ಮುಂದಿನ 12 ತಿಂಗಳಲ್ಲಿ ಯುಎಸ್ ರಾಯಭಾರಿ ಕಚೇರಿಗಳು ಸುಮಾರು 8 ಲಕ್ಷ ವೀಸಾಗಳನ್ನು ವಿತರಿಸಲಿವೆ: ಯುಎಸ್ ಸಚಿವ | According to American diplomat US embassies in India will process about 8 lakh visas ARB


ಮುಂದಿನ 12 ತಿಂಗಳಲ್ಲಿ ಯುಎಸ್ ರಾಯಭಾರಿ ಕಚೇರಿಗಳು ಸುಮಾರು 8 ಲಕ್ಷ ವೀಸಾಗಳನ್ನು ವಿತರಿಸಲಿವೆ: ಯುಎಸ್ ಸಚಿವ

ಡೊನಾಲ್ಡ್ ಎಲ್ ಹೆಫ್ಲಿನ್, ಯುಎಸ್ ಕಾನ್ಸುಲರ್ ವ್ಯವಹಾರಗಳ ಸಚಿವ

ಚೆನೈ: ಮುಂದಿನ 12 ತಿಂಗಳ ಅವಧಿಯಲ್ಲಿ ಭಾರತದಲ್ಲಿರುವ ಅಮೇರಿಕನ್ ರಾಯಭಾರಿ ಕಚೇರಿಯು (US embassy) ಸುಮಾರು 8 ಲಕ್ಷ ವೀಸಾಗಳನ್ನು ವಿತರಿಸಲಿದೆ ಎಂದು ಆ ದೇಶದ ಹಿರಿಯ ರಾಜತಾಂತ್ರಿಕ ಪ್ರತಿನಿಧಿಯೊಬ್ಬರು (diplomat) ಮಂಗಳವಾರ ಚೆನ್ನೈನಲ್ಲಿ ತಿಳಿಸಿದರು. ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಯುಎಸ್ ರಾಯಭಾರ ಕಚೇರಿಯ ಕಾನ್ಸುಲರ್ ವ್ಯವಹಾರಗಳ ಸಚಿವ ಡೊನಾಲ್ಡ್ ಎಲ್ ಹೆಫ್ಲಿನ್ (Donald L Heflin) ಅವರು, ‘ಮುಂದಿನ 12 ತಿಂಗಳಲ್ಲಿ 8,00,000 ವೀಸಾಗಳನ್ನು ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ವೀಸಾ ವಿತರಿಸುವ ಪ್ರಕ್ರಿಯೆ ಜಾರಿಗೊಳಿಸಲು ಸಾಕಷ್ಟು ಸ್ಲಾಟ್‌ಗಳನ್ನು ಓಪನ್ ಮಾಡಿದ್ದೇವೆ ಅಂತ ನಾವು ಭಾವಿಸುತ್ತೇವೆ. ಅಂತಿಮವಾಗಿ ಎಚ್ ಮತ್ತು ಎಲ್ ವೀಸಾಗಳ ಬೇಡಿಕೆಯನ್ನು ಪೂರೈಸಲಾಗುವುದು,’ ಎಂದು ಹೇಳಿದರು.

ಕೋವಿಡ್-19 ಪಿಡುಗು ತಲೆದೋರುವವ ಮೊದಲು ಒಟ್ಟು ಎಷ್ಟು ವೀಸಾಗಳನ್ನು ವಿತರಿಸಲಾಗಿತ್ತು ಎಂದು ಮಾಧ್ಯಮದವರು ಕೇಳಿದಾಗ, ‘1.2 ಮಿಲಿಯನ್ ವೀಸಾಗಳನ್ನು ನೀಡಲಾಗಿತ್ತು’ ಎಂದು ಹೇಳಿದರು. 2023 ಅಥವಾ 2024 ರ ಹೊತ್ತಿಗೆ ಕೋವಿಡ್-19 ಪೂರ್ವ ಅವಧಿಯಲ್ಲಿ ವಿತರಿಸಲಾಗುತ್ತಿದ್ದ ವೀಸಾಗಳ ಪ್ರಮಾಣವನ್ನು ತಲುಪುವ ನಿರೀಕ್ಷೆ ನಮಗಿದೆ ಎಂದು ಹೆಫ್ಲಿನ್ ಹೇಳಿದರು.

ಕೋವಿಡ್-19 ಪೂರ್ವ ಅವಧಿಯಲ್ಲಿ 12 ಲಕ್ಷ ವೀಸಾಗಳನ್ನು ನೀಡಲಾಗಿತ್ತು ಎಂದು ಹೆಫ್ಲಿನ್ ಹೇಳಿದರು. ವೀಸಾ ವಿತರಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಮತ್ತು ಭಾರತದಲ್ಲಿರುವ ಯುಎಸ್ ರಾಯಭಾರಿ ಕಚೇರಿಗಳಿಗೆ ಭೇಟಿ ನೀಡುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

‘ಕೋವಿಡ್-19 ಪಿಡುಗಿನಿಂದಾಗಿ ಕೇವಲ ಶೇ. 50 ರಷ್ಟು ಸಿಬ್ಬಂದಿ ವರ್ಗ ಮಾತ್ರ ವೀಸಾ ಪ್ರಕ್ರಿಯೆಯಲ್ಲಿ ತೊಡಗಿತ್ತು. ಉದ್ಯೋಗಿಗಳ ಸಂಖ್ಯೆ ನಾವು ಹೆಚ್ಚಿಸಲಿದ್ದೇವೆ. ಹೈದರಾಬಾದ್ ನಲ್ಲಿ ಒಂದು ದೊಡ್ಡ ಕಚೇರಿಯನ್ನು ಆರಂಭಿಸಲಿದ್ದೇವೆ, ನವದೆಹಲಿ ಮತ್ತು ಮುಂಬೈ ನಗರಗಳಲ್ಲಿರುವ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲಿದ್ದೇವೆ, ಕೊಲ್ಕತ್ತಾದ ಕಚೇರಿಯಲ್ಲಿ ಈಗಾಗಲೇ ಶೇ. 100 ರಷ್ಟು ಸಿಬ್ಬಂದಿ ಇದೆ,’ ಎಂದು ಹೆಫ್ಲಿನ್ ಹೇಳಿದರು.

ವೀಸಾ ಕೋರಿ ಅರ್ಜಿ ಸಲ್ಲಿಸಿದವರ ಸಂದೇಹ, ದೂರು-ದುಮ್ಮಾನಗಳಿಗೆ ಒಂದು ಸಮರ್ಪಿತ ಸಹಾಯವಾಣಿಯನ್ನು ಸ್ಥಾಪಿಸಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ಹೆಫ್ಲಿನ್ ಅವರು ಭಾರತದಲ್ಲಿರುವ ಎಲ್ಲ ಅಮೇರಿಕನ್ ರಾಯಭಾರಿ ಕಚೇರಿಗಳು ಡೆಡಿಕೇಟೆಡ್ ಹೆಲ್ಪ್ ಲೈನ್ ಹೊಂದಿವೆ ಮತ್ತು ಇ-ಮೇಲ್ ಅಡ್ರೆಸ್ ಕೂಡ ಸೃಷ್ಟಿಸಲಾಗಿದೆ, ಅರ್ಜಿದಾರರು ಅವುಗಳಿಗೆ ಸಂಪರ್ಕಿಸಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಬಹುದು ಎಂದು ಹೇಳಿದರು.

ಕೋವಿಡ್-19 ಪಿಡುಗಿನಿಂದಾಗಿ ಭಾರತೀಯ ವೀಸಾಗಳನ್ನು ತಡೆಹಿಡಿಯಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಹೆಫ್ಲಿನ್ ಅವರು, ‘ಹೆಚ್ಚಿನ ಸಂಖ್ಯೆಯ ವೀಸಾಗಳನ್ನು ತಡೆಹಿಡಿದಿಲ್ಲ ಆದರೆ, ಮುಂಬರುವ ದಿನಗಳಲ್ಲಿನ ನಾವು ವಿದ್ಯಾರ್ಥಿಗಳ ವೀಸಾಗಳಿಗೆ ಸಂಬಂಧಿಸಿದಂತೆ ಕೆಲ ಘೋಷಣೆಗಳನ್ನು ಮಾಡಲಿದ್ದೇವೆ, ಅದರ ಮೇಲೆ ಗಮನವಿರಲಿ,’ ಎಂದು ಹೇಳಿದರು.

TV9 Kannada


Leave a Reply

Your email address will not be published.