ಮೈದಾನದಲ್ಲೇ ಕ್ರಿಕೆಟಿಗನ ಧಮ್ ಮಾರೋ ಧಮ್: ಸ್ಟಾರ್ ಆಟಗಾರನಿಗೆ ವಾಗ್ದಂಡನೆ | BPL 2022: Mohammad Shahzad gets reprimanded for smoking on the ground


ಮೈದಾನದಲ್ಲೇ ಕ್ರಿಕೆಟಿಗನ ಧಮ್ ಮಾರೋ ಧಮ್: ಸ್ಟಾರ್ ಆಟಗಾರನಿಗೆ ವಾಗ್ದಂಡನೆ

Mohammad Shahzad

ಪಂದ್ಯದ ಮಳೆಯಿಂದಾಗಿ ಅಡಚಣೆಯುಂಟಾಗುವುದು ಸಾಮಾನ್ಯ. ಈ ವೇಳೆ ಕೆಲ ಆಟಗಾರರು ಅಭ್ಯಾಸ ಮಾಡುವುದನ್ನು ಕಾಣಬಹುದು. ಇಲ್ಲ ಕೆಲ ಆಟಗಾರರು ಅಭಿಮಾನಿಗಳನ್ನು ರಂಜಿಸುವತ್ತ ಗಮನಹರಿಸುತ್ತಾರೆ. ಆದರೆ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನಲ್ಲಿ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಪಂದ್ಯದ ವೇಳೆ ಆಟಗಾರನೊಬ್ಬ ಮೈದಾನದಲ್ಲೇ ಸಿಗರೇಟ್ ಸೇದುತ್ತಾ ನಿಂತಿರುವುದು ಕಂಡು ಬಂದಿದೆ. ಹೀಗೆ ಧಮ್ ಮಾರೋ ಧಮ್ ಮೂಲಕ ಮೈಮರೆತ ಆಟಗಾರ ಅಫ್ಘಾನಿಸ್ತಾನದ ಸ್ಟಾರ್ ಬ್ಯಾಟ್ಸ್​ಮನ್ ಮೊಹಮ್ಮದ್ ಶಹಜಾದ್. ಶೆಹಜಾದ್ ಮಳೆಯಿಂದ ಪಂದ್ಯ ಸ್ಥಗಿತಗೊಂಡಾಗ ಮೈದಾನದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿದ್ದಾರೆ. ಇದೀಗ ಈ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಫೆಬ್ರವರಿ 4 ರಂದು ಈ ಘಟನೆ ನಡೆದಿದ್ದು, ಮಿನಿಸ್ಟರ್ ಗ್ರೂಪ್ ಢಾಕಾ ಮತ್ತು ಕೊಮಿಲ್ಲಾ ವಿಕ್ಟೋರಿಯನ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಆದರೆ, ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯುಂಟಾಗಿತ್ತು. ಮಳೆ ಕಡಿಮೆಯಾದ ಬಳಿಕ ಮೈದಾನಕ್ಕೆ ಆಗಮಿಸಿದ ಶಹಜಾದ್ ಸಿಗರೇಟ್ ಸೇದುತ್ತಾ ತಿರುಗಾಡುತ್ತಿದ್ದರು. ಈ ಕ್ಷಣಗಳನ್ನು ಕ್ಯಾಮೆರಾಮ್ಯಾನ್ ಸೆರೆಹಿಡಿದಿದ್ದಾರೆ. ಇದೀಗ ಶಹಜಾದ್ ಧೂಮಪಾನ ಮಾಡುತ್ತಿರುವ ವಿಡಿಯೋ ಮತ್ತು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಶಹಜಾದ್ ಅವರ ಈ ನಡೆಯ ಬಗ್ಗೆ ಇದೀಗ ಭಾರೀ ಟೀಕೆ ವ್ಯಕ್ತವಾಗಿದೆ. ಕೆಲ ದಿನಗಳ ಹಿಂದೆ ಅಭಿಮಾನಿಗಳ ಮನ ಗೆದ್ದಿದ್ದ ಶಹಜಾದ್ ಇದೀಗ 3 ತಮ್ಮ ನಡೆಗಳಿಂದ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವುದು ವಿಶೇಷ. ಹೌದು, 3 ದಿನಗಳ ಹಿಂದೆಯಷ್ಟೇ ಸಿಲ್ಹೆಟ್ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. ಇದಾದ ಬಳಿಕ ಔಟ್ ಆಗಿ ಪೆವಿಲಿಯನ್ ಕಡೆ ಹಿಂತಿರುಗುವ ವೇಳೆ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರದ ಪ್ರಸಿದ್ಧ ಗೀತೆ ಶ್ರೀವಲ್ಲಿಗೆ ನೃತ್ಯ ಮಾಡುತ್ತಾ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ಮೈದಾನದಲ್ಲೇ ಧೂಮಪಾನ ಮಾಡುವ ಶಹಜಾದ್ ಟೀಕೆಗೆ ಗುರಿಯಾಗಿದ್ದಾರೆ.

ಇನ್ನು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಪಿಎಲ್ ಆಯೋಜಕರು ಈಗಾಗಲೇ ಶಹಜಾದ್ ಅವರಿಗೆ ಮೊದಲ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಶಿಸ್ತು ಕ್ರಮಕ್ಕಾಗಿ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ. ಅತ್ತ ಮೊಹಮ್ಮದ್ ಶಹಜಾದ್ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ ತಿಳಿಸಿದೆ.

TV9 Kannada


Leave a Reply

Your email address will not be published.