ದೇಶದಲ್ಲಿ ಬಹುತೇಕ ಕಡೆ ಅನ್ಲಾಕ್ ಮಾಡಲಾಗಿದೆ. ಎರಡನೇ ಅಲೆ ತಗ್ಗಿದ್ದರಿಂದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಈ ನಡುವೆ, ತಜ್ಞರು ಕೊಡುತ್ತಿರುವ ಎಚ್ಚರಿಕೆ ಮತ್ತೆ ಚಿಂತೆಗೆ ದೂಡ್ತಾ ಇದೆ. ಕೆಲವರು ಇನ್ನು ನಾಲ್ಕೇ ವಾರಗಳಲ್ಲಿ ಮೂರನೇ ಅಲೆ ಅಪ್ಪಳಿಸಬಹುದು ಅಂತ ಎಚ್ಚರಿಸಿದ್ರೆ, ಇನ್ನು ಕೆಲವರು ಆರರಿಂದ ಎಂಟು ವಾರಗಳಲ್ಲಿ ಅಪ್ಪಳಿಸಬಹುದು ಅಂತ ಹೇಳ್ತಿದಾರೆ.

ದೇಶದಲ್ಲಿ ಕೊರೊನಾ ಎರಡನೇ ಅಲೆ ತಗ್ಗಿದೆ. ಕಳೆದ ಒಂದು ವಾರದಿಂದ 1 ಲಕ್ಷಕ್ಕೂ ಕಡಿಮೆ ಹೊಸ ಕೇಸ್ ಗಳು ಬರ್ತಾ ಇವೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿಮುಖವಾಗ್ತಾ ಇದೆ. ಎಲ್ಲಾ ಕಡೆ ಬೆಡ್ ಖಾಲಿ ಇದೆ ಅನ್ನೋ ವರದಿಗಳು ಬರ್ತಾ ಇವೆ. ಹೀಗಾಗಿ ದೇಶದ ಪ್ರಮುಖ ಮಹಾನಗರಗಳಲ್ಲಿ ಬಹುತೇಕ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಇದರಿಂದ ಮುಂಬೈ, ದೆಹಲಿ ಈಗಾಗಲೇ ಓಪನ್ ಆಗಿದ್ದರೆ, ಬೆಂಗಳೂರು ಕೂಡ ಸೋಮವಾರದಿಂದ ಹೆಚ್ಚು ಕಡಿಮೆ ಓಪನ್ ಆಗುತ್ತಿದೆ. ದೇಶದ ಎಲ್ಲಾ ಕಡೆ ಸಾರಿಗೆ ಸಂಚಾರ ಎಂದಿನಂತೆ ಶುರುವಾಗಲಿದೆ. ಇನ್ನು ಟ್ರೇನ್, ಫ್ಲೈಟ್ಗಳು ಕೂಡ ಎಂದಿನಂತೆ ಸಂಚರಿಸುತ್ತಿವೆ. ಇಷ್ಟರ ನಡುವೆ ಮತ್ತೊಂದು ಸವಾಲು ಎದುರಾಗಿದೆ. ಅದೇ ಮೂರನೇ ಅಲೆಯ ಆತಂಕ.

ಈಗಾಗಲೇ ತಜ್ಞರು ಮೂರನೇ ಅಲೆಯ ಬಗ್ಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಾ ಇದ್ದಾರೆ. ಯಾವುದೇ ಸಂದರ್ಭದಲ್ಲಾದರೂ ಮೂರನೇ ಅಲೆ ದೇಶದಲ್ಲಿ ಅಪ್ಪಳಿಸಬಹುದು ಅನ್ನುವ ಅಭಿಪ್ರಾಯ ವ್ಯಕ್ತಪಡಿಸ್ತಾ ಇದ್ದಾರೆ. ಹೀಗಾಗಿ ಮೂರನೇ ಅಲೆ ಬರದಂತೆ ತಡೆಯೋದು ಹೇಗೆ ಅನ್ನುವ ಚಿಂತೆ ಶುರುವಾಗಿದೆ. ಎಲ್ಲಾ ಕಡೆ ನಿರ್ಬಂಧ ತೆರವುಗೊಳಿಸಿ ಮತ್ತೆ ಜನಸಂಚಾರ ಹೆಚ್ಚಾದರೆ ಕೊರೊನಾ ಮತ್ತೆ ಏರುಮುಖವಾಗದಂತೆ ನೋಡಿಕೊಳ್ಳೋದು ಕಷ್ಟ.

ಕಳೆದ 24 ಗಂಟೆಗಳಲ್ಲಿ ಅತಿ ಕಡಿಮೆ ಕೇಸ್ ಪತ್ತೆ, ಮೃತರ ಸಂಖ್ಯೆಯಲ್ಲೂ ಇಳಿಕೆ
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 53,256 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 1422 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ 7,02,887 ಸಕ್ರಿಯ ಪ್ರಕರಣಗಳಿವೆ. ಇದು ನಿಜಕ್ಕೂ ಸಮಧಾನಕರ ಸಂಗತಿ. ಕಳೆದ 88 ದಿನಗಳಲ್ಲೇ ಕಡಿಮೆ ಕೇಸ್ ದಾಖಲಾಗ್ತಾ ಇದೆ. ಇದರಿಂದ ದೇಶವಾಸಿಗಳು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಆದರೆ ದೇಶದ ಕೆಲವು ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳು ಇನ್ನು ಕಡಿಮೆಯಾಗಬೇಕಾಗಿದೆ. ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಸಕ್ರಿಯ ಪ್ರಕರಣಗಳಿದ್ದಾವೆ ಅನ್ನೋದನ್ನ ನೋಡೋಣ.

ಸಕ್ರಿಯ ಪ್ರಕರಣ ಎಲ್ಲೆಲ್ಲಿ ಎಷ್ಟೆಷ್ಟು?

 • ಮಹಾರಾಷ್ಟ್ರ -1,35,708
 • ಕರ್ನಾಟಕ -1,30,894
 • ಕೇರಳ -1,07,300
 • ತಮಿಳುನಾಡು -78,780
 • ಆಂಧ್ರಪ್ರದೇಶ -65,244

ಈ ರಾಜ್ಯಗಳಿಗೆ ಹೋಲಿಸಿದರೆ ದೆಹಲಿ, ಉತ್ತರ ಪ್ರದೇಶ ರಾಜ್ಯದಲ್ಲಿ ಅತಿ ಕಡಿಮೆ ಸಕ್ರಿಯ ಪ್ರಕರಣಗಳಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಲಿ 2372 ಸಕ್ರಿಯ ಪ್ರಕರಣಗಳು ಮಾತ್ರ ಇವೆ. ಇನ್ನು ಉತ್ತರ ಪ್ರದೇಶದಲ್ಲಿ 4957 ಸಕ್ರಿಯ ಪ್ರಕರಣಗಳಿವೆ. ಇದರಿಂದಾಗಿ ದೆಹಲಿ, ಉತ್ತರ ಪ್ರದೇಶ ಜನತೆ ನೆಮ್ಮದಿಯಿಂದ ಇರುವಂತಾಗಿದೆ. ಈ ಎರಡು ರಾಜ್ಯಗಳಲ್ಲಿ ಲಾಕ್ಡೌನ್ ಹೆಚ್ಚು ಕಡಿಮೆ ಕಂಪ್ಲೀಟ್ ಆಗಿ ತೆರವು ಮಾಡಲಾಗಿದೆ. ಹೀಗಾಗಿ ಮತ್ತೆ ಇಲ್ಲಿ ಪ್ರಕರಣಗಳು ಹೆಚ್ಚದಂತೆ ನೋಡಿಕೊಳ್ಳಬೇಕಾಗಿದೆ.

ವಾಣಿಜ್ಯ ನಗರಿ ಮುಂಬೈನಲ್ಲೂ ಹೊಸ ಕೇಸ್ ಕಡಿಮೆ
4ನೇ ವಾರಕ್ಕೇ 3ನೇ ಅಲೆ ಅಂತ ತಜ್ಞರ ಎಚ್ಚರಿಕೆ

ಮಹಾರಾಷ್ಟ್ರದಲ್ಲಿ ದೇಶದಲ್ಲೇ ಗರಿಷ್ಠ ಕೇಸ್ ದಾಖಲಾಗ್ತಾ ಇತ್ತು. ಹೀಗಾಗಿ ಮಹಾನಗರ ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಕಂಪ್ಲೀಟ್ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಆದ್ರೆ ಈಗ ಕೇಸ್ ಇಳಿಮುಖವಾಗಿದ್ದರಿಂದ ವಾಣಿಜ್ಯ ನಗರಿ ಮುಂಬೈ ಮತ್ತೆ ಆ್ಯಕ್ಟೀವ್ ಆಗಿದೆ. ಆದರೆ, ಮಹಾರಾಷ್ಟ್ರ ಸರ್ಕಾರಕ್ಕೆ ಅಲ್ಲಿನ ಕೋವಿಡ್ ಕಾರ್ಯಪಡೆಯಲ್ಲಿರುವ ಸದಸ್ಯರು ಈಗಾಗಲೇ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಮುನ್ನೆಚ್ಚರಿಕೆ ಮರೆತರೆ ನಾಲ್ಕೇ ವಾರಗಳಲ್ಲಿ ಮೂರನೇ ಅಲೆ ಅಪ್ಪಳಿಸಬಹುದು ಎಂದು ತಿಳಿಸಿದ್ದಾರೆ. ಇದರಿಂದಾಗಿ ಮಹಾರಾಷ್ಟದಲ್ಲಿ ಮತ್ತೆ ಆತಂಕ ಶುರುವಾಗಿದೆ. ಲಾಕ್ಡೌನ್ ಹಿಂಪಡೆದ ಬಳಿಕ ಜನಸಂಚಾರ ಹೆಚ್ಚಾಗಿದ್ದು ಮತ್ತೆ ಕೊರೊನಾ ಹರಡಲು ಶುರುವಾಗುತ್ತಾ? ಅನ್ನೋ ಚಿಂತೆ ಆರಂಭವಾಗಿದೆ. ಹೀಗಾಗಿ ಹಲವು ಕಡೆ ಕೆಲವು ನಿರ್ಬಂಧಗಳನ್ನು ಮುಂದುವರೆಸಲು ಮತ್ತು ಕೊರೊನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲು ಸರ್ಕಾರ ಸೂಚನೆ ನೀಡಿದೆ.

6 ರಿಂದ 8 ವಾರಗಳಲ್ಲಿ ದೇಶದಲ್ಲಿ 3ನೇ ಅಲೆ ಅಪ್ಪಳಿಸಬಹುದು
ಏಮ್ಸ್ ನಿರ್ದೇಶಕರಿಂದ ಈಗಾಗಲೇ ಎಚ್ಚರಿಕೆ ಸಂದೇಶ ರವಾನೆ

ದೇಶದಲ್ಲಿ ಎರಡನೇ ಅಲೆ ತಗ್ಗುತ್ತಿರುವ ಕಾರಣದಿಂದಾಗಿ ಎಲ್ಲಾ ಕಡೆ ಅನ್ ಲಾಕ್ ಮಾಡಲಾಗ್ತಾ ಇದೆ. ಇದರಿಂದ ಮಹಾನಗರಗಳಲ್ಲಿ ಜನಸಂದಣಿ ಮತ್ತೆ ಹೆಚ್ಚಾಗ್ತಾ ಇದೆ. ಇದು ಲಾಕ್ಡೌನ್ ಮಾಡಿದ್ದಾಗ ಗ್ರಾಮಾಂತರ ಪ್ರದೇಶಗಳಿಗೆ ಹೋದವರು ಮತ್ತೆ ನಗರಗಳತ್ತ ಮುಖ ಮಾಡಿದ್ದಾರೆ. ಇದರಿಂದ ಲಕ್ಷಾಂತರ ಜನ ನಗರ ಪ್ರದೇಶಗಳಿಗೆ ಮತ್ತೆ ವಾಪಸ್ ಆಗ್ತಾರೆ. ಮಹಾನಗರಗಳಲ್ಲಿ ಎಲ್ಲಾ ಚಟುವಟಿಕೆಗಳು ಆರಂಭವಾದರೆ, ಜನಸಂದಣಿ ನಿಯಂತ್ರಣ ಮಾಡೋದು ಕಷ್ಟ. ಕೊರೊನಾ ಮತ್ತೆ ಏರಗತಿ ಕಾಣೋದಕ್ಕೆ ಬೇರೆ ಕಾರಣಗಳು ಬೇಕಾಗಿಲ್ಲ. ಹೀಗಾಗಿ ಕೋವಿಡ್‌ ಮಾರ್ಗಸೂಚಿಯನ್ನು ಅನುಸರಿಸದಿದ್ದರೆ ಮತ್ತು ಜನಸಂದಣಿಯನ್ನು ತಡೆಯದಿದ್ದರೆ ಮುಂದಿನ ಆರರಿಂದ ಎಂಟು ವಾರಗಳಲ್ಲಿ ಮತ್ತೊಂದು ಅಲೆಯು ಆರಂಭಗೊಳ್ಳಬಹುದು ಅಂತ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ನಿರ್ದೇಶಕ ರಣದೀಪ್ ಗುಲೆರಿಯಾ ಅವರೇ ಎಚ್ಚರಿಕೆ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ಲಸಿಕೆ ಪಡೆಯುವವರೆಗೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು, ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನು ಅನುಸರಿಸಬೇಕು ಅಂತ ಅವರು ಸಲಹೆ ನೀಡಿದ್ದಾರೆ.

ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಂತ ಹೆಚ್ಚಾದರೆ ಕಠಿಣ ಕ್ರಮ
ಸೋಂಕಿತರು ಹೆಚ್ಚಿದ್ದಲ್ಲಿ ಕಠಿಣ ನಿರ್ಬಂಧ ಹೇರಲು ಸಲಹೆ
ಸ್ಥಳೀಯವಾಗಿ ಲಾಕ್ ಡೌನ್ ಮಾಡಲು ತಜ್ಞರಿಂದ ಸೂಚನೆ

ಹಾಲಿ ದೇಶದ ಬಹುತೇಕ ಕಡೆ ಪ್ರತಿನಿತ್ಯ ಬರ್ತಾ ಇರುವ ಹೊಸ ಕೇಸ್ ಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗ್ತಾ ಇದೆ. ಎಲ್ಲಿ ಕೋವಿಡ್ ದೃಢಪಡುತ್ತಿರುವ ಪ್ರಮಾಣದ ಶೇಕಡಾ 5ಕ್ಕಿಂತ ಕಡಿಮೆ ಆಗಿದ್ಯೋ ಅಲ್ಲೆಲ್ಲ ಅನ್ಲಾಕ್ ಮಾಡಲಾಗ್ತಾ ಇದೆ. ಒಂದು ವೇಳೆ ಸೋಂಕಿತರ ಪ್ರಮಾಣ ಹೆಚ್ಚಾದರೆ, ಅಂದ್ರೆ ಪಾಸಿಟಿವಿಟಿ ಶೇಕಡಾ 5ಕ್ಕಿಂತ ಹೆಚ್ಚಿದರೆ ಅಂತಹ ಪ್ರದೇಶಗಳಲ್ಲಿ ಕಠಿಣ ನಿರ್ಬಂಧ ಹೇರಬೇಕು ಅಂತ ತಜ್ಞರು ಸಲಹೆ ನೀಡಿದ್ದಾರೆ. ಇಂತಹ ಕಡೆಗಳಲ್ಲಿ ಸ್ಥಳೀಯವಾಗಿ ಲಾಕ್ ಡೌನ್ ಹೇರುವುದು ಸೂಕ್ತ ಅಂತಾನೂ ಹೇಳಿದ್ದಾರೆ. ಹೀಗಾಗಿ ಕರ್ನಾಟಕದಲ್ಲೂ ಕೂಡ ಇನ್ನೂ ಅನೇಕ ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲು ನಿರ್ಧಾರ ಮಾಡಿಲ್ಲ.


ವ್ಯಾಕ್ಸಿನೇಷನ್ ಡ್ರೈವ್ ಚುರುಕುಗೊಂಡರೆ ಆತಂಕ ಕಡಿಮೆ
ಗುರಿ ತಲುಪಲು ಇನ್ನು ಕನಿಷ್ಠ 4 ರಿಂದ 6 ತಿಂಗಳು ಅತ್ಯಗತ್ಯ

ಮೂರನೇ ಅಲೆ ಅಪ್ಪಳಿಸುವ ಮುನ್ನ ದೇಶದ ಅರ್ಧದಷ್ಟು ಜನರಿಗಾದರೂ ಲಸಿಕೆ ಹಾಕಿಸಿದರೆ ಅಷ್ಟರ ಮಟ್ಟಿಗೆ ಆತಂಕ ಕಡಿಮೆಯಾಗಲಿದೆ ಅನ್ನೋದೇ ತಜ್ಞರ ಅಭಿಪ್ರಾಯ. ದೇಶದಾದ್ಯಂತ ಈವರೆಗೆ 28 ಕೋಟಿ ಡೋಸ್‌ ಕೋವಿಡ್ ಲಸಿಕೆಯನ್ನು ಹಾಕಲಾಗಿದೆ .ಕೋವಿಡ್ ಲಸಿಕೆ ಪಡೆದ ಬಳಿಕ ಸೋಂಕು ತಗುಲಿದರೂ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳು ಶೇಕಡಾ 75-80ರಷ್ಟು ಕಡಿಮೆಯಾಗಿರುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಹೀಗಾಗಿ ವ್ಯಾಕ್ಸಿನೇಷನ್ ಡ್ರೈವ್ ಚುರುಕುಗೊಳಿಸುವುದೊಂದೇ ಮೂರನೇ ಅಲೆ ಆತಂಕ ಕಡಿಮೆ ಮಾಡಿಕೊಳ್ಳೋದಕ್ಕೆ ಇರುವ ಪರಿಹಾರ ಎನ್ನಲಾಗಿದೆ.

ವ್ಯಾಕ್ಸಿನೇಷನ್ ಎಲ್ಲೆಲ್ಲಿ ಎಷ್ಟೆಷ್ಟು?

 • ಮಹಾರಾಷ್ಟ್ರ 2.71 ಕೋಟಿ ಡೋಸ್
 • ಉತ್ತರ ಪ್ರದೇಶ 2.5 ಕೋಟಿ ಡೋಸ್
 • ಗುಜರಾತ್ 2.15 ಕೋಟಿ ಡೋಸ್‌
 • ರಾಜಸ್ಥಾನ 2.06 ಕೋಟಿ ಡೋಸ್
 • ಪಶ್ಚಿಮ ಬಂಗಾಳ 1.86 ಕೋಟಿ ಡೋಸ್
 • ಕರ್ನಾಟಕ 1.80 ಕೋಟಿ ಡೋಸ್‌

ಲಸಿಕೆ ಪಡೆದುಕೊಂಡವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ. ಲಸಿಕೆ ಪಡೆದುಕೊಂಡವರಿಗೆ ಕೊರೊನಾ ಬಂದರೂ ಅಪಾಯ ಕಡಿಮೆ. ಹೀಗಾಗಿ ಲಸಿಕೆ ಹಾಕಿಸಿಕೊಂಡಷ್ಟು ಸೇಫ್. ಆದರೆ, ದೇಶದಲ್ಲಿ ಈವರೆಗೆ 28 ಕೋಟಿ ಜನರಿಗೆ ಮಾತ್ರ ಲಸಿಕೆ ದೊರೆತಿದೆ. ಇನ್ನು ಮೂರು ಪಟ್ಟು ಜನರಿಗೆ ಲಸಿಕೆ ಡೋಸ್ ಸಿಗಬೇಕಾಗಿದೆ.

ಕೊರೊನಾ 3ನೇ ಅಲೆಗೆ ಮುನ್ನವೇ ಮತ್ತೊಂದು ಆಘಾತ
ರೋಗ ನಿರೋಧಕ ಶಕ್ತಿಯನ್ನು ಬೇಧಿಸುತ್ತಿದೆ ಡೆಲ್ಟಾ ವೈರಸ್

ಮೂರನೇ ಅಲೆಗೆ ಮುನ್ನವೇ ಮತ್ತೊಂದಿಷ್ಟು ಆಘಾತಕಾರಿ ನ್ಯೂಸ್ ಗಳು ಕೂಡ ಬರ್ತಾ ಇದಾವೆ. ಇಷ್ಟು ದಿನ ಒಮ್ಮೆ ಕೊರೊನಾ ಬಂದವರಿಗೆ ಮತ್ತೆ ಬೇಗ ಕೊರೊನಾ ಬರಲ್ಲ ಅಂತ ಹೇಳಲಾಗ್ತಾ ಇತ್ತು. ಕಾರಣ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗೋದ್ರಿಂದ ಸೋಕು ಮರುಕಳಿಸುವ ಸಾಧ್ಯತೆ ಕಡಿಮೆಯಾಗಿತ್ತು. ಆದರೆ, ಈಗ ಅದು ಸುಳ್ಳಾಗ್ತಾ ಇದೆ. ಕಾರಣ ರೂಪಾಂತರಿ ವೈರಸ್. ರೂಪಾಂತರಿ ತಳಿಯ ವೈರಸ್ ರೋಗ ನಿರೋಧಕ ಶಕ್ತಿಯನ್ನೂ ಬೇಧಿಸುತ್ತಿವೆ. ಇಂತಹದೊಂದು ಪ್ರಕರಣ ಅಹ್ಮದಾಬಾದ್ ನಿಂದ ವರದಿಯಾಗಿದೆ.

ಅಹಮದಾಬಾದ್ನ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರಿಗೆ ಒಮ್ಮೆ ಕೊರೊನಾ ಬಂದು ಗುಣವಾಗಿ 30 ದಿನಗಳ ಒಳಗೇ ಮತ್ತೆ ಕೊರೊನಾ ಬಂದಿದೆ. ಮೊದಲ ಬಾರಿಗೆ ಮನೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ ಇವರು, ಎರಡನೇ ಬಾರಿಗೆ ಸೋಂಕಿಗೆ ತುತ್ತಾದಾಗ ಆಸ್ಪತ್ರೆಗೆ ದಾಖಲಾಗಬೇಕಾಯ್ತು. ಇದಕ್ಕೆ ಡೆಲ್ಟಾ ವೈರಸ್ ಪ್ರಬೇಧವೇ ಕಾರಣ ಅಂತ ವೈದ್ಯಕೀಯ ವರದಿಗಳು ಹೇಳ್ತಾ ಇವೆ. ಹೀಗಾಗಿಬಿಟ್ಟರೆ ರೂಪಾಂತರಿ ತಳಿಗಳು ಮುಂದೆಷ್ಟು ಗಂಡಾಂತರ ತರಬಹುದು ಅನ್ನೋದನ್ನು ಊಹಿಸಬಹುದು. ರೋಗ ನಿರೋಧಕ ಶಕ್ತಿಯನ್ನೇ ಬೇಧಿಸಿ ಸೋಂಕು ತಗುಲಲು ಶುರುವಾದರೆ ಮುಂದೆ ಇನ್ನಷ್ಟು ಅಪಾಯ ಎದುರಿಸಬೇಕಾಗುತ್ತದೆೆ.

3ನೇ ಅಲೆ ವೇಳೆಗೆ ಇನ್ನೆಷ್ಟು ರೂಪಾಂತರಿಗಳು ಬರುತ್ವೋ?
ಈಗಲೇ ಹಲವು ದೇಶಗಳಲ್ಲಿ ಹಲವು ರೂಪಾಂತರಿ ತಳಿ ಪತ್ತೆ
ಭಾರತದಲ್ಲಿ ಡೆಲ್ಟಾ, ಡೆಲ್ಟಾ ಪ್ಲಸ್ ರೂಪಾಂತರಿಯದ್ದೇ ಆತಂಕ

ಈಗಾಗಲೇ ಕೊರೊನಾ ವೈರಸ್ ಹಲವು ರೂಪಾಂತರಿ ತಳಿಗಳನ್ನು ಸೃಷ್ಟಿಸಿಕೊಂಡಿದೆ. ಮೊದಲನೇ ಅಲೆಗಿಂತ ಎರಡನೇ ಅಲೆ ದೊಡ್ಡ ಆಘಾತ ಕೊಟ್ಟಿದ್ದು ಇದೇ ಕಾರಣಕ್ಕೆ. ಈಗ ಎರಡನೇ ಅಲೆಗಿಂತ ಮೂರನೇ ಅಲೆ ಇನ್ನಷ್ಟು ಭೀಕರವಾಗಿರುತ್ತಾ ಅನ್ನೋ ಆತಂಕ ಶುರುವಾಗಿದೆ. ಹಲವು ದೇಶಗಳಲ್ಲಿ ರೂಪಾಂತರಿ ತಳಿಗಳು ಸೃಷ್ಟಿಯಾಗಿದ್ದು ಎಲ್ಲಿಂದ ಎಲ್ಲಿಗೆ ಹರಡುತ್ತೆ ಅನ್ನೋದನ್ನು ಊಹಿಸೋದಕ್ಕೂ ಸಾಧ್ಯವಾಗಲ್ಲ. ಆಫ್ರಿಕಾದ ಬೀಟಾ, ಬ್ರಿಟನ್ನಿನ ಆಲ್ಫಾ, ಬ್ರೆಜಿಲ್ ನ ಗಾಮಾ ಮತ್ತು ಝೀಟಾ, ಅಮೆರಿಕದ ಎಪ್ಸಿಲಾನ್ ಮತ್ತು ಲೋಟಾ, ಫಿಲಿಫೈನ್ಸ್ ನ ಥೀಟಾ, ಪೆರುವಿನ ಲಾಂಬ್ಡಾ ಹೀಗೆ ಹತ್ತು ಹಲವು ರೂಪಾಂತರಿ ಕೊರೊನಾ ತಳಿಗಳು ಭೀತಿ ಹುಟ್ಟಿಸ್ತಾ ಇವೆ. ಭಾರತದಲ್ಲಿ ಸದ್ಯಕ್ಕೆ ಆತಂಕ ಹೆಚ್ಚಿಸ್ತಾ ಇರೋದು ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ವೈರಸ್. ಡೆಲ್ಟಾ ಪ್ಲಸ್ ವೈರಸ್ ಈಗಾಗಲೇ ಹಲವು ಜನರಲ್ಲಿ ಪತ್ತೆಯಾಗಿದ್ದು ಇದು ಎಷ್ಟರ ಮಟ್ಟಿಗೆ ಅಪಾಯಕಾರಿ ಎಂಬುದು ಇನ್ನಷ್ಟೇ ಅಧ್ಯಯನಗಳಿಂದ ಗೊತ್ತಾಗಬೇಕಾಗಿದೆ. ಹೀಗಾಗಿ ಮೂರನೇ ಅಲೆಯಲ್ಲಿ ಹೆಚ್ಚು ವೇಗವಾಗಿ ಹರಡುವ ಮತ್ತು ಅಪಾಯಕಾರಿಯಾದ ವೈರಸ್ ಅಟ್ಯಾಕ್ ಮಾಡಿದರೆ ಗಂಡಾಂತರ ತಪ್ಪಿದ್ದಲ್ಲ. ಮುಂದೆ ಈ ಕೊರೊನಾದಿಂದ ಇನ್ನೆಷ್ಟು ಸಂಕಷ್ಟ ಎದುರಿಸಬೇಕೋ ಈಗಲೇ ಅಂದಾಜು ಮಾಡಲು ಆಗುತ್ತಿಲ್ಲ.

ಮೂರನೇ ಅಲೆ ಬಂದೇ ಬರುತ್ತೆ ಅನ್ನೋದು ತಜ್ಞರ ಮಾತುಗಳಿಂದ ಖಚಿತವಾಗ್ತಾ ಇದೆ. ಆದ್ರೆ ಇದನ್ನು ಹೇಗೆ ಎದುರಿಸೋದು, ಹೇಗೆ ನಿಯಂತ್ರಿಸೋದು ಅಂತ ಈಗಿನಿಂದಲೇ ತಯಾರಿ ಮಾಡಿಕೊಳ್ಳಲೇಬೇಕು. ಇಲ್ಲವಾದರೆ ಎರಡನೆ ಅಲೆಯಲ್ಲಿ ಎದುರಿಸಿದ ಆಘಾತವನ್ನು ಮತ್ತೆ ಎದುರಿಸಬೇಕಾಗುತ್ತದೆ.

The post ಮುನ್ನೆಚ್ಚರಿಕೆ ಮರೆತರೆ ನಾಲ್ಕೇ ವಾರಗಳಲ್ಲಿ 3ನೇ ಕೊರೊನಾ ಅಲೆ, ತಡೆಯಲು ಇದೊಂದೇ ಪರಿಹಾರ -ತಜ್ಞರ ಎಚ್ಚರಿಕೆ appeared first on News First Kannada.

Source: newsfirstlive.com

Source link