ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಡಿ – ಕೇಂದ್ರಕ್ಕೆ ತ.ನಾಡು ಸರ್ವಪಕ್ಷ ನಿಯೋಗದಿಂದ ಒತ್ತಡ

ನವದೆಹಲಿ: ಮೇಕೆದಾಟು ಯೋಜನೆಗೆ ತಡೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಸರ್ವ ಪಕ್ಷಗಳ ನಿಯೋಗ ಒತ್ತಾಯಿಸಿದೆ. ಇಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ಮಾಡಿದ ಸದಸ್ಯರು ಆಣೆಕಟ್ಟು ನಿರ್ಮಾಣ ಮಾಡುವ ಕರ್ನಾಟಕದ ನಡೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ಜಲ ಸಂಪನ್ಮೂಲ ಖಾತೆ ಸಚಿವ ದೊರೆ ಮುರುಗನ್ ನೇತೃತ್ವದಲ್ಲಿ ದೆಹಲಿಗೆ ತೆರಳಿದ್ದ 13 ಪಕ್ಷಗಳ ಸದಸ್ಯರು ಶ್ರಮಶಕ್ತಿ ಭವನದಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ ಒಂದು ಗಂಟೆಗೂ ಅಧಿಕ ಸಮಯದ ಚರ್ಚೆ ಬಳಿಕ ಮನವಿ ಸಲ್ಲಿಸಿದರು. ಕರ್ನಾಟಕದಲ್ಲಿ ಮೇಕೆದಾಟು ಆಣೆಕಟ್ಟು ನಿರ್ಮಾಣದಿಂದ ತಮಿಳುನಾಡಿಗೆ ತೊಂದರೆಯಾಗಲಿದೆ. ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕ ನೀರು ನೀಡಲು ಸಾಧ್ಯವಾಗುವುದಿಲ್ಲ, ಇದರಿಂದ ತಮಿಳುನಾಡಿಗೆ ಕುಡಿಯುವ ನೀರಿನ ತೊಂದರೆಯಾಗಲಿದೆ ಮತ್ತು ಕೃಷಿ ಮೇಲೆ ಪರಿಣಾಮ ಬೀರಲಿದ್ದು ರೈತರಿಗೆ ಕಷ್ಟವಾಗಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಮೇಕೆದಾಟು ಯೋಜನೆ – ಮೂರು ಮಹತ್ವದ ನಿರ್ಣಯಗಳಿಗೆ ತಮಿಳುನಾಡು ಅಂಗೀಕಾರ

ಈ ನಡುವೆ ಕರ್ನಾಟಕ ಸಿಎಂ ಬಿ.ಎಸ್ ಯಡಿಯೂರಪ್ಪ ಆಣೆಕಟ್ಟು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿಯನ್ನು ಕೋರಿದ್ದಾರೆ. ತಮಿಳುನಾಡಿನ ಹಿತಾಸಕ್ತಿ ದೃಷ್ಟಿಯಿಂದ ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸರ್ವಪಕ್ಷ ಸದಸ್ಯರ ಕೋರಿದ್ದಾರೆ. ಮನವಿ ಪಡೆದುಕೊಂಡಿರುವ ಗಜೇಂದ್ರ ಸಿಂಗ್ ಶೇಖಾವತ್ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

The post ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಡಿ – ಕೇಂದ್ರಕ್ಕೆ ತ.ನಾಡು ಸರ್ವಪಕ್ಷ ನಿಯೋಗದಿಂದ ಒತ್ತಡ appeared first on Public TV.

Source: publictv.in

Source link