ಮೂರ್ತಿ ಚಿಕ್ಕದಾದ್ರೂ ‘ಪದ್ಮಶ್ರೀ’ ಪಡೆದ್ರು; ರಾಷ್ಟ್ರಪತಿಗಳಿಗೂ ಅಚ್ಚರಿ ಮೂಡಿಸಿದ ಕನ್ನಡಿಗ


ನವದೆಹಲಿ: 2021ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವರಿಗೆ ಇಂದು ಕೂಡ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಧಾನಿ ಮೋದಿ ಸೇರಿದಂತೆ ಇತರೆ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಬಾರಿ 7 ಪದ್ಮ ವಿಭೂಷಣ, 10 ಪದ್ಮಭೂಷಣ ಮತ್ತು 102 ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಇಂದಿನ ಕಾರ್ಯಕ್ರಮದಲ್ಲಿ ಕರ್ನಾಟಕದ ಮಾತಾ ಬಿ ಮಂಜಮ್ಮ ಜೋಗತಿ, ರಂಗಸ್ವಾಮಿ ಲಕ್ಷ್ಮಿನಾರಾಯಣ ಕಶ್ಯಪ್, ಕ್ರೀಡಾಪಟು ಕೆವೈ ವೆಂಕಟೇಶ್‌ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಅಂಗವೈಕಲ್ಯವನ್ನೆ ಅಸ್ತ್ರವಾಗಿ ಬಳಸಿಕೊಂಡ ಛಲಗಾರ

ಕುಬ್ಜತೆಗೆ ಕಾರಣವಾಗುವ ಅಕೋಂಡ್ರೊಪ್ಲಾಸಿಯಾ ಎಂಬ ವಿಚಿತ್ರ ಕಾಯಿಲೆ ಹೊತ್ತು ಜನಿಸಿದ ಕೆವೈ ವೆಂಕಟೇಶ್ ವಿಶೇಷಚೇತನರ ಕ್ರೀಡಾ ಜಗತ್ತಿನಲ್ಲಿ ತಮ್ಮದೆಯಾದ ಛಾಪು ಮೂಡಿಸಿದವರು. ದೇಹಕ್ಕೆ ಅಂಗವೈಕ್ಯಲ್ಯವಿದೆ ಆದರೆ ಸಾಧಿಸುವ ಚಲಕ್ಕೆ ಅಲ್ಲ ಎಂದು ಮನಗಂಡ ಅವರು ಕ್ರೀಡಾ ಕನಸುಗಳ ಹಾದಿಯಲ್ಲಿ ಅವಿರತವಾಗಿ ಶ್ರಮಿಸಿ ಸಾಧನೆಯ ಶಿಖರವನ್ನೇರಿ ದೇಶದ ಅತ್ಯುನ್ನತ ಪ್ರಶಸ್ತಿಯನ್ನ ತಮ್ಮ ಮುಡುಗೇರಿಸಿಕೊಂಡಿದ್ದಾರೆ.

ಬೆಂಗಳೂರಿನವರಾದ ವೆಂಕಟೇಶ್​ ಅವರ ಎತ್ತರ 4 ಅಡಿ 2 ಇಂಚುಗಳು -ವೆಂಕಟೇಶ್ ಅವರು 1994 ರಲ್ಲಿ ಕ್ರೀಡೆಗೆ ಕಾಲಿಟ್ಟರು. ಅವರ ಆರಂಭದ ದಿನಗಳು ಸಾಕಷ್ಟು ನೋವಿನಿಂದ ಕೂಡಿದ್ದವು. ಸುಮಾರು ಎರಡು ದಶಕಗಳ ಕಾಲ ಅವರು ಅಥ್ಲೆಟಿಕ್ಸ್ ಮತ್ತು ಬ್ಯಾಡ್ಮಿಂಟನ್‌ನಲ್ಲಿ ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕೂಟಗಳಲ್ಲಿ ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸಿದರು. ಆ ಮೂಲಕ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

2005 ರ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದಿದ್ದ ವೆಂಕಟೇಶ್ ಇತಿಹಾಸ ನಿರ್ಮಿಸಿದ್ದರು. 1994 ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು. ಸದ್ಯ ಕ್ರೀಡಾ ಅಕಾಡೆಮಿಯಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಈ ಕ್ರೀಡಾ ಜಗತ್ತಿನ ಸಾಧನೆಯನ್ನ ಗಮನಿಸಿ ಕ್ರೀಡಾ ವಿಭಾಗದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ:ಪದ್ಮಶ್ರೀ ಪಡೆಯಲು ಬರಿಗಾಲಲ್ಲೇ ಬಂದ ಅಕ್ಷರ ಸಂತ; ಹಾಜಬ್ಬರನ್ನ ಅಚ್ಚರಿಯಿಂದಲೇ ಕಣ್ತುಂಬಿಕೊಂಡ ರಾಷ್ಟ್ರಪತಿ

News First Live Kannada


Leave a Reply

Your email address will not be published. Required fields are marked *