ಕೊರೊನಾ ಮಹಾಮಾರಿ ಕಳೆದ ಒಂದೂವರೆ ವರ್ಷದಿಂದ ಇಡೀ ವಿಶ್ವವನ್ನೇ ನಲುಗಿಸಿದೆ. ಈಗ ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ಹಲವು ವ್ಯಾಕ್ಸಿನ್​ಗಳು ಬಂದಿವೆ. ಕೊರೊನಾ ಸೋಂಕಿನಿಂದ ಜನರನ್ನ ರಕ್ಷಿಸಲು ವ್ಯಾಕ್ಸಿನೇಷನ್ ಎಷ್ಟು ಪರಿಣಾಮಕಾರಿ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.

ಲಸಿಕೆ ವಿತರಣೆ ನಂತರ ಯುರೋಪ್​​ನ ಸ್ಯಾನ್ ಮ್ಯಾರಿನೋ ಕೋವಿಡ್ ಮುಕ್ತ ರಾಜ್ಯವಾಗಿದೆ. ಇಲ್ಲಿ ಮೇ 4 ರಿಂದ ಈವರೆಗೆ ಒಂದೇ ಒಂದು ಕೊರೊನಾ ಕೇಸ್​ ದಾಖಲಾಗಿಲ್ಲ. ಅಲ್ಲದೆ ಏಪ್ರಿಲ್ 27 ರಿಂದ ಇಲ್ಲಿವರೆಗೂ ಒಂದೇ ಒಂದು ಕೊರೊನಾ ಸೋಂಕಿತರ ಸಾವಾಗಿಲ್ಲ. ಇದಕ್ಕೆಲ್ಲ ಕಾರಣ ಸ್ಪುಟ್ನಿಕ್-ವಿ ಲಸಿಕೆಯ ಮಹಿಮೆ. ಹೀಗಂತ ಸ್ವತಃ ಸ್ಪುಟ್ನಿಕ್​​-ವಿ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹೇಳಲಾಗಿದೆ.

ಸ್ಯಾನ್ ಮ್ಯಾರಿನೋದಲ್ಲಿ ಸ್ಪುಟ್ನಿಕ್ ಲಸಿಕೆಯನ್ನ ಕೊಡಲು ಆರಂಭಿಸಿದ ನಂತರ ಕಳೆದ ಎರಡು ತಿಂಗಳಿಂದ ಕೊರೊನಾ ಪ್ರಕರಣಗಳಲ್ಲಿ ಬರೋಬ್ಬರಿ 250 ಪಟ್ಟು ಇಳಿಕೆಯಾಗಿದೆ. ಸದ್ಯ ಸುಮಾರು ಒಂದು ವಾರದಿಂದ ಇಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿಲ್ಲ. ಸ್ಯಾನ್​ ಮರೀನೋ ಸ್ಪುಟ್ನಿಕ್ -ವಿಯಿಂದ ಕೊರೊನಾವನ್ನ ಮಣಿಸಿದ ಯೂರೋಪ್​​ನ ಮೊದಲ ರಾಜ್ಯವಾಗಿದೆ ಅಂತ ಟ್ವೀಟ್​ನಲ್ಲಿ ತಿಳಿಸಿದೆ.

ಅಂದ್ಹಾಗೆ ಭಾರತದಲ್ಲೂ ಸ್ಪುಟ್ನಿಕ್ ವಿ ಲಸಿಕೆಯ ತುರ್ತು ಬಳಕೆಗೆ ಅನುಮತಿ ಸಿಕ್ಕಿದ್ದು, ಈಗಾಗಲೇ 1.5 ಲಕ್ಷ ಡೋಸ್​​ಗಳು ದೇಶಕ್ಕೆ ಬಂದಿವೆ. ಆದ್ರೆ ಸ್ಪುಟ್ನಿಕ್​-ವಿ ಲಸಿಕೆಯನ್ನ ಇನ್ನೂ ನಮ್ಮ ದೇಶದಲ್ಲಿ ವಿತರಣೆ ಮಾಡಲಾಗ್ತಿಲ್ಲ. ಕ್ವಾಲಿಟಿ ಚೆಕ್​ ಬಳಿಕ ಲಸಿಕೆಯ ವಿತರಣೆ ಆರಂಭಿಸಲಾಗುತ್ತದೆ ಅಂತ ಡಾ. ರೆಡ್ಡೀಸ್​ ಲ್ಯಾಬೊರೇಟರಿ ಹೇಳಿದೆ.

ರಷ್ಯಾದ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಸ್ಪುಟ್ನಿಕ್-ವಿ ಲಸಿಕೆಯನ್ನ ಅಭಿವೃದ್ಧಿಪಡಿಸಿದ್ದು, ಭಾರತದಲ್ಲಿ ಡಾ. ರೆಡ್ಡೀಸ್​ ಲ್ಯಾಬೋರೇಟರಿ, ಆಮದು ಮಾಡಿಕೊಂಡ ಸ್ಪುಟ್ನಿಕ್ ಲಸಿಕೆಗಳ ಮಾರ್ಕೆಟಿಂಗ್ ಮಾಡುವ ಸಂಸ್ಥೆಯಾಗಿದೆ.

The post ಮೇ 4ರಿಂದ ಒಂದೂ ಕೇಸ್ ಇಲ್ಲ: ವ್ಯಾಕ್ಸಿನೇಷನ್ ಬೆನ್ನಲ್ಲೇ ಕೊರೊನಾ ಮುಕ್ತವಾಯ್ತು ಈ ರಾಜ್ಯ appeared first on News First Kannada.

Source: newsfirstlive.com

Source link