ಮೇಕೆದಾಟಿ ಯೋಜನೆಗೂ ತಮಿಳುನಾಡಿಗೂ ಏನು ಸಂಬಂಧ? ಮೂಲ ಪ್ರಶ್ನೆ ಎತ್ತಿದ ವಾಟಾಳ್ ನಾಗಾರಾಜ್, ಆನೇಕಲ್ ಪೊಲೀಸ್ ವಶಕ್ಕೆ
ಆನೇಕಲ್: ಮೇಕೆದಾಟು ಯೋಜನೆ ಗೆ ಆಗ್ರಹಿಸಿ ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ್ ಮತ್ತು ಇತರೆ ಕನ್ನಡಪರ ಸಂಘಟನೆಯವರು ಆನೇಕಲ್ ಬಳಿಯ ಗುಮ್ಮಳಪುರ ಬಾರ್ಡರ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದಿರುವ ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ಗಡಿ ದಾಟದಂತೆ ವಾಟಾಳ್ ರನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ಕರ್ನಾಟಕ ಪೊಲೀಸರು ವಾಟಾಳ್ ನಾಗರಾಜ್ ರನ್ನು ವಶಕ್ಕೆ ಪಡೆದಿದ್ದಾರೆ. ಮೇಕೆದಾಟು ಯೋಜನೆಗೆ ಅಡ್ಡಿ ಪಡಿಸುತ್ತಿರುವ ತಮಿಳು ಸರ್ಕಾರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ನಮ್ಮ ನೀರು ನಮ್ಮ ಹಕ್ಕು ಎಂದು ಘೋಷಣೆ ಹಾಕಿ, ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಧಿಕ್ಕಾರ ಕೂಗಿದರು.
ಅದಕ್ಕೂ ಮುನ್ನ ಆನೇಕಲ್ ಬಳಿ ಮಾತನಾಡಿದ ವಾಟಾಳ್ ನಾಗಾರಾಜ್ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಅಡ್ಡಿ ಪಡಿಸುತ್ತಿರುವುದು ಗೌರವ ಅಲ್ಲ, ಗೌರವ ಅಲ್ಲ. ಮೇಕೆದಾಟಿಗೂ ತಮಿಳುನಾಡಿಗೂ ಸಂಬಂಧ ಏನು? ಇವರಿಗೆ ಮಾನ ಮರ್ಯಾದೆ ಇದ್ದರೆ ಮೇಕೆದಾಟು ಬಗ್ಗೆ ವಿಚಾರ ಕೈ ಬಿಡಬೇಕು. ಮೇಕದಾಟು ಕುಡಿಯುವ ನೀರಿನ ಯೋಜನೆ. ಇದು ಬೇಕು ಅಂತಾನೇ ಜಗಳ ತೆಗೀತಿದಾರೆ. ಇವರಿಗೆ ಪ್ರಧಾನಿಯವರೇ ಬೆಂಬಲವಾಗಿದ್ದಾರೆ. ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದರಿ. ಇವರು ಆಗ ಗಮನ ಕೊಡದೇ ಇವತ್ತು ಪಾದಯಾತ್ರೆ ಹೊರಟಿದ್ದಾರೆ ಎಂದು ವಾಟಾಳ್ ಲೇವಡಿಯಾಡಿದರು.
ಬಿಜೆಪಿಯವರಿಗೆ ತಲೆಯೂ ಇಲ್ಲ, ಬಾಲವೂ ಇಲ್ಲ. ಮುಖ್ಯಮಂತ್ರಿ ಬೊಮ್ಮಾಯಿಯವರ ಬಗ್ಗೆ ಗೌರವ ಇದೆ. ಮುಖ್ಯಮಂತ್ರಿಗಳು ಕೂಡಲೇ ಸರ್ವ ಪಕ್ಷ ಸಭೆ ಕರೆಯಬೇಕು. ಸರ್ವ ಪಕ್ಷ ಸಭೆ ಅಂದ್ರೆ ಬರೀ ಕಾಂಗ್ರೆಸ್, ಜೆಡಿಎಸ್ ಅಲ್ಲ. ಎಲ್ಲಾ ಸಂಘಟನೆಗಳನ್ನು ಕರೆದು ಪ್ರಧಾನಿ ಮೇಲೆ ಒತ್ತಡ ತರಬೇಕು. ಇಲ್ಲದಿದ್ದರೇ ಎಲ್ರೂ ರಾಜಿನಾಮೆ ಕೊಡಬೇಕು. ಬರೀ ಮೇಕೆದಾಟು ಮಾತ್ರವಲ್ಲ, ಅದರ ಜತೆಗೆ ಮಹಾದಾಯಿ ಬಗ್ಗೆಯೂ ತೀವ್ರ ಹೋರಾಟ ಆಗಬೇಕು. ಇದು ಕೇವಲ ಕನಕಪುರದ ಹೋರಾಟ ಅಲ್ಲ. ಅದಕ್ಕೆ ನಾವು ಮುಂದಿನ ವಾರ ಮಾಹಾದಾಯಿ ನದಿ ಇರುವ ಸ್ಥಳ ಕಣಕುಂಬಿಗೆ ಹೋಗ್ತೇವೆ. ಅಲ್ಲಿ ನಾವು ಮುಂದಿನ ವಾರದಿಂದ ಹೋರಾಟ ಪ್ರಾರಂಭ ಮಾಡ್ತೆವೆ ಎಂದು ಎಚ್ಚರಿಸಿದರು.