ಮೊದಲು ಬನ್ನಿ ಅಂತ ಕರೆದರೂ ಯಾರೂ ಬರಲಿಲ್ಲ. ಈಗ ಎಲ್ಲಾ ಕಡೆ ಕ್ಯೂ. ಸರದಿ ಸಾಲಿನಲ್ಲಿ ನಿಂತು ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಕಾಯ್ತಾ ಇದ್ದಾರೆ ಜನ. ಕೊರೊನಾ ಎರಡನೇ ಅಲೆ ಯಾವಾಗ ಶಾಕ್ ಕೊಡ್ತೋ ಆಗ ಎಲ್ಲರಲ್ಲೂ ಆತಂಕ ಹೆಚ್ಚಾಯ್ತು. ಲಸಿಕೆ ಹಾಕಿಸಿಕೊಂಡ್ರೇ ಸೇಫ್ ಅಂತ ಮೊದಲು ತಜ್ಞರು, ಸರ್ಕಾರ ಹೇಳಿತಾದರೂ ಯಾರೂ ಕಿವಿಗೆ ಹಾಕಿಕೊಂಡಿರಲೇ ಇಲ್ಲ. ಆದ್ರೆ ಈಗ ನಾ ಮುಂದು ತಾ ಮುಂದು ಅಂತ ಮುಗಿ ಬೀಳ್ತಾ ಇದ್ದಾರೆ.

ಲಸಿಕೆಗಾಗಿ ಬೇರೆ ಊರುಗಳಿಗೂ ಹೋಗಿ ಪಡೆದುಕೊಂಡು ಬಂದವರಿದ್ದಾರೆ. ಇದಕ್ಕಾಗಿ ಗಲಾಟೆಯೇ ಆಗಿ ಹೋಗಿದೆ. ವ್ಯಾಕ್ಸಿನ್ ಗಾಗಿ ಆನ್ಲೈನ್ ರಿಜಿಸ್ಟ್ರೇಷನ್ ವ್ಯವಸ್ಥೆ ಮಾಡಿದ್ರೆ ಅಲ್ಲೂ ಹ್ಯಾಕ್ ಮಾಡಿ ಲಸಿಕೆಗಾಗಿ ಕನ್ನ ಹಾಕ್ತಾ ಇದ್ದಾರೆ. ಏನೇ ಮಾಡಿದ್ರೂ ಬೇಡಿಕೆಗೆ ತಕ್ಕ ಹಾಗೆ ಲಸಿಕೆಯೇ ಪೂರೈಕೆ ಆಗುತ್ತಿಲ್ಲ. ಕೋಟಿ ಲೆಕ್ಕದಲ್ಲಿ ಜನ ಲಸಿಕೆ ಹಾಕಿಸಿಕೊಳ್ಳಲು ಕಾಯುತ್ತಿದ್ರೆ  ರಾಜ್ಯಗಳಿಗೆ ಲಕ್ಷದ ಲೆಕ್ಕದಲ್ಲಿ ಮಾತ್ರ ಲಸಿಕೆ ಬರ್ತಿದೆ. ಹೀಗೇ ಕಂಟಿನ್ಯೂ ಆದ್ರೆ ವ್ಯಾಕ್ಸಿನೇಷನ್ ಡ್ರೈವ್ ಗುರಿ ತಲುಪೋದಕ್ಕೆ ವರ್ಷಗಟ್ಟಲೇ ಬೇಕಾಗುತ್ತದೆ. ಆದ್ರೆ ಈಗ ಒಂದು ಗುಡ್ ನ್ಯೂಸ್ ಬಂದಿದೆ.

ಮುಂದಿನ 5 ತಿಂಗಳಲ್ಲಿ ಎಲ್ಲರಿಗೂ ಲಸಿಕೆ ಸಿಗೋದು ಖಚಿತ
200 ಕೋಟಿಗೂ ಹೆಚ್ಚು ಡೋಸ್ ಲಸಿಕೆ ಉತ್ಪಾದನೆಗೆ ಸಿದ್ಧತೆ

ಈವರೆಗೆ ದೇಶದಲ್ಲಿ ಲಸಿಕೆ ಹಾಕಿಸಿಕೊಂಡವರ ಸಂಖ್ಯೆ 17 ಕೋಟಿ. 130 ಕೋಟಿ ಜನಸಂಖ್ಯೆಯಲ್ಲಿ ಕನಿಷ್ಠ 80 ಕೋಟಿ ಜನರಿಗೆ ಲಸಿಕೆ ಹಾಕಿಸಬೇಕಾಗಿದೆ. 18 ವರ್ಷ ಕೆಳಗಿನವರಿಗೆ ಲಸಿಕೆ ಬಂದಿಲ್ಲ. ಅದೂ ಬಂದರೆ ಹೆಚ್ಚು ಕಡಿಮೆ ಮತ್ತೆ 40 ಕೋಟಿ ಡೋಸ್ ಬೇಕಾಗಲಿದೆ. ಕೋಟಿ ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡೋದಕ್ಕೆ ಬಹಳ ದಿನಗಳೇ ಹಿಡಿಯುತ್ತೆ. ಇಂಥ ಹೊತ್ತಲ್ಲೇ ಒಂದು ನಿಟ್ಟುಸಿರು ಬಿಡುವಂತ ಮಾಹಿತಿ ಬಂದಿದೆ. ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಅವರೇ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅದೇನು ಅಂದ್ರೆ ಮುಂದಿನ 5 ತಿಂಗಳಲ್ಲಿ ಭಾರತದಲ್ಲೇ 200 ಕೋಟಿಗೂ ಹೆಚ್ಚು ಡೋಸ್ ಲಸಿಕೆ ಉತ್ಪಾದನೆಯಾಗಲಿದೆ. ಲಸಿಕೆ ಉತ್ಪಾದನೆ ಗುರಿ ತಲುಪಿ ಬಿಟ್ಟರೆ ವ್ಯಾಕ್ಸಿನೇಷನ್ ಡ್ರೈವ್ ಕೂಡ ಸಕ್ಸಸ್ ಆಗುತ್ತೆ. ಹೆಚ್ಚು ಕಡಿಮೆ ಮೂರನೇ ಅಲೆ ಬರೋದ್ರೊಳಗೆ ಎಲ್ಲರಿಗೂ ವ್ಯಾಕ್ಸಿನ್ ಸಿಗುವಂತಾಗುತ್ತೆ. ಅಂದರೆ ಆಗಸ್ಟ್ ನಿಂದ ಡಿಸೆಂಬರ್ ತಿಂಗಳ ಅವಧಿಯೊಳಗೆ ಬೇರೆ ಬೇರೆ ಕಂಪನಿಗಳು ಕೋಟಿ ಕೋಟಿ ಡೋಸ್ ಲಸಿಕೆಗಳನ್ನು ಉತ್ಪಾದನೆ ಮಾಡಲಿವೆ.

ಅದಾಗಲೇ ದೇಶಕ್ಕೆ ಬಂದಿಳಿದಿದೆ ರಷ್ಯಾದ ಸ್ಫುಟ್ನಿಕ್ ವ್ಯಾಕ್ಸಿನ್
ಒಂದೆರಡು ತಿಂಗಳಲ್ಲಿ ಇನ್ನೊಂದಿಷ್ಟು ಕಂಪನಿಗಳ ಲಸಿಕೆ ಲಭ್ಯ

ದೇಶದಲ್ಲಿ ಹಾಲಿ ಕೊವ್ಯಾಕ್ಸಿನ್ ಮತ್ತ ಕೋವಿಶೀಲ್ಡ್ ಲಸಿಕೆಗಳನ್ನು ಬಳಕೆ ಮಾಡಲಾಗ್ತಿದೆ. ಈಗ 17 ಕೋಟಿ ಜನರಿಗೆ ಇದೇ ಲಸಿಕೆಗಳನ್ನು ಹಾಕಿಸಲಾಗಿದೆ. ಈ ನಡುವೆ, ರಷ್ಯಾದಿಂದ ಸ್ಫುಟ್ನಿಕ್ ಲಸಿಕೆಯೂ ಭಾರತಕ್ಕೆ ಬಂದಿಳಿದಿದೆ. ಇದು ಬಹುಶಃ ಒಂದೆರಡು ದಿನಗಳಲ್ಲಿ ಬಳಕೆಗೆ ಲಭ್ಯವಾಗಲಿದೆ. ಮೊದಲ ಹಂತದಲ್ಲಿ ಒಂದೂವರೆ ಲಕ್ಷ ಡೋಸ್ ಮಾತ್ರ ಬಂದಿತ್ತು. ಹೀಗಾಗಿ ಇನ್ನಷ್ಟು ಲಸಿಕೆಗಳು ಬರಬೇಕಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಭಾರತದಲ್ಲೇ ಈ ಲಸಿಕೆ ಉತ್ಪಾದನೆ ಮಾಡಲಾಗುತ್ತದೆ. ಹೀಗಾಗಿ ಕೊವ್ಯಾಕ್ಸಿನ್, ಕೋವಿಶಿಲ್ಡ್ ಜೊತೆ ಸ್ಫುಟ್ನಿಕ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗಲಿದೆ. ಇದರ ಜೊತೆಗೆ ಮುಂದಿನ ಒಂದೆರಡು ತಿಂಗಳಲ್ಲಿ ಇನ್ನಷ್ಟು ಕಂಪನಿಗಳ ಲಸಿಕೆಗಳೂ ಕೂಡ ಲಭ್ಯವಿರಲಿದೆ.

ಹಾಲಿ ಮೂರು ಲಸಿಕೆ ಜೊತೆ ಸಿದ್ಧವಾಗಿದೆ ಇನ್ನೆರಡು ಲಸಿಕೆ
ಶೀಘ್ರದಲ್ಲೇ ಝೈಕೋವ್, ಬಯೋಲಾಜಿಕಲ್ ಇ ವ್ಯಾಕ್ಸಿನ್

ಕೊವ್ಯಾಕ್ಸಿನ್, ಕೋವಿಶಿಲ್ಡ್, ಸ್ಫುಟ್ನಿಕ್ ಜೊತೆ ಇನ್ನೆರಡು ಲಸಿಕೆಗಳು ಸಿದ್ಧವಾಗ್ತಾ ಇದೆ. ಅಹಮದಾಬಾದ್ ನ ಝೈಡಸ್ ಕ್ಯಾಡಿಲಾ ಸಂಸ್ಥೆ ಉತ್ಪಾದನೆ ಮಾಡಿರುವ ಝೈಕೋವ್-ಡಿ ಲಸಿಕೆ ಸಿದ್ಧವಾಗಿದ್ದು ಅದರ ಪರಿಣಾಮಗಳ ಬಗ್ಗೆ ಅಧ್ಯಯನ ಮುಂದುವರೆದಿದೆ. ಈ ತಿಂಗಳ ಅಂತ್ಯಕ್ಕೆ ಬಹುತೇಕ ಇದರ ಪ್ರಯೋಗದ ಹಂತಗಳು ಪೂರ್ಣವಾಗಲಿದ್ದು ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಲಿದೆ. ಕೇಂದ್ರದ ಒಪ್ಪಿಗೆ ಸಿಕ್ಕ ತಕ್ಷಣ ಬಹುಶಃ ಜೂನ್ ತಿಂಗಳಲ್ಲೇ ಝೈಕೋವ್-ಡಿ ಲಸಿಕೆ ಮಾರುಕಟ್ಟೆಗೆ ಬರಲಿದೆ. ಇದರ ಜೊತೆಗೆ ಹೈದ್ರಾಬಾದ್ ಮೂಲದ ಬಯೋಲಾಜಿಕಲ್ ಇ ಲಿಮಿಟೆಡ್ ಮತ್ತೊಂದು ಲಸಿಕೆ ಸಿದ್ಧಪಡಿಸ್ತಾ ಇದೆ. ಈಗಾಗಲೇ ಈ ಲಸಿಕೆಯ ಎರಡನೇ ಹಂತದ ಪ್ರಯೋಗ ಮುಕ್ತಾಯವಾಗಿದೆ. ಈಗ ಮೂರನೇ ಹಂತದ ಪ್ರಯೋಗಕ್ಕೆ ಒಪ್ಪಿಗೆ ಪಡೆದುಕೊಂಡಿದೆ. ಆಗಸ್ಟ್ ತಿಂಗಳ ವೇಳೆಗೆ ಈ ಬಯೋಲಾಜಿಕಲ್-ಇ ವ್ಯಾಕ್ಸಿನ್ ಕೂಡ ಲಭ್ಯವಾಗಲಿದೆ.

ಇನ್ಮುಂದೆ ಇಂಜೆಕ್ಷನ್ ಮಾತ್ರ ಅಲ್ಲ, ಹನಿ ಲಸಿಕೆಯೂ ಲಭ್ಯ
ಜೆನ್ನೇವಾ ಸ್ಫುಟ್ನಿಕ್-ವಿ ಮೂಗಿನ ಲಸಿಕೆಗೆ ಗ್ರೀನ್ ಸಿಗ್ನಲ್
ಭಾರತ್ ಬಯೋಟೆಕ್ ನಿಂದಲೂ ಇಂಟ್ರಾ ನೇಸಲ್ ಲಸಿಕೆ ಪ್ರಯೋಗ

ಇನ್ನು ಮಂದಿನ ದಿನಗಳಲ್ಲಿ ಇಂಜೆಕ್ಷನ್ ಡೋಸ್ ಮಾತ್ರ ಅಲ್ಲ. ಮೂಗಿನಲ್ಲಿ ಬಿಡುವ ಹನಿ ಲಸಿಕೆಗಳು ಕೂಡ ಮಾರುಕಟ್ಟೆಗೆ ಬರಲಿವೆ. ಜೆನ್ನೇವಾ ಸ್ಫುಟ್ಕಿಕ್-ವಿ ಇಂತಹದ್ದೊಂದು ಮೂಗಿನ ಲಸಿಕೆಯನ್ನ, ಜೊತೆಗೆ ‘ಭಾರತ್‌ ಬಯೋಟೆಕ್‌ ಕೂಡಾ ‘ಇಂಟ್ರಾನೇಸಲ್‌’ ಕೊರೊನಾ ಲಸಿಕೆಯ ಪ್ರಯೋಗಕ್ಕೆ ಮುಂದಾಗಿದೆ. ಮೂಗಿನೊಳಗೆ 2 ಹನಿಗಳನ್ನು ಹಾಕುವುದೇ ಇಂಟ್ರಾನೇಸಲ್‌ ಲಸಿಕೆ. ಈ ವ್ಯಾಕ್ಸಿನ್ ಸಿದ್ಧಪಡಿಸಲು ಈಗಾಗಲೇ ವಾಷಿಂಗ್ಟನ್‌ ಯೂನಿವರ್ಸಿಟಿ ಸ್ಕೂಲ್‌ ಆಫ್‌ ಮೆಡಿಸಿನ್‌ ಜೊತೆ ಒಪ್ಪಂದ ಕೂಡ ಮಾಡಿಕೊಳ್ಳಲಾಗಿದೆ. ಈಗ ಬಂದಿರುವ ಕೋವ್ಯಾಕ್ಸಿನ್, ಕೋವಿಶಿಲ್ಡ್ ಲಸಿಕೆ ಇಂಜೆಕ್ಷನ್ ಮೂಲಕ ಹಾಕಿಸಿಕೊಳ್ಳಬೇಕು. ಇದಕ್ಕೆ ಸಿರಿಂಜು, ಸೂಜಿ ವೆಚ್ಚವೂ ಆಗುತ್ತೆ. ಆದ್ರೆ ಮೂಗಿನ ಲಸಿಕೆ ಬಂದರೆ ಇದ್ಯಾವುದೇ ವೆಚ್ಚ ಇರೋದಿಲ್ಲ. ಬಹುಶಃ ಈ ಮೂಗಿನ ಲಸಿಕೆ ಬಂದು ಬಿಟ್ಟರೆ ಇದನ್ನು ವಿತರಿಸೋದು ಬಹಳ ಸುಲಭ. ಮುಂದಿನ ಜನವರಿಯೊಳಗೆ ಈ ಪ್ರಯೋಗ ಮುಕ್ತಾಯವಾಗಬಹುದು. ಇದು ಸಕ್ಸಸ್ ಆದರೆ ಮಕ್ಕಳಿಗೂ ಇದೇ ಮಾದರಿಯ ಲಸಿಕೆ ಸಿದ್ಧವಾಗಬಹುದು.

ಯಾವ್ಯಾವ ಕಂಪನಿಗಳಿಂದ ಎಷ್ಟೆಷ್ಟು ಲಸಿಕೆ ಉತ್ಪಾದನೆ?
ಆಗಸ್ಟ್ ವೇಳೆಗೆ ಕಂಪನಿಗಳ ಉತ್ಪಾದನೆ ಪ್ರಮಾಣವೆಷ್ಟು?

 

ಮುಂದಿನ ಆಗಸ್ಟ್ ನಿಂದ ಡಿಸೆಂಬರ್ ಒಳಗಾಗಿ 200 ಕೋಟಿ ಡೋಸ್ ಲಭ್ಯವಾಗಲಿದೆ. ಹೀಗಿರುವಾಗ ಯಾವ್ಯಾವ ಕಂಪನಿಗಳು ಎಷ್ಟೆಷ್ಟು ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸಲಿವೆ ಅಂತ ನೋಡೋದಾದ್ರೆ;

  • ಕೋವಿಶಿಲ್ಡ್ 75 ಕೋಟಿ ಡೋಸ್ ನಷ್ಟು ಉತ್ಪಾದನೆ ಮಾಡುವ ಗುರಿ ಹೊಂದಿದೆ.
  • ಕೋವ್ಯಾಕ್ಸಿನ್ 55 ಕೋಟಿ
  • ಸ್ಫುಟ್ನಿಕ್ 15 ಕೋಟಿ
  • ಬಯೋಲಾಜಿಕಲ್ ಇ ಪ್ರಯೋಗ ಮುಕ್ತಾಯವಾದ್ರೆ 15 ಕೋಟಿ ಡೋಸ್
  • ನೋವ್ಯಾಕ್ಸ್ ನಿಂದ 20 ಕೋಟಿ ಡೋಸ್
  • ಝೈಕೋವ್ ದಿಂದ 5 ಕೋಟಿ
  • ಗೆನ್ನೋವಾದಿಂದ 6 ಕೋಟಿ ಡೋಸ್ ನಿರೀಕ್ಷಿಸಲಾಗಿದೆ.

ಇದರ ಜೊತೆಗೆ ಮೂಗಿನ ಲಸಿಕೆ ಕೂಡ ಸಿದ್ಧವಾಗಿಬಿಟ್ಟರೆ ಅದು ಕೂಡ 10 ಕೋಟಿ ಡೋಸ್ ನಷ್ಟು ಉತ್ಪಾದನೆ ಆಗುವ ನಿರೀಕ್ಷೆ ಇದೆ. ಇದರ ಜೊತೆಗೆ ಆಯಾ ರಾಜ್ಯಗಳೇ ವಿದೇಶಗಳಿಂದ ಲಸಿಕೆ ತರಿಸಿಕೊಳ್ಳುವ ಪ್ಲಾನ್ ಮಾಡ್ತಿರೋದ್ರಿಂದ ಇನ್ನಷ್ಟು ಹೆಚ್ಚಿನ ಡೋಸ್ ಸುಲಭವಾಗಿ ಸಿಗಬಹುದಾಗಿದೆ.

ಆಯಾ ರಾಜ್ಯಗಳಿಂದಲೇ ಲಸಿಕೆಗೆ ಜಾಗತಿಕ ಟೆಂಡರ್
ಇನ್ಮುಂದೆ ದೇಶಿಯ ಕಂಪನಿಗಳ ಮೇಲಿನ ಒತ್ತಡ ಕಡಿಮೆ

ಈಗಾಗಲೇ ಲಸಿಕೆ ಉತ್ಪಾದನೆ ಮಾಡುತ್ತಿರುವ ಕಂಪನಿಗಳ ಮೇಲೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚುತ್ತಿದೆ. ಭಾರತದಲ್ಲಂತೂ ಎಲ್ಲಾ ರಾಜ್ಯಗಳೂ ಕೋವಿಶಿಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳಿಗಾಗಿ ನಿತ್ಯ ಬೇಡಿಕೆ ಇಡುತ್ತಲೇ ಇವೆ. ಆದ್ರೆ ಅಷ್ಟೊಂದು ಲಸಿಕೆ ಉತ್ಪಾದಿಸಲು ಸಾಧ್ಯವಾಗ್ತಾ ಇಲ್ಲ. ಹೀಗಾಗಿ ಆಯಾ ರಾಜ್ಯಗಳಿಗೇ ವಿದೇಶಗಳಿಂದ ಲಸಿಕೆ ಆಮದು ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಕರ್ನಾಟಕ, ದೆಹಲಿ, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳು ಜಾಗತಿಕ ಟೆಂಡರ್ ಕರೆಯುವ ಮೂಲಕ ಲಸಿಕೆಗಳನ್ನು ತರಿಸಿಕೊಳ್ಳಲು ಪ್ಲಾನ್ ಮಾಡುತ್ತಿವೆ. ಇದರಿಂದಾಗಿ ಲಸಿಕೆ ಲಭ್ಯತೆ ಕೆಲವೇ ದಿನಗಳಲ್ಲಿ ಹೆಚ್ಚಾಗಲಿದೆ.

ಡೋಸ್ ಗಳ ನಡುವಿನ ಅಂತರ ಹೆಚ್ಚಿಸಿದ್ದರಿಂದ ಅನುಕೂಲ
6 ರಿಂದ 8 ಅಥವಾ 12ರಿಂದ 16 ವಾರಗಳ ಅಂತರ ನಿಗದಿ
ಇದರಿಂದ ಒಮ್ಮೆಲೆ ದಿಢೀರ್ ಬೇಡಿಕೆ ತಗ್ಗಿಸಲು ಪ್ರಯೋಜನ

ಈ ನಡುವೆ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳುವವರಿಗೆ ಮಹತ್ವದ ಸಲಹೆಗಳನ್ನು ಶಿಫಾರಸ್ಸು ಮಾಡಲಾಗಿದೆ. ಯಾವುದೇ ಲಸಿಕೆ ಹಾಕಿಸಿಕೊಂಡರೂ ಮೊದಲ ಡೋಸ್ ಪಡೆದ ತಿಂಗಳ ಬಳಿಕವೇ ಎರಡನೇ ಡೋಸ್ ಹಾಕಲಾಗುತ್ತಿದೆ. ಈಗ ಅದನ್ನು ಒಂದೂವರೆ ತಿಂಗಳಿನಿಂದ ಎರಡು ತಿಂಗಳಿಗೆ ಅಂತರ ನಿಗದಿ ಮಾಡಲಾಗ್ತಿದೆ. ಕೆಲವು ಲಸಿಕೆಗಳನ್ನು ಮೊದಲ ಡೋಸ್ ಪಡೆದು 12ರಿಂದ 16 ವಾರಗಳ ಬಳಿಕ ಎರಡನೇ ಡೋಸ್ ಪಡೆದುಕೊಳ್ಳಬೇಕು. ಇದರಿಂದಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಸಮರ್ಪಕವಾಗಿ ಹೆಚ್ಚಾಗಲು ಅನುಕೂಲವಾಗುತ್ತದೆ ಅಂತ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯೇ ಇಂತಾದ್ದೊಂದು ಶಿಫಾರಸ್ಸು ಮಾಡಿದೆ. ಇದರಿಂದ ಲಸಿಕಾ ಕೇಂದ್ರಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಒಂದು ಡೋಸ್ ಪಡೆದ ಒಂದು ತಿಂಗಳಲ್ಲೇ ಇನ್ನೊಂದು ಡೋಸ್ ಪಡೆಯಬೇಕಾಗಿಲ್ಲ. ಅದಕ್ಕೆ ಒಂದೂವರೆಯಿಂದ ಮೂರು ತಿಂಗಳವರೆಗೂ ಟೈಮ್ ಇರುತ್ತೆ. ಹೀಗಾಗಿ ಮುಂದೆ ನಿಧಾನವಾಗಿ ಲಸಿಕೆ ಹಾಕಿಸಿಕೊಳ್ಳಬಹುದು.

ಲಸಿಕೆ ಉತ್ಪಾದನೆ ಹೆಚ್ಚಿಸಲು ಕೇಂದ್ರದಿಂದ ಮೆಗಾ ಪ್ಲಾನ್
ಬೇರೆ ಬೇರೆ ಕಂಪನಿಗಳಲ್ಲಿ ಲಸಿಕೆ ಉತ್ಪಾದನೆಗೆ ಕಾರ್ಯತಂತ್ರ
ಫಾರ್ಮುಲಾ ಪಡೆದು ವಿವಿಧೆಡೆ ಉತ್ಪಾದಿಸುವ ಬಗ್ಗೆ ಚಿಂತನೆ

ಲಸಿಕೆ ಉತ್ಪಾದನಾ ಘಟಕಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತೊಂದು ಪ್ಲಾನ್ ಮಾಡ್ತಾ ಇದೆ. ಈಗ ಲಸಿಕೆ ಸಿದ್ಧಪಡಿಸಿರುವ ಕಂಪನಿಗಳಿಂದ ನಿಗದಿತ ಅವಧಿಗೆ ಫಾರ್ಮುಲಾ ಪಡೆದುಕೊಂಡು ಬೇರೆ ಕಂಪನಿಗಳಲ್ಲೂ ಇದು ತಯಾರಾಗುವಂತೆ ಮಾಡುವುದು. ಇದರಿಂದ ಲಸಿಕೆ ಉತ್ಪಾದನಾ ಪ್ರಮಾಣ ಹೆಚ್ಚಾಗುತ್ತದೆ. ಲಸಿಕೆ ಕಂಡು ಹಿಡಿದಿರುವ ಕಂಪನಿಗೂ ಲಾಭವಾಗಲಿದೆ. ಭಾರತ್ ಬಯೋಟೆಕ್ ಜೊತೆ ಇಂತಾದ್ದೊಂದು ಮಾತುಕತೆ ನಡೆದಿದೆ ಅಂತ ಹೇಳಲಾಗ್ತಿದೆ. ಈ ರೀತಿ ಹಲವು ಕಂಪನಿಗಳು ಪರಸ್ಪರ ಒಪ್ಪಂದ ಮಾಡಿಕೊಂಡುಬಿಟ್ರೆ ಲಸಿಕೆ ಉತ್ಪಾದನೆ ವೇಗ ಪಡೆದುಕೊಳ್ಳಲಿದೆ.

ಇನ್ನೊಂದು ಎರಡು ಮೂರು ತಿಂಗಳಲ್ಲಿ ಲಸಿಕೆ ಲಭ್ಯತೆ ಹೆಚ್ಚಾಗುವ ಸಾಧ್ಯತೆ ಕಾಣಿಸ್ತಾ ಇದೆ. ಆದ್ರೆ ಲಸಿಕೆ ಹಾಕಿಸಿಕೊಂಡು ಬಿಟ್ರೆ ಕೊರೊನಾ ಹೋಗಿ ಬಿಡ್ತು ಅಥವಾ ಬರೋದೇ ಇಲ್ಲಾ ಅಂತಾನೂ ಅಲ್ಲ. ಹೀಗಾಗಿ ಲಸಿಕೆ ಸಿಗುತ್ತೋ ಬಿಡುತ್ತೋ ನಮ್ಮ ನಮ್ಮ ಎಚ್ಚರಿಕೆಯಲ್ಲಿ ನಾವು ಇರಲೇಬೇಕು.

The post ಮುಂದಿನ 5 ತಿಂಗಳಲ್ಲಿ ಎಲ್ಲರಿಗೂ ಲಸಿಕೆ? ಕೇಂದ್ರ ಸರ್ಕಾರದ ಮೆಗಾ ಪ್ಲಾನ್ ಏನು? appeared first on News First Kannada.

Source: newsfirstlive.com

Source link