ನವದೆಹಲಿ: ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಕೇಂದ್ರ ಸರ್ಕಾರ ಅನುಮತಿಸಿದೆ. ವ್ಯಾಕ್ಸಿನ್ ಪಡೆಯಲು ಇಚ್ಚಿಸುವವರು ನಾಳೆ ಸಂಜೆ 4 ಗಂಟೆಯಿಂದ ಕೋವಿನ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಮೊದಲಿಗೆ www.cowin.gov.in ವೆಬ್‍ಸೈಟ್‍/ ಆಪ್ ಗೆ  ಹೋಗಿ ನಿಮ್ಮ ಮೊಬೈಲ್ ನಂಬರ್ ನಮೂದು ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್‍ಗೆ ವನ್ ಟೈಮ್ ಪಾಸ್‍ವರ್ಡ್ ಬಂದ ಕೂಡಲೇ ಅದನ್ನು ಕೋವಿನ್ ವೆಬ್‍ಸೈಟ್‍ನಲ್ಲಿ ಇರುವ ಓಟಿಪಿ ಬಾಕ್ಸ್ ಗೆ ತುಂಬಬೇಕು. ನಂತರ ನೋಂದಣಿ ಪೇಜ್ ಓಪನ್ ಆಗಲಿದೆ. ಅದರಲ್ಲಿ ನಿಮ್ಮ ಮಾಹಿತಿ ಮತ್ತು ಫೋಟೋ ಐಡಿ ನೀಡಬೇಕಾಗುತ್ತದೆ.

ನಿಮಗೆ ಶುಗರ್, ಬಿಪಿ ಹಾಗೂ ಇನ್ನಿತರೆ ಕಾಯಿಲೆ ಇದ್ದರೆ ಅದರ ಮಾಹಿತಿಯನ್ನು ಅಲ್ಲಿ ನಮೂದಿಸಬೇಕಾಗುತ್ತದೆ. ಎಲ್ಲವನ್ನು ತುಂಬಿದ ಬಳಿಕ ರಿಜಿಸ್ಟ್ರೇಷನ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕು. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಮ್ಮ ಅಕೌಂಟ್ ವಿವರಗಳು ಸ್ಕ್ರೀನ್ ಮೇಲೆ ಕಾಣುತ್ತದೆ. ನಿಗದಿಯಾದ ದಿನದಂದು ಲಸಿಕೆ ಪಡೆಯಬೇಕಾಗುತ್ತದೆ.

ಕರ್ನಾಟಕ ಸೇರಿ ಹಲವು ರಾಜ್ಯಗಳು ಈಗಾಗಲೇ ವ್ಯಾಕ್ಸಿನ್ ಖರೀದಿ ಮಾಡಿವೆ. ನಾಳೆ ಅಥವಾ ನಾಡಿದ್ದರಲ್ಲಿ ರಾಜ್ಯಕ್ಕೆ ಒಂದು ಕೋಟಿ ಲಸಿಕೆ ಬರಲಿದ್ದು, ರಾಜ್ಯದಲ್ಲಿ ನಿಗದಿಯಂತೆ ಮೇ 1ರಿಂದಲೇ ವ್ಯಾಕ್ಸಿನೇಷನ್ ಶುರುವಾಗಲಿದೆ. ಆದರೆ ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮೇ ತಿಂಗಳಲ್ಲಿ ಲಸಿಕೆ ಸಿಗುವುದು ಅನುಮಾನ. ಈ ಮಧ್ಯೆ, ಮೇ 1ಕ್ಕೆ ರಷ್ಯಾದ ಸ್ಪುಟ್ನಿಕ್ V ಲಸಿಕೆ ಭಾರತ ತಲುಪುವುದು ಬಹುತೇಕ ಪಕ್ಕಾ ಆಗಿದೆ. ಲಸಿಕೆಗಳನ್ನು ಮೊದಲ ಹಡಗು ಭಾರತ ತಲುಪಲಿದೆ. ಆದರೆ ಅವುಗಳ ಸಂಖ್ಯೆ ಎಷ್ಟು ಎನ್ನುವುದು ತಿಳಿದುಬಂದಿಲ್ಲ.

The post ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ – ಕೋವಿನ್ ಆಪ್‍ನಲ್ಲಿ ನೋಂದಣಿ ಹೇಗೆ? appeared first on Public TV.

Source: publictv.in

Source link