ಮೈಸೂರು: ಜಿಲ್ಲಾಡಳಿತ ಕೊರೊನಾ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದೆ. ಮೈಸೂರಿನ ಸಾವಿನ ಸಂಖ್ಯೆಯನ್ನು ನೋಡಿ ನನಗೆ ಆಘಾತವಾಯ್ತು ಅಂತ ಶಾಸಕ ಸಾ.ರಾ ಮಹೇಶ್ ಆರೋಪಿಸಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ಮುಂದುವರೆಸಿದರು. ಮೈಸೂರು ನಗರ ವ್ಯಾಪ್ತಿಯಲ್ಲಿ ಮೇ 1ರಿಂದ ಮೇ 29ರವರೆಗೆ 969 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಆದರೆ ಜಿಲ್ಲಾಡಳಿತ ಕೇವಲ 238 ಜನರ ಲೆಕ್ಕ ಕೊಟ್ಟಿದೆ. 731 ಸಾವುಗಳ‌ ಲೆಕ್ಕವನ್ನು ಕೊಟ್ಟಿಲ್ಲ ಎಂದು ಆರೋಪ ಮಾಡಿದ್ರು. ಈ ಸಂಬಂಧ ದಾಖಲೆ ಬಿಡುಗಡೆಗೊಳಿಸಿದ್ರು. ಸರ್ಕಾರ, ಸಿಎಂ, ಮುಖ್ಯ ಕಾರ್ಯದರ್ಶಿಗೂ ಜಿಲ್ಲಾಡಳಿತದಿಂದ ಯಾಕೆ ತಪ್ಪು ಮಾಹಿತಿ ನೀಡಿದ್ದೀರಿ? ಸಮರ್ಪಕ ಮಾಹಿತಿ ನೀಡಿದ್ರೆ ಇನ್ನಷ್ಟು ಮುಂಜಾಗ್ರತೆ ಕೈಗೊಳ್ಳಲು ಸರ್ಕಾರ ಮುಂದಾಗುತ್ತಿತ್ತೋ ಏನೋ. ನಿಮಗೆ ತಾಯಿ ಹೃದಯವೇ ಇಲ್ಲವೇ? ಇದು ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲವೇ? ಎಂದು ಪ್ರಶ್ನಿಸಿದ್ರು.

ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಹೇಗೆ ಕೆಲಸ ಮಾಡಿದ್ರು ಅನ್ನೋ ಕಾರಣಕ್ಕೆ ಇವರು ಮೈಸೂರಿಗೆ ಸೂಕ್ತವಲ್ಲ ಅಂತಾ ನಾವು ಹೇಳಿದ್ದು. ಆರಂಭದಲ್ಲಿ ಮೈಸೂರು ಸಂಸದ ಪ್ರತಾಪ್​ ಸಿಂಹ ಇವರನ್ನು ಸಮರ್ಥನೆ ಮಾಡುತ್ತಿದ್ರು. ಈಗ ಜ್ಞಾನೋದಯವಾಗಿ ಅವರೂ ಧ್ವನಿ ಎತ್ತಿದ್ದಾರೆ. ಸತ್ತವರ ಮಾಹಿತಿ ಮರೆ ಮಾಚಿದ್ದರ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ಕೊಡುವೆ. ಸಿಎಂ ಹಾಗೂ ರಾಜ್ಯಪಾಲರು ಇಬ್ಬರಿಗೂ ಕಳುಹಿಸುತ್ತೇನೆ. ಸಾವಿನ ಸಂಖ್ಯೆ ಹೆಚ್ಚಿದ್ರೂ ಸಾವು ಇಳಿಮುಖ ಆಗಿದೆ,  ಕೊರೊನಾ ಕಂಟ್ರೋಲ್​ಗೆ ಬರ್ತಿದೆ ಅಂತಾ ಪೋಸ್ ಕೊಡ್ತಿದ್ದಾರೆ. ನಿಮ್ಮ ಈ ಅಪರಾಧಕ್ಕೆ ಏನು ಶಿಕ್ಷೆ ಕೊಡಬೇಕು? ಎಂದು ಸಾ.ರಾ ಮಹೇಶ್​ ಗುಡುಗಿದ್ರು.

ನಾನು ದಾಖಲೆಗಳ ಸಮೇತ ಮಾಹಿತಿ ಬಹಿರಂಗಪಡಿಸಿದ್ದೇನೆ. ಮೇ ತಿಂಗಳೊಂದ್ರಲ್ಲೇ ಮೈಸೂರಿನಲ್ಲಿ 3 ಸಾವಿರ ಜನ  ಜನ ಸತ್ತಿದ್ದಾರೆ‌. ಮೋಸದ ಅಂಕಿ ಅಂಶಗಳಿಂದ ಇಡೀ ಸರ್ಕಾರ ಹಾಗೂ ವ್ಯವಸ್ಥೆಯನ್ನೇ ವಂಚಿಸಿದ್ದಾರೆ. ಸತ್ತವರಿಗೂ ದ್ರೋಹ ಮಾಡಿದ್ದಾರೆ ಅಂತ ಡಿಸಿ ರೋಹಿಣಿ ಸಿಂಧೂರಿ ಅವರ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

ಸಾವು ಇಳಿಮುಖ ಆಗಿಲ್ಲ, ಮೋಸದ ಲೆಕ್ಕ
ಮೈಸೂರು ನಗರದಲ್ಲಿ ಕೊರೊನಾ ಸೋಂಕಿತರ ಸಾವಿನ ವಿಚಾರವಾಗಿ ಸರ್ಕಾರಕ್ಕೂ ವಂಚನೆ ಮಾಡಲಾಗಿದೆ. ಸಾಕ್ಷ್ಯಾಧಾರಗಳನ್ನ ನಿಮಗೆ ನೀಡುತ್ತಿದ್ದೇನೆ. ಅಂತ್ಯಕ್ರಿಯೆ ಸ್ಥಳದಿಂದ ಪ್ರತಿದಿನದ ಮಾಹಿತಿ‌ ತರಿಸಿದ್ದೇನೆ. ಪ್ರತಾಪ್ ಸಿಂಹ ಸಹ ಸಾವಿನ ಲೆಕ್ಕದ ಬಗ್ಗೆ ಹೇಳಿದ್ದರು. ಆದರೆ ನಾನು ಹೇಳುತ್ತಿಲ್ಲ.. ದಾಖಲೆ ನೀಡಿದ್ದೇನೆ. ಸಾವು ಇಳಿಮುಖ ಆಗಿಲ್ಲ, ಮೋಸದ ಲೆಕ್ಕ. ರೋಹಿಣಿ ಸಿಂಧೂರಿ ಬೇರೆಯವರ ಮೇಲೆ ಹಾಕುವುದರಲ್ಲಿ ಎಕ್ಸ್​ಪರ್ಟ್​​. ನೆನ್ನೆಯೂ ಸಾವಿನ ಲೆಕ್ಕದಲ್ಲಿ ತಪ್ಪು ಮಾಹಿತಿ ಕೊಡಲಾಗಿದೆ. ನನ್ನ ಕ್ಷೇತ್ರ ಕೆ.ಆರ್ ನಗರದಲ್ಲೂ ಸುಳ್ಳು ಲೆಕ್ಕ ಕೊಡಲಾಗುತ್ತಿದೆ ಎಂದು ಆರೋಪಿಸಿದ್ರು.

ತಾಯಿ ಹೃದಯವೇ ಇಲ್ಲವಾ? ಮಾನವ ಹಕ್ಕುಗಳ ಉಲ್ಲಂಘನೆ ಅಲ್ಲವಾ ?
ನಿನ್ನೆ ಕೆ.ಆರ್ ನಗರದಲ್ಲಿ ಯಾರೂ ಸಾವನ್ನಪ್ಪಿಲ್ಲ ಅನ್ನೋ ಲೆಕ್ಕ ನೀಡಲಾಗಿದೆ. ಮೈಸೂರು ಜಿಲ್ಲೆಯಲ್ಲಿ 3 ಸಾವಿರ ಜನ ಸಾವನ್ನಪ್ಪಿದ್ದಾರೆ. ಸಿಎಂ, ಸಿಎಸ್, ಉಸ್ತುವಾರಿ ಸಚಿವರಿಂದಲೂ ಇದನ್ನು ಮುಚ್ಚಿಡುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ? ಸಿಎಂ-ಪಿಎಂ ಈ ನೊಂದಂತಹ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿ ಅಂತಾ ಒತ್ತಾಯಿಸುತ್ತಿದ್ದೇವೆ. ಈ‌ ರೀತಿ ಆದರೆ ನೀವು ಕೊಟ್ಟಿರುವ ಲೆಕ್ಕದ‌ ಪ್ರಕಾರ ಉಳಿದವರಿಗೆ ಪರಿಹಾರ ಹೇಗೆ? ಮಾನವೀಯತೆ, ಮನುಷ್ಯತ್ವ, ತಾಯಿ ಹೃದಯವೇ ಇಲ್ಲವಾ ಎಂದು ಮಹೇಶ್​ ಖಾರವಾಗಿ ಪ್ರಶ್ನಿಸಿದ್ರು.

ಸರ್ಕಾರವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೀರ. ಇದೇ ವಿಷಯವನ್ನು ನಾನು ಸಿಎಂ ವಿಡಿಯೋ ಕಾನ್ಫರೆನ್ಸ್​​ನಲ್ಲಿ ಹೇಳಿದ್ದೇನೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಅಲ್ಲವಾ? ತಪ್ಪು ಅಂಕಿ ಅಂಶ ವರದಿ‌ ಮಾಡಿದ್ದಾರೆ. ಇದು ಜಿಲ್ಲೆಯ ಜನರಿಗೆ ಮಾಡಿದ ಅನ್ಯಾಯ. ನಾನು ಮಾನವ ಹಕ್ಕುಗಳ ಆಯೋಗಕ್ಕೆ, ರಾಜ್ಯಪಾಲರಿಗೆ ದೂರು ನೀಡುತ್ತೇನೆ. ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಕಳುಹಿಸಿ ಕೊಡುತ್ತೇನೆ. ಇದಕ್ಕಿಂತ ದಾಖಲಾತಿಗಳು ಬೇಕಾ? ಇದೇ ರೀತಿ ನಿಮ್ಮ ಕುಟುಂಬದಲ್ಲಿ ಆಗಿದ್ದರೆ ಮುಚ್ಚಿಡುತ್ತಿದ್ರಾ? ಸರ್ಕಾರದ ವಂಚನೆ, ಭ್ರಷ್ಟಾಚಾರ ಅಂಕಿ ಅಂಶ ಕೊಡದೆ ಭಂಡತನದಲ್ಲಿ ಇದ್ದಾರೆ. ಇದು ಆರೋಪ ಅಲ್ಲ, ದಾಖಲೆಗಳ ಸಮೇತ ಇರುವುದು. ಮಾಹಿತಿ ತಡವಾದರೆ ಒಂದು ಎರಡು ವ್ಯತ್ಯಾಸ ಆಗಬಹುದು. ಆದ್ರೆ ಶೇಕಡ 75ರಷ್ಟು ತಪ್ಪು ಲೆಕ್ಕ ಕೊಡಲಾಗಿದೆ ಎಂದು ಮಹೇಶ್​ ಆರೋಪಿಸಿದರು.

ಸಾಧನೆ ಮಾಡಿದ್ದೇನೆ ಅಂತಾ ಪೋಸು ಕೊಡಲು ಸುಳ್ಳು ಲೆಕ್ಕ
ಮೈಸೂರು ಜಿಲ್ಲೆಯಲ್ಲಿ ಸಾವು ಇಳಿಸಿದ್ದೇನೆ. ಸಾಧನೆ ಮಾಡಿದ್ದೇನೆ ಅಂತಾ ಪೋಸು ಕೊಡಲು ಈ ರೀತಿ ಮಾಡಿದ್ದಾರೆ. ಸರ್ಕಾರ ಈಗಲಾದರೂ ಕಣ್ಣು ತೆರೆಯಲಿ. ಸಿಎಸ್, ರಾಜ್ಯಪಾಲರು ಇದನ್ನು ತನಿಖೆ ಮಾಡಿಸಬೇಕು. ಒಂದು ಸಾವಾದರೂ ಅದು ಸಾವೇ. ಜಿಲ್ಲೆಯಲ್ಲಿ ಅದೆಷ್ಟು ಜನ ಸಾವನ್ನಪ್ಪಿದ್ದಾರೋ ಗೊತ್ತಿಲ್ಲ. ಅದರ ಮಾಹಿತಿ ಸಹಾ ಕಲೆ ಹಾಕುತ್ತೇನೆ. ವೈದ್ಯರು ಸುಳ್ಳಾ? ಅಥವಾ ಅಂತ್ಯಕ್ರಿಯೆ ಮಾಡಿದ್ದು ಸುಳ್ಳಾ? ಜನರು ಭಯ ಬೀಳುತ್ತಾರೆ ಅಂತಾ ಮಾಧ್ಯಮಗಳಿಗೆ ಕಡಿಮೆ ಕೊಡಬಹುದೇನೋ. ಆದರೆ ಇವರು ಸರ್ಕಾರಕ್ಕೆ ಕಡಿಮೆ ಲೆಕ್ಕ ಕೊಟ್ಟಿದ್ದಾರೆ. ಜನರು‌ ಜಾಗೃತರಾಗಿರುವುದು ಮಾಧ್ಯಮಗಳ ವರದಿಯಿಂದ, ಜಿಲ್ಲಾಡಳಿತದ ಕ್ರಮದಿಂದಲ್ಲ ಎಂದು ಹೇಳಿದ್ರು.

ಈ ರೀತಿ ಲೆಕ್ಕ ಕೊಡೋಕೆ ಐಎಎಸ್ ಏಕೆ ಬೇಕು?
ಈ ರೀತಿ ಲೆಕ್ಕ ಕೊಡೋಕೆ ಐಎಎಸ್ ಏಕೆ ಬೇಕು? ಎಸ್​​ಎಸ್​​ಎಲ್​ಸಿ ಓದಿದವರು ಕೊಡಬಹುದು. ಡಿಸಿ ರೋಹಿಣಿ ಸಿಂಧೂರಿ ಅವರ ಸಾರ್ವಜನಿಕ ಸೇವೆಯ ಎಲ್ಲವೂ ಇದೇ ರೀತಿ ಮೋಸದ್ದು. ರಾಜ್ಯ ಸರ್ಕಾರ, ಸಿಎಂ, ರಾಜ್ಯಪಾಲರು, ಸತ್ತವರ ಕುಟುಂಬಕ್ಕೆ, ಸತ್ತವರ ಆತ್ಮಕ್ಕೆ ತಪ್ಪು ಲೆಕ್ಕ ಕೊಟ್ಟಿದ್ದಾರೆ.
ಒಳ್ಳೆಯದು ಮಾಡಿದ್ದೆಲ್ಲಾ ನಂದು, ಇದು ಯಾರದ್ದು? ಇಲ್ಲಿಗೆ ಕಳಂಕ ರಹಿತ ಒಳ್ಳೆಯ ಅಧಿಕಾರಿ ಬೇಕು. ಇದನ್ನು ನಾನು ಅವತ್ತೇ ಹೇಳಿದ್ದೆ. ಇದಕ್ಕಿಂತ ದಾಖಲಾತಿ ಬೇಕು ಅಂದರೆ ಸತ್ತವರ ಮನೆಗೆ ಹೋಗೋಣ. ಇಲ್ಲ ಅಂತ್ಯಕ್ರಿಯೆ ಮಾಡಿದವರ ಬಳಿ ಹೋಗೋಣ. ಸಾವಿನ ಲೆಕ್ಕದ ಸಮಗ್ರ ತನಿಖೆಯಾಗಬೇಕು. ಅಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳುವುದು ನಿಮಗೆ ಬಿಟ್ಟಿದ್ದು. ನಾನು ಇವರನ್ನು ಇಲ್ಲಿ ಬದಲಾಯಿಸಿ ಅಂತಾ ಕೇಳುವುದಿಲ್ಲ. ಇಲ್ಲಿಂದ ಹೋಗಿ ಬೇರೆ ಕಡೆ ಗೋಳು ಹುಯ್ಯಿಕೊಳ್ಳಲಿ ಅಂತನಾ? ಅವರ ಮಂಡ್ಯ ಇತಿಹಾಸ ಗೊತ್ತಿಲ್ಲವಾ? ಹಾಸನದ ಇತಿಹಾಸ ಗೊತ್ತಿಲ್ಲವಾ? ಅಧಿಕಾರಿಗಳು ಏನೇ ಮಾಡಿದರು ನಂಬುತ್ತಾರೆ. ರಾಜಕಾರಣಿಗಳು ಸತ್ಯ ಹೇಳಿದರು ನಂಬುವುದಿಲ್ಲ. ಜನಪ್ರತಿನಿಧಿಗಳು 5 ವರ್ಷಕ್ಕೆ ಒಂದೊಂದು ಐಎಎಸ್ ಮಾಡಿದಂತೆ. ನಾವು ಯಾವ ಅಧಿಕಾರಿಯ ಸ್ಥೈರ್ಯವನ್ನು ಕುಗ್ಗಿಸುತ್ತಿಲ್ಲ ಎಂದು ಮಹೇಶ್​​ ಹೇಳಿದರು.

The post ಮೈಸೂರಲ್ಲಿ ಕೊರೊನಾ ಸಾವು ಇಳಿದಿಲ್ಲ, ಪೋಸ್​ ಕೊಡೋಕೆ ಮೋಸದ ಲೆಕ್ಕ -ಮಹೇಶ್ ವಾಗ್ದಾಳಿ​ appeared first on News First Kannada.

Source: newsfirstlive.com

Source link