ಮೈಸೂರು: ಜಿಲ್ಲೆ ನಂಜನಗೂಡು ತಾಲೂಕು ನವಿಲೂರಿನಲ್ಲಿ ಕೊಲೆಪಾತಕನೊಬ್ಬ ಅಟ್ಟಹಾಸ ಮೆರೆದಿದ್ದಾನೆ.ಕೊಲೆಪಾತಕನ ಹುಚ್ಚಾಟಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಕುಡಿದ ಅಮಲಿನಲ್ಲಿ ವೃದ್ದ ದಂಪತಿಗಳನ್ನ ಕೊಚ್ಚಿ ಕೊಲೆಗೈದ ಪಾತಕ ಬಿಡಿಸಲು ಬಂದ ನಾಲ್ವರ ಮೇಲೆ ಲಾಂಗ್ ಬೀಸಿದ್ದಾನೆ. ಕೈನಲ್ಲಿ ಲಾಂಗ್ ಹಿಡಿದು ಸಿಕ್ಕಸಿಕ್ಕವರ ಮೇಲೆ ಬೀಸಿದ್ದಾನೆ. ಈರಯ್ಯ ಅಲಿಯಾಸ್ ಕುಂಡ ಎಂಬಾತನಿಂದ ಕೃತ್ಯ ನಡೆದಿದೆ. ಜೈಲಿನಿಂದ ಹೊರ ಬಂದಿದ್ದ ಕೊಲೆಗಡುಕನ ಅಟ್ಡಹಾಸಕ್ಕೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.
ಕುಡಿದ ಅಮಲಿನಲ್ಲಿದ್ದ ಈರಯ್ಯ 2ನೇ ಪತ್ನಿಯ ಮೇಲೆ ಲಾಂಗ್ನಿಂದ ಹಲ್ಲೆ ನಡೆಸಿದ್ದಾನೆ. ಚೀರಾಟ ಕೇಳಿ ಸ್ಥಳಕ್ಕೆ ಧಾವಿಸಿದ ನಾಲ್ವರ ಮೇಲೂ ಲಾಂಗ್ ಬೀಸಿದ್ದಾನೆ. ಪರಿಣಾಮ ಎದುರು ಮನೆಯ ನಿಂಗಮ್ಮ, ಮಾದಯ್ಯ ಎಂಬ ದಂಪತಿಗಳು ಸಾವನ್ನಪ್ಪಿದ್ದಾರೆ.
10 ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಕೊಲೆಗೈದು ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದ ಕೊಲೆಪಾತಕ, ಕುಡಿದ ಅಮಲಿನಲ್ಲಿ ಎರಡನೆಯ ಪತ್ನಿ ಮಹದೇವಮ್ಮಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈಕೆ 7ತಿಂಗಳ ಗರ್ಭಿಣಿಯಾಗಿದ್ದು, ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಹದೇವಮ್ಮಳ ತಾಯಿ ಮತ್ತು ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಗ್ರಾಮಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನವಿಲೂರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಡಿವೈಎಸ್ಪಿ ಗೋವಿಂದರಾಜ್ಮ, ವೃತ್ತ ನಿರೀಕ್ಷಕರಾದ ಲಕ್ಷ್ಮಿಕಾಂತ ತಳವಾರ್ ಶಿವನಂಜಶೆಟ್ಟಿ ಸೇರಿ ಪೊಲೀಸರು ಭೇಟಿ ನೀಡಿದ್ದಾರೆ. ಗಾಯಾಳುಗಳನ್ನ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ.