ಮೇಕೆದಾಟು ಯೋಜನೆ ತಡೆಯಲು ತಮಿಳುನಾಡು-ಕೇಂದ್ರ ಷಡ್ಯಂತ್ರ..?- ಹೆಚ್​ಡಿಕೆ ಅನುಮಾನ

ಮೇಕೆದಾಟು ಯೋಜನೆ ತಡೆಯಲು ತಮಿಳುನಾಡು-ಕೇಂದ್ರ ಷಡ್ಯಂತ್ರ..?- ಹೆಚ್​ಡಿಕೆ ಅನುಮಾನ

ಬೆಂಗಳೂರು: ತಮಿಳುನಾಡಿನ ಮಾತು ಕೇಳಿ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ವಿನಾಕಾರಣ ವಿಳಂಬ ಮಾಡುತ್ತಿದೆಯೇ? ಈ ಬಗ್ಗೆ ಪ್ರಧಾನಿ ಮೋದಿ ಸ್ಪಷ್ಟಪಡಿಸಬೇಕು ಅಂತಾ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಸರಣಿ ಸರಣಿ ಟ್ವೀಟ್ ಮಾಡಿರುವ ಹೆಚ್​​ಡಿಕೆ.. ಮೇಕೆದಾಟು ಡ್ಯಾಂಗೆ ಅನುಮತಿ ನೀಡಬಾರದೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿರುವ ತಮಿಳುನಾಡು ಮಾಜಿ ಸಿಎಂ ಪಳನಿಸ್ವಾಮಿ ಯೋಜನೆ ತಡೆಯಲು ಪ್ರಧಾನಿ ಮೇಲೆ ಒತ್ತಡ ಹೇರುತ್ತಾ ಬಂದಿದ್ದಾಗಿ ಹೇಳಿದ್ದಾರೆ. ಕೇಂದ್ರವು ತಮಿಳುನಾಡಿನ ಒತ್ತಡಕ್ಕೆ ಮಣಿದು ಅನುಮತಿ ಮುಂದೂಡತ್ತಾ ಬಂದಿದ್ದೇ ಆದರೆ ಅದು ಕನ್ನಡಿಗರಿಗೆ ಬಗೆದ ದ್ರೋಹ ಎಂದು ಗುಡುಗಿದ್ದಾರೆ.

ಮೇಕೆದಾಟು ಯೋಜನೆ ಜಾರಿಗೆ ತಂದು ನನ್ನ ಸರ್ಕಾರ ಧೈರ್ಯ ಪ್ರದರ್ಶಿಸಿತ್ತು. ಪರಿಸರ ಅನುಮತಿ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈವರೆಗೆ ಅನುಮತಿ ಸಿಕ್ಕಿಲ್ಲ. ಇತ್ತ, ಯೋಜನೆ ವಿರುದ್ಧ ಅರ್ಜಿಗಳು ಸಲ್ಲಿಕೆಯಾಗುತ್ತಾ ಬಂದವು. ಇದೆಲ್ಲ ಗಮನಿಸಿದರೆ ಯೋಜನೆ ತಡೆಯಲು ತಮಿಳುನಾಡು–ಕೇಂದ್ರ ಷಡ್ಯಂತ್ರ ಹೆಣೆದ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದ್ದಾರೆ.

ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಒತ್ತಡ ಹೇರಿತ್ತೇ? ಅದರ ಮಾತು ಕೇಳಿ ಅನುಮತಿ ವಿಳಂಬ ಮಾಡಲಾಯಿತೇ? ಈ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡಬೇಕು. ಇಲ್ಲವೇ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ‘ಭಾಷಾ ದುರಭಿಮಾನಿ ಬಿಜೆಪಿ ಸಂಸದರು’ ಪ್ರಶ್ನೆ ಮಾಡಿ ಉತ್ತರ ಪಡೆದುಕೊಂಡು ಬರಬೇಕು. ಇಲ್ಲವೇ ಬಾಕಿ ಇರುವ ಪರಿಸರ ಅನುಮತಿಯನ್ನು ಶೀಘ್ರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

The post ಮೇಕೆದಾಟು ಯೋಜನೆ ತಡೆಯಲು ತಮಿಳುನಾಡು-ಕೇಂದ್ರ ಷಡ್ಯಂತ್ರ..?- ಹೆಚ್​ಡಿಕೆ ಅನುಮಾನ appeared first on News First Kannada.

Source: newsfirstlive.com

Source link