ಮುಸ್ಲಿಮರ ವೋಟಿನಿಂದ ಕರ್ನಾಟಕ ಗೆಲ್ಲಲು ಆಗಲ್ಲ, ಕಾಂಗ್ರೆಸ್ ಉದ್ಧಾರ ಆಗಲ್ಲ: ಈಶ್ವರಪ್ಪ | Muslim Votes Alone is Not Sufficient to win Karnataka Says BJP Leader KS Eshwarappa


ಮುಸ್ಲಿಮರ ವೋಟಿನಿಂದ ಕರ್ನಾಟಕ ಗೆಲ್ಲಲು ಆಗಲ್ಲ, ಕಾಂಗ್ರೆಸ್ ಉದ್ಧಾರ ಆಗಲ್ಲ: ಈಶ್ವರಪ್ಪ

ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಜಿಲ್ಲೆಯ ಬಿಜೆಪಿ ಕಾರ್ಯಕಾರಿಣಿ ಸಭೆ ಶನಿವಾರ ನಗರದಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಕುಮಾರ ಬಂಗಾರಪ್ಪ, ಶಾಸಕ ಆಶೋಕ್ ನಾಯ್ಕ್, ಎಂಎಲ್​ಸಿಗಳಾದ ರುದ್ರೇಗೌಡ, ಡಿ.ಎಸ್.ಆರುಣ್ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ನಾವು ಮುಂದಿನ ಚುನಾವಣೆಗೆ ತಯಾರಿ ಆರಂಭಿಸಬೇಕು. ಮೊದಲು ಬಿಜೆಪಿಯನ್ನು ಮೆಲ್ವರ್ಗದ ಪಕ್ಷ ಎಂದು ತೋರಿಸುತ್ತಿದ್ದರು. ಇದು ಒಂದು ಕಾಲದ ಚರ್ಚೆ ಆಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬಿಜೆಪಿಯು ದೇಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ದೇಶದಲ್ಲಿ ಮಾತ್ರವೇ ಅಲ್ಲ, ವಿಶ್ವದಲ್ಲೇ ನಂಬರ್ ಒನ್ ಪಕ್ಷವಾಗಿದೆ. ಇದು ಮ್ಯಾಜಿಕ್ ಅಲ್ಲ. ಅಂದಿನ ನಾಯಕರ ಪರಿಶ್ರಮದ ಫಲ. ಮಿಷನ್ 150 ಈಡೇರಬೇಕಾದರೆ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮುಂದಿನ ಒಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಕಾಂಗ್ರೆಸ್​ನವರು ಅಬ್ಬರ ಮಾಡುತ್ತಾರೆ, ಅದು ಪತ್ರಿಕೆಯಲ್ಲಿ ಬರುತ್ತದೆ. ಜೆಡಿಎಸ್ ಜಲಧಾರೆ ಪತ್ರಿಕೆಯಲ್ಲಿ ಬರುತ್ತದೆ. ಆದರೆ ಇವುಗಳಿಗೆ ಮತಗಳು ಬರಲ್ಲ. ಗ್ರಾಮ ಪಂಚಾಯತಿ ಚುನಾವಣೆ ಆದಾಗ ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ‌. ಯಾವ್ಯಾದಾವುದೋ ಪಕ್ಷದಿಂದ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಅವರು ಬರಲಿ. ಆದರೆ ನಾವು ಪೂರ್ಣ ಪ್ರಮಾಣದ ಸರ್ಕಾದ ಮಾಡೊದು ಯಾವಾಗ? ಪ್ರೀತಿ ಸ್ನೇಹದಿಂದ ಕಾಂಗ್ರೆಸ್​ನವರು ಜೆಡಿಎಸ್​ನವರು ನಮ್ಮ ಬಳಿ ಬರುತ್ತಾರೆ. ಇಲ್ಲಿ ಸ್ಥಾನ ಸಿಗಬಹುದು ಎಂಬ ಉದ್ದೇಶದಿಂದ ಬರುತ್ತಾರೆ. ಮೊದಲು ಈ ರೀತಿ ಇರಲಿಲ್ಲ. ಈಗ ಬಿಜೆಪಿಗೆ ಅಷ್ಟು ಶಕ್ತಿ ಬಂದಿದೆ ಎಂದರು.

ಕುತ್ತಿಗೆ ಕೊಯ್ದರು ನಾವು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎನ್ನುವವರು ಇದ್ದಾರೆ. ನರೇಂದ ಮೋದಿಯವರು ನಾಳೆ ಶಿವಮೊಗ್ಗಕ್ಕೆ ಬರಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ಬರುವುದಕ್ಕೆ ಆಗಲಿಲ್ಲ. 2023ಕ್ಕೆ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಬಿಜೆಪಿ ಸರ್ಕಾರ ಬಂದೇ ಬರುತ್ತೆ. ಬಿಜೆಪಿಗೆ ದಕ್ಷಿಣದಲ್ಲಿ ಕರ್ನಾಟಕ ಹೆಬ್ಬಾಗಿಲು. ಅದನ್ನ ನಾವು ಉಳಿಸಿಕೊಳ್ಳಬೇಕು. ಕಾಂಗ್ರೆಸ್​ನವರ ಮತ್ತು ಜೆಡಿಎಸ್​ನ ಆಟ ಏನು ಎಂಬುದು ಗೊತ್ತು. ಮುಸಲ್ಮಾನ ವೋಟಿನಿಂದ ಕರ್ನಾಟಕ ಗೆಲ್ಲೊದಕ್ಕೆ ಆಗಲ್ಲ. ಹಿಜಾಬ್ ಸಹ ಎಲ್ಲ ವಿದ್ಯಾರ್ಥಿಗಳಿಗೆ ಇಷ್ಟ ಇರಲಿಲ್ಲ. ಶೇ 90ರಷ್ಟು ವಿದ್ಯಾರ್ಥಿಗಳಿಗೆ ಅದು ಬೇಡ. ಕೋರ್ಟ್​ ಬಗ್ಗೆ ಕಾಂಗ್ರೆಸ್​ಗೆ ನಂಬಿಕೆ ಇಲ್ಲ. ಕಾಂಗ್ರೆಸ್​ನವರ ತಂತ್ರಕ್ಕೆ ಪ್ರತಿತಂತ್ರ ನಾವು ಮಾಡಬೇಕು ಎಂದರು.

ಯಾರೋ ಒಬ್ಬ ವ್ಯಕ್ತಿ ಮಾಡಿರುವ ಕೆಲಸದಿಂದ ಇಡೀ ಮುಸ್ಲಿಮ್ ಸಮುದಾಯದ ಬಗ್ಗೆ ಅನುಮಾನ ಮೂಡುವಂತಾಗಿದೆ. ಬಿಜೆಪಿಗೆ ಮುಸ್ಲಿಮರು ಪೂರ್ಣ ಪ್ರಮಾಣದಲ್ಲಿ ಬರಲು ಆಗಲಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಅವರು ಬರ್ತಾರೆ. ಗೃಹಮಂತ್ರಿ ಅಸಮರ್ಥ ಎಂದು ಹರ್ಷ ಕೊಲೆ ಪ್ರಕರಣದಲ್ಲಿ ಅಪಪ್ರಚಾರ ಮಾಡಿದ್ದರು‌. ಹುಬ್ಬಳ್ಳಿ ಪ್ರಕರದಲ್ಲಿ 100 ಕ್ಕೂ ಹೆಚ್ಚು ಜನರನ್ನ ಹಿಡಿದಿದ್ದಾರೆ, ಇವರಿಗಿಂತ ಗೃಹ ಮಂತ್ರಿ ಬೇಕಾ? ಕಾಂಗ್ರೆಸ್ ಪಕ್ಷ ಉದ್ದಾರ ಆಗಲ್ಲ ಎಂದು ಆಕ್ಷೇಪಿಸಿದರು.

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ‌ ನಡೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅಕ್ರಮ ಮಾಡಿದವರು ಎಂಥವರೇ ಆದರೂ ನಮ್ಮ ಸರ್ಕಾರ ಬಿಡುವುದಿಲ್ಲ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿಯೇ ನೇಮಕಾತಿ ಬಗ್ಗೆ ತಿಳಿಸಿದ್ದಾರೆ. ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವವರನ್ನು ಸಿಎಂ ಬೊಮ್ಮಾಯಿ ಜೈಲಿಗೆ ಕಳಿಸುತ್ತಾರೆ. ಆರೋಪಿಗಳಲ್ಲಿ ಅನೇಕರು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಂತೆಲ್ಲಾ ಹೇಳುತ್ತಿದ್ದಾರೆ. ಹಗರಣದ ವಿಚಾರದಲ್ಲಿ ಯಾವ ಪಕ್ಷ ಎನ್ನುವುದು ಮುಖ್ಯವಲ್ಲ. ಅಕ್ರಮ ಅಕ್ರಮವೇ. ಅಕ್ರಮ ಮಾಡಿರುವವರಿಗೆ ಸರ್ಕಾರ ಖಂಡಿತ ಸರಿಯಾದ ಶಿಕ್ಷೆ ಕೊಡುತ್ತೆ. ಇದರಲ್ಲಿ ಅವರು-ಇವರು ಎನ್ನುವ ವಿಚಾರ ಬರುವುದಿಲ್ಲ ಎಂದರು.

ತಪ್ಪಿದ್ದರೆ ಚೌಡೇಶ್ವರಿ ಶಿಕ್ಷೆ ಕೊಡಲಿ

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ದಾಖಲಾತಿ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ತಪ್ಪು ಕೇವಲ ಒಂದು ಪರ್ಸೆಂಟ್ ಇದ್ದರೂ ಸರಿ, ನನಗೆ ತಕ್ಕ ಶಿಕ್ಷೆಯಾಗಲಿ. ನನ್ನ ಮನೆ ದೇವರು ಚೌಡೇಶ್ವರಿ ಶಿಕ್ಷೆ ಕೊಡಲಿ ಎಂದು ಹೇಳಿದ್ದೆ. ಈ ಪ್ರಕರಣದಲ್ಲಿ ನನ್ನ ತಪ್ಪಿಲ್ಲ ನಾನು ಆರೋಪ ಮುಕ್ತನಾಗಿ, ಹೊರಗೆ ಬರುತ್ತೇನೆ. ತನಿಖೆ ನಡೆಯುತ್ತಿರುವ ಕಾರಣ ಹೆಚ್ಚು ಮಾತನಾಡಲು ಆಗುವುದಿಲ್ಲ. ಅಧಿಕಾರಿಗಳು ಎಲ್ಲಾ ರೀತಿಯಲ್ಲೂ ನಡೆಸುತ್ತಾರೆ. ಸತ್ಯಾಂಶ ಹೊರಗೆ ಬರುತ್ತೆ. ದಾಖಲೆಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸ್ಷಷ್ಟವಾಗಿ ಹೇಳಿದ್ದಾರೆ ಎಂದರು.

TV9 Kannada


Leave a Reply

Your email address will not be published. Required fields are marked *