ಬಳ್ಳಾರಿ: ಕೇವಲ ಮೂರು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಕೊರೊನಾ ಸೋಂಕಿಗೆ ಬಲಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಮದಿರೆ ಗ್ರಾಮದಲ್ಲಿ ನಡೆದಿದೆ.

ಒಂದೇ ಕುಟುಂಬದ ಗಂಡ-ಹೆಂಡತಿ ಮತ್ತು ಮಗಳು ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮದಿರೆ ಗ್ರಾಮದ ಸುನೀತಮ್ಮ (45), ರುದ್ರಪ್ಪ (56) ಹಾಗೂ ನಂದಿನಿ (18) ಮೃತಪಟ್ಟಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಮೊದಲಿಗೆ ರುದ್ರಪ್ಪ ಅವರ ಮಗ ತಿಪ್ಪೇಸ್ವಾಮಿ (22)ಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು, ನಂತರ ಚಿಕಿತ್ಸೆ ಪಡೆದ ಬಳಿಕ ಗುಣಮುಖರಾಗಿದ್ದರು. ಆದರೆ ಹೈದ್ರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದ ಮಗಳು ನಂದಿನಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಹೈದರಾಬಾದ್ ನಿಂದ ಗ್ರಾಮಕ್ಕೆ ಮರಳಿದ್ದಳು. ಗ್ರಾಮಕ್ಕೆ ಬಂದ ಬಳಿಕ ಮಗಳ ಕೋವಿಡ್ ಪರೀಕ್ಷೆ ಮಾಡಿದಾಗ ನಂದಿನಿಗೆ ಕೊರೊನಾ ಸೋಂಕು ಇರುವುದು ದೃಢವಾದ ಹಿನ್ನೆಲೆಯಲ್ಲಿ ಮಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಆಗ ಮನೆಯಲ್ಲಿ ಇದ್ದ ಉಳಿದ ಮೂವರಿಗೂ ಕೋವಿಡ್ ಪರೀಕ್ಷೆ ಮಾಡಿದಾಗ ಮೂವರಲ್ಲಿಯೋ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಇವರನ್ನು ಸಹ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಕಳೆದ ಎರಡು ದಿನಗಳ ಹಿಂದೆ ತಾಯಿ ಸುಮಿತಮ್ಮ ಹಾಗೂ ಮಗಳು ನಂದಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆ ರುದ್ರಪ್ಪಾ ಸಹ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಕೇವಲ ಮೂರು ದಿನಗಳ ಅಂತರದಲ್ಲಿ ಮನೆಯ ಮೂರು ಮಂದಿಯನ್ನು ಕೊರೊನಾ ಸೋಂಕು ಬಲಿಪಡೆದಿದೆ. ಅದೃಷ್ಟವಶಾತ್ ಸೋಂಕಿನಿಂದ ಮಗ ಪಾರಾಗಿದ್ದಾನೆ.

The post ಮೂರು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಬಲಿ appeared first on Public TV.

Source: publictv.in

Source link