ಮೇ 23ರಿಂದ ‘ಅರ್ಧಾಂಗಿ’ ಸೀರಿಯಲ್​ ಶುರು; ಹೊಸ ಧಾರಾವಾಹಿಗೆ ‘ಸ್ಟಾರ್​’ ಕಳೆ ತಂದ ಪ್ರಿಯಾಂಕಾ ಉಪೇಂದ್ರ | Priyanka Upendra supports Ardhangi Kannada serial on Star Suvarna


ಮೇ 23ರಿಂದ ‘ಅರ್ಧಾಂಗಿ’ ಸೀರಿಯಲ್​ ಶುರು; ಹೊಸ ಧಾರಾವಾಹಿಗೆ ‘ಸ್ಟಾರ್​’ ಕಳೆ ತಂದ ಪ್ರಿಯಾಂಕಾ ಉಪೇಂದ್ರ

‘ಅರ್ಧಾಂಗಿ’ ಸೀರಿಯಲ್​ ತಂಡದ ಸುದ್ದಿಗೋಷ್ಠಿ

ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿರುವ ‘ಅರ್ಧಾಂಗಿ’ ಧಾರಾವಾಹಿಯಲ್ಲಿ ವಿಶೇಷವಾದ ಕಥೆ ಇದೆ. ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಈ ಸೀರಿಯಲ್​ ಬಿತ್ತರ ಆಗಲಿದೆ.

ಕಿರುತೆರೆ ಮತ್ತು ಹಿರಿತೆರೆ ನಡುವೆ ಒಂದು ಅವಿನಾಭಾವ ನಂಟು ಇದೆ. ಸಿನಿಮಾದ ಅನೇಕ ಸೆಲೆಬ್ರಿಟಿಗಳು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದೇ ರೀತಿ ಕಿರುತೆರೆಯಲ್ಲಿ ಮಿಂಚಿದ ನಟ-ನಟಿಯರನ್ನು ಸಿನಿಮಾರಂಗ ಕೂಡ ಕೈ ಬೀಸಿ ಕರೆಯುತ್ತಿದೆ. ಇಂದಿನ ದಿನಗಳಲ್ಲಿ ಯಾವ ಸಿನಿಮಾಗೂ ಕಡಿಮೆ ಇಲ್ಲದಂತಹ ಗುಣಮಟ್ಟದಲ್ಲಿ ಸೀರಿಯಲ್​ಗಳು ನಿರ್ಮಾಣ ಆಗುತ್ತಿವೆ. ಅವುಗಳ ಪ್ರಚಾರಕ್ಕೆ ಸಿನಿಮಾ ಸೆಲೆಬ್ರಿಟಿಗಳು ಕೈ ಜೋಡಿಸುತ್ತಿದ್ದಾರೆ. ಈಗ ‘ಸ್ಟಾರ್​ ಸುವರ್ಣ’ (Star Suvarna) ವಾಹಿನಿಯಲ್ಲಿ ಹೊಸ ಸೀರಿಯಲ್​ ಆರಂಭಕ್ಕೆ ಸಕಲ ಸಿದ್ಧತೆ ನಡೆದಿದೆ. ‘ಅರ್ಧಾಂಗಿ’ ಶೀರ್ಷಿಕೆಯ ಈ ಧಾರಾವಾಹಿ ಮೇ 23ರಿಂದ ಪ್ರಸಾರ ಆರಂಭಿಸಲಿದೆ. ನಟಿ ಅಂಜನಾ ದೇಶಪಾಂಡೆ ಮತ್ತು ಪೃಥ್ವಿ ಶೆಟ್ಟಿ ಅವರು ಈ ಸೀರಿಯಲ್​ನಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ‘ಅರ್ಧಾಂಗಿ’ (Ardhangi Kannada Serial) ತಂಡಕ್ಕೆ ನಟಿ ಪ್ರಿಯಾಂಕಾ ಉಪೇಂದ್ರ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಈ ಧಾರಾವಾಹಿಯ ಪ್ರೋಮೋಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ತಂಡಕ್ಕೆ ಅವರು ಬೆಂಬಲ ನೀಡಿದ್ದಾರೆ. ಧಾರಾವಾಹಿ ತಂಡ ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ಭಾಗಿ ಆಗಿದ್ದರು. ಈ ತಂಡದ ಜೊತೆ ಕೈ ಜೋಡಿಸಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

ಈಗಾಗಲೇ ಹತ್ತಾರು ಸೀರಿಯಲ್​ಗಳು ಕನ್ನಡಿಗರನ್ನು ರಂಜಿಸುತ್ತಿವೆ. ಅವುಗಳ ನಡುವೆ ಮತ್ತೊಂದು ಹೊಸ ಧಾರಾವಾಹಿಯನ್ನು ಆರಂಭಿಸಬೇಕು ಎಂದರೆ ವಿಭಿನ್ನವಾದ ಕಥೆ ಇರಲೇಬೇಕು. ಅಂಥ ಒಂದು ವಿಶೇಷವಾದ ಕಥೆಯನ್ನು ‘ಅರ್ಧಾಂಗಿ’ ತಂಡ ಆಯ್ಕೆ ಮಾಡಿಕೊಂಡಿದೆ. ಶೀರ್ಷಿಕೆ ನೋಡಿದರೆ ಇದು ಪತಿ-ಪತ್ನಿ ನಡುವಿನ ಕಹಾನಿ ಎನಿಸುತ್ತದೆ. ಆ ಊಹೆ ಸರಿ. ಆದರೆ ಈ ದಂಪತಿ ಎಲ್ಲರಂತೆ ನಾರ್ಮಲ್​ ಅಲ್ಲ. ಅದೇ ಈ ಸೀರಿಯಲ್​ ಕಥೆಯ ಟ್ವಿಸ್ಟ್​.

ಚಿಕ್ಕವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಳ್ಳುತ್ತಾಳೆ ಕಥಾನಾಯಕಿ ಅದಿತಿ. ನಂತರ ಅವಳು ಬೆಳೆಯುವುದು‌ ಮಲತಾಯಿಯ ಆಶ್ರಯದಲ್ಲಿ. ಮಲತಾಯಿ‌ ಮಕ್ಕಳನ್ನು ಸ್ವಂತ ತಂಗಿ-ತಮ್ಮ ಎಂದು ಅದಿತಿ ನೋಡಿಕೊಳ್ಳುತ್ತಾಳೆ.‌ ಈ ಸಂದರ್ಭದಲ್ಲಿ ಆಕೆ ಒಂದು ದೊಡ್ಡ ತ್ಯಾಗ ಮಾಡಲು ಸಿದ್ಧವಾಗಬೇಕಾಗುತ್ತದೆ.‌ ಇಪ್ಪತ್ತೆಂಟು ವರ್ಷದವನಾಗಿದ್ದರೂ, ಎಂಟು ವರ್ಷದ ಮಗುವಿನಷ್ಟೇ ಬುದ್ಧಿಯಿರುವ ದಿಗಂತ್ ಎಂಬ ಹುಡುಗನನ್ನು ಅದಿತಿ ಮದುವೆ ಆಗಬೇಕಾಗುತ್ತದೆ! ನಂತರ ಏನಾಗುತ್ತದೆ ಎಂಬುದೇ ‘ಅರ್ಧಾಂಗಿ’ ಧಾರಾವಾಹಿ ಕಥೆಯ ಸಾರಾಂಶ ಎಂದು ನಿರ್ದೇಶಕ ಎಂ. ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.

ಚಾಲೆಂಜಿಂಗ್​ ಪಾತ್ರದಲ್ಲಿ ಪೃಥ್ವಿ ಶೆಟ್ಟಿ ನಟಿಸುತ್ತಿದ್ದಾರೆ. ಈ ರೀತಿಯ ಪಾತ್ರ ಮಾಡುವುದು ಸುಲಭವಲ್ಲ. ಹಾಗಾಗಿ ಅವರು ವಿಶೇಷ ಮಕ್ಕಳಿರುವ ‘ಅರುಣ ಚೇತನ’ ಶಾಲೆಯಲ್ಲಿ ಕಾಲ ಕಳೆದಿದ್ದಾರೆ. ಅಲ್ಲಿನ ಮಕ್ಕಳನ್ನು ಗಮನಿಸಿದ್ದಾರೆ. ‘ಈ ಪಾತ್ರದ ಬಗ್ಗೆ ಹೇಳಿದ ತಕ್ಷಣ ನನಗೆ ‘ಸ್ವಾತಿಮುತ್ತು’ ಚಿತ್ರದ ನೆನಪಾಯಿತು. ಈ ಪಾತ್ರ ತುಂಬಾ ಚಾಲೆಂಜಿಂಗ್​ ಆಗಿದೆ’ ಎಂದು ಅವರು ಪೃಥ್ವಿ ಶೆಟ್ಟಿ ಹೇಳಿದ್ದಾರೆ.

ಇಡೀ ತಂಡಕ್ಕೆ ಪ್ರಿಯಾಂಕಾ ಉಪೇಂದ್ರ ಆಲ್​ ದಿ ಬೆಸ್ಟ್​ ಹೇಳಿದ್ದಾರೆ. ‘ಸೀರಿಯಲ್​ಗಳನ್ನು ಮಾಡುವುದು ಕಷ್ಟ. ಇದರಲ್ಲಿ ಜಾಸ್ತಿ ಕೆಲಸ ಇರುತ್ತದೆ. ಹಾಗಾಗಿ ಈ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರ ಬಗ್ಗೆ ನನಗೆ ತುಂಬ ಗೌರವ ಇದೆ. ‘ಅರ್ಧಾಂಗಿ’ ಸೀರಿಯಲ್​ನ ಪಾತ್ರಕ್ಕೆ ನಟ ಪೃಥ್ವಿ ತುಂಬ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರ ಬದ್ಧತೆ ನನಗೆ ಇಷ್ಟ ಆಯ್ತು. ಈ ಧಾರಾವಾಹಿಯಲ್ಲಿ ಪ್ರಗತಿಪರವಾದ ಕಥೆ ಇದೆ. ಅದನ್ನು ನಾವು ಬೆಂಬಲಿಸಬೇಕು’ ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.

ಕೆಳ ಮಧ್ಯಮ ವರ್ಗದ ಹುಡುಗಿಯಾಗಿ ಅಂಜನಾ ದೇಶಪಾಂಡೆ ನಟಿಸುತ್ತಿದ್ದಾರೆ. ಅವರ ಪಾತ್ರ ಕೂಡ ಸವಾಲಿನಿಂದ ಕೂಡಿದೆ. ಈಗಾಗಲೇ ಪ್ರೋಮದಲ್ಲಿ ಅಂಜನಾ ಮತ್ತು ಪೃಥ್ವಿ ಶೆಟ್ಟಿ ಗಮನ ಸೆಳೆದಿದ್ದಾರೆ. ಈ ಧಾರಾವಾಹಿ ನಿರೀಕ್ಷೆ ಮೂಡಿಸಿದೆ.

‘ಅರ್ಧಾಂಗಿ’ ಧಾರಾವಾಹಿಯನ್ನು ಶ್ರೀನಾಥ್ ರಘುರಾಮ್ ನಿರ್ಮಾಣ ಮಾಡುತ್ತಿದ್ದಾರೆ. ಸೀರಿಯಲ್​ ತಂಡ ನಡೆಸಿದೆ ಸುದ್ದಿಗೋಷ್ಠಿಯಲ್ಲಿ ಸ್ಟಾರ್ ಸುವರ್ಣ ವಾಹಿನಿಯ ಬ್ಯುಸಿನೆಸ್ ಹೆಡ್ ಸುಷ್ಮಾ, ‘ಅರುಣ ಚೇತನ’ ವಿಶೇಷ ಮಕ್ಕಳ ಶಾಲೆಯ ಮುಖ್ಯಸ್ಥೆ ಗಾಯಿತ್ರಿ ಪಂಜು ಕೂಡ ಹಾಜರಿದ್ದರು.

TV9 Kannada


Leave a Reply

Your email address will not be published. Required fields are marked *