ಮೂರು ವರ್ಷಗಳು ಕಳೆಯುತ್ತ ಬಂದರೂ ಪೂರ್ಣಗೊಳ್ಳದ ರಾಮನಗರ ಹೈಟಕ್ ಜಿಲ್ಲಾಸ್ಪತ್ರೆ ಕಾಮಗಾರಿ; ಚಿಕಿತ್ಸೆಗಾಗಿ ರೋಗಿಗಳ ಪರದಾಟ – Ramanagara Hi-Tech District Hospital Three years have passed but the work has not been completed Ramanagara news in kannada


ರಾಮನಗರ ಜಿಲ್ಲೆ ಸಿಲಿಕಾನ್ ಸಿಟಿ ಬೆಂಗಳೂರಿನ ಪಕ್ಕದಲ್ಲಿ ಇದ್ದರೂ ಸುಸಜ್ಜಿತವಾದ ಜಿಲ್ಲಾಸ್ಪತ್ರೆ ಇಲ್ಲ. ಹೀಗಾಗಿ ಸರ್ಕಾರ ನೂರಾರು ಕೋಟಿ ರೂ ವೆಚ್ಚದಲ್ಲಿ ಹೈಟಕ್ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ಕಾಮಗಾರಿ ಆರಂಭಗೊಂಡು ಮೂರು ವರ್ಷಗಳು ಕಳೆಯುತ್ತ ಬಂದರೂ ಇದುವರೆಗೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.

ಮೂರು ವರ್ಷಗಳು ಕಳೆಯುತ್ತ ಬಂದರೂ ಪೂರ್ಣಗೊಳ್ಳದ ರಾಮನಗರ ಹೈಟಕ್ ಜಿಲ್ಲಾಸ್ಪತ್ರೆ ಕಾಮಗಾರಿ; ಚಿಕಿತ್ಸೆಗಾಗಿ ರೋಗಿಗಳ ಪರದಾಟ

ಪೂರ್ಣಗೊಳ್ಳದ ರಾಮನಗರ ಹೈಟಕ್ ಜಿಲ್ಲಾಸ್ಪತ್ರೆ ಕಾಮಗಾರಿ

ರಾಮನಗರ: ಸಿಲಿಕಾನ್ ಸಿಟಿ ಬೆಂಗಳೂರಿನ ಪಕ್ಕದಲ್ಲೇ ಇರುವ ರೇಷ್ಮೆನಗರಿ ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ. ಮತ್ತೊಂದೆಡೆ ಸುಮಾರು ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಹೈಟಕ್ ಜಿಲ್ಲಾಸ್ಪತ್ರೆ ಇದುವರೆಗೂ ಉದ್ಘಾಟನಾ ಭಾಗ್ಯ ಕಂಡಿಲ್ಲ. ತಾಲೂಕು ಆಸ್ಪತ್ರೆಯನ್ನೇ ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಆದರೆ ಜಿಲ್ಲಾಸ್ಪತ್ರೆಯಲ್ಲಿ ಸಿಗಬೇಕಾದ ಯಾವುದೇ ಚಿಕಿತ್ಸೆಗಳು ರೋಗಿಗಳಿಗೆ ಸಿಗುತ್ತಿಲ್ಲ. ಸಣ್ಣ ಪುಟ್ಟ ಚಿಕಿತ್ಸೆಗಳು ಬಿಟ್ಟರೆ ಬೇರೆ ಯಾವುದೇ ಚಿಕಿತ್ಸೆಗಳು ರೋಗಿಗಳಿಗೆ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ನುರಿತ ವೈದ್ಯರ ಕೊರತೆಯೂ ಇದೆ. ತುರ್ತು ಚಿಕಿತ್ಸೆ ಎಂದು ಹೋದರೆ ಜಿಲ್ಲಾಸ್ಪತ್ರೆ ವೈದ್ಯರು ಪ್ರತಿಯೊಂದಕ್ಕೂ ಬೆಂಗಳೂರು, ಮಂಡ್ಯಕ್ಕೆ ಕಳುಹಿಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರ ನೂತನವಾದ ಜಿಲ್ಲಾಸ್ಪತ್ರೆಯ ಕಾಮಗಾರಿ ಆರಂಭಿಸಿ ಸುಮಾರು ಮೂರು ವರ್ಷ ಆಗುತ್ತಾ ಬಂದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥ ನಾರಾಯಣ್, ನವೆಂಬರ್ ಕೊನೆಯ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ನಂತರ ಉದ್ಘಾಟನೆ ಮಾಡಲಾಗುವುದು ಎಂದು ಹೇಳುತ್ತಿದ್ದಾರೆ.

ರಾಮನಗರ ಜಿಲ್ಲೆಯ ರೋಗಿಗಳ ಸಮಸ್ಯೆಗಳನ್ನ ಮನಗಂಡು ನೂತನ ಹೈಟಕ್ ಜಿಲ್ಲಾಸ್ಪತ್ರೆಗೆ ಸರ್ಕಾರ ಅಸ್ತು ಎಂದ ನಂತರ ಸುಮಾರು 100 ಕೋಟಿ ರೂ ವೆಚ್ಚದಲ್ಲಿ ಹೊಸ ಹೈಟಕ್ ಜಿಲ್ಲಾಸ್ಪತ್ರೆಯನ್ನ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಇದುವರೆಗೂ ಉದ್ಘಾಟನಾ ಭಾಗ್ಯ ಕಂಡಿಲ್ಲ. ಮೂರನೇ ಮಹಡಿಯ ನಿರ್ಮಾಣ ಕಾರ್ಯ ಕೂಡ ಮುಗಿದಿಲ್ಲ. ಜಿಲ್ಲಾಸ್ಪತ್ರೆ ಕಾಮಗಾರಿ ವೀಕ್ಷಣೆಯನ್ನ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥ್ ನಾರಾಯಣ್, ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಉದ್ಘಾಟನೆ ಮಾಡುತ್ತೇವೆ ಎಂದು ಬಡಾಯಿ ಕೂಡ ಕೊಚ್ಚಿಕೊಂಡಿದ್ದರು. ಆದರೆ ಆ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗೆ ವೇಗ ನೀಡಬೇಕಾಗಿದೆ. ಕೂಡಲೇ ಕಾಮಗಾರಿ ಮುಗಿಸಿ ಆಸ್ಪತ್ರೆ ಉದ್ಗಾಟನೆ ಮಾಡಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ರಾಮನಗರ ನಿವಾಸಿಗಳು ಆಗ್ರಹಿಸುತ್ತಿದ್ದಾರೆ. ಒಟ್ಟಾರೆ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಹೈಟಕ್ ಜಿಲ್ಲಾಸ್ಪತ್ರೆ ಕಾಮಗಾರಿಗೆ ಗ್ರಹಣ ಹಿಡಿದಿದ್ದು, ಉದ್ಗಾಟನಾ ಭಾಗ್ಯ ಕಾಣುತ್ತಿಲ್ಲ. ಇನ್ನಾದ್ರು ಕಾಮಗಾರಿ ಪೂರ್ಣಗೊಂಡು ರೋಗಿಗಳಿಗೆ ಅನುಕೂಲವಾಗುತ್ತಾ ಕಾದು ನೋಡಬೇಕಿದೆ.

ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.