ಉತ್ತರ ಪ್ರದೇಶದ ರಾಜಕೀಯ ಪಡಸಾಲೆಯಲ್ಲಿ ಚಟುವಟಿಕೆಗಳು ದಿನದಿಂದ ದಿನಕ್ಕೆ ಬಿರುಸುಗೊಳ್ತಾ ಇವೆ. ಕಾರಣ ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ. ಆದರೆ, ಈಗಿನ ವಾತಾವರಣ ನೋಡಿದ್ರೆ ಹಾಲಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೇ ಮಹಾಯೋಗ ಮುಂದುವರೆಯುತ್ತಾ ಅಥವಾ ಬೇರೊಂದು ಸಮೀಕರಣ ವರ್ಕೌಟ್ ಆಗುತ್ತಾ ಅನ್ನೋ ಕುತುಹೂಲ ಮೂಡಿದೆ. ಯುಪಿ ರಾಜಕಾರಣದ ಸುತ್ತ ಒಂದು ರೌಂಡ್ ಈ ಸ್ಪೆಷಲ್ ರಿಪೋರ್ಟ್​​​ನಲ್ಲಿ.

ಉತ್ತರ ಪ್ರದೇಶದ ರಾಜಕಾರಣ ಹೆಚ್ಚು ಕಡಿಮೆ ರಾಷ್ಟ್ರ ರಾಜಕಾರಣವನ್ನು ನಿರ್ಣಯ ಮಾಡುತ್ತೆ ಅಂತಾನೇ ಹೇಳಲಾಗುತ್ತೆ. ಕಾರಣ ಉತ್ತರ ಪ್ರದೇಶ ದೇಶದ ಅತೀ ದೊಡ್ಡ ರಾಜ್ಯ. 20 ಕೋಟಿ ಜನರಿರುವ ಉತ್ತರ ಪ್ರದೇಶ ಅತಿ ಹೆಚ್ಚು ಕ್ಷೇತ್ರಗಳಿರುವ ರಾಜ್ಯ. ಅಷ್ಟೇ ಸಂಕೀರ್ಣ ರಾಜಕೀಯ ಪರಿಸ್ಥಿತಿ. ಒಂದು ಕಡೆ ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್ ಇನ್ನೊಂದು ಕಡೆ ಮಾಯಾವತಿ. ಮತ್ತೊಂದು ಕಡೆ ದೆಹಲಿಯಿಂದ ಆಗಾಗ ಬಂದಿಳಿಯುವ ಪ್ರಿಯಾಂಕಾ ಗಾಂಧಿ. ಉತ್ತರಪ್ರದೇಶದ ರಾಜಕೀಯ ಅಷ್ಟು ಸುಲಭವಲ್ಲ. ಆದ್ರೆ ಇಲ್ಲಿ ಬಿಜೆಪಿಗೆ ಭದ್ರ ನೆಲೆ ಇದೆ.

ಇನ್ನು ವಾರಣಾಸಿ ಕ್ಷೇತ್ರವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಪ್ರತಿನಿಧಿಸ್ತಾ ಇರೋದ್ರಿಂದ ಇನ್ನೊಂದಿಷ್ಟು ಪ್ರಭಾವ ಹೆಚ್ಚಾಗಿಯೇ ಇದೆ. ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಭಾವ ಕುಗ್ಗಿದೆ ಅಂತ ಹೇಳಲಾಗ್ತಾ ಇದ್ರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಮಲವೇ ಅರಳಿ ಅವರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈಗ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವುದು ಮುಂದಿನ ವಿಧಾನಸಭಾ ಚುನಾವಣೆಯ ತಯಾರಿ.

2022ರ ಆರಂಭದಲ್ಲೇ ಎದುರಾಗುವ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯೇ ಮುಂದಿನ ವರ್ಷದ ಮೆಗಾ ಪೊಲಿಟಿಕಲ್ ಇವೆಂಟ್. ಇಡೀ ದೇಶದ ಗಮನವನ್ನು ತನ್ನತ್ತ ಕೇಂದ್ರಿಕರಿಸಿಕೊಳ್ಳುತ್ತಿದೆ ಉತ್ತರಪ್ರದೇಶ.

ಬಿಜೆಪಿಯಲ್ಲಿ ಮೋದಿ-ಯೋಗಿಯದ್ದೇ ಮುಂದೆಯೂ ಹವಾ
ಯುಪಿ ಕಾಂಗ್ರೆಸ್ಸಿಗೆ ಈಗ ಪ್ರಿಯಾಂಕಾ ಗಾಂಧಿಯದ್ದೇ ಬಲ

ಉತ್ತರ ಪ್ರದೇಶ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬದಲಾವಣೆ ಸುದ್ದಿ ಕೇಳಿಬಂದಿತ್ತು. ಇತ್ತೀಚೆಗೆ ಯೋಗಿ ದೆಹಲಿ ಯಾತ್ರೆ ಸಂದರ್ಭದಲ್ಲಿ ಈ ಸುದ್ದಿಗೆ ಇನ್ನಷ್ಟು ರೆಕ್ಕೆ ಪುಕ್ಕ ಅಂಟಿಕೊಂಡಿತ್ತು. ಆದ್ರೆ ಯೋಗಿ ಸಿಎಂ ಆಗಿ ಕಂಟಿನ್ಯೂ ಆಗಿದ್ದಾರೆ. ಯೋಗಿ ಆದಿತ್ಯನಾಥ್ ಅವರನ್ನು ದೂರ ಇರಿಸಿ ಮುಂದಿನ ಚುನಾವಣೆಗೆ ಹೋಗೋದು ಕೂಡ ಅಂದುಕೊಂಡಷ್ಟು ಸುಲಭವಲ್ಲ. ಅಷ್ಟರ ಮಟ್ಟಿಗೆ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಆದರೆ, ಇತ್ತೀಚಿನ ಅವರ ಆಡಳಿತ ಸಹಜವಾಗಿ ವಿರೋಧಿ ಅಲೆಯನ್ನೂ ಸೃಷ್ಟಿಸಿದೆ. ಕೊರೊನಾ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯೋಗಿ ವಿಫಲರಾಗಿದ್ದಾರೆ ಅನ್ನೋ ಆರೋಪಗಳಿವೆ. ಗಂಗಾನದಿಯಲ್ಲಿ ತೇಲಿ ಬಂದ ಶವಗಳ ಸುದ್ದಿ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿದ್ದರಿಂದ ಅದು ಕೂಡ ಎದ್ದು ಕಾಣುವಂತೆ ಆಗಿದೆ.

ಈ ಹಿಂದೆ ಮುಖ್ಯಮಂತ್ರಿ ಸ್ಥಾನಕ್ಕೆ ‘ಅನಿರೀಕ್ಷಿತ’ ಆಯ್ಕೆಯಾಗಿ ಹೊರಹೊಮ್ಮಿದ್ದ ‘ಗೋರಖ್‌ಪುರದ ಸಂತ’ ಯೋಗಿ ಆದಿತ್ಯನಾಥ್, ಅಷ್ಟೇ ಅನಿರೀಕ್ಷಿತವಾಗಿ ಹಿಂದೆ ಸರಿದುಬಿಡ್ತಾರಾ ಅನ್ನೋ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿತ್ತು. ಆದ್ರೆ ಈಗ ಅದಕ್ಕೆಲ್ಲ ಫುಲ್ ಸ್ಟಾಪ್ ಬಿದ್ದಿದೆ. ಹೀಗಾಗಿ ಉತ್ತರ ಪ್ರದೇಶದ ಮುಂದಿನ ಚುನಾವಣೆಯಲ್ಲಿ ಮೋದಿ-ಯೋಗಿಯದ್ದೇ ಹವಾ ಬಿಜೆಪಿಯಲ್ಲಿ ಕಂಟಿನ್ಯೂ ಆಗಲಿದೆ. ಇನ್ನು ಕಾಂಗ್ರೆಸ್ ನಲ್ಲಿ ಪ್ರಿಯಾಂಕಾ ಗಾಂಧಿಯವರದ್ದೇ ಸಾರಥ್ಯ. ಇತ್ತೀಚಿನ ವರ್ಷಗಳಲ್ಲಿ ಸಹೋದರ ರಾಹುಲ್ ಗಾಂಧಿಗಿಂತ ಪ್ರಿಯಾಂಕಾ ಗಾಂಧಿಯೇ ಉತ್ತರಪ್ರದೇಶದತ್ತ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲೂ ಪ್ರಿಯಾಂಕಾ ಗಾಂಧಿಯವರೇ ಹೆಚ್ಚು ಓಡಾಡಿದ್ರು. ಯುಪಿ ವಿಧಾನಸಭಾ ಚುನಾವಣೆಗೂ ಹೆಚ್ಚು ಕಡಿಮೆ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ನ ಮುಂಚೂಣಿ ನಾಯಕರಾಗಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಇ

ನ್ನು ಬಹುಜನ ಸಮಾಜವಾದಿ ಪಕ್ಷದ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಪ್ರಾದೇಶಿಕ ಶಕ್ತಿಗಳಾಗಿ ಹೋರಾಟ ಮುಂದುವರೆಸಲಿದ್ದಾರೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮುಲಾಯಂ ಸಿಂಗ್ ಯಾದವ್ ತೆರೆಮರೆಗೆ ಸರಿಯುವುದು ಹೆಚ್ಚು ಕಡಿಮೆ ಖಚಿತವಾಗಿದೆ.

ಕಳೆದ ಬಾರಿ 403 ಸ್ಥಾನಗಳಲ್ಲಿ 312 ರಲ್ಲಿ ಗೆದ್ದು ಬೀಗಿದ್ದ ಕೇಸರಿ ಪಡೆ
ಈ ಬಾರಿಯೂ ಇದೇ ರೀತಿ ಅಭೂತಪೂರ್ವ ಗೆಲುವು ಸಿಗುತ್ತಾ?
ಯೋಗಿ ಆದಿತ್ಯನಾಥ್, ನರೇಂದ್ರ ಮೋದಿ ಕಾರ್ಯತಂತ್ರವೇನು?

2017ರಲ್ಲಿ ನಡೆದ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಿಂದೆಂದೂ ಕಾಣದ ಐತಿಹಾಸಿಕ ಗೆಲುವನ್ನು ದಾಖಲಿಸಿತ್ತು. ವಾಜಪೇಯಿ, ಅಡ್ವಾಣಿಯವರ ಕಾಲದಲ್ಲೂ ಇಷ್ಟೊಂದು ದೊಡ್ಡ ಮಟ್ಟದ ಗೆಲುವು ಸಾಧ್ಯವಾಗಿರಲಿಲ್ಲ. 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಹೇಗಿತ್ತು ಅನ್ನೋದ್ರ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ ನೋಡಿ.

ಕಳೆದ ಯುಪಿ ಎಲೆಕ್ಷನ್ ಫಲಿತಾಂಶ

  • ಭಾರತೀಯ ಜನತಾ ಪಕ್ಷ: 312 ಸ್ಥಾನ
  • ಸಮಾಜವಾದಿ ಪಕ್ಷ: 47 ಸ್ಥಾನ
  • ಬಹುಜನ ಸಮಾಜವಾದಿ ಪಕ್ಷ: 19 ಸ್ಥಾನ
  • ಕಾಂಗ್ರೆಸ್ ಪಕ್ಷ: 07 ಸ್ಥಾನ
  • ಇತರೆ ಪಕ್ಷ ಮತ್ತು ಪಕ್ಷೇತರ: 27 ಸ್ಥಾನ

ಉತ್ತರ ಪ್ರದೇಶ ವಿಧಾನಸಭೆಯ 403 ಸ್ಥಾನಗಳಲ್ಲಿ ಬರೋಬ್ಬರಿ 312 ಸ್ಥಾನಗಳನ್ನು ಬಿಜೆಪಿ ಗೆದ್ದು ಕೊಂಡಿತ್ತು. ಉಳಿದಂತೆ ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿತ್ತು. ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ 19 ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ ಕಳೆದ ಬಾರಿ ಹೀನಾಯವಾದ ಸೋಲನ್ನು ಕಂಡಿತ್ತು. ಕೇವಲ 7 ಕ್ಷೇತ್ರಗಳಲ್ಲಿ ಮಾತ್ರವೇ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಇದರಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಚೇತರಿಸಿಕೊಳ್ಳಲಾಗದಷ್ಟು ಹಿನ್ನಡೆ ಅನುಭವಿಸಿದೆ ಅಂತಾನೇ ವಿಶ್ಲೇಷಿಸಲಾಗಿತ್ತು.

ನೋಡಿ ಕಳೆದ ಬಾರಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಇಷ್ಟು ದೊಡ್ಡ ಮಟ್ಟದ ಗೆಲುವು ಕಂಡಿತ್ತು. ಆದರೆ ಮತ್ತೊಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಹೀನಾಯವಾದ ಸೋಲು ಕಂಡಿದ್ದು ಪಕ್ಷದ ಮುಖಂಡರಿಗೆ ಶಾಕ್ ಆಗಿತ್ತು. ಈ ಹಿಂದೆ ಉತ್ತರ ಪ್ರದೇಶದಲ್ಲಿ ನಿರಾಯಾಸವಾಗಿ ಗೆಲುವು ಕಾಣ್ತಾ ಇದ್ದ ಕಾಂಗ್ರೆಸ್, ಇದೀಗ ಪ್ರಾದೇಶಿಕ ಪಕ್ಷಗಳ ಪ್ರಭಾವ ಮತ್ತು ಬಿಜೆಪಿಯ ಶಕ್ತಿಯ ನಡುವೆ ಕುಗ್ಗಿ ಹೋಗಿದೆ.

ಈ ಬಾರಿ ಯುಪಿಯಲ್ಲಿ ಹೇಗಿರುತ್ತೆ ರಾಜಕೀಯ ಹೊಂದಾಣಿಕೆ?
ಬಿಜೆಪಿಗೆ ವಿರುದ್ಧವಾದ ಪರ್ಯಾಯ ರಂಗ ರಚನೆಯಾಗುತ್ತಾ?
ಈ ಬಾರಿ ಇಲ್ಲಿ ಕಾಂಗ್ರೆಸ್,ಎಸ್ ಪಿ-ಬಿಎಸ್ ಪಿ ನಡೆ ಹೇಗಿರುತ್ತೆ?

ಹಾಲಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಸಹಜವಾಗಿ ಆಡಳಿತ ವಿರೋಧಿ ಅಲೆ ಇದ್ದೇ ಇದೆ. ಆದರೆ ಅದು ಸೋಲಿಗೆ ಕಾರಣವಾಗುವಷ್ಟು ಇಲ್ಲ ಎಂಬುದು ಬಿಜೆಪಿ ನಾಯಕರ ಅಭಿಪ್ರಾಯ. ಹೀಗಾಗಿಯೇ ಯೋಗಿ ಆದಿತ್ಯನಾಥ್ ಅವರನ್ನೇ ಕಂಟಿನ್ಯೂ ಮಾಡಿದೆ ಬಿಜೆಪಿ ಹೈಕಮಾಂಡ್ ಅನ್ನೋ ವಿಶ್ಲೇಷಣೆ ಕೇಳಿ ಬರ್ತಾ ಇದೆ. ಇನ್ನು ಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳು ನಿರೀಕ್ಷಿತ ಮಟ್ಟದಲ್ಲಿ ಗಟ್ಟಿಯಾಗ್ತಾ ಇಲ್ಲ. ಇದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ. ಈಗಾಗಲೇ ಬಿಜೆಪಿ ವಿರುದ್ಧ ಇರುವ ಪಕ್ಷಗಳಲ್ಲಿ ಹೊಂದಾಣಿಕೆ ಮಾತು ಹೋಗಲಿ, ಒಡಕಿನ ಮಾತುಗಳೇ ಹೆಚ್ಚಾಗಿ ಕಾಣಿಸಿಕೊಳ್ತಿದೆ. ಹೀಗಾಗಿ ವಿರೋಧಿಗಳ ಒಡಕು ಬಿಜೆಪಿಗೆ ಮತ್ತೆ ವರದಾನವಾಗುವ ಸಾಧ್ಯತೆ ಇಲ್ಲಿ ಕಾಣ್ತಾ ಇದೆ.

ಸಖ್ಯ ಇಲ್ಲದೇ ಸ್ಪರ್ಧೆಗೆ ಶಕ್ತವಾಗಿದ್ದೇವೆ ಅಂತ ಹೇಳ್ತಿದೆ ಕಾಂಗ್ರೆಸ್
ಕಾಂಗ್ರೆಸ್ ಪಕ್ಷವನ್ನು ಜರಿದಿರುವ ಬಿಎಸ್​ಪಿಯ ಮಾಯಾವತಿ
ಹೊಂದಾಣಿಕೆಯಿಂದ ಬಹುತೇಕ ಹಿಂದೆ ಸರಿದಿರುವ ಅಖಿಲೇಶ್

ಉತ್ತರಪ್ರದೇಶದ ಕಳೆದ ಬಾರಿಯ ವಿಧಾನಸಭೆ ಚುನಾವಣೆಯ ಫಲಿತಾಂಶ ನೋಡಿದ್ರೆ ಬಿಜೆಪಿ ವಿರುದ್ಧ ಪರ್ಯಾಯ ರಂಗ ಅನಿವಾರ್ಯ ಎಂಬ ಮಾತುಗಳು ಇಲ್ಲಿ ಕೇಳಿ ಬರ್ತಾ ಇದ್ದವು. ಆದರೆ, ಅದು ಈಗ ಅಸಾಧ್ಯ ಅನ್ನುವಂತಹ ವಾತಾವರಣವೇ ಕಾಣ್ತಾ ಇದೆ. ಕಾರಣ ಈಗಾಗಲೇ ಬಹುಜನ ಸಮಾಜವಾದಿ ಪಕ್ಷದ ನಾಯಕರು, ಕಾಂಗ್ರೆಸ್ ನಾಯಕರು, ಸಮಾಜವಾದಿ ಪಕ್ಷದ ನಾಯಕರು ಪರಸ್ಪರ ಟೀಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಹುಶಃ ಮಾಯಾವತಿ, ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನಾಯಕರ ಇತ್ತೀಚಿಗಿನ ಪ್ರತಿಕ್ರಿಯೆಗಳನ್ನು ನೋಡಿದರೆ ಈ ಪಕ್ಷಗಳು ಒಂದುಗೂಡಿ ಚುನಾವಣೆ ಎದುರಿಸುವ ವಾತಾವರಣ ಇಲ್ಲ. ಹೀಗಾಗಿ ಪ್ರತ್ಯೇಕವಾಗಿಯೇ ಎಲೆಕ್ಷನ್​ಗೆ ತಯಾರಿ ನಡೆಸುತ್ತಿವೆ ಬಿಜೆಪಿ ಎದುರಾಳಿ ಪಕ್ಷಗಳು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳ ಸಖ್ಯ ಇಲ್ಲದೆಯೂ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ ಪಕ್ಷವು ಶಕ್ತವಾಗಿದೆ ಎಂದು ಕಾಂಗ್ರೆಸ್‌ ನಾಯಕರು ಈಗಾಗಲೇ ಹೇಳಿಕೆ ಕೊಡ್ತಾ ಇದಾರೆ. ಅಷ್ಟೇ ಅಲ್ಲ, ಬಿಎಸ್‌ಪಿಯು ಬಿಜೆಪಿಯ ‘ಬಿ’ ತಂಡ ಎಂದೂ ಆರೋಪಿಸ್ತಾ ಇದಾರೆ. ಇದು ಸಹಜವಾಗಿ ಮಾಯಾವತಿಯವರನ್ನು ಕೆರಳಿಸಿದೆ. ಹೀಗಾಗಿ ಮಾಯಾವತಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ನ ಮೊದಲ ಪದದಲ್ಲಿರುವ ಅಕ್ಷರ ಅಂದ್ರೆ ಅದು ಕನ್ನಿಂಗ್ (ಕುಯುಕ್ತಿ) ಅಂತ ಗುಡುಗಿದ್ದಾರೆ. ಇದರಿಂದ ಕಾಂಗ್ರೆಸ್ -ಬಿಎಸ್ ಪಿ ಹೊಂದಾಣಿಕೆ ಮಾತಂತೂ ದೂರವಾದಂತೆ ಕಾಣ್ತಾ ಇದೆ.

ಇನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಜೊತೆಗೆ ಹಾಗೂ ಅದಕ್ಕು ಮೊದಲು 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಸಮಾಜವಾದಿ ಪಕ್ಷ, ಈ ಬಾರಿ ಯಾವುದೇ ಪ್ರಮುಖ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಇರಲು ನಿರ್ಧಾರ ಮಾಡಿದೆ. ಹೀಗಾಗಿ ಅಖಿಲೇಶ್ ಯಾದವ್ ಏಕಾಂಗಿಯಾಗಿ ಸೆಣಸಲು ಸಂಕಲ್ಪ ಮಾಡಿದ್ದಾರೆ.

ಮಾಯಾವತಿ, ಅಖಿಲೇಶ್, ಪ್ರಿಯಾಂಕಾ ಏಕಾಂಗಿ ಸೆಣಸಾಟ
ಎದುರಾಳಿಗಳ ಮತ ವಿಭಜನೆಯಿಂದ ಬಿಜೆಪಿಗೆ ಲಾಭದ ನಿರೀಕ್ಷೆ

ಮಾಯಾವತಿನೇತೃತ್ವದ ಬಹುಜನ ಸಮಾಜವಾದಿ ಪಕ್ಷ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಏಕಾಂಗಿಯಾಗಿ, ಪ್ರತ್ಯೇಕವಾಗಿ.. ಯಾವುದೇ ಹೊಂದಾಣಿಕೆ ಇಲ್ಲದೆ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅದರ ಲಾಭ ಬಿಜೆಪಿಗೆ ಹೆಚ್ಚು ಅಂತಾನೇ ವಿಶ್ಲೇಷಿಸಲಾಗ್ತಾ ಇದೆ. ಎದುರಾಳಿ ಪಕ್ಷಗಳು ವೋಟ್ ಬ್ಯಾಂಕ್ ಹೆಚ್ಚು ಕಡಿಮೆ ಒಂದೇ ಆಗಿರೋದ್ರಿಂದ ಅದು ವಿಭಜನೆಯಾಗಿ ತನಗೆ ಈ ಬಾರಿಯೂ ಹೆಚ್ಚು ಲಾಭವಾಗುತ್ತೆ ಅನ್ನೋ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರಿದ್ದಾರೆ.

ಕಳೆದ ಬಾರಿ ಹೊಂದಾಣಿಕೆ ಮಾಡಿಕೊಂಡಾಗಲೂ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಹೆಚ್ಚಿನ ಸಾಧನೆ ಮಾಡಲು ಆಗಲಿಲ್ಲ. ಈ ಬಾರಿಯಂತೂ ಬಿಜೆಪಿ ನೆಲೆ ಇನ್ನಷ್ಟು ಭದ್ರವಾಗಿರೋದ್ರಿಂದ ಗೆಲುವು ಮತ್ತಷ್ಟು ಸುಲಭ ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಪರಿಸ್ಥಿತಿ ಹಾಗಿಲ್ಲ ಅನ್ನೋದು ಸ್ಥಳೀಯ ವಿಶ್ಲೇಷಕರ ಅಭಿಪ್ರಾಯ. ಬಿಜೆಪಿ ಸರ್ಕಾರದ ಮೇಲೆ ಬಹಳ ನಿರೀಕ್ಷೆ ಇತ್ತು. ಅದು ಈಡೇರ್ತಾ ಇಲ್ಲ ಅನ್ನೋ ಅಭಿಪ್ರಾಯ ಹೆಚ್ಚು ಗಟ್ಟಿಯಾಗ್ತಾ ಇರೋದು ಬಿಜೆಪಿ ನಾಯಕರಿಗೆ ಚಿಂತೆ ತರ್ತಾ ಇದೆ.

2014ರಿಂದಲೂ ಏರಿಕೆಯಾಗ್ತಾನೇ ಇದೆ ಬಿಜೆಪಿ ಮತಗಳಿಕೆ
2007ರಿಂದಲೇ ಇಳಿಕೆಯಾಗ್ತಿದೆ BSP ಮತಗಳಿಕೆ ಪ್ರಮಾಣ
ಮತ ಗಳಿಕೆ ಹೆಚ್ಚಿಸಿಕೊಳ್ಳಲು ಪ್ಲಾನ್ ಮಾಡ್ತಿದಾರೆ ಅಖಿಲೇಶ್
ಬಿಜೆಪಿಗೆ ಯುಪಿಯಲ್ಲಿ ಸ್ಥಿರತೆ ಕಾಪಾಡಿಕೊಳ್ಳೋದೇ ಸವಾಲು

ಕಳೆದ 10 ವರ್ಷಗಳಲ್ಲಿ ಉತ್ತರ ಪ್ರದೇಶದ ಮತ ಗಳಿಕೆ ಪ್ರಮಾಣವನ್ನು ಗಮನಿಸಿದರೆ ಭಾರತೀಯ ಜನತಾ ಪಕ್ಷ ಚುನಾವಣೆಯಿಂದ ಚುನಾವಣೆಗೆ ಮತ ಗಳಿಕೆಯನ್ನು ಹೆಚ್ಚಿಸಿಕೊಂಡಿದೆ. ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲೂ ಬಿಜೆಪಿಯೇ ಮುಂದಿದೆ. ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಂತೂ ಬಿಜೆಪಿ ಶೇಕಡಾ 40ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿತ್ತು. 10 ವರ್ಷಗಳ ಹಿಂದೆ ಶೇಕಡಾ 25ರಿಂದ 35ರಷ್ಟು ಮತ ಗಳಿಸುತ್ತಿದ್ದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳೆರಡರ ಗಳಿಕೆಯ ಪ್ರಮಾಣವು ಕುಗ್ಗಿದೆ. ಇನ್ನು ಕಾಂಗ್ರೆಸ್ ಕೂಡ ಕಳೆದ ಎರಡು ದಶಕಗಳಿಂದಲೂ ಉತ್ತರಪ್ರದೇಶದಲ್ಲಿ ಮಾಡಿರುವ ಸಾಧನೆ ತೀರಾ ಕಡಿಮೆ. ಹೀಗಾಗಿ ಬಿಜೆಪಿ ಎದುರಾಳಿಗಳಿಗೆ ಈಗ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಸವಾಲು ಇದ್ದರೆ, ಬಿಜೆಪಿಗೆ ಸ್ಥಿರತೆ ಕಾಯ್ದುಕೊಳ್ಳುವುದು ಅಂದ್ರೆ ಈಗಿರುವ ಮತ ಗಳಿಕೆ ಪ್ರಮಾಣವನ್ನು ಹಾಗೆಯೇ ಉಳಿಸಿಕೊಳ್ಳುವುದು ಚಾಲೆಂಜ್ ಆಗಿದೆ.

ಬಿಜೆಪಿಗೆ ಈ ಬಾರಿ ಇರುವ ಪ್ಲಸ್ ಏನು, ಮೈನಸ್ ಏನು?
ಹಿಂದುತ್ವದ ಮಂತ್ರದ ಜೊತೆ ಇದೀಗ ಅಭಿವೃದ್ಧಿಯ ಜಪ
ಒಂದು ಕಡೆಯಲ್ಲಿ ವಾರಣಾಸಿ,ಇನ್ನೊಂದು ಕಡೆ ಅಯೋಧ್ಯೆ

ಯಾವುದೇ ಪಕ್ಷವಾಗಿದ್ದರೂ ಐದು ವರ್ಷದ ಆಡಳಿತದ ನಂತರ ಸಹಜವಾಗಿ ಒಂದಿಷ್ಟು ಆಡಳಿತ ವಿರೋಧಿ ಅಲೆ ಇದ್ದೇ ಇರುತ್ತದೆ. ಅದರಲ್ಲೂ ಈ ಬಾರಿ ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಅನ್ನೋ ಅಭಿಪ್ರಾಯ ಯುಪಿಯಲ್ಲಿದೆ. ಆದರೆ, ಇವೆಲ್ಲ ಎಲೆಕ್ಷನ್ ಟೈಮ್ ನಲ್ಲಿ ದೊಡ್ಡ ಇಶ್ಯು ಆಗಲ್ಲ ಅನ್ನೋ ಅಭಿಪ್ರಾಯವೂ ಇದೆ. ಇನ್ನು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗ್ತಾ ಇರೋದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ. ಮತ್ತೊಂದು ಕಡೆ ಪ್ರಧಾನಿ ನರೇಂದ್ರ ಮೋದಿಯವರೇ ವಾರಣಾಸಿ ಕ್ಷೇತ್ರವನ್ನು ಪ್ರತಿನಿಧಿಸ್ತಾ ಇರೋದ್ರಿಂದ ಅವರ ಪ್ರಭಾವ ಮತ್ತಷ್ಟು ಗಾಢವಾಗಿದೆ. ವಾರಣಾಸಿಯಲ್ಲಿ ಬಂದು ಮೋದಿ ಗಂಗಾರತಿ ಮಾಡ್ತಾ ಇದ್ರೆ ಉತ್ತರ ಪ್ರದೇಶದಲ್ಲಿ ಅದೊಂದು ರೀತಿ ಭಕ್ತಿಯ ಉನ್ಮಾದವನ್ನೇ ಸೃಷ್ಟಿಸುತ್ತದೆ ಅಂತಾನೂ ಬಣ್ಣಿಸಲಾಗುತ್ತೆ. ಇನ್ನು ಲಖನೌದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಭಾವ ಸಾಕಷ್ಟಿದೆ. ಇನ್ನು ಬಿಜೆಪಿ ಚಾಣಕ್ಯ ಅಮಿತ್ ಷಾ ಕಾರ್ಯತಂತ್ರ ಏನೇನಿದ್ಯೋ ಗೊತ್ತಿಲ್ಲ. ಹೀಗಾಗಿ ಬಿಜೆಪಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿಕೊಳ್ಳುವುದು ಕಷ್ಟವಲ್ಲ ಅಂತಿದಾರೆ ವಿಶ್ಲೇಷಕರು. ಆದರೆ ಪರಿಸ್ಥಿತಿ ಮೊದಲಿನ ಹಾಗಿಲ್ಲ. ಇಷ್ಟು ದಿನ ಹಿಂದುತ್ವ, ರಾಮ ಮಂದಿರ, ವಾರಣಾಸಿ ಅಭಿವೃದ್ಧಿ ಹೀಗೆ ಹಲವಾರು ನಿರೀಕ್ಷೆಗಳು ಜನರಲ್ಲಿದ್ದವು. ಆದರೆ ಈ ಬಾರಿಯ ನಿರೀಕ್ಷೆ ಇನ್ನಷ್ಟು ಹೆಚ್ಚಾಗೋದು ಸಹಜವಾಗಿದ್ದರಿಂದ ಅದನ್ನು ಕೂಡ ಬಿಜೆಪಿ ಫೇಸ್ ಮಾಡಬೇಕಾಗುತ್ತದೆ.

ಪ್ರಿಯಾಂಕಾ ಗಾಂಧಿ ಮತ್ತೆ ಗಂಗಾತಟದಲ್ಲಿ ಸಂಚರಿಸ್ತಾರಾ?
ಕುಗ್ಗಿ ಹೋಗಿರುವ ಕಾಂಗ್ರೆಸ್ ಬಲವನ್ನು ಮತ್ತೆ ಹೆಚ್ಚಿಸ್ತಾರಾ?

ಉತ್ತರ ಪ್ರದೇಶ ಅಂದರೆ ಇಲ್ಲಿ ಬಹುಮುಖ. ಆನೆಯ ಗುರುತಿನೊಂದಿಗೆ ಅಬ್ಬರಿಸುವ ಮಾಯಾವತಿ, ಸೈಕಲ್ ಏರಿ ಬರುವ ಅಖಿಲೇಶ್, ಮತ್ತೊಂದು ಕಡೆ ಗಂಗಾ ನದಿಯಲ್ಲಿ ದೋಣಿ ಮೂಲಕವೇ ಹಿಂದೊಮ್ಮೆ ಪ್ರಚಾರ ಹಮ್ಮಿಕೊಂಡಿದ್ದ ಪ್ರಿಯಾಂಕಾ ಗಾಂಧಿ, ವಾರಣಾಸಿಯ ಗಂಗಾತಟದಲ್ಲಿ ಗಂಗಾರತಿ ಮಾಡುತ್ತಿರುವ ಮೋದಿ ಹೀಗೆ ಬಹುಮುಖಗಳು ಎದುರಿಗೆ ಬರುತ್ತವೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ವೈಭವವನ್ನು ಕಳೆದುಕೊಂಡಿದೆ. ಅದು ತನ್ನ ಗತ ವೈಭವವನ್ನು ಮರುಕಳಿಸುವಂತೆ ಮಾಡಿಕೊಳ್ಳುವುದು ಸುಲಭವಿಲ್ಲ. ಪ್ರಿಯಾಂಕಾ ಗಾಂಧಿ ಗಂಗಾತಟದಲ್ಲಿ ಸಂಚರಿಸಿ ಪಕ್ಷಕ್ಕೆ ಮತ್ತೆ ಬಲ ತುಂಬ್ತಾರಾ ನೋಡಬೇಕು. ಇನ್ನು ಮಾಯಾವತಿ ಮತ್ತು ಅಖಿಲೇಶ್ ಯಾದವ್ ಮುಂದೆ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಯಾವ ರೀತಿ ಕಾರ್ಯತಂತ್ರ ಅನುಸರಿಸ್ತಾರೆ ಅನ್ನೋದು ಕೂಡ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ಬಗ್ಗೆ ಈಗಿನಿಂದಲೇ ರಾಷ್ಟ್ರ ರಾಜಕಾರಣದ ಪಡಸಾಲೆಯಲ್ಲೂ ಚರ್ಚೆ ಶುರುವಾಗಿರೋದಂತೂ ಸತ್ಯ.

The post ಮುಂದಿನ UP ಚುನಾವಣೆಗೆ ಬಿಜೆಪಿ ವಿರುದ್ಧ ಪರ್ಯಾಯ ರಂಗ ರಚನೆಯಾಗುತ್ತಾ? appeared first on News First Kannada.

Source: newsfirstlive.com

Source link