟ್ಟರು ಬಿಜೆಪಿಗೆ ಬರೋದು 40ಸೀಟು ಎಂದು ಹೇಳಿದರು.

The post ಮುಂದಿನ ಸಿಎಂ ವಿವಾದ: ‘ಸಿದ್ದರಾಮಯ್ಯಗೆ ಮೇಕಪ್ ಮಾಡಿದವರೇ ನಾವು’ ಎಂದ ಇಬ್ರಾಹಿಂ appeared first on News First Kannada.

Source: newsfirstlive.com

Source link