ಕೊರೊನಾದ ಎರಡನೇ ಅಲೆಯ ವಿರುದ್ಧ ಹೋರಾಡಲು ಭಾರತೀಯ ಕ್ರಿಕೆಟ್ ತಂಡದ ಶಿಖರ್ ಧವನ್, ತಮ್ಮ ನೆರವಿನ ಹಸ್ತವನ್ನ ಮುಂದುವರಿಸಿದ್ದಾರೆ. ಇದೀಗ ಕೊರೊನಾ ಸೋಂಕಿತರ ಜೀವ ಉಳಿಸಲು ಶಿಖರ್ ಧವನ್ ಗುರುಗ್ರಾಮ ಪೊಲೀಸರಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ಸ್​​ ದಾನ ಮಾಡಿದ್ದಾರೆ. ಧವನ್ ಅವರ ಈ ಉದಾರ ಕೊಡುಗೆಗೆ ಗುರುಗ್ರಾಮ ಪೊಲೀಸರು ಧನ್ಯವಾದ ತಿಳಿಸಿದ್ದಾರೆ.

ಗುರುಗ್ರಾಮ ಪೊಲೀಸರ ಟ್ವೀಟ್​ಗೆ ಧನ್ಯವಾದ ತಿಳಿಸಿರುವ ಧವನ್.. ಈ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನರಿಗೆ ಚಿಕ್ಕ ಸಹಾಯವನ್ನ ಮಾಡಿರೋದಕ್ಕೆ ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ನಾನು ಯಾಗಲೂ ನನ್ನ ಜನಗಳಿಗೆ ಮತ್ತು ಸಮಾಜಕ್ಕೆ ಸಹಾಯ ಮಾಡಲು ತಯಾರಿದ್ದೇನೆ. ಭಾರತ ಕೊರೊನಾ ವಿರುದ್ಧ ಬೇಗ ಗೆದ್ದುಬರಲಿ ಅಂತಾ ಟ್ವೀಟ್ ಮಾಡಿದ್ದಾರೆ.

ಗುರುಗ್ರಾಮ ಸಿಟಿ ಕೊರೊನಾದ ಎರಡನೇ ಅಲೆಯ ಹೊಡೆತಕ್ಕೆ ಜರ್ಜರಿತಗೊಂಡಿತ್ತು. ಇದೀಗ ಸೋಂಕಿನ ಪ್ರಮಾಣದಲ್ಲಿ ಇಳಿಮುಖ ಆಗುತ್ತಿದ್ದು, ಸತತ ಎರಡನೇ ದಿನ 2500ಕ್ಕಿಂತಲೂ ಕಡಿಮೆ ಪ್ರಕರಣವನ್ನ ಕಂಡಿದೆ. ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 1,68,960ಕ್ಕೆ ಏರಿಕೆಯಾಗಿದೆ. ಮೇ 14 ರಂದು 15 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 653 ಕ್ಕೆ ಏರಿಕೆಯಾಗಿದೆ.

ಧವನ್ ಅವರು ಇತ್ತೀಚೆಗಷ್ಟೇ ಮೊದಲ ಡೋಸ್ ಲಸಿಕೆ ಪಡೆದುಕೊಂಡು, ಸಾರ್ವಜನಿಕರಿಗೂ ವ್ಯಾಕ್ಸಿನ್ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ನಾನು ವ್ಯಾಕ್ಸಿನ್ ಪಡೆದುಕೊಂಡಿದ್ದೇನೆ. ಕೊರೊನಾ ಯೋಧರ ಕರ್ತವ್ಯ ಮತ್ತು ತ್ಯಾಗ ಹಾಗೂ ಅವರ ಸಮರ್ಪಣೆಗೆ ಧನ್ಯವಾದ ಹೇಳಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ದಯವಿಟ್ಟು ವ್ಯಾಕ್ಸಿನ್ ಪಡೆಯಲು ಹಿಂಜರಿಯಬೇಡಿ ಮತ್ತು ಆದಷ್ಟು ಬೇಗ ಲಸಿಕೆ ಪಡೆಯಿರಿ. ಇದರಿಂದ ಕೊರೊನಾ ವಿರುದ್ಧದ ಹೋರಾಟಕ್ಕೆ ಸಹಾಯವಾಗಲಿದೆ ಎಂದು ಕರೆ ನೀಡಿದ್ದರು.

ಕೊರೊನಾ ಪೀಡಿತ ಭಾರತದಲ್ಲಿ ಆಮ್ಲಜನಕದ ಅಭಾವ ಹೆಚ್ಚಾಗಿದೆ. ಇದನ್ನ ಅರಿತ ಧವನ್ ಕಳೆದ ತಿಂಗಳು 20 ಲಕ್ಷ ರೂಪಾಯಿ ಹಣವನ್ನ ‘ಮಿಸನ್ ಆಕ್ಸಿಜನ್’ಗೆ ನೀಡಿದ್ದರು. ಅಲ್ಲದೇ 2021 ರ ಐಪಿಎಲ್​ ಲೀಗ್​ನಲ್ಲಿ ತಾವು ಗೆದ್ದ ನಗದು ಬಹುಮಾನಗಳನ್ನ ಕೊರೊನಾ ವಿರುದ್ಧದ ಹೋರಾಟಕ್ಕೆ ನೀಡಿದ್ದಾರೆ.

The post ಮುಂದುವರಿದ ಧವನ್ ಸಹಾಯ ಹಸ್ತ.. ಗುರುಗ್ರಾಮಕ್ಕೆ ಆಕ್ಸಿಜನ್ ಕಾನ್ಸಂಟ್ರೇಟರ್ಸ್​​ ದಾನ appeared first on News First Kannada.

Source: newsfirstlive.com

Source link