1953 ಕರ್ನಾಟಕ ಫಿಲಂಸ್‌ ಲಾಂಛನದಲ್ಲಿ ಗುಬ್ಬಿ ವೀರಣ್ಣನವರು ಎ.ವಿ.ಎಂ. ಜೊತೆಗೂಡಿ “ಬೇಡರ ಕಣ್ಣಪ್ಪ’ ಚಿತ್ರದ ಸಿದ್ಧತೆ ನಡೆದಿತ್ತು. ಹೆಚ್.ಎಲ್.ಎನ್‌.ಸಿಂಹ ಅವರೇ ನಿರ್ದೇಶಕರು. ನಾಯಕನನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂಬ ಚರ್ಚೆ ಭರದಿಂದ ಸಾಗಿತ್ತು. ರಂಗಭೂಮಿಯ ಅನೇಕ ನಾಯಕ ನಟರ ಹೆಸರುಗಳು ಹರಿದಾಡಿದವು. ಕೊನೆಗೂ ತೀವ್ರ ಪೈಪೋಟಿಯ ನಡುವೆಯೂ ಆ ಪಾತ್ರ ಮುತ್ತುರಾಜ್‌ ಅವರ ಪಾಲಾಯಿತು.

ಮುತ್ತುರಾಜ್‌ ಅವರ “ಕಣ್ಣಪ್ಪ’ನ ಪಾತ್ರ ನಿರ್ವಹಣೆ ಎಲ್ಲರ ಮೆಚ್ಚುಗೆ ಗಳಿಸಿತ್ತು ಎಂಬುದು ಹೇಳಲೇ ಬೇಕಾಗಿಲ್ಲ. ಕುಂಬಳಕಾಯಿ ಒಡೆಯುವಾಗ ಎಲ್ಲರ ಮುಖದಲ್ಲೂ ಹರ್ಷ ತುಂಬಿ ತುಳುಕಾಡುತ್ತಿದ್ದರೆ ಮುತ್ತುರಾಜು ಮೌನಕ್ಕೆ ಶರಣಾಗಿದ್ದರು. ಕಾರಣ ಅವರಿಗೆ ತಮ್ಮ ತಂದೆಯ ನೆನಪು ಕಾಡುತ್ತಿತ್ತು.

ಆ ಮೂಡ್‌ನಿಂದ ಆಚೆ ಬಂದದ್ದು ಮೇಯಪ್ಪನ್‌ ಚಿಟ್ಟಿಯಾರ್‌ ಅವರು “ರೊಂಬಾ ನಲ್ಲಾ ಆ್ಯಕ್ಟ್ ಪಣ್ಣಿರಕ್ಕೆ, ಮುತ್ತಪ್ಪಾ’ ಎಂದಾಗ. ಪಕ್ಕದಲ್ಲೇ ಇದ್ದ ನಿರ್ದೇಶಕ ಸಿಂಹ ಅವರಿಗೆ “ಮುತ್ತಪ್ಪಾ’ ಎಂಬ ಹೆಸರಿನಿಂದ ಕರೆದಿದ್ದು ಸರಿ ಎನಿಸಲಿಲ್ಲ. ಹೆಸರು ಬದಲಿಸಬೇಕೆಂದು ನಿಶ್ಚಯಿಸಿದರು. ಆಗ ಅವರಿಗೆ ನೆನಪಿಗೆ ಬಂದಿದ್ದೇ ರಾಜ್‌ ತಂದೆ ಪುಟ್ಟಸ್ವಾಮಯ್ಯನವರು.

ಅದೊಂದು ದಿನ ಮೈಸೂರಿನ ನವಜ್ಯೋತಿ ಸ್ಟುಡಿಯೋದಲ್ಲಿ ಮುತ್ತುರಾಜ್‌ ತಂದೆ ತಮ್ಮ ಮಗನನ್ನು ಪರಿಚಯಿಸುತ್ತಾ “ನೋಡಿ ನನ್ನ ಮಗ ರಾಜಕುಮಾರನಂತಿದ್ದಾನೆ’ ಎಂದಾಡಿದ ಮಾತುಗಳು. ಅಂದೇ, ಆಗಲೆ ಉದಯವಾಗಿದ್ದು “ರಾಜ್‌ಕುಮಾರ್‌’ ಎಂಬ ಧ್ರುವತಾರೆ, ನಟಸಾರ್ವಭೌಮ, ಗಾನಗಂಧರ್ವ. ಅಂದಿನಿಂದ ಮುತ್ತುರಾಜ್‌, ರಾಜ್‌ಕುಮಾರ್‌ ಆದರು.

ಸಿನೆಮಾ – Udayavani – ಉದಯವಾಣಿ
Read More