ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ಬದಲಾವಣೆಯ ಗಾಳಿ ಬೀಸುವ ಮುನ್ಸೂಚನೆ ಸಿಕ್ತಾ ಇದೆ. ಈ ಹಿಂದೆ ಯಾರೂ ಊಹಿಸಲಾಗದ ಬೆಳವಣಿಗೆಗಳು ನಡೆದು ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಆಗಿದ್ದರು. ಅವತ್ತು ಆದ ಮೈತ್ರಿ ಮಾತ್ರ ಇಡೀ ದೇಶದ ರಾಜಕಾರಣದಲ್ಲೇ ಅಚ್ಚರಿಗೆ ಕಾರಣವಾಗಿ ಹೋಗಿತ್ತು. ಅದೇ ಮಹಾರಾಷ್ಟ್ರದಲ್ಲಿ ಈಗ ಮತ್ತಷ್ಟು ಬೆಳವಣಿಗೆಗಳು ನಡೀತಿವೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಹತ್ತಿರ ರಾಜಕೀಯ ಬದಲಾವಣೆಯ ಗಾಳಿ ಬೀಸಲು ಶುರುವಾಗಿದೆ. ಮುಂಬೈ ಸಮುದ್ರ ತೀರದಲ್ಲಿ ರಾಜಕಾರಣದ ಅಲೆಗಳ ಸಪ್ಪಳ ಹೆಚ್ಚಾಗ್ತಾ ಇದೆ. ಅಲೆಯ ಅಬ್ಬರ ಮೇಲ್ನೋಟಕ್ಕೆ ಕಾಣಿಸದೇ ಇದ್ದರೂ ರಾಜಕೀಯ ಪಡಸಾಲೆಯಲ್ಲಿ ಮತ್ತೊಂದು ಸುತ್ತಿನ ಮಾರುತ ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ. ಮಹಾರಾಷ್ಟ್ರ ರಾಜಕಾರಣದಿಂದ ಇಂತದ್ದೊಂದು ಸುದ್ದಿ ಬರ್ತಾ ಇದೆ.

ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೆ ಬದಲಾವಣೆಯ ಗಾಳಿ?
ಮುಂಬೈ ಮೈತ್ರಿ ರಾಜಕಾರಣ ಯೂ ಟರ್ನ್ ತೆಗೆದುಕೊಳ್ಳುತ್ತಾ?
ಕೇಸರಿ ಪಡೆಯೊಂದಿಗೆ ಮತ್ತೆ ಸೇರಿಕೊಳ್ತಾರಾ ಶಿವಸೈನಿಕರು??

ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಮೊದಲಿನಿಂದಲೂ ಮಿತ್ರ ಪಕ್ಷಗಳು. ಆದ್ರೆ ಕಳೆದ ಬಾರಿ ಹೊಂದಾಣಿಕೆ ಸಾಧ್ಯವಾಗಲೇ ಇಲ್ಲ. ಶಿವಸೈನಿಕರಿಗೆ ತಮ್ಮವರೇ ಮುಖ್ಯಮಂತ್ರಿ ಆಗಬೇಕೆಂಬ ಬಯಕೆ ಹೆಚ್ಚಾಗಿತ್ತು. ಮುಂಬೈ ಹುಲಿ ಬಾಳಾ ಠಾಕ್ರೆ ಪುತ್ರ ಉದ್ಧವ್ ಠಾಕ್ರೆ ಅವರಿಗೂ ಕೂಡ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವ ಮನಸ್ಸಿತ್ತು. ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು ಸುಲಭವಾಗಿ ಬಿಟ್ಟುಕೊಡಲು ಒಪ್ಪಲೇ ಇಲ್ಲ. ದೇವೇಂದ್ರ ಫಡ್ನವೀಸ್ ಎರಡನೇ ಬಾರಿಗೆ ಸಿಎಂ ಆಗಿ ಕಂಟಿನ್ಯೂ ಆಗೋದಕ್ಕೆ ಮುಂದಾಗಿದ್ರು. ಆದ್ರೆ ಅದು ಕೊನೆಗೂ ಸಾಧ್ಯವಾಗಲೇ ಇಲ್ಲ. ಅವತ್ತು ಮಹಾರಾಷ್ಟ್ರದಲ್ಲಿ ನಡೆದಿದ್ದ ರಾಜಕೀಯ ಬೆಳವಣಿಗೆ ಮಾತ್ರ ಇಡೀ ದೇಶದ ರಾಜಕೀಯ ವಲಯದಲ್ಲೇ ತೀವ್ರ ಅಚ್ಚರಿಗೆ ಕಾರಣವಾಗಿತ್ತು. ಶಿವಸೈನಿಕರು, ಕೇಸರಿ ಪಡೆಯನ್ನು ಒಂದು ಕಡೆ ನೋಡ್ತಾ ಇದ್ದವರಿಗೆ ಇಡೀ ಚಿತ್ರಣವೇ ಬದಲಾಗಿ ಹೋಗಿತ್ತು. ಶೀವಸೇನೆ, ಎನ್​​ಸಿಪಿ ,ಕಾಂಗ್ರೆಸ್ ಮೈತ್ರಿಯನ್ನು ಯಾರಾದರೂ ಊಹೆ ಮಾಡಿಕೊಂಡಿದ್ರಾ? ಸಾಧ್ಯವೇ ಇಲ್ಲ. ಆದರೆ ಒಂದು ತಿಂಗಳಿನಲ್ಲಿ ಅದು ಆಗಿ ಹೋಗಿತ್ತು. 56 ಸ್ಥಾನ ಪಡೆದುಕೊಂಡಿದ್ದ ಶಿವಸೇನೆ, 54 ಸೀಟು ಗೆದ್ದಿದ್ದ ಎನ್​ಸಿಪಿ ಹಾಗೂ 44 ಸ್ಥಾನಕ್ಕೆ ತೃಪ್ತಿಕೊಂಡಿದ್ದ ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚನೆಯಾಗಿ ಬಿಟ್ಟಿತ್ತು. ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಶಿವಾಜಿ ಪಾರ್ಕ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಶಿವಸೈನಿಕರಿಗೆ ಇಷ್ಟವಿರದಿದ್ದರೂ ಅವತ್ತಿಗೆ ಅನಿವಾರ್ಯವಾಗಿತ್ತು
ಶಿವಸೇನೆ ಭವಿಷ್ಯದ ದೃಷ್ಟಿಯಿಂದ ಉದ್ಧವ್ ತೀರ್ಮಾನ ಮಾಡಿದ್ರು
ಈಗಿರುವ ಮೈತ್ರಿಗೆ ಪರ್ಯಾಯವಾಗಿ ಮತ್ತೊಂದು ಮೈತ್ರಿಯಾಗುತ್ತಾ?

ಮಹಾರಾಷ್ಟ್ರದಲ್ಲಿ ನಡೆದಿದ್ದ ಮೈತ್ರಿ ಎಷ್ಟು ಅಚ್ಚರಿ ತಂದಿತ್ತೋ ಅಷ್ಟೇ ಸಂದಿಗ್ಧತೆಯನ್ನು ಮಿತ್ರ ಪಕ್ಷಗಳ ಕಾರ್ಯಕರ್ತರಿಗೆ ತಂದಿಟ್ಟಿತ್ತು. ಎನ್​​ಸಿಪಿ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡೋದು ಶಿವಸೈನಿಕರಿಗೇ ಇಷ್ಟವೇ ಇರಲಿಲ್ಲ. ಮೊದಲಿನಿಂದಲೂ ಯಾರ ವಿರುದ್ಧ ಹೋರಾಟ ಮಾಡಿದ್ದರೋ ಅವರ ಜೊತೆಗೇನೇ ಕೈ ಜೋಡಿಸುವುದು ಇವರಿಗೆ ಇಷ್ಟವಿರಲಿಲ್ಲ. ಆದರೆ, ಬಿಜೆಪಿ ಪಟ್ಟು ಸಡಿಲಿಸಲಿಲ್ಲ. 105 ಸ್ಥಾನ ಗಳಿಸಿದ್ರಿಂದ ಹೆಚ್ಚು ಸೀಟಿರುವ ನಮಗೇ ಮುಖ್ಯಮಂತ್ರಿ ಸ್ಥಾನ ಬೇಕೆಂದು ಹೇಳಿಬಿಟ್ಟಿತ್ತು. ಇದು ಶಿವಸೇನೆ ನಾಯಕರನ್ನು ಕೆರಳಿಸಿತ್ತು. ಆಗ ನಡೆದ ಮಾತುಕತೆಗಳು ಒಂದೆರಡಲ್ಲ. ಅರ್ಧ ಅವಧಿಗೆ ಸಿಎಂ ಗಾದಿ ಬಿಟ್ಟುಕೊಡಿ ಅನ್ನೋವರೆಗೂ ಚರ್ಚೆಯಾಗಿತ್ತು. ಬಿಜೆಪಿ ಒಪ್ಪಲಿಲ್ಲ. ಶಿವಸೇನೆಯೂ ತನ್ನ ಪಟ್ಟು ಸಡಿಲಿಸಲಿಲ್ಲ. ಕೊನೆಗೂ 105 ಸೀಟು ಬಂದಿದ್ದ ಬಿಜೆಪಿಗೆ ಸರ್ಕಾರ ಕಂಟಿನ್ಯೂ ಮಾಡಲು ಸಾಧ್ಯವಾಗಲೇ ಇಲ್ಲ. ಶಿವಸೇನೆ ಬೆಂಬಲ ಕೊಡಲೇ ಇಲ್ಲ. ಅಷ್ಟೊತ್ತಿಗೆ ರಚನೆಯಾಗಿದ್ದೇ ಮಹಾಘಟಬಂಧನ. ಇದು ಬಹಳ ಅಚ್ಚರಿಯ ಬೆಳವಣಿಗೆ. ಶರದ್ ಪವಾರ್ ಇದಕ್ಕೆ ಒಪ್ಪಿದರೂ ಕಾಂಗ್ರೆಸ್ ಇದಕ್ಕೆ ಒಪ್ಪುತ್ತಾ ಅನ್ನೋ ಕುತೂಹಲ ಕೊನೆಯವರೆಗೂ ಇತ್ತು. ಶಿವಸೈನಿಕರಿಗೂ ಇದು ಬಹಳ ಇಕ್ಕಟ್ಟು ತಂದಿಟ್ಟಿತ್ತು. ಕೇಸರಿ ಪಡೆಯೊಂದಿಗೆ ಹೊಂದಿಕೊಂಡು ಹೋಗ್ತಾ ಇದ್ದ ಶಿವಸೈನಿಕರಿಗೆ ಎನ್​ಸಿಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಂಡು ಹೋಗೋದು ಸಾಧ್ಯವೇ ಇರಲಿಲ್ಲ. ಆದರೂ ಅಂತಿಮವಾಗಿ ಶಿವಸೇನೆಯವರೇ ಸಿಎಂ ಆಗಬೇಕು ಎಂಬ ಪಟ್ಟಿನಿಂದ ಉಳಿದೆಲ್ಲವೂ ಗೌಣವಾಯ್ತು. ಫೈನಲಿ, ಶಿವಾಜಿ ಪಾರ್ಕ್​​ನಲ್ಲಿ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕರಿಸಿದ್ದರು. ಆದ್ರೆ ಈ ಮೈತ್ರಿ ಬಹಳ ಕಾಲ ಇರುತ್ತಾ ಅಂತ ಅವತ್ತೇ ಚರ್ಚೆ ಶುರುವಾಗಿತ್ತು. ಈಗ ಆಗ್ತಾ ಇರೋ ಬೆಳವಣಿಗೆ ಅದೇ ಸತ್ಯವಾಗುವಂತೆ ಕಾಣ್ತಾ ಇದೆ.

ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ಬರುತ್ತಾ?
ಈಗಾಗಲೇ ಉನ್ನತ ಮಟ್ಟದಲ್ಲೇ ಮಾತುಕತೆ ನಡೀತಾ ಇದೆಯಾ?
ಉದ್ಧವ್ ಠಾಕ್ರೆ-ಅಮಿತ್ ಷಾ-ಮೋದಿ ಚರ್ಚಿಸಿ ಫೈನಲ್ ಮಾಡಿದ್ದಾರಾ?

ಮಹಾರಾಷ್ಟ್ರದಲ್ಲಿ ಅದ್ಯಾಕೋ ಈಗಿನ ಮಹಾಘಟಬಂಧನ ಸರಿ ಹೋಗ್ತಾ ಇಲ್ಲ. ಎಷ್ಟೇ ಆದರೂ ಸೈದ್ಧಾಂತಿಕವಾಗಿ ಒಬ್ಬರನ್ನ ಒಬ್ಬರು ಬಹಳ ಕಾಲ ಹತ್ತಿರದಲ್ಲಿಡೋದು ಕಷ್ಟ. ಮುಂಬೈ ಹುಲಿ ಬಾಳಾ ಠಾಕ್ರೆಯ ವಿಚಾರಧಾರೆಯಲ್ಲಿ ಮಿಂದೆದ್ದಿರುವ ಶಿವಸೈನಿಕರಿಗೆ ಸರ್ಕಾರದ ಮಟ್ಟದಲ್ಲೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಬರ್ತಾನೇ ಇದ್ದಾವೆ. ಹೀಗಾಗಿ ಮತ್ತೆ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ರಚನೆ ಆಗುವ ಲಕ್ಷಣಗಳು ಕಾಣ್ತಾ ಇದೆ. ಈಗಾಗಲೇ ಈ ಬಗ್ಗೆ ಉನ್ನತ ನಾಯಕರು ಚರ್ಚೆ ನಡೆಸಿದ್ದಾರೆ ಅನ್ನೋ ಮಾಹಿತಿಗಳು ಕೂಡ ಬರ್ತಾ ಇದ್ದಾವೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮಾತುಕತೆಯನ್ನು ನಡೆಸಿದ್ದಾರೆ ಅಂತ ಹೇಳಲಾಗ್ತಾ ಇದೆ. ಇದು ಎಷ್ಟರ ಮಟ್ಟಿಗೆ ಸಫಲವಾಗುತ್ತೋ ಗೊತ್ತಿಲ್ಲ. ಸದ್ಯಕ್ಕಂತೂ ಮುಂಬೈ ತೀರದಲ್ಲಿ ಬದಲಾವಣೆಯ ಮಾರುತ ಅಲ್ಲೆಲ್ಲೋ ಸೃಷ್ಟಿಯಾಗ್ತಾ ಇರುವಂತೆ ಗೋಚರವಾಗ್ತಾ ಇದೆ.

ಕೇಂದ್ರ ಸಚಿವ ರಾಮದಾಸ್ ಅಠಾವಳೆ ಕೊಟ್ಟ ಸುಳಿವೇನು?
ಬಿಜೆಪಿ-ಶಿವಸೇನೆ ಇತರ ಪಕ್ಷಗಳ ಮಹಾ ಯುತಿ ಅಸ್ತಿತ್ವಕ್ಕೆ ಬರುತ್ತಾ?
ಶಿವಸೇನಾ ವಕ್ತಾರ ಸಂಜಯ್ ರಾವತ್ ಹೊಗಳಿದ್ದು ಯಾರನ್ನ?

ಕೇಂದ್ರ ಸಚಿವರಾಗಿರುವ ಮಹಾರಾಷ್ಟ್ರದ ರಾಮದಾಸ್ ಅಠಾವಳೆ ನೀಡಿರುವ ಹೇಳಿಕೆಯಿಂದ ಈಗ ಮಹಾರಾಷ್ಟ್ರದ ರಾಜಕಾರಣದ ಹೊಸ ಹೊಸ ವಿಷಯಗಳು ಹೊರಗೆ ಬರ್ತಾ ಇವೆ. ಶಿವಸೇನೆ ಮತ್ತು ಬಿಜೆಪಿ ಹಾಗು ಇತರೇ ಪಕ್ಷಗಳ ಮಹಾ ಮೈತ್ರಿಯೊಂದಿಗೆ ಸರ್ಕಾರ ರಚನೆ ಆಗಬಹುದು ಅಂತ ರಾಮದಾಸ್ ಹೇಳ್ತಾ ಇದ್ದಾರೆ. ಈ ವಿಷಯವನ್ನು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಪ್ರಧಾನಿ ಮೋದಿಯವರೊಂದಿಗೂ ಚರ್ಚಿಸುತ್ತೇನೆ ಅಂತ ಹೇಳಿಬಿಟ್ಟಿದ್ದಾರೆ. ಎನ್​ಡಿಎ ಮಿತ್ರಪಕ್ಷವಾಗಿರುವ ಭಾರತೀಯ ರಿಪಬ್ಲಿಕನ್ ಪಕ್ಷದ ನಾಯಕ ಅಠಾವಳೆ ಹೇಳಿಕೆ ಈಗ ಮಹಾರಾಷ್ಟ್ರ ರಾಜಕಾರಣದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಇದಲ್ಲದೆ, ಶಿವಸೇನಾ ವಕ್ತಾರ ಸಂಜಯ್ ರಾವತ್ ಇತ್ತೀಚೆಗೆ ಕೊಡುತ್ತಿರುವ ಹೇಳಿಕೆಗಳೂ ಕೂಡ ಇಂತಾದ್ದೇ ಅಭಿಪ್ರಾಯವನ್ನು ಧ್ವನಿಸ್ತಾ ಇದ್ದಾವೆ. ಸಂಜಯ್ ರಾವತ್ ಇತ್ತೀಚೆಗೆ ಟೀಕೆ ಬಿಟ್ಟು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಲು ಶುರು ಮಾಡಿದ್ದರು. ಇದಕ್ಕಿಂತ ಮಹತ್ವ ಪಡೆದುಕೊಂಡ ವಿಷಯ ಏನು ಅಂದ್ರೆ ಇತ್ತೀಚೆಗೆ ದೆಹಲಿಯಲ್ಲಿ ಪ್ರಧಾನಿ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪರಸ್ಪರ ಚರ್ಚೆ ನಡೆಸಿದ್ದಾರೆ. ಅವತ್ತೇ ಹೊಸ ಮೈತ್ರಿ ಫಿಕ್ಸ್ ಆಗಿದೆ ಅಂತಾನೇ ಹೇಳಲಾಗ್ತಿದೆ.

ಉದ್ಧವ್ ಠಾಕ್ರೆಯವರೇ ಸಿಎಂ ಆಗಿ ಮುಂದುವರೆಯುತ್ತಾರಾ?
ಅಥವಾ ಬಿಜೆಪಿಗೇ ಶಿವಸೇನೆ ಸಿಎಂ ಸ್ಥಾನ ಬಿಟ್ಟು ಕೊಡುತ್ತಾ?
ಮಹಾರಾಷ್ಟ್ರದಲ್ಲಿ ಮುಂದಿನ ಹೊಂದಾಣಿಕೆ ಸೂತ್ರ ಹೇಗಿರುತ್ತೆ?

ಮುಂಬೈ ರಾಜಕೀಯ ಪಡಸಾಲೆಯಲ್ಲಿ ಈಗ ಇದೇ ಚರ್ಚೆ. ಕೇಸರಿ ಪಡೆ ಮತ್ತು ಶಿವಸೈನಿಕರನ್ನು ಮತ್ತೆ ಒಟ್ಟು ಗೂಡಿಸಲು ಇದೇ ಸರಿಯಾದ ಸಮಯ ಅನ್ನೋ ಅಭಿಪ್ರಾಯ ಶಿವಸೇನೆ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರಲ್ಲಿ ಕೇಳಿ ಬರ್ತಾ ಇದೆ. ದೇವೇಂದ್ರ ಪಡ್ನವೀಸ್ ಅವರಿಗೆ ಮೈತ್ರಿ ಇಷ್ಟಾ ಇದ್ಯೋ ಇಲ್ವೋ ಗೊತ್ತಿಲ್ಲ. ಕಾರಣ ದೇವೇಂದ್ರ ಪಡ್ನವೀಸ್ ಮತ್ತೆ ತಾವೇ ಮುಖ್ಯಮಂತ್ರಿ ಆಗಬೇಕೆಂದು ಹೊರಟಿದ್ದಾರೆ. ಅವರ ಅದಕ್ಕಾಗಿ ಏನೇನು ಪ್ರಯತ್ನ ನಡೆಸಿದ್ದಾರೆ ಅನ್ನೋದನ್ನೂ ಕೂಡ ಹೇಳ್ತೀವಿ. ಈಗೇನಾದರೂ ಮಾತಕತೆ ನಡೆದಂತೆ ಮುಂದೆ ಬೆಳವಣಿಗೆ ಆದರೆ, ಮಹಾ ಮೈತ್ರಿ ಆಗೋದು ಖಚಿತ.ಹಾಗೇನಾದರೂ ಆದ್ರೆ ಬಿಜೆಪಿ ಮತ್ತು ಶಿವಸೇನೆ ನಡುವೆ ಅಧಿಕಾರ ಹೊಂದಾಣಿಕೆ ಸೂತ್ರ ಹೇಗಿರುತ್ತೆ ಅನ್ನೋದೇ ಕುತೂಹಲಕ್ಕೆ ಕಾರಣವಾಗಿದೆ. ಇಷ್ಟು ದಿನ ಮುಖ್ಯಮಂತ್ರಿಯಾದ ಉದ್ಧವ್ ಠಾಕ್ರೆ ಸ್ಥಾನ ಬಿಟ್ಟು ಕೊಟ್ಟು ಬಿಡ್ತಾರಾ ಅಥವಾ ಅವರಿಗೇ ಬಿಜೆಪಿ ಬೆಂಬಲ ಕೊಡುತ್ತಾ ಅನ್ನೋದು ಮುಖ್ಯ ಪ್ರಶ್ನೆಯಾಗಿದೆ. ಮೂಲಗಳ ಪ್ರಕಾರ ಹಾಲಿ ಉದ್ಧವ್ ಠಾಕ್ರೆಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಲು ಕೂಡ ಬಿಜೆಪಿ ಉನ್ನತ ನಾಯಕರು ಒಪ್ಪಿಕೊಂಡಿದ್ದಾರಂತೆ. ಮುಂದೆ ಎರಡೂವರೆ ವರ್ಷ ಅವಧಿ ಪೂರೈಸಿದ ಬಳಿಕ ಬಿಜೆಪಿಗೆ ಸ್ಥಾನ ಬಿಟ್ಟುಕೊಡಬೇಕೆಂಬ ಸೂತ್ರವನ್ನು ಮುಂದಿಡಲಾಗಿದೆ ಅಂತಾನೇ ಹೇಳಲಾಗ್ತಿದೆ. ಆದ್ರೆ ಇದಕ್ಕೆ ಉದ್ಧವ್ ಒಪ್ತಾರಾ ನೋಡಬೇಕು.

ಮತ್ತೊಂದು ದಾಳ ಉರುಳಿಸ್ತಿದಾರಾ ದೇವೇಂದ್ರ ಫಡ್ನವೀಸ್?
ಶರದ್ ಪವಾರ್ ಜೊತೆ ಸಂಪರ್ಕದಲ್ಲಿದ್ದಾರಾ ಮಾಜಿ ಸಿಎಂ??
ಎನ್ ಸಿಪಿ ಶಿವಸೇನೆಯನ್ನು ಬಿಟ್ಟು ಬಿಜೆಪಿಗೆ ಬೆಂಬಲ ಕೊಡುತ್ತಾ?

ರಾಜಕಾರಣದಲ್ಲಿ ಹೀಗೇ ಆಗಬೇಕು ಅಂತಾ ಎಲ್ಲೂ ಇಲ್ಲ. ಅದು ಕಾಲಕ್ಕೆ ತಕ್ಕಂತೆ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಲೇ ಇರುತ್ತದೆ. ರಾಜಕಾರಣ ನಿಂತ ನೀರಲ್ಲ ಅನ್ನೋದು ರಾಜಕಾರಣಿಗಳ ರೆಡಿಮೇಡ್ ಡೈಲಾಗ್. ಹೀಗಿದ್ದಾಗ ಮಹಾರಾಷ್ಟ್ರದಲ್ಲಿ ಮತ್ತೆ ಬದಲಾವಣೆ ಆದ್ರೆ ಅಷ್ಟೇನೂ ಆಶ್ಚರ್ಯ ವ್ಯಕ್ತಪಡಿಸಬೇಕಿಲ್ಲ. ಮಹಾರಾಷ್ಟ್ರದಲ್ಲಿ ಹೆಚ್ಚು ಸ್ಥಾನ ಗಳಿಸಿರುವ ಬಿಜೆಪಿಗೆ ,ಅಧಿಕಾರ ಬಿಟ್ಟುಕೊಡುವ ಇಚ್ಛೆಯಿಲ್ಲ. ಅದರಲ್ಲೂ ಮಾಜಿ ಸಿಎಂ ದೇವೇಂದ್ರ ಪಡ್ನವೀಸ್ ಅವರಿಗೆ ತಾವೇ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬ ಬಯಕೆ ಇದೆ. ಹೀಗಾಗಿ ಶಿವಸೇನೆಯನ್ನು ಹೊರತುಪಡಿಸಿಯೇ ಅವರು ಪರ್ಯಾಯವಾಗಿ ಆಲೋಚನೆ ಮಾಡ್ತಾ ಇದ್ದಾರಂತೆ. ಇದರ ಫಲವಾಗಿಯೇ ದೇವೇಂದ್ರ ಫಡ್ನವೀಸ್ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಅಂತಾನೇ ಹೇಳಲಾಗ್ತಾ ಇದೆ. ಎನ್ ಸಿಪಿಯ ಶರದ್ ಪವಾರ್ ಅವರೊಂದಿಗೆ ಪಡ್ನವೀಸ್ ನಿರಂತರ ಸಂಪರ್ಕದಲ್ಲಿದ್ದಾರಂತೆ. ಹೇಗಿದ್ದರೂ ಮೊದಲೇ ಆದ ಹಾಗೆ ನಿಮ್ಮ ಪಾಲು ನಿಮಗೆ, ಸರ್ಕಾರದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತೆ ಅಂತೆಲ್ಲ ಚರ್ಚೆ ಮಾಡಿದ್ದಾರಂತೆ. ಹೀಗಾಗಿ ಶಿವಸೇನೆಯನ್ನು ಹೊರಗಿಟ್ಟೇ ಬಿಜೆಪಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುತ್ತಾ ಅನ್ನೋ ಮಾತುಗಳು ಕೇಳಿ ಬರ್ತಾ ಇದೆ. ಬಿಜೆಪಿಗೆ ಎನ್ ಸಿಪಿ ಬೆಂಬಲ ಕೊಡುತ್ತಾ, ಶರದ್ ಪವಾರ್ ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಯಾವ ನಿರ್ಧಾರ ಮಾಡ್ತಾರೆ ಅನ್ನೋದು ಮಹಾರಾಷ್ಟ್ರ ರಾಜಕಾರಣದಲ್ಲಿ ಈಗ ಕುತೂಹಲ ಸೃಷ್ಟಿಸಿರುವ ವಿಚಾರ.

ಉದ್ಧವ್ ಠಾಕ್ರೆ ಸಿಎಂ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗ್ತಾರಾ?
ಅಥವಾ ದೇವೇಂದ್ರ ಪಡ್ನವೀಸ್,ಪವಾರ್ ತಂತ್ರಕ್ಕೆ ಶರಣಾಗ್ತಾರಾ?
ಶಿವಸೈನಿಕರು,ಕೇಸರಿ ಪಡೆಯ ನಡುವೆ ಅಂತರ ಇನ್ನಷ್ಟು ಹೆಚ್ಚುತ್ತಾ?

ಈಗಿರುವ ಮೈತ್ರಿ ಮುರಿದುಕೊಂಡು ಹೊಸ ಮೈತ್ರಿ ಮಾಡಿಕೊಂಡು ಹಾಲಿ ಸಿಎಂ ಉದ್ಧವ್ ಠಾಕ್ರೆ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗ್ತಾರಾ ಅಥವಾ ದೇವೇಂದ್ರ ಪಡ್ನವೀಸ್ ತಂತ್ರದಿಂದ ಸ್ಥಾನ ಕಳೆದುಕೊಳ್ತಾರಾ. ಇದು ಈಗ ಮಹಾರಾಷ್ಟ್ರ ರಾಜಕಾರಣದಲ್ಲಿ ಚರ್ಚೆಯಾಗ್ತಾ ಇರುವ ಪ್ರಮುಖ ವಿಚಾರ. ಬಿಜೆಪಿ ಉನ್ನತ ನಾಯಕರೊಂದಿಗೆ ಮಾತುಕತೆ ನಡೆದಿರುವ ಪ್ರಕಾರ, ಇನ್ನು ಒಂದೂವರೆ ವರ್ಷ ಉದ್ಧವ್ ಠಾಕ್ರೆಯವರೇ ಸಿಎಂ ಆಗಿ ಮುಂದುವರೆಯಬಹುದು. ಆದ್ರೆ ಇದಕ್ಕೆ ದೇವೇಂದ್ರ ಪಡ್ನವೀಸ್ ಮಾಡಿರುವ ಪ್ಲಾನ್ ನಿಂದ ಹಿನ್ನಡೆ ಆಗ್ತಾ ಇದೆ. ಎನ್ ಸಿಪಿ ಜೊತೆ ಮೈತ್ರಿ ಆಗಿ ಬಿಟ್ಟರೆ ಆಗ ಉದ್ಧವ್ ಠಾಕ್ರೆ ಸಿಎಂ ಸ್ಥಾನ ಕಳೆದುಕೊಳ್ತಾರೆ. ಈ ಬಗ್ಗೆ ಮಹಾರಾಷ್ಟ್ರ ಬಿಜೆಪಿಯಲ್ಲೂ ಭಿನ್ನ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗ್ತಾ ಇದ್ದಾವೆ. ಭವಿಷ್ಯದ ದೃಷ್ಟಿಯಿಂದ ಶಿವಸೇನೆಯ ಜೊತೆಗೇ ಹೋಗುವುದು ಉತ್ತಮ ಅಂತ ಕೆಲವರು ಹೇಳ್ತಾ ಇದ್ರೆ ಇನ್ನು ಕೆಲವರು ಸರ್ಕಾರ ರಚಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.ಹೀಗಾಗಿ ಈ ಗೊಂದಲ ಮೊದಲು ಬಗೆ ಹರಿಯಬೇಕಾಗಿದೆ. ಏನೇ ಆದ್ರೂ ಮೋದಿ-ಅಮಿತ್ ಷಾ ಸೂಚನೆ ರವಾನಿಸಿ ಬಿಟ್ಟರೆ ಅವರು ಏನು ಹೇಳ್ತಾರೋ ಅದೇ ಆಗೋದು. ಮಹಾರಾಷ್ಟ್ರದಲ್ಲಿ ಬದಲಾವಣೆಯ ಗಾಳಿ ಬೀಸುವ ಮುನ್ಸೂಚನೆಯಂತೂ ಸಿಕ್ಕಿದೆ. ಮಳೆಗಾಲದಲ್ಲಿ ಗಾಳಿ ಬೀಸೋದು ಸಾಮಾನ್ಯ. ಮುಂಬೈನಲ್ಲಿ ಶುರುವಾಗಿರುವ ಮಳೆಯ ಜೊತೆ ರಾಜಕೀಯ ಬದಲಾವಣೆಯ ಗಾಳಿಯೂ ಬೀಸಬಹುದು.

ರಾಜಕಾರಣ ಅಂದ್ರೇನೇ ಹೀಗೆ. ಅದು ಯಾವಾಗ ಬೇಕಾದರೂ ದಿಕ್ಕು ಬದಲಿಸಬಹುದು. ದಿನ ಬೆಳಗಾಗೋದ್ರಲ್ಲಿ ಯಾರ್ಯಾರು ಅಧಿಕಾರಕ್ಕೆ ಏರುತ್ತಾರೋ,ಇನ್ಯಾರು ಇಳೀತಾರೊ ಗೊತ್ತಾಗಲ್ಲ. ಮಹಾರಾಷ್ಟ್ರದಲ್ಲೂ ಮುಂದೆ ಠಾಕ್ರೆ ಇಳೀತಾರೋ, ಪಡ್ನವೀಸ್ ಬರ್ತಾರೋ ಕೆಲವೇ ದಿನಗಳಲ್ಲಿ ಸ್ಪಷ್ಟವಾಗುತ್ತೆ.

The post ಮುಂಬೈ ಮೈತ್ರಿ ರಾಜಕೀಯ U-ಟರ್ನ್? ಕೇಸರಿ ಪಡೆ ಜೊತೆ ಮತ್ತೆ ಸೇರಿಕೊಳ್ತಾರಾ ಶಿವಸೈನಿಕರು? appeared first on News First Kannada.

Source: newsfirstlive.com

Source link