ಮುನ್ಸಿಪಲ್ ಕಾರ್ಪೋರೇಷನ್‌ಗಳಲ್ಲಿ ಇಂಟರ್​ನೆಟ್​ ವಿಸ್ತರಣೆಗೆ ರಾಜ್ಯ ಸರ್ಕಾರದಿಂದ RoW ನೀತಿ ಜಾರಿ: ಸಿಒಎಐ ಶ್ಲಾಘನೆ | RoW Policy Implementation By Karnataka State Government On Internet Expansion In Municipal Corporations COAI Applauds


ಮುನ್ಸಿಪಲ್ ಕಾರ್ಪೋರೇಷನ್‌ಗಳಲ್ಲಿ ಇಂಟರ್​ನೆಟ್​ ವಿಸ್ತರಣೆಗೆ ರಾಜ್ಯ ಸರ್ಕಾರದಿಂದ RoW ನೀತಿ ಜಾರಿ: ಸಿಒಎಐ ಶ್ಲಾಘನೆ

ಕರ್ನಾಟಕ ಬಾವುಟ (ಸಾಂದರ್ಭಿಕ ಚಿತ್ರ)

ಬೆಂಗಳೂರು: ರಾಜ್ಯದ ಎಲ್ಲ ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಟೆಲಿಕಾಂ ಟವರ್ ಹಾಗೂ ಇಂಟರ್​ನೆಟ್ ವಿಸ್ತರಿಸುವ (Tower and Internet expansion) ಸಂಬಂಧ ರಾಜ್ಯ ಸರ್ಕಾರ RoW ನೀತಿಯ ಅಧಿಸೂಚನೆ ಹೊರಡಿಸಿದ್ದು, ಭಾರತೀಯ ದೂರ ಸಂಪರ್ಕ ಉದ್ಯಮದ ಪ್ರಾತಿನಿಧಿಕ ಸಂಸ್ಥೆಯಾದ ಸಿಒಎಐ ಅಭಿನಂದಿಸಿದೆ. RoW ನೀತಿಯ ಪ್ರಕಾರ, ಟೆಲಿಕಾಂ ಟವರ್ ಹಾಗೂ ಓಎಫ್‌ಸಿ ಕೇಬಲ್‌ಗಳನ್ನು ಎಲ್ಲ ನಗರ ಪ್ರದೇಶ, ಮುನ್ಸಿಪಲ್ ಕೌನ್ಸಿಲ್‌ಗಳು, ಟೌನ್ ಮುನ್ಸಿಪಾಲ್ ಕೌನ್ಸಿಲ್‌ಗಳು, ಪಟ್ಟಣ ಪಂಚಾಯತ್‌ಗಳಲ್ಲಿ ಎಳೆಯಲು ಅವಕಾಶ ಕಲ್ಪಿಸಿದೆ. ಈ ಮೂಲಕ ಡಿಜಿಟಲ್ ಇಂಡಿಯಾಗೆ ಇಂಟರ್​ನೆಟ್ ವ್ಯವಸ್ಥೆಯನ್ನು ಬಲಗೊಳಿಸಲು ರಾಜ್ಯ ಸರ್ಕಾರದ ನಡೆಯನ್ನು ಸಿಒಎಐನ ಮಹಾನಿರ್ದೇಶಕ ಡಾ.ಎಸ್.ಪಿ. ಕೊಚ್ಚರ್ ಶ್ಲಾಘಿಸಿದ್ದಾರೆ. ಈ ಹಿಂದೆ ಆಪ್ಟಿಕಲ್ ಫೈಬರ್ ನಿಯೋಜನೆ, ಟವರ್ ನಿರ್ಮಾಣ, ಟವರ್ ಸೆಲ್ ನಿರ್ಮಾಣ ಸೇರಿದಂತೆ ಪ್ರತಿಯೊಂದಕ್ಕೂ ಪ್ರತ್ಯೇಕ ಶುಲ್ಕ ಪಾವತಿಸಬೇಕಿತ್ತು. ಆದರೀಗ ಈ ನಿಯಮವನ್ನು ಬದಲಿಸಿದ್ದು, ಟೆಲಿಕಾಂ ಟವರ್, ಓಎಫ್‌ಸಿ ಕೇಬಲ್ ಎಳೆಯುವ ಪ್ರತಿ ಅಪ್ಲಿಕೇಷನ್‌ಗೆ 10 ಸಾವಿರ ರೂಪಾಯಿ ನಿಗದಿ ಮಾಡಿದೆ. ಈ ನೂತನ ನಿಯಮದ ಪ್ರಕಾರ, ಒಂದೇ ಬಾರಿಗೆ ಶುಲ್ಕ ಪಾವತಿಸಲು ಅನುವು ಮಾಡಿಕೊಡಲಾಗಿದೆ.

ವರ್ಕ್‌ ಫ್ರಂ ಹೋಮ್‌ನಿಂದಾಗಿ ಬಹುತೇಕರು ತಮ್ಮ ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ, ಆನ್‌ಲೈನ್ ಕ್ಲಾಸ್‌ನಿಂದಾಗಿ ಮಕ್ಕಳು ಮನೆಯಲ್ಲೇ ಇಂಟರ್​ನೆಟ್ಗೆ ಮೊರೆ ಹೋಗಬೇಕಿದೆ. ಈ ಎಲ್ಲದ್ದಕ್ಕೂ ಹೆಚ್ಚು ಸ್ಪೀಡ್ ಇರುವ ಇಂಟರ್‌ನೆಟ್ ಅವಶ್ಯಕ. ಇದೀಗ ಎಲ್ಲೆಡೆ ಅಂತರ್ಜಾಲ ಟವರ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿರುವುದು ಜನರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಹೇಳಿದ್ದಾರೆ.

ಕರ್ನಾಟಕವು ಸುಮಾರು 6.9 ಕೋಟಿ ಇಂಟರ್​ನೆಟ್ ಚಂದಾದಾರರನ್ನು ಹೊಂದಿದ್ದು, ಸುಮಾರು ಶೇ 103ರಷ್ಟು ಟೆಲಿ ಸಾಂದ್ರತೆಯನ್ನು ಹೊಂದಿದೆ. 44,000 ಟೆಲಿಕಾಂ ಟವರ್‌ಗಳು ಮತ್ತು ಅಂದಾಜು 1.5 ಲಕ್ಷ ಕಿ.ಮೀ. ಸಂಚಿತ ಆಪ್ಟಿಕಲ್ ಫೈಬರ್ ಕೇಬಲ್ ಹೊಂದಲಾಗಿದೆ. ಡಿಸೆಂಬರ್ 2024ರ ವೇಳೆಗೆ 90,000 ಟೆಲಿಕಾಂ ಟವರ್‌ಗಳು ಮತ್ತು ನಾಲ್ಕು ಪಟ್ಟು ಹೆಚ್ಚು ಟೆಲಿಕಾಂ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ವಿಸ್ತರಿಸಲಾಗುವುದು.

TV9 Kannada


Leave a Reply

Your email address will not be published. Required fields are marked *