ಮೇಘಸ್ಫೋಟಕ್ಕೆ ತತ್ತರಿಸಿದ ಆಂಧ್ರ – ಬಿರುಕು ಬಿಟ್ಟ 500 ವರ್ಷಗಳ ಡ್ಯಾಂ.. ಸಾವಿನ ಸಂಖ್ಯೆ 33ಕ್ಕೇರಿದೆ


ಮೇಘಸ್ಫೋಟಕ್ಕೆ ಇಡೀ ಆಂಧ್ರಪ್ರದೇಶ ತತ್ತರಿಸಿ ಹೋಗಿದೆ. ಆಂಧ್ರದಲ್ಲಿ ದಿನಕಳೆದಂತೆಲ್ಲಾ ವರುಣನ ಆರ್ಭಟ ಜೋರಾಗುತ್ತಲೇ ಸಾಗ್ತಿದೆ. ಭಾರೀ ಮಳೆಗೆ ಸಾವು-ನೋವುಗಳು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿವೆ. ಆಂಧ್ರದ 500 ವರ್ಷದ ಹಳೆಯ ಜಲಾಶಯವೊಂದು​ ಬಿರುಕು ಬಿಟ್ಟಿದೆ. ಜಲಾಶಯದ ಸುತ್ತಮುತ್ತಲಿನ ಗ್ರಾಮಗಳೀಗ ಮುಳುಗಡೆಯಾಗುವ ಭೀತಿ ಎದುರಾಗಿದೆ.

ಆಂಧ್ರ ಪ್ರದೇಶದಲ್ಲಿ ಮುಂದುವರಿದ ವರುಣಾರ್ಭಟ
ರಣ ಭೀಕರ ಮಳೆಗೆ ಮೃತಪಟ್ಟವರ ಸಂಖ್ಯೆ 33ಕ್ಕೆ ಏರಿಕೆ
ಕಳೆದ ಒಂದು ವಾರದಿಂದ ಆಂಧ್ರಪ್ರದೇಶದಲ್ಲಿ ವರುಣ ತನ್ನ ರೌದ್ರ ನರ್ತನ ತೋರಿಸ್ತಿದ್ದಾನೆ. ಭಾರೀ ಮಳೆಗೆ ತಿರುಪತಿ ತಿಮ್ಮಪ್ಪನ ನಾಡು ನಡುಗಡ್ಡೆಯಂತಾಗಿದೆ. ರಣ ಭೀಕರ ಮಳೆಗೆ ಆಂಧ್ರ ಪ್ರದೇಶದ ನದಿ ಹಳ್ಳ ಕೊಳ್ಳಗಳು ರೌದ್ರ ರೂಪ ಪಡೆದಿವೆ. ಸದ್ಯ ವರುಣಾರ್ಭಟಕ್ಕೆ ಆಂಧ್ರದ ಪ್ರಮುಖ ಹೆದ್ದಾರಿ ಹಾಗೂ ರೈಲು ಮಾರ್ಗಗಳ ಸಂಪರ್ಕವೇ ಕಡಿತಗೊಂಡಿದೆ. ಜಿಲ್ಲೆಯ ಪೆನ್ನಾ ನದಿ ಸೃಷ್ಟಿಸಿರುವ ನೆರೆಯಿಂದ ದಕ್ಷಿಣದಿಂದ ಪೂರ್ವಕ್ಕೆ ಸಂಪರ್ಕಿಸುವ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಇತ್ತ ಮಳೆ ಆರ್ಭಟದಲ್ಲಿ ಬಲಿಯಾದವರ ಸಂಖ್ಯೆ 33ಕ್ಕೆ ಏರಿಕೆಯಾಗಿದ್ದು, ಬರೊಬ್ಬರಿ 20 ಸಾವಿರ ಜನರನ್ನ ಕಾಳಜಿ ಕೇಂದ್ರಗಳಿಗೆ ರವಾನಿಸಲಾಗಿದೆ.

ವರುಣಾರ್ಭಟಕ್ಕೆ ಬಿರುಕು ಬಿಟ್ಟ ರಾಯಲಚೆರುವು ಡ್ಯಾಮ್​
ಡ್ಯಾಂ ಸುತ್ತಮುತ್ತಲಿನ ಗ್ರಾಮಗಳು ಮುಳುಗಡೆಯಾಗುವ ಭೀತಿ
ದುರಂತ ಅಂದ್ರೆ, ಆಂಧ್ರದ 500 ವರ್ಷದ ಹಳೆಯ ಜಲಾಶಯವೊಂದು ಬಿರುಕು ಬಿಟ್ಟಿದ್ದು ಅಣೆಕಟ್ಟೆ ಒಡೆಯುವ ಭೀತಿ ಎದುರಾಗಿದೆ. ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ರಾಮಚಂದ್ರಪುರಂ ಜಿಲ್ಲೆಯ ರಾಯಲಚೆರುವು ಜಲಾಶಯ ಭರ್ತಿಯಾಗಿದೆ. ಸುಮಾರು 500 ವರ್ಷದಷ್ಟು ಹಳೆಯದಾದ ಈ ಜಲಾಶಯದಲ್ಲೀಗ ಬಿರುಕು ಕಾಣಿಸಿಕೊಂಡಿದೆ. ಸದ್ಯ ಜಲಾಶಯದಿಂದ ನೀರು ಹರಿದು ಬರ್ತಿದ್ದು, ಜಲಾಶಯದ ಅಣೆಕಟ್ಟು ಒಡೆಯುವ ಆತಂಕ ಎದುರಾಗಿದೆ. ಈಗಾಗಲೇ ಜಲಾಶಯದ ಸುತ್ತಮುತ್ತಲಿನ ಗ್ರಾಮದ ಜನರಿಗೆ ತಮ್ಮ ಗ್ರಾಮಗಳನ್ನು ತೊರೆಯುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ತೀರಾ ಮುಖ್ಯವಾದ ನಿಮ್ಮ ದಾಖಲೆಗಳನ್ನು ತಗೆದುಕೊಂಡು ಆದಷ್ಟು ಬೇಗ ಗ್ರಾಮಗಳನ್ನ ತೊರೆಯುವಂತೆ ಗ್ರಾಮಸ್ಥರಿಗೆ ತಿಳಿಸಿದೆ.

ನೆರೆ ಪ್ರದೇಶಗಳಿಗೆ ಭೇಟಿ ನೀಡಲು ಸಿಎಂ ಜಗನ್​ ಸೂಚನೆ!
ಸಂತ್ರಸ್ತರ ಕುಟುಂಬಕ್ಕೆ ನೆರವಾಗುವಂತೆ ಸಿಎಂ ಜಗನ್​ ಆದೇಶ
ಇತ್ತ ಆಂಧ್ರದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಆಯಾ ಶಾಸಕರು ಹಾಗೂ ಜಿಲ್ಲಾಧಿಕರಿಗಳಿಗೆ ತಮ್ಮ ತಮ್ಮ ಕ್ಷೇತ್ರಗಳ ನೆರೆ ಪ್ರದೇಶಗಳಿಗೆ ಭೇಟಿ ನೀಡುವಂತೆ ಸರ್ಕಾರ ಆದೇಶಿಸಿದೆ.

ನೆರೆ ಪ್ರದೇಶಗಳ ಭೇಟಿಗೆ ಸಿಎಂ ಸೂಚನೆ!
ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಆಯಾ ಗ್ರಾಮದ ಮುಖಂಡರುತಮ್ಮ ತಮ್ಮ ಕ್ಷೇತ್ರದ ನೆರೆ ಪ್ರದೇಶಗಳಿಗೆ ಭೇಟಿ ನೀಡಬೇಕು. ಪ್ರವಾಹದಲ್ಲಿ ಸಿಲುಕಿಕೊಂಡಿರುವ ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕು. ಅಲ್ಲದೆ ನೆರೆಯಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು. ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಬೇಕು ಪ್ರತಿ ಕುಟುಂಬಕ್ಕೆ 25 ಕೆಜಿ ಅಕ್ಕಿ, ಕೆಂಪು ಬೇಳೆ, ತಲಾ 1 ಕೆಜಿ ದಾಲ್, ತಾಳೆ ಎಣ್ಣೆ, ಈರುಳ್ಳಿ ಮತ್ತು ಆಲೂಗಡ್ಡೆಗಳನ್ನು ನೀಡಲು ಸಿಎಂ ಜಗನ್​ ಮೋಹನ್​ ರೆಡ್ಡಿ ಸೂಚಿಸಿದ್ದಾರೆ.

ಒಟ್ಟಿನಲ್ಲಿ ಕಳೆದೊಂದು ವಾರದಿಂದ ಶುರುವಾಗಿರುವ ವರುಣಾರ್ಭಟಕ್ಕೆ ಇಡೀ ಆಂಧ್ರ ಪ್ರದೇಶ ತತ್ತರಿಸಿ ಹೋಗ್ತಿದೆ. ಆಂಧ್ರದ ಪಾಲಿಗೆ ಸದ್ಯ ವರುಣ ಮೃತ್ಯೂ ರೂಪವಾಗಿ ಬದಲಾಗಿಬಿಟ್ಟಿದ್ದಾನೆ. ಇನ್ನೂ ಎರಡೂ ದಿನಗಳ ವರೆಗೆ ಭಾರೀ ಮುಳೆಯಾಗುವ ಮುನ್ಸೂಚನೆ ಇದ್ದು ಮತ್ತಿನ್ನೇನು ಅವಘಡ ಸಂಭವಿಸುತ್ತೋ ಎಂಬ ಆತಂಕ ಎದುರಾಗಿದೆ.

News First Live Kannada


Leave a Reply

Your email address will not be published. Required fields are marked *