ಚಂಡೀಘಡ: ಕೇಂದ್ರ ಸರ್ಕಾರದ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ-2020, ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ-2020, ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ-2020- ಈ ಮೂರು ಕೃಷಿ ಕಾಯ್ದೆಗಳನ್ನ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರೋ ಪ್ರತಿಭಟನೆ ಇದೇ ಮೇ 26ರಂದು 6 ತಿಂಗಳು ಪೂರೈಸಲಿದೆ. ಅಂದು ಕರಾಳ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಹೀಗಾಗಿ ಇಂದು ಹರಿಯಾಣದಿಂದ ಸಾವಿರಾರರು ರೈತರು ಲಾಕ್​ಡೌನ್ ನಡುವೆಯೂ ದೆಹಲಿಯ ಸಿಂಘು ಗಡಿಯತ್ತ ಹೊರಟಿದ್ದಾರೆ.

ಭಾರತ್ ಕಿಸಾನ್ ಯೂನಿಯನ್ ನಾಯಕ ಗುರ್ಮನ್ ಸಿಂಗ್ ಚುರಾನಿ ನೇತೃತ್ವದಲ್ಲಿ ರೈತರು ಇಂದು ಹರಿಯಾಣದ ಕರ್ನಾಲ್​ನ ಬಸ್ತಾಡಾ ಟೋಲ್​ ಪ್ಲಾಜಾದಿಂದ ತಮ್ಮ ಪ್ರಯಾಣ ಆರಂಭಿಸಿದ್ರು. ಕೊರೊನಾ ಸಾಂಕ್ರಾಮಿಕ ಹೆಚ್ಚಾದ ಕಾರಣ ಹರಿಯಾಣದಲ್ಲಿ ಲಾಕ್​ಡೌನ್ ವಿಧಿಸಲಾಗಿದೆ. ಹೀಗಿದ್ದರು ಹರಿಯಾಣದ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರೋದನ್ನ ಅಲ್ಲಿನ ಸರ್ಕಾರ ಖಂಡಿಸಿದೆ. ಹಳ್ಳಿಗಳಲ್ಲಿ ಕೊರೊನಾ ಹೆಚ್ಚಾಗಲು ರೈತರ ಪ್ರತಿಭಟನೆಯೇ ಕಾರಣ ಎಂದು ದೂಷಿಸಿದೆ.

ಇದಕ್ಕೆ ತಿರುಗೇಟು ನೀಡಿರೋ ಚುರಾನಿ, ಸೋಂಕು ಹರಡುತ್ತಿರುವುದು ಸರ್ಕಾರವೇ. ತನ್ನ ವೈಫಲ್ಯ ಮೆರಮಾಚಲು ಸರ್ಕಾರ ರೈತರನ್ನ ದೂಷಿಸುತ್ತಿದೆ. ಸೂಕ್ತ ಆ್ಯಂಬುಲೆನ್ಸ್​, ಹಾಸಿಗೆ-ಆಸ್ಪತ್ರೆಗಳಿಲ್ಲ. ನಮಗಾದ್ರೆ ನಿರ್ಬಂಧಗಳಿವೆ, ಆದರೆ ಜನಸಂದಣಿ ಸೇರುವಂಥ ಕಾರ್ಯಕ್ರಮಗಳನ್ನು ಸರ್ಕಾರ ಏಕೆ ಆಯೋಜಿಸುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

ಅಂದ್ಹಾಗೆ ಕಳೆದ ಶುಕ್ರವಾರ 40ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಕೃಷಿ ಕಾಯ್ದೆ ಸಂಬಂಧ ಮಾತುಕತೆ ಪುನರಾರಂಭಿಸುವಂತೆ ಒತ್ತಾಯಿಸಿದೆ.

The post ಮೇ 26ಕ್ಕೆ ಕೃಷಿ ಕಾಯ್ದೆ ಪ್ರತಿಭಟನೆಗೆ 6 ತಿಂಗಳು.. ದೆಹಲಿಯತ್ತ ಹೊರಟ ಸಾವಿರಾರು ರೈತರು appeared first on News First Kannada.

Source: newsfirstlive.com

Source link