ಮೈಸೂರು: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಅಧಿಕಾರಿಗಳು ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ಕಾರ್ಯ ವೈಖರಿಯ ಬಗ್ಗೆ ಶಾಸಕ ಸಾ.ರಾ ಮಹೇಶ್ ಅಸಮಾಧಾನ ಹೊರ ಹಾಕಿದ್ದರು. ಇದರ ನಡುವೆಯೇ ಅಧಿಕಾರಿಗಳ ಕಾರ್ಯಗಳ ಬಗ್ಗೆ ಸಂಸದ ಪ್ರತಾಪ್​ ಸಿಂಹ ಕೂಡ ಅಸಮಾಧಾನ ಹೊರ ಹಾಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್​ ಸಿಂಹ ಅವರು, ಜಿಲ್ಲಾಧಿಕಾರಿಗಳು ಕೇವಲ ವಿಡಿಯೋ ಕಾನ್ಫರೆನ್ಸ್ ಮಾಡಿದ್ರೆ ಸಾಲದು. ಗ್ರಾಮೀಣ ಪ್ರದೇಶಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಬೇಕು. ಜಿಲ್ಲಾಧಿಕಾರಿಗಳು, ಡಿಹೆಚ್‌ಒ ಗ್ರಾಮೀಣ ಪ್ರದೇಶಕ್ಕೆ ತೆರಳಬೇಕು. ವಿಡಿಯೋ ಕಾನ್ಫರೆನ್ಸ್​ ನಡೆಸಿಕೊಂಡು ಹೋದ್ರೆ ಅಧಿಕಾರಿಗಳು ಕೇವಲ ಅಂಕಿ ಅಂಶಗಳನ್ನ ಕೊಡ್ತಾರೆ. ಅಂಕಿ ಅಂಶಗಳ ಪ್ರಕಾರ ಮಾಧ್ಯಮಗಳಿಗೆ ಹೇಳಿಕೆ ಕೊಡುತ್ತೇವೆ ಅಷ್ಟೇ. ಗ್ರಾಮಾಂತರ ಪ್ರದೇಶದಲ್ಲಿ ಆತಂಕ ಹೆಚ್ಚಾಗಿದೆ. ಜನಪ್ರತಿನಿಧಿಗಳಾದ ನಾವು ನಮ್ಮ ವ್ಯಾಪ್ತಿಯ ಕೆಲಸಗಳನ್ನ ಮಾಡಿದ್ದೇವೆ‌. ಆದರೆ ಕೆಲವು ಕೆಲಸವನ್ನ ಅಧಿಕಾರಿಗಳೇ ಮಾಡಬೇಕು. ಹೀಗಾಗಿ ತುರ್ತಾಗಿ ಮೈಸೂರು ಜಿಲ್ಲಾಡಳಿತ ಹಳ್ಳಿಗಳ ಕಡೆ ಗಮನಹರಿಸಬೇಕು ಎಂದು ಹೇಳಿದ್ದಾರೆ.

ಪ್ರತಾಪ್‌ ಸಿಂಹ ಹೇಳಿಕೆಗೆ ಧನಿಗೂಡಿಸಿದ ಎಸ್.ಟಿ.ಸೋಮಶೇಖರ್..
ಸಂಸದ ಪ್ರತಾಪ್ ಸಿಂಹ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್​​​.ಟಿ ಸೋಮಶೇಖರ್​ ಅವರು, ಸಂಸದ ಪ್ರತಾಪ್ ಸಿಂಹ ಸರಿಯಾಗಿ ಹೇಳಿದ್ದಾರೆ. ಜಿಲ್ಲಾಧಿಕಾರಿಗಳು ಗ್ರಾಮೀಣ ಭಾಗಕ್ಕೆ ಹೋಗಬೇಕು. ಈಗ ಗ್ರಾಮೀಣ ಭಾಗದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮಾಡಿ ಕಾಲಹರಣ ಮಾಡಬಾರದು. ಕೂಡಲೇ ಹಳ್ಳಿಗಳಿಗೆ ತೆರಳಿ ಪರಿಸ್ಥಿತಿ ಸುಧಾರಣೆಗೆ ಮುಂದಾಗಬೇಕು. ಮುಂದಿನ ವಾರದಿಂದ ಜಿಲ್ಲಾಧಿಕಾರಿಗಳು ಆಯಾ ಕ್ಷೇತ್ರದ ಶಾಸಕರ ಜೊತೆಗೂಡಿ‌ ಒಂದೊಂದು ಹಳ್ಳಿಗೆ ಹೋಗಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಮೈಸೂರು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್​​ಡೌನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಮೈಸೂರು ನಗರ ಬಿಟ್ಟು ಗ್ರಾಮಾಂತರ ಕ್ಷೇತ್ರವಾರು ಲಾಕ್ ಡೌನ್ ಪರ್ಯಾಯ ನಿಯಮಗಳನ್ನು ಜಾರಿಮಾಡಲು ಸೂಚನೆ ನೀಡಿದ್ದೇವೆ. ಆಯಾ ಕ್ಷೇತ್ರದ ಶಾಸಕರ ಜೊತೆ ಸಮಲೋಚಿಸಿ ಅಲ್ಲಿನ ಪರಿಸ್ಥಿತಿಗನಿಗುಣವಾಗಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲು ಕ್ರಮವಹಿಸುತ್ತೇವೆ. ನಗರ ವ್ಯಾಪ್ತಿಯಲ್ಲಿ ನಗರ ಶಾಸಕರ ಅಭಿಪ್ರಾಯ ಪಡೆದು ಲಾಕ್ ಡೌನ್ ಬಿಗಿ ನಿಯಮ ಜಾರಿಯಾಗಲಿದೆ. ನಂಜನಗೂಡಿನ‌ ಕೆಲವೊಂದು ಗ್ರಾಮದಲ್ಲಿ ಜನರೇ ಸ್ವಯಂಪ್ರೇರಿತ ಲಾಕ್ ಡೌನ್ ಮಾಡಿಕೊಂಡಿದ್ದಾರೆ. ಅದೇ ಮಾದರಿಯಲ್ಲಿ ಎಲ್ಲಾ ಗ್ರಾಮಗಳಲ್ಲು ನಿಯಮ ಪಾಲಿಸಲು ಮಾಡಿಕೊಳ್ಳಬೇಕು ಎಂಬುದು ನನ್ನ ಸಲಹೆ ಎಂದರು.

The post ಮೈಸೂರಿನಲ್ಲೀಗ ರೋಹಿಣಿ ಸಿಂಧೂರಿ V/s ಜನಪ್ರತಿನಿಧಿಗಳು- ಪ್ರತಾಪ್‌ ಸಿಂಹ ಸಹ ಗುಡುಗು appeared first on News First Kannada.

Source: newsfirstlive.com

Source link