ನವದೆಹಲಿ: ಪಾಕಿಸ್ತಾನದಲ್ಲಿ 2025ರಲ್ಲಿ ನಡೆಯಲಿರುವ ಚಾಂಪಿಯನ್ ಟ್ರೋಫಿ ಆಡಲು ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಅಂತಾ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವ ಮುನ್ನ ಭಾರತ ಸರ್ಕಾರ ಮತ್ತು ಕ್ರೀಡಾ ಸಚಿವಾಲಯ ಒಟ್ಟಾಗಿ ನಿರ್ಧಾರ ಕೈಗೊಳ್ಳಲಿದೆ. ಪಾಕಿಸ್ತಾನದಲ್ಲಿ ಭಾರತದ ಆಟಗಾರರ ಸುರಕ್ಷತೆ ವಿಷಯವನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುತ್ತೇವೆ ಅಂತಾ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಭಾರತ-ಪಾಕ್ ನಡುವಿನ ಸಂಬಂಧ ಅಷ್ಟಕಷ್ಟೇ. ಎರಡು ದೇಶಗಳ ಮಧ್ಯೆ ರಾಜಕೀಯ ಟೆನ್ಶನ್ ಇದೆ. ರಾಹುಲ್ ದ್ರಾವಿಡ್ ನೇತೃತ್ವದ ತಂಡವು 2005-06ರಲ್ಲಿ ಮೂರು ಟೆಸ್ಟ್ಗಳು ಮತ್ತು ಐದು ODI ಪಂದ್ಯವನ್ನ ಪಾಕಿಸ್ತಾನದಲ್ಲಿ ಆಡಿತ್ತು. ಅದಾದ ನಂತರ ಪಾಕಿಸ್ತಾನದಲ್ಲಿ ಭಾರತ ಯಾವುದೇ ಕ್ರಿಕೆಟ್ ಪಂದ್ಯ ಆಡಿಲ್ಲ. ಮೊದಲ ಬಾರಿಗೆ ಪಾಕಿಸ್ತಾನ 1996 ರಲ್ಲಿ ಐಸಿಸಿ ಟೂರ್ನಿಮೆಂಟ್ ಆಯೋಜನೆ ಮಾಡಿತ್ತು.