ಮೆಕ್ಸಿಕೋದ ಪ್ಯೂಬ್ಲ ರಾಜ್ಯದಲ್ಲಿ ಇದ್ದಕ್ಕಿದ್ದಂತೆ ಭೂಮಿ ಬಾಯ್ತೆರೆದು ಬೃಹದಾಕಾರದ ಹೊಂಡವಾಗಿ ರೂಪುಗೊಂಡಿರುವ ವಿಸ್ಮಯಕಾರಿ ಘಟನೆ ನಡೆದಿದೆ. ಈ ಬೃಹದಾಕಾರದ ಹೊಂಡದ ವಿಸ್ತೀರ್ಣ 300 ಅಡಿ ಅಗಲ ಹಾಗೂ 60 ಅಡಿ ಆಳವಿದೆ.

ಕೃಷಿ ಜಮೀನೊಂದರಲ್ಲಿ ಈ ಹೊಂಡ ಕಾಣಿಸಿಕೊಂಡಿದ್ದು ತನ್ನ ವಿಸ್ತೀರ್ಣವನ್ನ ಹೆಚ್ಚಿಸಿಕೊಳ್ಳುತ್ತಲೇ ಇದೆ. ಹೊಂಡದ ಪಕ್ಕದಲ್ಲಿ ಮನೆಯೊಂದು ಇದ್ದು ಯಾವುದೇ ಕ್ಷಣದಲ್ಲಿ ಆ ಮನೆ ಹೊಂಡದೊಳಗೆ ಕುಸಿದು ಬೀಳುವ ಆತಂಕ ನಿರ್ಮಾಣವಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಹೊಂಡದ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿದ್ದು ಜನರಲ್ಲಿ ಭಾರೀ ಕುತೂಹಲ ಸೃಷ್ಟಿಸಿದೆ.

ಈ ಪ್ರಕೃತಿ ವಿಸ್ಮಯವನ್ನ ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಹೊಂಡದ ಬಳಿಗೆ ಬರುತ್ತಿದ್ದು ಅವರಿಗೆ ಹೊಂಡದ ಸಮೀಪ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಪ್ರತಿದಿನ ಹೊಂಡದ ಸುತ್ತಲಿನ ಭೂಮಿ ನೀರಿನೊಳಗೆ ಕುಸಿಯುತ್ತಿದ್ದು ಸ್ಥಳೀಯ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ. ಈ ಹೊಂಡ ಪ್ರಾರಂಭದಲ್ಲಿ 15 ಅಡಿ ವಿಸ್ತೀರ್ಣವಿತ್ತು ಇದೀಗ 300 ಅಡಿ ವಿಸ್ತೀರ್ಣಕ್ಕೆ ಚಾಚಿಕೊಂಡಿದೆ ಎಂದು ಸ್ಥಳಿಯ ನೈಸರ್ಗಿಕ ಅಧಿಕಾರಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಇಂಥ ಬೃಹದಾಕಾರದ ಹೊಂಡ ಸೃಷ್ಟಿಯಾಗಲು ಮತ್ತು ದಿನದಿಂದ ದಿನಕ್ಕೆ ವಿಸ್ತೀರ್ಣ ಹೆಚ್ಚಿಸಿಕೊಳ್ಳುತ್ತಿರುವುದರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸದ್ಯ ಹೊಂಡದ ಪಕ್ಕದಲ್ಲಿರುವ ಮನೆಯ ನಿವಾಸಿಗಳನ್ನ ಬೇರೆಡೆಗೆ ಸ್ಥಳಾಂತರಿಸಲಾಗಿದೆ, ಅಲ್ಲದೇ ಸ್ಥಳೀಯರನ್ನ ಹೊಂಡದಿಂದ ದೂರ ಉಳಿಯುವಂತೆ ಸೂಚಿಸಲಾಗಿದೆ. ಮಣ್ಣಿನ ಗುಣ ಮತ್ತು ನೀರಿನ ಅಂಶದಿಂದಾಗಿ ಇಂಥ ಹೊಂಡ ಸೃಷ್ಟಿಯಾಗಿರಬಹುದು ಎಂದು ಊಹಿಸಲಾಗಿದೆ.

The post ಮೆಕ್ಸಿಕೋದಲ್ಲಿ ಬೃಹದಾಕಾರವಾಗಿ ಬಾಯ್ತೆರೆದ ಭೂಮಿ: ಪ್ರಕೃತಿ ವಿಸ್ಮಯಕ್ಕೆ ಗಾಬರಿ ಬಿದ್ದ ಜನರು appeared first on News First Kannada.

Source: newsfirstlive.com

Source link