ಮುನಿಸಿಕೊಂಡ ವರುಣ; ಭಾರೀ ಮಳೆಗೆ ಜಲಾವೃತಗೊಂಡ 500 ಎಕರೆ ಜಮೀನು


ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ವರುಣನ ಅಬ್ಬರದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ತಗ್ಗು ಪ್ರದೇಶದಲ್ಲಿನ ಜಮೀನುಗಳು ಜಲಾವೃತಗೊಂಡು ಅನ್ನದಾತನನ್ನು ಸಂಕಷ್ಟಕ್ಕೆ ತಳ್ಳಿದೆ.

ನಿರಂತರ ಮಳೆಯಿಂದ ಹೊನ್ನೂರಿನ ಕೆರೆ ಕೋಡಿ ಬಿದ್ದು ಮಲ್ಲಶೆಟ್ಟಿಹಳ್ಳಿ, ಕೊಗ್ಗುನೂರು, ನರಸೀಪುರ, ಹೊನ್ನೂರು ಸೇರಿ ಇತರೆ ಗ್ರಾಮಗಳಲ್ಲಿ 500 ಕ್ಕೂ ಹೆಚ್ಚು ಎಕರೆ ಅಡಿಕೆ, ಮೆಕ್ಕೆಜೋಳ, ತೆಂಗು ಬೆಳೆದ ಜಮೀನುಗಳು ಜಲಾವೃತಗೊಂಡಿವೆ. ಜೊತೆಗೆ 300ಕ್ಕೂ ಅಧಿಕ ಬೋರ್ ವೇಲ್ ಗಳು ನೀರಿನಲ್ಲಿ ಮುಳುಗಡೆ ಹೊಂದಿವೆ.

ಇನ್ನು ಕೋಡಿ ಬಿದ್ದ ಪರಿಣಾಮ ಗ್ರಾಮಕ್ಕೆ ಸಂಚಾರ ಕಲ್ಪಿಸುವ ರಸ್ತೆಗಳು ಕೂಡ ಚಿಕ್ಕ ಕೆರೆಯಂತಾಗಿದ್ದು ಕೃಷಿ ಚಟುವಟಿಕೆಗೆ ನೀರಿನಲ್ಲೆ ಎತ್ತಿನ ಬಂಡಿ ತೆಗೆದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಜಮೀನಿಗೆ ಹೋಗಲು ರಸ್ತೆ ನಿರ್ಮಿಸಿ ಕೊಡುವಂತೆ ಹೊನ್ನೂರು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಮಳೆರಾಯ ಗ್ರಾಮಗಳಲ್ಲಿ ಇಷ್ಟೆಲ್ಲ ಅವಾಂತರ ಸೃಷ್ಟಿಸಿದ್ದರು ಕೂಡ ಸ್ಥಳಕ್ಕಾಗಮಿಸಿ ವಿಚಾರಿಸದ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಗರಂ ಆಗಿದ್ದಾರೆ.

News First Live Kannada


Leave a Reply

Your email address will not be published.